ಉದ್ಭವ್ ಠಾಕ್ರೆ ಹೇಳಿಕೆಗೆ ವ್ಯಾಪಕ ಖಂಡನೆ, ಗಡಿ ಖ್ಯಾತೆ ತೆಗೆಯದಂತೆ ಎಚ್ಚರಿಕೆ

ಬೆಂಗಳೂರು ; ಜ, 18 : ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾನುವಾರ ಹುತಾತ್ಮರ ದಿನಚರಣೆ ನೆಪದಲ್ಲಿ ಮತ್ತೆ ಗಡಿ ವಿಚಾರ ಖ್ಯಾತೆಯನ್ನು ತೆಗೆದಿದ್ದಾರೆ. ಅವರ ಹೇಳಿಕೆಗೆ ಹಲವಾರು ರಾಜಕೀಯ ಮುಖಂಡರು, ಕನ್ನಡ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಉದ್ಧವ್ ಠಾಕ್ರೆ  ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪನವರು ಸರಣಿ ಟ್ವಿಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ. ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ಹೇಳಿದ್ದಾರೆ.

ಠಾಕ್ರೆ ಹೇಳಿಕೆಯನ್ನು ಖಂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಕನ್ನಡಿಗರನ್ನು ಕೆರಳಿಸಬೇಡಿ ಎಂದು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೆಲ, ಜನ ಈಗಾಗಲೇ ಇತ್ಯಾರ್ಥವಾಗಿದೆ. ಕರ್ನಾಟಕದ ಬಗ್ಗೆ ಅವರು ಚಿಂತಿಸೋದು ಬೇಡ ಎಂದು ಮೃದು ಧೋರಣೆ ನೀಡಿದ್ದಾರೆ.

ಇನ್ನು ಈ ಕುರಿತಂತೆ ಉಪಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟದ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಖಾರವಾಗಿ ನುಡಿದ್ದಾರೆ.

ಈಗಾಗಲೇ ಈ ಕುರಿತು ಸಾಕಷ್ಟು ಕನ್ನಡಪರ ಸಂಘಟನೆಗಳು ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿರೋಧಿಸಿ ಅವರ ಪ್ರತಿಕೃತಿಯನ್ನು ದಹನ ಮಾಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಸಾಹಿತಿಗಳು ಪ್ರಗತಿಪರರು ಪ್ರತಿಕ್ರಿಯನ್ನು ನೀಡಿದ್ದು,  ಉದ್ಧವ್ ಠಾಕ್ರೆ ಅವರ ನಡೆಯನ್ನು ಖಂಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *