ಬಂಡವಾಳಶಾಹಿ ವ್ಯವಸ್ಥೆಯ ಪಿಡುಗುಗಳನ್ನು ಗುಣಪಡಿಸಲು ಮದ್ಯಪ್ರವೇಶ ಮಾಡಬೇಕಿದ್ದ ಪ್ರಭುತ್ವವನ್ನೇ ಮಾರುಕಟ್ಟೆ ನುಂಗಿದೆ. ಬಂಡವಾಳಶಾಹಿ ಬಗ್ಗೆ ಉದಾರಿಗಳ ಸಮರ್ಥನೆಗಳು ಬರಡಾಗಿವೆ. ಅವರಿಗೆ, ಇಂದು ಸಮಾಜವಾದದ ವಿರುದ್ಧ ಪ್ರತಿವಾದಗಳೂ ಇಲ್ಲ, ನಂಬಲರ್ಹ ಸಿದ್ಧಾಂತವೂ ಇಲ್ಲ. ಸಮಾಜವಾದ ಇಂದಿನ ದಿನಕ್ಕೆ ಸಲ್ಲುವಂತೆ ಸಜ್ಜಾಗಬೇಕು. ಸಮಾಜವಾದಿ ಚಳುವಳಿ ಮುನುಗ್ಗಬೇಕು ಎಂಬುದಾಗಿ ಟಿಪ್ಪಣಿ ಮಾಡಿದ್ದಾರೆ, ಪ್ರೊ. ಪ್ರಭಾತ್ ಪಟ್ನಾಯಕ್. ಅವರ ಟಿಪ್ಪಣಿಯ ಸಾರಾಂಶ ಇಲ್ಲಿದೆ.
ಬಂಡವಾಳಶಾಹಿ ಆರ್ಥಿಕ ಪದ್ಧತಿಯ ಸಮರ್ಥನೆಯಲ್ಲಿ ಎರಡು ಭಿನ್ನವಾದ ಉದಾರಿ ನಿರೂಪಣೆಗಳಿವೆ. ಮೊದಲನೆಯದು, ಒಟ್ಟು ಸರಕುಗಳ ಉತ್ಪಾದನೆಗೆ ಎಷ್ಟು ಬೇಕೋ ಅಷ್ಟೇ ಪ್ರಮಾಣದ ಸಂಪನ್ಮೂಲಗಳನ್ನು ಬಂಡವಾಳಶಾಹಿಯು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತದೆ ಎಂದರೆ, ಒಂದೇ ಒಂದು ಐಟಂ ಸರಕನ್ನು ಅಧಿಕವಾಗಿ ಉತ್ಪಾದಿಸಬೇಕಾದರೂ ಮತ್ತೊಂದು ಐಟಂ ಸರಕಿನ ಉತ್ಪಾದನೆ ಕಡಿಮೆ ಮಾಡದ ಹೊರತು ಸಾಧ್ಯವಾಗದು ಎಂಬುದು.
ಇದು ನಂಬಲರ್ಹವಲ್ಲ. ಏಕೆಂದರೆ, ನಿರುದ್ಯೋಗ ಮತ್ತು ಅದರ ಜೊತೆಯಲ್ಲಿ ಉತ್ಪಾದನಾ ಉಪಕರಣಗಳು ಬಳಕೆಯಾಗದೆ ಉಳಿಯುವುದು ಬಂಡವಾಳಶಾಹಿಯ ಶಾಶ್ವತ ಲಕ್ಷಣಗಳು ಎಂಬುದನ್ನು ಬಂಡವಾಳಶಾಹಿಯ ಚರಿತ್ರೆಯುದ್ದಕ್ಕೂ ಕಾಣಬಹುದು. ಹಾಗಾಗಿ, ಈ ನಿರೂಪಣೆ ಅವಾಸ್ತವಿಕವೆಂದು ಒಪ್ಪಿಕೊಳ್ಳುವ ಪ್ರಾಮಾಣಿಕ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಇನ್ನೊಂದು ಧಾರೆಯ ನಿರೂಪಣೆಯ ಮೊರೆ ಹೋಗುತ್ತಾರೆ.
ಏಕ ಕಾಲದಲ್ಲಿ ಕೆಲಸಗಾರರು ನಿರುದ್ಯೋಗಿಗಳಾಗಿರುವುದು ಮತ್ತು ಅದರ ಜೊತೆಯಲ್ಲೇ ಉತ್ಪಾದನಾ ಉಪಕರಣಗಳು ಪೂರ್ಣವಾಗಿ ಬಳಕೆಯಾಗದಿರುವುದು ಬಂಡವಾಳಶಾಹಿಯ ದೋಷವೆಂದೂ ಮತ್ತು ಅದನ್ನು ಪ್ರಭುತ್ವದ ಮದ್ಯಪ್ರವೇಶದ ಮೂಲಕ ಸರಿಪಡಿಸಬಹುದು ಎಂಬುದು ಎರಡನೆಯ ನಿರೂಪಣೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಹೊರಗೆ ಅಸ್ತಿತ್ವ ಉಳ್ಳ ಪ್ರಭುತ್ವವು ತನ್ನಷ್ಟಕ್ಕೆ ತಾನೇ ಮದ್ಯಪ್ರವೇಶಮಾಡಿ ಬಂಡವಾಳಶಾಹಿಯ ಅಡ್ಡಪರಿಣಾಮಗಳನ್ನು ತೊಡೆದು ಹಾಕುತ್ತದೆ ಎಂದು ಈ ನಿರೂಪಣೆ ಬಗೆಯುತ್ತದೆ.
ಇಪ್ಪತ್ತನೇ ಶತಮಾನದ ಪ್ರಸಿದ್ಧ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರ ಪ್ರತಿಪಾದನೆಗಳು ಈ ಎರಡನೆಯ ಧಾರೆಗೆ ಸೇರುತ್ತವೆ. ಅದರ ಪಾಡಿಗೆ ಅದನ್ನು ಬಿಟ್ಟರೆ, ಬಂಡವಾಳಶಾಹಿ ವ್ಯವಸ್ಥೆಯು ಯಾವಾಗಲೂ ಬಿಕ್ಕಟ್ಟುಗಳಿಂದ ಆವರಿಸಿರುತ್ತದೆ ಮತ್ತು ಅದು ಮರುಕ ಉಳ್ಳ ಸಮಾಜದ ಅವಶ್ಯಕತೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಮಾಕ್ರ್ಸ್‍ವಾದಿ ಗ್ರಹಿಕೆಯನ್ನು ಕೀನ್ಸ್ ಪರಂಪರೆ ಒಪ್ಪುತ್ತದೆ. ಆದರೆ, ರೋಗಗ್ರಸ್ತವಾಗಿರುವ ಬಂಡವಾಳಶಾಹಿ ಸಮಾಜವನ್ನು ಗುಣಪಡಿಸಲು ಪ್ರಭುತ್ವವು ಪರಿಣಾಮಕಾರಿಯಾಗಿ ಮದ್ಯಪ್ರವೇಶ ಮಾಡಬಹುದು ಎಂಬ ಮಾಕ್ರ್ಸ್‍ವಾದಿ ಗ್ರಹಿಕೆಯನ್ನು ಕೀನ್ಸ್ ಅಲ್ಲಗಳೆಯುತ್ತಾರೆ. ಸಮಾಜವಾದಿಗಳು ಬಯಸುವಂತೆ ಉತ್ಪಾದನಾ ಸಾಧನಗಳನ್ನು ಸಾಮಾಜಿಕ ಒಡೆತನಕ್ಕೆ ಒಳಪಡಿಸುವ ಅವಶ್ಯಕತೆ ಇಲ್ಲ. ಬದಲಿಗೆ, ಹೂಡಿಕೆಯ ಸಮಾಜೀಕರಣವಾದರೆ ಬಂಡವಾಳಶಾಹಿಯ ಮೂಲ ದೋಷವನ್ನೂ ಪರಿಹರಿಸಬಹುದು ಎನ್ನುತ್ತಾರೆ ಕೀನ್ಸ್. ಅವರ ಪ್ರಕಾರ, ಹೂಡಿಕೆಯ ಸಮಾಜೀಕರಣವೆಂದರೆ, ಸಂಪೂರ್ಣ ಉದ್ಯೋಗಗಳಿರುವ ಪರಿಸ್ಥಿತಿಯಲ್ಲಿ ಆಗುವಷ್ಟು ಉತ್ಪತ್ತಿಯ ಮೇಲಿನ ಒಟ್ಟು ಬೇಡಿಕೆಯಲ್ಲಿ ಕೊರತೆಯಾಗದಂತೆ ತಡೆಯುವುದಕ್ಕೆ ಬೇಕಾಗುವಷ್ಟು ಮಟ್ಟದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗುವಂತೆ ನಿಯಂತ್ರಣಗಳ ಮೂಲಕ ಖಾತ್ರಿಪಡಿಸಿಕೊಳ್ಳಬಹುದು ಎಂಬುದು. ಈ ಬಗ್ಗೆ ಮಾಕ್ರ್ಸ್‍ವಾದಿ ವಿಮರ್ಶೆಯನ್ನು ಇಲ್ಲಿ ಪ್ರಸ್ತಾಪಿಸಿಲ್ಲ.
ಬಂಡವಾಳಶಾಹಿ ಸಮರ್ಥನೆಯಲ್ಲಿನ ಎರಡನೆಯ ಧಾರೆಯ ನಿರೂಪಣೆಯ ತರ್ಕವನ್ನು ಅದರದ್ದೇ ಆದ ನಿಯಮಗಳ ಪ್ರಕಾರ ಒರೆಗೆ ಹಚ್ಚಿದಾಗ ಮತ್ತು ಅದು ಎಷ್ಟರಮಟ್ಟಿಗೆ ಸಮಕಾಲೀನ ಬಂಡವಾಳಶಾಹಿಗೆ ಅನುಗುಣವಾಗಿದೆ ಎಂದು ವಿಚಾರಮಾಡಿದಾಗ ನಿಸ್ಸಂಶಯವಾದ ಒಂದು ಪ್ರಶ್ನೆ ಉದ್ಭವವಾಗುತ್ತದೆ: ಸಂಪೂರ್ಣ ಉದ್ಯೋಗದ ಗುರಿ ಸಾಧಿಸಲು ಪ್ರಭುತ್ವ ಮದ್ಯಪ್ರವೇಶ ಮಾಡವುದಾದರೂ ಹೇಗೆ-ಬಂಡವಾಳಶಾಹಿಗಳು ಅಂತಹ ಮದ್ಯಪ್ರವೇಶವನ್ನು ವಿರೋಧಿಸುತ್ತಿರುವಾಗ? ಈ ಪ್ರಶ್ನೆಗೆ ಉತ್ತರವಾಗಿ ಕೀನ್ಸ್ ಹೀಗೆ ಹೇಳಿದ್ದರು: ಪ್ರಭುತ್ವದ ಮದ್ಯಪ್ರವೇಶವನ್ನು ಬಂಡವಾಳಗಾರರು ವಿರೋಧಿಸುವುದಿಲ್ಲ. ಏಕೆಂದರೆ, ಅವರಿಗೆ ಅದರಿಂದ ಲಾಭವಿದೆ. ಅಂದರೆ, ಪ್ರಭುತ್ವದ ಮದ್ಯಪ್ರವೇಶದಿಂದಾಗಿ ಒಟ್ಟು ಬೇಡಿಕೆ ವೃದ್ಧಿಸುತ್ತದೆ. ಆಗ, ಕೆಲಸಗಾರರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ ಮತ್ತು ಬಂಡವಾಳಗಾರರ ಲಾಭವೂ ಹೆಚ್ಚುತ್ತದೆ. ಆದರೆ, ಮೀಸಲು ನಿರುದ್ಯೋಗಿಗಳ ಪಡೆಯೇ ಇಲ್ಲದ ಪರಿಸ್ಥಿತಿಯಲ್ಲಿ ಕೆಲಸಗಾರರು ತಮ್ಮ ‘ಕೈ ತಪ್ಪಿ’ ಹೋಗುತ್ತಾರೆಂಬ ಭಯದಿಂದ ಬಂಡವಾಳಗಾರರು ‘ಸಂಪೂರ್ಣ ಉದ್ಯೋಗ’ದ ಸ್ಥಿತಿಯನ್ನು-ಅದರ ನಿಜ ಅರ್ಥದಲ್ಲಿಯೂ-ವಿರೋಧಿಸುವವರೇ ಎಂಬುದನ್ನು ಎರಡನೇ ಧಾರೆಯ ಪ್ರತಿಪಾದಕರು ಒಪ್ಪಿಕೊಳ್ಳುತ್ತಾರೆ. ಆದರೂ, ಈ ಕ್ರಮದಿಂದಾಗಿ, ಉದ್ಯೋಗಗಳ ಮಟ್ಟ ಇನ್ನೂ ಹೆಚ್ಚುತ್ತದೆ ಎಂದು ಕಳವಳಪಡುತ್ತಾರೆ.
ಇನ್ನೊಂದು ಪ್ರಶ್ನೆಯೂ ಏಳುತ್ತದೆ: ಪ್ರಭುತ್ವದ ಮದ್ಯಪ್ರವೇಶ ಕೆಲಸಗಾರರಿಗೆ ಮತ್ತು ಬಂಡವಾಳಗಾರರಿಗೆ ಲಾಭವಾಗುವಂತಿದ್ದರೆ ಅಂತಹ ಪ್ರಯತ್ನ ಯಾಕೆ ಮಾಡಿಲ್ಲ? ಈ ಪ್ರಶ್ನೆಗೆ ಕೀನ್ಸ್ ಹೀಗೆ ಉತ್ತರಿಸಿದ್ದರು: ಸೈದ್ಧಾಂತಿಕ ತಿಳುವಳಿಕೆಯ ಕೊರತೆಯಿಂದ ಬಂಡವಾಳಗಾರರು ಪ್ರಭುತ್ವದ ಮದ್ಯಪ್ರವೇಶವನ್ನು ವಿರೋಧಿಸಿದರು. ಬೇಡಿಕೆಯ ಕೊರತೆ ಏಕೆ ಉಂಟಾಗುತ್ತದೆ ಮತ್ತು ಪ್ರಭುತ್ವ ಹೇಗೆ ಅದನ್ನು ನಿರ್ವಹಿಸುತ್ತದೆ ಎಂಬುದರ ಸರಿಯಾದ ತಿಳುವಳಿಕೆ ಮೂಡಿದಾಗ ಅವರ ವಿರೋಧ ಮರೆಯಾಗುತ್ತದೆ.
ಬಂಡವಾಳಗಾರರಿಗೆ ಒಂದು ವೇಳೆ ಅಂತಹ ತಿಳುವಳಿಕೆ ಇದ್ದಿದ್ದರೂ, ವೈಯುಕ್ತಿಕ ನೆಲೆಯಲ್ಲಿ ಬೇಡಿಕೆ ಕೊರತೆಯ ಸಮಸ್ಯೆಯನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಸಾಧ್ಯವಾದಷ್ಟು ಲಾಭಗಳಿಸುವ (“ಖಾಸಗಿ ವಿವೇಚನಾಶೀಲತೆ”) ಬೋನಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಅವರಿಗೆ ಈ ಸಮಸ್ಯೆಯನ್ನು ಎದುರಿಸಲು “ಸಾಮಾಜಿಕ ವಿವೇಚನಾಶೀಲತೆ” ಉಳ್ಳ ಶಕ್ತಿಯೊಂದು ಬೇಕಿತ್ತು – ಬಂಡವಾಳಶಾಹಿ ಪ್ರಭುತ್ವ.
ಬಾಹ್ಯ ಅಸ್ತಿತ್ವದ ಪ್ರಭುತ್ವ
ಅದರ ಅರ್ಥವೆಂದರೆ, ಮಾರುಕಟ್ಟೆಯ ಆದೇಶ ಮೀರುವ ತಾಕತ್ತಿರುವ, ಅದರ ಮಾನದಂಡಗಳಿಗೆ ಬಗ್ಗದ, ಮತ್ತು ಅದರ “ಹೊರಗೆ” ಸ್ವತಂತ್ರ ಅಸ್ತಿತ್ವ ಉಳ್ಳ ಪ್ರಭುತ್ವದ ಅವಶ್ಯಕತೆ ಬಂಡವಾಳಶಾಹಿಗಿತ್ತು. ಈ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಅದು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿತು. ಈ ಸಂಸ್ಥೆಗಳು ತೆಗೆದುಕೊಂಡ ಮೂರು ಕ್ರಮಗಳು ಬಹಳ ಮುಖ್ಯವಾಗಿವೆ.
ಮೊದಲನೆಯದು, ಗಡಿಗಳಾಚೆ ಬಂಡವಾಳದ ಹರಿವಿನ ಮೇಲೆ ಪ್ರಭುತ್ವದ ನಿಯಂತ್ರಣ. ಅತೃಪ್ತರ ಹಣ ಹಿಂತೆಗೆಯುವ ಬೆದರಿಕೆಗಳಿಗೆ ಪ್ರಭುತ್ವ ಬಗ್ಗುತ್ತಿರಲಿಲ್ಲ. ಹಾಗಾಗಿ, ಎಲ್ಲ ದೇಶಗಳಲ್ಲೂ ಬಂಡವಾಳ ಹರಿವಿನ ಮೇಲೆ ನಿಯಂತ್ರಣವಿತ್ತು.
ಎರಡನೆಯದು, ವಿತ್ತೀಯ ಕೊರತೆ ನೀಗಿಕೊಳ್ಳಲು ಪ್ರಭುತ್ವ ಸಾಲ ಮಾಡುವಾಗ ಮಾರುಕಟ್ಟೆಯ ಭಾವನೆಗಳಿಗೆ ಸೊಪ್ಪುಹಾಕುತ್ತಿರಲಿಲ್ಲ.
ಮೂರನೆಯದು, ಪ್ರಭುತ್ವ ಆರೋಗ್ಯ, ಶಿಕ್ಷಣ ಮುಂತಾದ ಸೇವೆಗಳಿಗೆ ಮಾಡುತ್ತಿದ್ದ ಖರ್ಚುಗಳನ್ನು ಲಾಭ-ನಷ್ಟದ ದೃಷ್ಟಿಯಿಂದ ಖಾಸಗಿ ಸಂಸ್ಥೆಗಳ ಖರ್ಚಿನೊಂದಿಗೆ ಹೋಲಿಕೆ ಮಾಡುವುದಾಗಲಿ, ಖರ್ಚುಗಳ ಅವಶ್ಯಕತೆಯ ಬಗ್ಗೆಯಾಗಲಿ ಅಥವಾ ಸರ್ಕಾರದ ಲಾಭ ನಷ್ಟಗಳ ಮೇಲಾಗಲಿ ವಿವಾದಗಳಿರಲಿಲ್ಲ. ಮಾರುಕಟ್ಟೆಯ ಅಂಜಿಕೆ ಇಲ್ಲದೆ ಪ್ರಭುತ್ವ ತನಗೆ ಬೇಕಾದಂತೆ ಖರ್ಚುಮಾಡುತ್ತಿತ್ತು.
ಈ ಸಂಸ್ಥೆಗಳು/ಕ್ರಮಗಳು ಈಗ ಇಲ್ಲವಾಗಿವೆ. ಹಣಕಾಸು ಜಾಗತೀಕರಣ ಈಗ ಹೊಸ ಅರ್ಥವನ್ನೇ ಪಡೆದಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸ ಕಳೆದುಕೊಳ್ಳುವ ಭಯದಿಂದ ಪ್ರಭುತ್ವ ಅನುಸರಿಸುವ ನೀತಿಗಳು ಬಲವಂತಕ್ಕೊಳಗಾಗಿವೆ. ಹೂಡಿಕೆದಾರರು ಸರ್ಕಾರಗಳ ಬಜೆಟ್ ಕೊರತೆ ನೀತಿಗೆ ಆಕ್ಷೇಪಿಸುವುದರಿಂದ ಅನೇಕ ದೇಶಗಳು ತಮ್ಮ ಬಜೆಟ್ ಕೊರತೆಯನ್ನು ಜಿಡಿಪಿಯ ಶೇ.3ರ ಮಿತಿಯಲ್ಲಿಡುತ್ತಿವೆ. ಅದೇ ರೀತಿಯಲ್ಲಿ, ಕೇಂದ್ರ ಬ್ಯಾಂಕ್‍ನ (ರಿಸರ್ವ್ ಬ್ಯಾಂಕ್) ಸ್ವಾಯತ್ತತೆ ಹಣಕಾಸು ಬಂಡವಾಳದ ಒತ್ತಡಕ್ಕೆ ಒಳಗಾಗಿದೆ. ಅಂದರೆ, ಸಾರ್ವಜನಿಕ ಸಾಲ ಎತ್ತಲು ಅದು ಮಾರುಕಟ್ಟೆಯ ಭಾವನೆಗಳಿಗೆ ತಲೆಬಾಗಬೇಕು. ಸರ್ಕಾರದ ಖರ್ಚುಗಳ ಮೇಲೆ ಮತ್ತು ಅದರ ಸಾಲಗಳ ಮೇಲೆ ಹಣ ಕಾಸು ಬಂಡವಾಳ ಮಿತಿ ಹಾಕಿರುವುದರಿಂದ ಸರ್ಕಾರದ ಅನೇಕ ಸೇವೆಗಳು ಖಾಸಗೀಕರಣಗೊಂಡಿವೆ. ಹಾಗಾಗಿ, ಸಾರ್ವಜನಿಕ ಸೇವೆ ಒದಗಿಸುವ ಸರ್ಕಾರಿ ಸಂಸ್ಥೆಗಳು ಹಾಸಿಗೆ ಇದ್ದಷ್ಟು ಕಾಲು ಚಾಚುವ ಪರಿಸ್ಥಿತಿಯಲ್ಲಿವೆ.
ಮಾರುಕಟ್ಟೆಯ ಸೆರೆಯಾಳು
ಈ ಎಲ್ಲ ವಿವರಣೆಯ ಸಾರ ಏನೆಂದರೆ, ಪ್ರಭುತ್ವ ಮಾರುಕಟ್ಟ್ಟೆಯ ಸೆರೆಯಾಳಾಗಿದೆ. ಬಂಡವಾಳಶಾಹಿ ಸಮರ್ಥನೆಯ ಎರಡನೆಯ ನಿರೂಪಣೆಯ ಪ್ರತಿಪಾದಕರು ಅಂದುಕೊಂಡಿದ್ದಂತೆ ಮಾರುಕಟ್ಟೆಯ ಹೊರಗಿದ್ದ ಪ್ರಭುತ್ವ ಖಾಸಗಿ ವಿವೇಚನಾಶೀಲತೆಯ ಪರಿಧಿಯಲ್ಲಿದ್ದ ಮಾರುಕಟ್ಟೆಯ ಲೋಪ ದೋಷಗಳನ್ನು ಸರಿಪಡಿಸುವ ಸಾಮಾಜಿಕ ವಿವೇಚನಾಶೀಲತೆಯ ಪ್ರತಿರೂಪವಾಗುವುದರ ಬದಲು ಪ್ರಭುತ್ವವೇ ಮಾರುಕಟ್ಟೆಯ ಸೆರೆಯಾಳಾಗಿದೆ. ಮಾರುಕಟ್ಟೆಯಲ್ಲಿ ಭಾಗವಹಿಸುವವರಲ್ಲಿ ಒಬ್ಬರ ಮಟ್ಟಕ್ಕೆ ಪ್ರಭುತ್ವ ಇಳಿದಿರುವ ಅಂಶವನ್ನು ಮೂಡೀಸ್ ಎಂಬ ರೇಟಿಂಗ್ ಎಜೆನ್ಸಿಯು ಒಮ್ಮೆ ಅಮೆರಿಕಾದ ಸರ್ಕಾರವನ್ನು ಸಾಲ ಮರುಪಾವತಿಯ ಸಾಮಥ್ರ್ಯದ ಬಗ್ಗೆ ತನ್ನ ಮಾನದಂಡದ ಪ್ರಕಾರ ಕೆಳದರ್ಜೆಗಿಳಿಸಿದ್ದ ಪರಿಸ್ಥಿತಿಯ ಮೂಲಕ ಕಾಣಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರಭುತ್ವವು ತನ್ನ ಅಧಿಕಾರ/ವಿಚಾರಶೀಲತೆಯನ್ನು ವ್ಯವಸ್ಥೆಯ ಮೇಲೆ ಜಾರಿಮಾಡುವ ಪರಿಸ್ಥಿತಿಯಲ್ಲಿಲ್ಲ.
ಬಂಡವಾಳಶಾಹಿ ಸಂಪೂರ್ಣ ಉದ್ಯೋಗ ಒದಗಿಸುತ್ತದೆ ಮತ್ತು ದಕ್ಷತೆಯಿಂದ ಕಾರ್ಯಪ್ರವೃತ್ತವಾಗಿರುತ್ತದೆ. ಆದ್ದರಿಂದ, ಪ್ರಭುತ್ವ ಮದ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂಬ ಎರಡನೆಯ ಧಾರೆಯ ಉದಾರಿ ಆರ್ಥಿಕ ಸಿದ್ಧಾಂತವು ಸರಿ ಎನ್ನುವುದಾದರೆ, ಆಗ, ಮಾರುಕಟ್ಟ್ಟೆಯೊಂದಿಗೆ ಪ್ರಭುತ್ವದ ಏಕೀಕರಣ ಅಥವಾ ಪ್ರಭುತ್ವವನ್ನು ಮಾರುಕಟ್ಟೆ ವಶಪಡಿಸಿಕೊಂಡಿರುವ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. (ಮಾಕ್ರ್ಸ್‍ವಾದಿ ದೃಷ್ಟಿಕೋನದಲ್ಲಿ ಇದು, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ತಾನು ಹೇಳಿದಂತೆಯೇ ಕೇಳಬೇಕೆಂದು ಪ್ರಭುತ್ವದ ಮೇಲೆ ಹಾಕಿರುವ ಒತ್ತಡವಲ್ಲದೆ ಬೇರೇನೂ ಅಲ್ಲ). ಆದರೆ, ಪ್ರಭುತ್ವವನ್ನು ಮಾರುಕಟ್ಟೆ ವಶಪಡಿಸಿಕೊಂಡಿರುವುದನ್ನು ಉದಾರವಾದಿಗಳು ಒಂದು ಸೈದ್ಧಾಂತಿಕ ಸಮರ್ಥನೆಯಾಗಿ ಒಡ್ಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಮುಂದುವರಿಯುತ್ತಿರುವ ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ ಅಮೆರಿಕಾದ ದುಡಿಯುವವರ ಸಂಖ್ಯೆಯಲ್ಲಿ ಕಡಿಮೆ ಅಂದರೂ ಶೇ.11 ಮಂದಿ ನಿರುದ್ಯೋಗಿಗಳಿರುವುದು, ಯೂರೊ ವಲಯದಲ್ಲಿ ಹಾಗೂ ಮೂರನೆ ಜಗತ್ತಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿರುವುದು, ಬಂಡವಾಳಶಾಹಿ ಸಂಪೂರ್ಣ ಉದ್ಯೋಗ ಒದಗಿಸುತ್ತದೆ ಎಂಬ ವಾದದ ಅಸಂಬದ್ಧತೆಯನ್ನು ದೃಢಪಡಿಸುತ್ತದೆ.
ಬಂಡವಾಳಶಾಹಿ ಸಮರ್ಥನೆಯಲ್ಲಿ ಮೊದಲ ಧಾರೆಯ ಉದಾರಿ ಆರ್ಥಿಕ ಸಿದ್ಧಾಂತವು ತಪ್ಪಾಗಿರುವುದರಿಂದ ಮತ್ತು ಎರಡನೆಯ ಧಾರೆಯ ಸಿದ್ಧಾಂತವು ಬರಡಾಗಿರುವುದರಿಂದ (ಅಂದರೆ, ಬಂಡವಾಳಶಾಹಿ ವ್ಯವಸ್ಥೆಯ ಪಿಡುಗುಗಳನ್ನು ಗುಣಪಡಿಸಲು ಯಾವ ಪ್ರಭುತ್ವದ ಮೇಲೆ ನಂಬುಗೆ ಇಟ್ಟು ಅದರ ಮದ್ಯಪ್ರವೇಶ ಬಯಸಿದ್ದರೊ, ಅದೇ ಪ್ರಭುತ್ವವನ್ನು ಮಾರುಕಟ್ಟೆಯೇ ನುಂಗಿರುವುದರಿಂದ ಬಂಡವಾಳಶಾಹಿಗೆ ಬೇರೆ ದಾರಿಯೇ ಇಲ್ಲ), ಇಂದು ಸಮಾಜವಾದದ ವಿರುದ್ಧವಾಗಿ ನವ ಉದಾರವಾದಿಗಳ ಪ್ರತಿವಾದವೇ ಇಲ್ಲವಾಗಿದೆ. ಸಮಾಜವಾದಿ ಸಿದ್ಧಾಂತ ಇಂದಿನ ದಿನಕ್ಕೆ ಸಲ್ಲುವಂತೆ ಸಜ್ಜಾಗಬೇಕು ಮತ್ತು ಸಮಾಜವಾದಿ ಚಳುವಳಿ ಮುನ್ನುಗ್ಗುವ ವೇಗ ಪಡೆಯಬೇಕು. ಈ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುವ ವಾತಾವರಣ ಹೇಗಿದೆ ಎಂದರೆ, ಆ ವಾತಾವರಣದಲ್ಲಿ ಸಮಾಜವಾದಕ್ಕೆ ನಂಬಲರ್ಹ ಉದಾರಿ ಸೈದ್ಧಾಂತಿಕ ವಿರೋಧವೇ ಇಲ್ಲ.