ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಧಾನ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಗಜಪಡೆ ಪ್ರಯಾಣ ಆರಂಭಿಸಲಿದ್ದು, ಆಗಸ್ಟ್ 21ರಂದು ವೀರನಹೊಸಳ್ಳಿಯಲ್ಲಿ ವಿಧ್ಯುಕ್ತವಾಗಿ ಬೀಳ್ಕೊಡುಗೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮೈಸೂರು ಮೃಗಾಲಯದಲ್ಲಿ ಸಂದರ್ಶಕರ ಅನುಕೂಲಕ್ಕಾಗಿ ಲಗ್ಗೇಜು ಕೊಠಡಿ ಮತ್ತು ಹುಲಿ ಮನೆಯ ವೀಕ್ಷಣಾ ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಅವರು, 21ರಂದು ಗಜಪಯಣದ ದಿನ 9 ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಗಜಪಯಣಕ್ಕೆ ನಾಂದಿ ಹಾಡಲಾಗುವುದು. ನಂತರ ಎರಡೇ ಹಂತದಲ್ಲಿ 5 ಆನೆಗಳು ಬರಲಿದ್ದು, 4 ಆನೆಗಳನ್ನು ತುರ್ತು ಮೀಸಲಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.
12ರಂದು ಉನ್ನತ ಮಟ್ಟದ ಸಭೆ:
ಸೋಮವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ -ಜಿಕೆವಿಕೆ ಆವರಣದಲ್ಲಿ ವಿಶ್ವ ಆನೆ ದಿನದಂದು ಮಾನವ – ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶ ನಡೆಸಲಾಗುತ್ತಿದ್ದು, ಅಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆನೆಗಳ ಕುರಿತಂತೆ ಚರ್ಚಿಸಲಾಗುವುದು ಮತ್ತು ಗಜಪಯಣದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮೈಸೂರು ಹೊರವಲಯ ಕೂರ್ಗಳ್ಳಿಯಲ್ಲಿ ನಾಲ್ಕು ವನ್ಯಜೀವಿ ರಕ್ಷಣಾ ವಿಭಾಗಗಳಿದ್ದು, ಇತ್ತೀಚೆಗೆ ಮತ್ತೆ 2 ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ. ಇಲ್ಲಿ ಗಾಯಗೊಂಡ ಅಥವಾ ಗ್ರಾಮಕ್ಕೆ ನುಗ್ಗಿ ಮಾನವ – ವನ್ಯಜೀವಿ ಸಂಘರ್ಷಕ್ಕೆ ಕಾರಣವಾದ ಕಾರಣಕ್ಕೆ ಸೆರೆ ಹಿಡಿದ 8 ಹುಲಿ ಅಥವಾ ಚಿರತೆಗಳನ್ನು ಇಲ್ಲಿ ಸಂರಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಆನೆಗಳ ಈಜುಕೊಳ:
ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ಪೋಷಿಸಲು ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ 2 ಆನೆ ಮರಿ ಮತ್ತು 3 ದೊಡ್ಡ ಆನೆಗಳಿದ್ದು, ಇವುಗಳಿಗಾಗಿಯೇ ವಿಶೇಷವಾಗಿ ಈಜುಕೊಳ ವಿನ್ಯಾಸಗೊಳಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.