ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ವಿಮಾನವನ್ನೇ ಹೈಜಾಕ್ ಮಾಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಭೋಲೇನಾಥ್ ಪಾಂಡೆ (71) ನಿಧನರಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ಡವೋಬಾ (ಪ್ರಸ್ತುತ ಭೈರಿಯಾ) ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಭೋಲೇನಾಥ್ ಪಾಂಡೆ ಶುಕ್ರವಾರ ಮನೆಯಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಸ್ವಗ್ರಾಮದಲ್ಲಿ ನಡೆಯಿತು.
ಭೋಲೇನಾಥ್ ಪಾಂಡೆ ರಾಜಕಾರಣಿಯಾಗಿ ಗಮನ ಸೆಳೆದಿದ್ದಕ್ಕಿಂತ 1978 ಡಿಸೆಂಬರ್ 20ರಂದು ಇಂಡಿಯನ್ಸ್ ಏರ್ ಲೈನ್ಸ್ ವಿಮಾನವನ್ನು (ಐಸಿ 410) ಅಪಹರಿಸಿ ಗಮನ ಸೆಳೆದಿದ್ದರು. ಅದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಿಡುಗಡೆಗಾಗಿ ಎಂಬುದು ವಿಶೇಷ.
ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಅದರ ಹಿಂದಿನ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಭೋಲೇನಾಥ್ ಪಾಂಡೆ ಸ್ನೇಹಿತ ದೇವೇಂದ್ರ ಪಾಂಡೆ ದೆಹಲಿಗೆ ಹೊರಟ್ಟಿದ್ದ ವಿಮಾನವನ್ನು ಅಹಪರಿಸಿದ್ದರು. ವಿಮಾನದಲ್ಲಿ ಇಬ್ಬರು ಸಚಿವರು ಸೇರಿದಂತೆ 132 ಮಂದಿ ಪ್ರಯಾಣಿಕರಿದ್ದರು.
ವಿಮಾನ ಹೈಜಾಕ್ ಮಾಡಿದ್ದು ಹೇಗೆ?
ಕೋಲ್ಕತಾದಿಂದ ಲಕ್ನೋಗೆ ದೆಹಲಿ ಮೂಲಕ ಲಕ್ನೋಗೆ ಬೆಳಿಗ್ಗೆ 5.45ಕ್ಕೆ ಹೊರಟ್ಟಿತ್ತು. ದೆಹಲಿಗೆ ತಲುಪಲು 15 ನಿಮಿಷಗಳು ಇದ್ದಾಗ ಭೋಲೇನಾಥ್ ಮತ್ತು ದೇವೇಂದ್ರ 15ನೇ ಸಾಲಿನಲ್ಲಿ ಕುಳಿತಿದ್ದವರು ಎದ್ದು ಪೈಲೆಟ್ ಗಳು ಇರುವ ಕಾಕ್ ಪಿಟ್ ಪ್ರವೇಶಿಸಿದ್ದರು.
ವಿಮಾನ ಕ್ಯಾಪ್ಟನ್ ಗೆ ವಿಮಾನ ಅಪಹರಣ ಆಗಿದ್ದು, ದೆಹಲಿಗೆ ಹೋಗದೇ ಪಾಟ್ನಾಗೆ ಹೋಗಲಿದೆ ಎಂದು ಘೋಷಣೆ ಮಾಡಲು ಸೂಚಿಸಿದ್ದರು. ನಂತರ ವಾರಣಾಸಿಗೆ ಹೋಗಲಿದೆ ಎಂದು ಹೇಳಿಸಿದರು.
ಕ್ಯಾಪ್ಟನ್ ಎಂಎನ್ ಭಟ್ಟಿವಾಲಾ ಆಗ ನೀಡಿದ್ದ ಸಂದರ್ಶನದಲ್ಲಿ ಇಬ್ಬರೂ ನೇಪಾಳಕ್ಕೆ ವಿಮಾನ ಕೊಂಡೊಯ್ಯಲು ಸೂಚಿಸಿದ್ದರು. ಆದರೆ ನಾನು ನಿರಾಕರಿಸಿದ್ದರಿಂದ ಬಾಂಗ್ಲಾದೇಶಕ್ಕೆ ಹೋಗಲು ಹೇಳಿದರು. ಹೈಜಾಕ್ ವೇಳೆ ನಾವು ಯುವ ಕಾಂಗ್ರೆಸ್ ಕಾರ್ಯಕರ್ತರು. ನಾವು ಹಿಂಸೆಯನ್ನು ವಿರೋಧಿಸುತ್ತೇವೆ. ಯಾರಿಗೂ ತೊಂದರೆ ಮಾಡುವುದಿಲ್ಲ. ಎಲ್ಲರೂ ಸಹಕರಿಸಬೇಕು ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದರು.
ವಿಮಾನದಲ್ಲಿ ಇಂದಿರಾ ಜಿಂದಾಬಾದ್ ಮತ್ತು ಸಂಜಯ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು, ಇದಕ್ಕಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಪ್ರಯಾಣಿಕರು ಚಪ್ಪಾಳೆ ಹೊಡೆಯುವಂತೆ ಸೂಚಿಸಿದ್ದರು.