ಅಶೋಕ್ ಗೆಹ್ಲೋಟ್ – ಸಚಿನ್ ಪೈಲಟ್ ಭೇಟಿ

–      ಒಂದು ತಿಂಗಳ ಹಿಂದೆ ಅಶೋಕ್ ಗೆಹ್ಲೋಟ್ ವಿರುದ್ಧ  ಬಂಡಾಯವೆದ್ದಿದ್ದ ಸಚಿನ್ ಪೈಲಟ್  

ಜೈಪುರ: ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳು ನಡೆದವು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಅವರ ನಿವಾಸದಲ್ಲಿ  ಬಂಡಾಯವೆದ್ದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭೇಟಿಯಾದರು.

ಸುಮಾರು ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ 18 ಶಾಸಕರೊಂದಿಗೆ ಸಚಿನ್ ಪೈಲಟ್ ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿತ್ತಲ್ಲದೇ, ಸರ್ಕಾರ ಉರುಳುವ ಸನ್ನಿವೇಶವೂ ಎದುರಾಗಿತ್ತು. ಹೈಕಮಾಂಡ್ ಮಧ್ಯಪ್ರವೇಶದ ನಂತರ ಇದೀಗ ಪರಿಸ್ಥಿತಿ ತಿಳಿಗೊಂಡಿದೆ. ಇದರ ಕುರುಹಾಗಿಯೇ ಪೈಲಟ್-ಗೆಹ್ಲೋಟ್ ಭೇಟಿಯನ್ನು ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಮೌನವಾಗಿದ್ದ ಅಶೋಕ್‌ ಗೆಹ್ಲೋಟ್ ಗುರುವಾರ ಬೆಳಗ್ಗೆ ‘ಎಲ್ಲವನ್ನೂ ಮರೆಯುವುದು ಮತ್ತು ಕ್ಷಮಿಸಿ ಮುಂದೆ ಸಾಗಬೇಕು’ ಎಂದು ಟ್ವೀಟ್‌ ಮಾಡುವ ಮೂಲಕ ಮೌನ ಮುರಿದಿದ್ದಾರೆ. ಕಳೆದೊಂದು ತಿಂಗಳಿಂದ ಕಠಿಣ ಪದಗಳ ಮೂಲಕ ವಾಗ್ದಾಳಿ ನಡೆಸಿದ್ದ ಉಭಯನಾಯಕರು ಸಂಜೆ ಭೇಟಿಯಾದರು.

ಜೈಸಲ್ಮೇರ್‌ನ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಪೈಲಟ್‌ ಸೇರಿದಂತೆ ಬಂಡಾಯ ಶಾಸಕರು ಭಾಗವಹಿಸಿದ್ದಾರೆ. ಸಚಿನ್ ಪೈಲಟ್ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಳೆದ ಸೋಮವಾರ ಭೇಟಿ ಮಾಡುವುದರೊಂದಿಗೆ ಬಿಕ್ಕಟ್ಟು ಶಮನವಾಗಿದೆ. ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಹಿತಾಸಕ್ತಿಯ ಪರ ಕೆಲಸ ಮಾಡುವುದಾಗಿ ಪೈಲಟ್ ಮಾತು ಕೊಟ್ಟಿದ್ದಾರೆ ಹಾಗೇ ಪೈಲಟ್‌ ಬಣದ ಬೇಡಿಕೆಗಳನ್ನು ಹೈಕಮಾಂಡ್‌ ಪರಿಹರಿಸಲಿದೆ ಎಂದು ಹೇಳಲಾಗಿದೆ.

ಪೈಲಟ್ ಮತ್ತು ಅವರ ಜತೆಗಿರುವ ಶಾಸಕರ ದೂರುಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ಇಬ್ಬರು ಬಂಡಾಯ ಶಾಸಕರ ಅಮಾನತು ರದ್ದು:

ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ, ಪೈಲಟ್‌ ಬೆಂಬಲಿಗರಾಗಿದ್ದ ಶಾಸಕರಾದ ಭನ್ವರ್‌ಲಾಲ್‌ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್‌ ಅವರ ಅಮಾನತು ಆದೇಶವನ್ನು ಕಾಂಗ್ರೆಸ್‌ ಗುರುವಾರ ರದ್ದುಗೊಳಿಸಿದೆ. ಈ ಕುರಿತು ಟ್ವೀಟ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ ಮಾಹಿತಿ ನೀಡಿದ್ದಾರೆ.

ಸರ್ಕಾರವನ್ನು ಕೆಡವಲು ನಡೆಸಿದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಕಳೆದ ತಿಂಗಳು ಈ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ದೆಹಲಿಯ ಹಿರಿಯ ಕಾಂಗ್ರೆಸ್‌ ನಾಯಕರು ಮಧ್ಯಸ್ಥಿಕೆ ವಹಿಸಿ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿದ್ದು, ಇದರ ಬೆನ್ನಲ್ಲೇ ಶಾಸಕರ ಅಮಾನತು ಆದೇಶವನ್ನೂ ಕಾಂಗ್ರೆಸ್‌ ರದ್ದುಗೊಳಿಸಿದೆ.

ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದ ಪೈಲಟ್ ಅವರು ಗೆಹ್ಲೋಟ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಜುಲೈ 13ರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಪೈಲಟ್ ಮತ್ತು ಅವರ ಜತೆಗೆ ಗುರುತಿಸಿಕೊಂಡಿದ್ದ ಇಬ್ಬರು ಸಚಿವರನ್ನು ಜುಲೈ 14ರಂದು ವಜಾ ಮಾಡಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *