ಡಿಸೆಂಬರ್ 29 ರಂದು ಸರಕಾರದೊಡನೆ ಮಾತುಕತೆಗೆ ನಾಲ್ಕು ಅಂಶಗಳ ಅಜೆಂಡಾ
ದೆಹಲಿ : ಡಿಸೆಂಬರ್ 27ರಂದು 2020ರ ಕೊನೆಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಮಾತನಾಡಲಾರಂಭಿಸಿದಂತೆ ದಿಲ್ಲಿಯ ಸುತ್ತ ಐದು ಸ್ಥಳಗಳಲ್ಲಿ ತಡೆದು ನಿಲ್ಲಿಸಲ್ಪಟ್ಟಿರುವ ಲಕ್ಷಾಂತರ ರೈತರು ತಟ್ಟೆ ಬಾರಿಸುತ್ತ “ಮೋದೀ ಸುನ್, ಕಿಸಾನ್ ಕೀ ಮನ್ ಕೀ ಬಾತ್” ಎಂದು ಘೋಷಣೆ ಕೂಗಿ, ಪ್ರಧಾನಿಗಳ ‘ಮನ್ ಕೀ ಬಾತ್’ಗೆ ಬಹಿಷ್ಕಾರ ಸೂಚಿಸಿದರು. ಪಂಜಾಬಿನಿಂದ ತಮಿಳುನಾಡಿನ ವರೆಗೂ ಈ ಘೋಷಣೆ ತಟ್ಟೆಗಳ ಸದ್ದಿನ ನಡುವೆ ಮಾರ್ದನಿಸಿತು ಎಂದು ವರದಿಯಾಗಿದೆ. ಕೆಲವು ತಿಂಗಳ ಹಿಂದೆ ಇದೇ ಪ್ರಧಾನ ಮಂತ್ರಿಗಳು ಕೊರೊನಾದ ವಿರುದ್ಧ ತಟ್ಟೆ ಬಾರಿಸುವ ಕಾರ್ಯಕ್ರಮಕ್ಕೆ ಕರೆ ನೀಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರಧಾನ ಮಂತ್ರಿಗಳು ತನ್ನ ಭಾಷಣದಲ್ಲಿ ‘ಆತ್ಮನಿರ್ಭರತಾ’ದ ಪುನರುಚ್ಚಾರ ಮಾಡುತ್ತಲೇ ಈ ಕಾಯ್ದೆಗಳಿಂದಾಗಿ ದೇಶೀ -ವಿದೇಶೀ ಕಾರ್ಪೊರೇಟ್‍ಗಳು 1 ಲಕ್ಷ ಕೋಟಿ ರೂ.ಗಳನ್ನು ಕೃಷಿ ಕ್ಷೇತ್ರದಲ್ಲಿ ಹೂಡಲಿವೆ ಎಂದರು. ಆದರೆ ಇದರಿಂದ ದೇಶದ ‘ಆತ್ಮನಿರ್ಭರತೆ’ ಸಾಧ್ಯವಿಲ್ಲ, ಬದಲಾಗಿ ಇದು ತದ್ವಿರುದ್ಧ ಪರಿಣಾಮವನ್ನು ಬೀರುತ್ತದೆ, ಏಕೆಂದರೆ ಈ ಕಾಯ್ದೆಗಳು ವಿದೇಶಿ ಮತ್ತು ದೇಶೀ ಕಾರ್ಪೊರೇಟ್‍ಗಳ ಲೂಟಿಗೆ ಬಾಗಿಲು ತೆರೆದು ಕೊಡುತ್ತವೆ ಎಂಬ ರೈತರ ವಾದವನ್ನು ರೈತ ಮುಖಂಡರು ಪುನರುಚ್ಚರಿಸುತ್ತ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಹೇಳಿದರು.
ಜನವರಿ 1ರಂದು ಹೊಸ ವರ್ಷದ ಆಚರಣೆಯನ್ನು ದಿಲ್ಲಿಯ ಗಡಿಗಳಲ್ಲಿ ಬಂದು ನಿಂತಿರುವ ರೈತರೊಂದಿಗೆ ಆಚರಿಸಲು ದಿಲ್ಲಿ ನಿವಾಸಿಗಳಿಗೆ ಕರೆ ನೀಡಲಾಗಿದೆ. ಅಲ್ಲದೆ ಅಂದು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ಈ ಹೋರಾಟವನ್ನು ಬೆಂಬಲಿಸಿ ದೇಶಾದ್ಯಂತ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ.
ಇದಕ್ಕೆ ಮೊದಲು ಡಿಸೆಂಬರ್ 26ರಂದು ಸಭೆ ಸೇರಿದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರ ಸಭೆ ಮತ್ತೊಂದು ಸುತ್ತಿನ ಮಾತುಕತೆಗೆ ಕೇಂದ್ರ ಸರಕಾರದ ಆಹ್ವಾನವನ್ನು ಸ್ವೀಕರಿಸುತ್ತ ಡಿಸೆಂಬರ್ 29ರಂದು ಬೆಳಿಗ್ಯೆ 11ಗಂಟೆಗೆ ತಾವು ಮಾತುಕತೆಗೆ ಬರಲು ಸಿದ್ಧ ಎನ್ನುತ್ತ , ಇದುವರೆಗೆ ಯಾವುದೇ ಅಜೆಂಡಾ ಇಲ್ಲದೆ ಮಾತುಕತೆ ನಡೆಸಿದ್ದು ಸಾಕು, ಈ ಬಾರಿ ನಾಲ್ಕು ಅಂಶಗಳ ಅಜೆಂಡಾದ ಮೇಲೆ ಮಾತುಕತೆ ನಡೆಯಬೇಕು ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆ ನಾಲ್ಕು ಅಂಶಗಳು ಹೀಗಿವೆ:
- ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ನಿರ್ಧರಿಸುವುದು.
- ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಖಾತ್ರಿ ಪಡಿಸುವುದು ಹೇಗೆ ಎಂದು ನಿರ್ಧರಿಸುವುದು.
- ‘ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಸುಗ್ರೀವಾಜ್ಞೆ, 2020’ರಲ್ಲಿ ಪ್ರಸ್ತಾವಿಸಿರುವ ಶಿಕ್ಷಾ ಕ್ರಮಗಳಿಂದ ರೈತರನ್ನು ಹೊರತುಪಡಿಸುವುದು.
- ಕರಡು ವಿದ್ಯುತ್ ತಿದ್ದುಪಡಿ ಮಸೂದೆಯಲ್ಲಿ ರೈತರಿಗೆ ಮಾರಕವಾದ ಅಂಶಗಳನ್ನು ತೆಗೆಯುವುದು.
ಇದುವರೆಗೆ ಅಜೆಂಡಾ ಇಲ್ಲದೆಯೇ ನಡೆದ ಮಾತುಕತೆಗಳ ಬಗ್ಗೆ ಸರಕಾರ ನಾಗರಿಕರನ್ನು ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ಕೊಡುತ್ತಿದೆ, ಪ್ರಧಾನ ಮಂತ್ರಿಗಳೂ ಸೇರಿದಂತೆ ಆಳುವ ಪಕ್ಷದ ಮುಖಂಡರು ರೈತರನ್ನು ಹೀಗಳೆಯುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಆಗ್ರಹಿಸಿದ್ದಾರೆ.
“ನಾನು ಮಾತಾಡಲು ಸಿದ್ಧ”- ‘ನಮ್ಮ ಮಾತು ಕೇಳಿ, ಸಾರ್!”
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ, ನ್ಯೂಸ್ ಸ್ಟಿಂಗ್
ಈ ನಡುವೆ ದಿಲ್ಲಿಗೆ ಬರುವ ಐದು ಹೆದ್ದಾರಿಗಳ ಪ್ರವೇಶ ಸ್ಥಳಗಳಾದ ಸಿಂಘು, ಟಿಕ್ರಿ, ಪಹವಲ್, ಗಾಝೀಪುರ ಮತ್ತು ಶಾಹಜಹಾನ್‍ಪುರ ದಲ್ಲಿ ಕೂತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶುಕ್ರವಾರದಂದು ಮಹಾರಾಷ್ಟ್ರದಿಂದ ನೂರಾರು ವಾಹನಗಳಲ್ಲಿ ದಿಲ್ಲಿಯತ್ತ ಬರುತ್ತಿದ್ದ ಸಾವಿರಾರು ರೈತರನ್ನು ದಿಲ್ಲಿ ಗಡಿಯ ಬಳಿ ದಿಲ್ಲಿ ಪೋಲಿಸರು ತಡೆದರು. ಆದ್ದರಿಂದ ಅವರು ಅದಾಗಲೇ ಅಲ್ಲಿ ಧರಣಿ ಕೂತಿರುವ ಸಾವಿರಾರು ರೈತರನ್ನು ಸೇರಿಕೊಂಡರು.
ಇದನ್ನು ಓದಿ : ‘ಮೊದಲಿಗೆ’ ರೈತರೋ ಅಥವ ಕಾರ್ಪೊರೇಟ್ ಕೃಷಿ ಬಂಡವಳಿಗರೋ? – ಎ.ಐ.ಕೆ.ಎಸ್.ಸಿ.ಸಿ.