ನವದೆಹಲಿ : ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ ಏಪ್ರಿಲ್ 12 ರವರೆಗೆ ವಂತಿಗೆಗೆ ತೆರೆದಿದ್ದ ಚುನಾವಣಾ ಬಾಂಡ್ ಮಾರಾಟದ 26 ನೇ ಆವೃತ್ತಿಯಲ್ಲಿ ರೂ 970.50 ಕೋಟಿ ಮೌಲ್ಯದ ಒಟ್ಟು 1,470 ಚುನಾವಣಾ ಬಾಂಡ್‌ಗಳು ಮಾರಾಟವಾಗಿವೆ ಆರ್‌ಟಿಐ ಉತ್ತರದಲ್ಲಿ ಪ್ರಖ್ಯಾತ ಆರ್‌ಟಿಐ ಕಾರ್ಯಕರ್ತ ಕೊಮೋಡೋರ್(ನಿವೃತ್ತ) ಲೋಕೇಶ್ ಬತ್ರಾರಿಗೆ ಎಸ್‌ಬಿಐ ತಿಳಿಸಿರುವುದಾಗಿ ವರದಿಯಾಗಿದೆ. .
ಈ ಚುನಾವಣಾ ಬಾಂಡ್ ಸ್ಕೀಮ್ 2018ರಲ್ಲಿ ಬಂದಿದ್ದು, ಕರ್ನಾಟಕದ ಹಿಂದಿನ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಈ ಸ್ಕೀಮಿನ ಎರಡನೆಯ ಆವೃತ್ತಿ ಮಾರಾಟಕ್ಕೆ ಬಂದಿತ್ತು. ಅದರಲ್ಲಿ 114.90 ಕೋಟಿ ಮೌಲ್ಯದ 256 ಬಾಂಡ್‌ಗಳ ಮಾರಾಟವಾಗಿತ್ತು. ಅಂದರೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ‘ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಸ್ಕೀಮ್’ ಎಂದು ವರ್ಣಿಸಿರುವ ಇದು ಈ ಬಾರಿ 9 ಪಟ್ಟು ಹೆಚ್ಚು ಹಣವನ್ನು ಆಕರ್ಷಿಸಿದೆ. ಯಾರಿಂದ ಮತ್ತು ಯಾರಿಗೆ ಮತ್ತು ಏಕೆ ಎಂದು ಬೇರೆ ಹೇಳಬೇಕಾಗಿಲ್ಲ. ಈ ಸ್ಕೀಮನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸುಪ್ರಿಂ ಕೋರ್ಟಿನ ಮುಂದೆ ಈಗಲೂ ಬಾಕಿ ಪಟ್ಟಿಯಲ್ಲಿದೆ.
ಈ ಬಾರಿ, ಈ ಬಾಂಡ್‌ಗಳು ಹೈದರಾಬಾದ್‌ನ ಎಸ್‌ಬಿಐ ಶಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ, ರೂ 335.30 ಕೋಟಿ ಅಥವಾ 34% ದಷ್ಟು.. ಇದರ ನಂತgದ ಸ್ಥಾನಗಳು ಕೋಲ್ಕತ್ತಾ (ರೂ. 197.40 ಕೋಟಿ), ಮುಂಬೈ (ರೂ. 169.37 ಕೋಟಿ), ಚೆನ್ನೈ (ರೂ. 122 ಕೋಟಿ) ಮತ್ತು ನವದೆಹಲಿ (ರೂ. 55.65 ಕೋಟಿ).
ಮಾರಾಟವಾದ ಒಟ್ಟು ಬಾಂಡ್‌ಗಳಲ್ಲಿ ಸುಮಾರು 58% ಎಸ್‌ಬಿಐನ ನವದೆಹಲಿ ಶಾಖೆಯಲ್ಲಿ (ರೂ 565.79 ಕೋಟಿ) ನಗದಾಗಿವೆ ಎಂದು ವರದಿಯಾಗಿದೆ.
2018ರಿಂದ ಇದುವರೆಗೆ ಚುನಾವಣಾ ಬಾಂಡುಗಳ ಮೂಲಕ ಒಟ್ಟು 12979.09 ಕೋಟಿ ರೂ. ರಾಜಕೀಯ ಪಕ್ಷಗಳಿಗೆ ಹಸ್ತಾಂತರಗೊಂಡಿದೆ ಎಂದೂ ತಿಳಿದು ಬಂದಿದೆ. ಇದರಲ್ಲಿ 94.2% ಬಾಂಡುಗಳು 1 ಕೋಟಿ ರೂ. ಮೌಲ್ಯದ್ದು, ಅಂದರೆ ಶ್ರೀಮಂತರು / ಕಾರ್ಪೊರೇಟ್‍ಗಳು ಖರೀದಿಸಿದವುಗಳು, ಯಾರಿಗೆ ಕೊಡಲು ಮತ್ತು ಏಕೆ ಎಂಬುದನ್ನು ಅವರು ಹೇಳಬೇಕಾಗಿಲ್ಲ, ಆದರೆ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಏಕೆಂದರೆ 2022ರ ವರೆಗೆ ಬಿಜೆಪಿ 5270 ಕೋಟಿ ರೂ. ಪಡೆದಿದೆ ಎಂದು ಚುನಾವಣಾ ಆಯೋಗದ ಮಾಹಿತಿಗಳಿಂದ ತಿಳಿದು ಬಂದಿದೆ ಎಂದು ಈ ಮೊದಲು ವರದಿಯಾಗಿತ್ತು(ಎನ್‍ಡಿಟಿವಿ, ಜನವರಿ 18). 2022ರ ವರೆಗೆ ಮಾರಾಟವಾದ ಬಾಂಡುಗಳ ಮೊತ್ತ 9208 ಕೋಟಿ ರೂ., ಅಂದರೆ ಅರ್ಧಕ್ಕಿಂತಲೂ ಹೆಚ್ಚು (57%) ಬಿಜೆಪಿಗೆ ದಕ್ಕಿದೆ. ಇದರಲ್ಲಿ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಪಡೆದಿರುವುದು 10% ಮಾತ್ರ ಎಂದೂ ಈ ವರದಿ ತಿಳಿಸಿತ್ತು.