ಕೃಷಿ ಮಸೂದೆಗಳ ಬಗ್ಗೆ, ವ್ಯಾಪಕ ವಿರೋಧಗಳಿಂದ, ಅದರಲ್ಲೂ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯ ಬಗ್ಗೆ ರೈತರಲ್ಲಿ ಉಂಟಾಗಿರುವ ವ್ಯಾಪಕ ಆತಂಕದಿಂದ ಕುಪಿತಗೊಂಡ ಮೋದಿ ಸರಕಾರ ಸಾಮಾನ್ಯವಾಗಿ ಪ್ರಕಟಿಸಬೇಕಾಗಿದ್ದ ಹಿಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆಯನ್ನು ಪ್ರಕಟಿಸಿ ರೈತರ ಆಕ್ರೊಶವನ್ನು ತಣ್ಣಗಾಗಿಸಬಹುದು, ಇಲ್ಲವೇ ಬೇರೆಡೆಗಾದರೂ ತಿರುಗಿಸಬಹುದು ಎಂದು ಭಾವಿಸಿತು. ‘ಉನ್ನತ ಎಂಎಸ್‌ಪಿ’ ರೈತರನ್ನು ಸಬಲೀಕರಿಸುತ್ತವೆ, ಅವರ ವರಮಾನಗಳನ್ನು ದ್ವಿಗುಣಗೊಳಿಸಲು ನೆರವಾಗುತ್ತವೆ ಎಂದು ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದರು.
ಆದರೆ ಅವರ ಸರಕಾರ ಪ್ರಕಟಿಸಿರುವ ಬೆಲೆಗಳು ಅವರ ಈ ಮಾತುಗಳನ್ನೇ ಹುಸಿಗೊಳಿಸಿವೆ, ರೈತರ ಆಕ್ರೋಶವನ್ನು ಇನ್ನೂ ಹೆಚ್ಚಿಸಿವೆ. ಏಕೆಂದರೆ ಪ್ರಮುಖ ಹಿಂಗಾರು ಬೆಳೆಯಾದ ಗೋಧಿಯ ಎಂಎಸ್‌ಪಿಯಲ್ಲಿ ಏರಿಕೆಯಾಗಿರುವುದು ಕೇವಲ 50ರೂ ಕ್ವಿಂಟಾಲ್‌ಗೆ, 1925 ರಿಂದ 1975 ಕ್ಕೆ ಮಾತ್ರ ಅಂದರೆ ಕೇವಲ 2.6ಶೇ. ಇದು ಮೋದಿ ಆಡಳಿತ ಕಾಲಕ್ಕೆ ಹೋಲಿಸಿದರೂ ಅತ್ಯಂತ ಕಡಿಮೆ ಏರಿಕೆ. ಕಳೆದ ವರ್ಷ 4.6ಶೇ. ಏರಿತ್ತು.
(ಕೋಷ್ಟಕ ಕೃಪೆ: The Great MSP Hoax – Minimum Hike, Maximum Noise, Subodh Verma, Newsclick, Sept.23)
ಈಗ ಎಂಎಸ್‍ಪಿ ಪ್ರಕಟಿಸಿರುವ ಆರೂ ಬೆಳೆಗಳಲ್ಲಿ ಏರಿಕೆ ಕಳೆದ ವರ್ಷದ ಏರಿಕೆಗಳಿಗಿಂತಲೂ ಕಡಿಮೆ ಎಂಬುದನ್ನು ಗಮನಿಸಬಹುದು.
ಗೋಧಿಯ ಎಂಎಸ್‍ಪಿಗಳ ಈ ಕೋಷ್ಟಕ ನೋಡಿ:
- ವರ್ಷ ರೂ./ಕ್ವಿಂಟಲ್ %ಏರಿಕೆ
- 2011-12 1170
- 2012-13 1285 9.8
- 2013-14 1350 5.1
- 2014-15 1400 3.7
- 2015-16 1450 3.6
- 2016-17 1525 5.2
- 2017-18 1625 6.6
- 2018-19 1735 6.8
- 2019-20 1840 6.1
- 2020-21 1925 4.6
- 2021-22 1975 2.6
ಉತ್ತರ ಭಾರತದ ಈ ಪ್ರಮುಖ ಬೆಳೆಯ ಎಂಎಸ್‍ಪಿ ಏರಿಕೆ ಕಳೆದ ಒಂದು ದಶಕದಲ್ಲೇ ಅತೀ ಕಡಿಮೆ ಎಂಬುದನ್ನು ಗಮನಿಸಬಹುದು.
ಡಾ. ಸ್ವಾಮಿನಾಥನ್ ಸಮಿತಿಯ ಶಿಫಾರಸಿನ ಪ್ರಕಾರ ಎಂಎಸ್‌ಪಿ ನಿರ್ಧರಿಸಲಾಗುತ್ತದೆ ಎಂಬ ಮೋದಿಯವರ ಆರು ವರ್ಷಗಳ ಹಿಂದಿನ ಆಶ್ವಾಸನೆಯೂ ಈ ಎಂಎಸ್‌ಪಿ ಪ್ರಕಟಣೆಯಲ್ಲಿ ಹುಸಿಯಾಗಿದೆ. ‘ಕೃಷಿ ಖರ್ಚುಗಳು ಮತ್ತು ಬೆಲೆಗಳು ಆಯೋಗ’ (ಸಿ.ಎ.ಸಿ.ಪಿ.) ನಿರ್ಧರಿಸಿರುವ ಸಮಗ್ರ ಉತ್ಪಾದನಾ ವೆಚ್ಚ(ಸಿ2) ಮೇಲೆ ಕನಿಷ್ಟ 50 ಶೇ. ಸೇರಿಸಬೇಕೆಂಬ ಸೂತ್ರದ ಪ್ರಕಾರ (ಸಿ2+50%) ಗೋಧಿಗೆ ಕನಿಷ್ಟ ಬೆಂಬಲ ರೂ.2200.50 ಆಗಬೇಕಿತ್ತು. ಆದರೆ ಕೊಟ್ಟಿರುವುದು ರೂ.1975, ಅಂದರೆ ಇದರಲ್ಲೂ 225.50ರೂ, ಅಥವ ಸುಮಾರು 10ಶೇ.ನಷ್ಟ! ಸಬಲೀಕರಣದ ಅಮೋಘ ವಿಧಾನ!!
ಈ ಕೋಷ್ಟಕ ನೋಡಿ-
- ಬೆಳೆ ಸಿ2 ವೆಚ್ಚ ಸಿ2+50% ಪ್ರಕಟಿತ ಎಂಎಸ್‌ಪಿ ರೈತರಿಗೆ ನಷ್ಟ
- ಗೋಧಿ ರೂ.1467 2200.50 1975 225.50
- ಬಾರ್ಲಿ ರೂ.1404 2106 1600 506
- ಕಡಲೆ ರೂ..4012 6018 5100 918
- ಅವರೆ ರೂ.4204 6306 5100 1206
- ಸಾಸಿವೆ ರೂ.3470 5205 4650 555
- ಕುಸುಂಬೆ ರೂ.4908 7362 327 2035