ಬೆಂಗಳೂರು: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ ಬಳಿಕ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 1231 ಸಿಬ್ಬಂದಿಯನ್ನು ಕೈಬಿಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಅಧಿವೇಶನದಲ್ಲಿ ಸದಸ್ಯ ಕೆ. ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ರಾಜ್ಯ ಸಹಕಾರ ಸಚಿವರು ಲಿಖಿತ ಉತ್ತರ ನೀಡಿದ್ದು, ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೊದಲು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಕಾಯ್ದೆ ತಿದ್ದುಪಡಿ ಬಳಿಕ ಕೈಬಿಡಲಾದ ಸಿಬ್ಬಂದಿ ಹಾಗೂ ಸರಕಾರ ಕೈಗೊಂಡ ಪರಿಹಾರ ಕ್ರಮಗಳು ಏನೇನು ಆಗಿವೆ ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದರು.
ಇದಕ್ಕೆ ಲಿಖಿತ ಉತ್ತರ ನೀಡಿದ ಸಹಕಾರ ಸಚಿವರು, ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಪೂರ್ವದಲ್ಲಿ 2,969 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 1,231 ಮಂದಿ ಸಿಬ್ಬಂದಿಯನ್ನು ಕೈಬಿಡಲಾಗಿದೆ. ಎಪಿಎಂಸಿ ಸಮಿತಿಗಳಲ್ಲಿ ಲಭ್ಯವಿರುವ ಆದಾಯಕ್ಕೆ ಅನುಗುಣವಾಗಿ ಖಾಸಗಿ ಮಾನವ ಸಂಪನ್ಮೂಲ ಸೇವೆ ಒದಗಿಸುವ ಏಜೆನ್ಸಿಗಳ ಮೂಲಕ ಟೆಂಡರ್ ಕರೆದು 11 ತಿಂಗಳಿಗೊಮ್ಮೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಪಡೆಯಲಾಗುತ್ತದೆ. ಪ್ರಸಕ್ತ ಸಮಿತಿಗಳ ಅಗತ್ಯತೆಗೆ ಅನುಗುಣವಾಗಿ ಹೊರಗುತ್ತಿಗೆ ಸಂಸ್ಥೆಯಿಂದ ನಿಯೋಜಿಸಲಾದ ಒಟ್ಟು 1,738 ಹೊರಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಸಚಿವರು ಉತ್ತರಿಸಿದ್ದಾರೆ.
ರಾಜ್ಯದ 160 ಎಪಿಎಂಸಿಗಳು ಒಟ್ಟು 8584 ಎಕರೆ ಜಮೀನನ್ನು ಹೊಂದಿವೆ ಎಂದೂ ಹರೀಶ್ ಕುಮಾರ್ ಪ್ರಶ್ನೆಯೊಂದಕ್ಕೆ ಸಹಕಾರ ಸಚಿವರಿಂದ ಲಿಖಿತ ಉತ್ತರ ದೊರಕಿದೆ.