ವಿಜಯನಗರ : ಬೇಸಿಗೆಯ ಬಿಸಿಲಿನ ತಾಪಕ್ಕೆ ಸಿಲುಕಿರುವ ಜನತೆ, ಹವಾ ನಿಯಂತ್ರಿತ ಸಾಧನ, ಫ್ಯಾನ್ ಬಳಕೆ ಮಾಡುವುದು ಸಾಮಾನ್ಯ ಸಂಗತಿ, ಇದೇ ರೀತಿ ಎಸಿ ಹಾಕಿಕೊಂಡು ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮನಹಳ್ಳಿಯಲ್ಲಿ ನಡೆದಿದೆ.
ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವರ ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡ ಪರಿಣಾಮ ಪತಿ, ಪತ್ನಿ, ಮಕ್ಕಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೆಂಕಟೇಶ್ ಪ್ರಸಾದ್ (42) ಡಿ.ಚಂದ್ರಕಲಾ (38), ಆರ್ದ್ವೀಕ್ (16) ಹಾಗೂ ಪ್ರೇರಣಾ (8) ಮೃತರು ಎಂದು ಗುರುತಿಸಲಾಗಿದೆ.
ಎಸಿ ಸ್ಫೋಟಗೊಂಡು ವಿಷಾನಿಲ ಆವರಿಸಿದ್ದರಿಂದ ಸಾವನಪ್ಪಿದ್ದು, ಎರಡು ಫ್ಲೋರ್ ಮನೆಯ 2ನೇ ಮಹಡಿಯಲ್ಲಿ ದಂಪತಿ ಮಲಗಿದ್ದರು. ವೆಂಕಟ್ ಪ್ರಶಾಂತ್, ಚಂದ್ರಕಲಾ ಎರಡನೇ ಮಹಡಿಯಲ್ಲಿ ಮಲಗಿದ್ದರು, ಕೆಳ ಮಹಡಿಯಲ್ಲಿದ್ದ ರಾಘವೇಂದ್ರ ಶೆಟ್ಟಿ, ಪತ್ನಿ ರಾಜಶ್ರೀ ಬಚಾವ್ ಆಗಿದ್ದು, ವಿಷಾನಿಲ ಹರಡುತ್ತಿದ್ದಂತೆ ವೆಂಕಟ್ ತಂದೆ-ತಾಯಿ ಆಚೆ ಓಡಿಬಂದಿದ್ದರು, ವೆಂಕಟ್ ದಂಪತಿ ಮತ್ತು ಮಕ್ಕಳು ಉಸಿರುಗಟ್ಟಿ ಒಳಗೇ ಸಾವನ್ನಪ್ಪಿದ್ದಾರೆ. ಎಸಿಯಿಂದ ವಿಷಾನಿಲ ಹೊರಬಂದು ಆವರಿಸಿದ್ದರಿಂದ ದುರಂತ ಸಂಭವಿಸಿದೆ.
ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಸ್ವಲ್ಪ ವೈಮನಸ್ಸು, ವಿವಾದಗಳಿದ್ದು ತೆಗೆದುಕೊಂಡ ಸಾಲ ಮರುಪಾವತಿ ಮಾಡಿರಲಿಲ್ಲ, ಆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.