ಮಂಗಳೂರು : ರಾಜ್ಯದ ಯಡಿಯೂರಪ್ಪನವರ ನಾಯಕತ್ವದ ಬಿಜೆಪಿ ಸರಕಾರ ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣಕ್ಕಾಗಿ ನಿಗದಿಗೊಳಿಸಲಾದ ಅನುದಾನವನ್ನು ಕಡಿತ ಗೊಳಿಸಿರುವುದು, ವಿದ್ಯಾರ್ಥಿಗಳ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು ತಡೆ ಹಿಡಿದಿರುವುದನ್ನು ವಿರೋಧಿಸಿ “ಮುಸ್ಲಿಂ ಚಿಂತಕರ ಚಾವಡಿ”ಯು ರಾಜ್ಯಾದ್ಯಂತ ನಡೆಸುತ್ತಿರುವ ಅಭಿಯಾನದ ಭಾಗವಾಗಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಿದ್ದಾರೆ..
ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರಕಾರ ಆಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಬೌಧ್ದ, ಸಿಖ್, ಫಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನವನ್ನು ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಉನ್ನತ ವ್ಯಾಸಂಗ, ವಿದೇಶದಲ್ಲಿ ಶಿಕ್ಷಣ ಪಡೆಯಲು ನೀಡಲಾಗುತ್ತಿದ್ದ ಪ್ರೋತ್ಸಾಹ ಧನ, ವಿವಿಧ ಹಂತದ ವಿದ್ಯಾಭ್ಯಾಸಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನಗಳಿಗೆ ಅನುದಾನ ನೀಡದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಅತಂತ್ರಗೊಳಿಸಿ ವಿದ್ಯಾಭ್ಯಾಸ ಮೊಟಕುಗೊಳಿಸುವ ಸ್ಥಿತಿ ನಿರ್ಮಿಸಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ 1870 ಕೋಟಿ ರೂಪಾಯಿಯಿದ್ದ ಅನುದಾನ ಈಗಿನ ಸರಕಾರದ ಅವಧಿಯಲ್ಲಿ 1000 ಕೋಟಿ ರೂಪಾಯಿಗೆ ಇಳಿದಿದೆ. ಇದರಿಂದ ಕಳೆದ ವರ್ಷಗಳಲ್ಲಿ ಜಾರಿಯಲ್ಲಿದ್ದ ಹಲವು ಜನ ಕಲ್ಯಾಣ ಯೋಜನೆಗಳು ಹಣದ ಕೊರತೆಯಿಂದ ನಿಂತಿದೆ. ಕಾಲೋನಿ ಅಭಿವೃದ್ದಿ ಯೋಜನೆ, ಶಾದಿ ಭಾಗ್ಯ ಯೋಜನೆಗಳನ್ನು ರದ್ದುಗೊಳಿಸಲಾಗಿದೆ.
ಬಹಳ ಪ್ರಮುಖವಾಗಿ ವಿದೇಶದಲ್ಲಿ ಉನ್ನತ ವ್ಯಾಸಂಗ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಯ 2019 – 20 ಸಾಲಿನ ಅನುದಾನವನ್ನು ಸರಕಾರ ಈ ವರೆಗೂ ಬಿಡುಗಡೆಗೊಳಿಸಿಲ್ಲ. 2016-17 ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಸಂಶೋಧನೆ (ಪಿ ಎಚ್ ಡಿ/ ಎಂ. ಫಿಲ್) ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು 25,000 ರೂಪಾಯಿಯಿಂದ 8,333 ರೂಗಳಿಗೆ ಕಡಿತಗೊಳಿಸಿ ಸಂಶೋಧನೆ ಪೂರ್ಣಗೊಳಿಸಲಾಗದ ಸ್ಥಿತಿ ನಿರ್ಮಿಸಲಾಗಿದೆ. ಒಟ್ಟು 300 ರಷ್ಟಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಬೇಕಾಗುವ 9 ಕೋಟಿ ರೂಪಾಯಿಯಷ್ಟು ಸಣ್ಣ ಮೊತ್ತವನ್ನು ತಡೆ ಹಿಡಿದಿರುವುದು ಅಲ್ಪ ಸಂಖ್ಯಾತ ಸಮುದಾಯಗಳ ಕುರಿತು ಸರಕಾರಕ್ಕಿರುವ ಅನಾದಾರವನ್ನು ಎತ್ತಿ ತೋರಿಸುತ್ತದೆ. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್ – ಕಮ್ ಮೀನ್ಸ್ ವಿದ್ಯಾರ್ಥಿ ವೇತನದಡಿ ಲಕ್ಷಾಂತರ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿ ಇದಕ್ಕೆ 270 ಕೋ. ರೂ ಅನುದಾನ ನಿಗದಿಗೊಳಿಸಲಾಗಿತ್ತು. ಈಗ ರಾಜ್ಯ ಸರಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸದೇ ಇರುವುದು ಶೇಕಡಾ ಐವತ್ತರಷ್ಟು ಬಡ ವಿದ್ಯಾರ್ಥಿಗಳು ಸ್ಕಾಲರ ಶಿಪ್ ದೊರಕದೆ ಅಸಹಾಯಕರಾಗಿದ್ದಾರೆ. ಜೊತೆಗೆ ವಿದ್ಯಾಸಿರಿ, ‘ಅರಿವು’ ಶೈಕ್ಷಣಿಕ ಸಾಲಯೋಜನೆಗಳು ಅನುದಾನ ಕಡಿತದಿಂದ ಸ್ಥಗಿತಗೊಂಡಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಾಗುವಂತಾಗಿದೆ. ಈ ಎಲ್ಲಾ ಬೆಳವಣಿಗೆಗಳು ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಮೂಲೆಗುಂಪು ಮಾಡುವ ದೃಢ ನಿರ್ಧಾರಕ್ಕೆ ಬಂದಂತಿದೆ ಎಂದು ಮುಸ್ಲಿಂ ಚಿಂತಕರ ಚಾವಡಿ ಆತಂಕ ವ್ಯಕ್ತಪಡಿಸಿದೆ.
ಅನುದಾನ ಕಡಿತಗೊಳಿಸಲು ಸರಕಾರ ಕೋವಿಡ್ 19 ಕಾರಣವನ್ನು ಮುಂದಿಟ್ಟಿದ್ದರೂ ಜನಪರ ಕಲ್ಯಾಣ ಇಲಾಖೆಗಳ ಅನುದಾನ ಕಡಿತಗೊಳಿಸುವುದು ಸಾಮಾಜಿಕ ಬದ್ದತೆಯ ದೃಷ್ಟಿಯಿಂದ ಒಳ್ಳೆಯ ಆಡಳಿತದ ಮಾದರಿಯಂತೂ ಖಂಡಿತಾ ಆಗಲಾರದು. ಅದಲ್ಲದೆ ಸರಕಾರದ ಯಾವುದೇ ಇಲಾಖೆಗೂ ಇರದ ಅನುದಾನ ಕಡಿತ ಕೇವಲ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಮಾತ್ರ ಅನ್ವಯಿಸಿರುವುದು ಸರಕಾರದ ತಾರತಮ್ಯ ಮನೋಭಾವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಸರಕಾರದ ಇಂತಹ ನಡೆಯನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದು ಎಂದು ಹೇಳಿರುವ ಮುಸ್ಲಿಂ ಚಿಂತಕರ ಚಾವಡಿಯು ಯಾವುದೇ ಹೊಸ ಯೋಜನೆ ಜಾರಿಗೊಳಿಸದೆ ಇದ್ದರೂ ಈಗಾಗಲೆ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಅದಕ್ಕೆ ಬೇಕಿರುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಯೋಗದಲ್ಲಿ ಚಿಂತಕರ ಚಾವಡಿಯ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮಂಗಳೂರು ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಎನ್ ಇ ಮುಹಮ್ಮದ್, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಅಬ್ದುಲ್ ಖಾದರ್ ಇಡ್ಮ, ಇಮ್ತಿಯಾಜ್ ಪಾಂಡೇಶ್ವರ, ನೌಷಾದ್ ಬೆಂಗ್ರೆ ಉಪಸ್ಥಿತರಿದ್ದರು.