ನವದೆಹಲಿ: ಎಲ್ಲ ಸಹಕಾರಿ ಬ್ಯಾಂಕ್ಗಳು ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ನ ಮೇಲ್ವಿಚಾರಣೆ ವ್ಯಾಪ್ತಿಗೆ ಒಳಪಡಲಿವೆ.
ಈ ನಿರ್ಧಾರವು ಸಹಕಾರಿ ಬ್ಯಾಂಕ್ಗಳ ಠೇವಣಿದಾರರಿಗೆ ಭಾರಿ ನೆಮ್ಮದಿ ನೀಡಲಿದೆ. ಸದ್ಯಕ್ಕೆ ವಾಣಿಜ್ಯ ಬ್ಯಾಂಕ್ಗಳಿಗೆ ಅನ್ವಯಿಸುವ ಆರ್ಬಿಐನ ಮೇಲ್ವಿಚಾರಣೆ ಪ್ರಕ್ರಿಯೆಯು ಇನ್ನು ಮುಂದೆ ಪಟ್ಟಣ ಸಹಕಾರಿ ಬ್ಯಾಂಕ್ ಮತ್ತು ಬಹು ರಾಜ್ಯ ವ್ಯಾಪ್ತಿಯ ಸಹಕಾರಿ ಬ್ಯಾಂಕ್ಗಳಿಗೂ ಅನ್ವಯವಾಗಲಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
‘ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಇದರಿಂದ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ. ಅವರ ಹಿತಾಸಕ್ತಿ ರಕ್ಷಣೆಯಾಗಲಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಹಲವಾರು ಸಹಕಾರಿ ಬ್ಯಾಂಕ್ಗಳಲ್ಲಿನ ಹಗರಣದಿಂದಾಗಿ ಲಕ್ಷಾಂತರ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಬಿಐ ವಿಧಿಸಿದ ನಿರ್ಬಂಧಗಳ ಕಾರಣಕ್ಕೆ ಠೇವಣಿ ಹಣ ಹಿಂದೆ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಆರ್ಬಿಐ ಮೇಲ್ವಿಚಾರಣೆ ವ್ಯಾಪ್ತಿಗೆ ತರುವ ನಿರ್ಧಾರವು ಮಹತ್ವದ್ದಾಗಿದೆ.
ಪಟ್ಟಣ ಸಹಕಾರಿ ಬ್ಯಾಂಕ್ಗಳು 1482
ಬಹು ರಾಜ್ಯ ಕಾರ್ಯವ್ಯಾಪ್ತಿಯ ಸಹಕಾರಿ ಬ್ಯಾಂಕ್ಗಳು 58
ಕೋಟಿ ಠೇವಣಿದಾರರ ಸಂಖ್ಯೆ 8.6
ಒಟ್ಟಾರೆ ಉಳಿತಾಯ ಠೇವಣಿ ₹ 4.85 ಲಕ್ಷ ಕೋಟಿ