
ಮೋದಿ ಅಯೋಧ್ಯೆಯಲ್ಲಿ ತನ್ನ ಭಾಷಣದಲ್ಲಿ ರಾಮನ ಪ್ರತಿಮೆಯನ್ನು ರಾಷ್ಟ್ರೀಯ ಗೌರವ ಮತ್ತು ರಾಷ್ಟ್ರೀಯ ಐಕ್ಯತೆಯೊಂದಿಗೆ ಬೆರೆಸಿದರು, ರಾಮಮಂದಿರವನ್ನು ರಾಷ್ಟ್ರೀಯ ಭಾವನೆಯ ಒಂದು ಸಂಕೇತ ಎಂದು ಕರೆದರು. ಮಂದಿರ ಚಳುವಳಿ ವಿಭಜನಕಾರಿ ಮತ್ತು ಹಿಂಸಾತ್ಮಕ ದಾರಿಯಲ್ಲಿ ಸಾಗಿ ಬಂದ ನಂತರ ಸೋದರತ್ವ ಮತ್ತು ಐಕ್ಯತೆಯ ಮಾತು ಬೂಟಾಟಿಕೆಯಷ್ಟೇ. ಅಯೋಧ್ಯೆಯಲ್ಲಿ ಮೋದಿ ಮೆರೆಸಿರುವುದು ಪ್ರಭುತ್ವ, ರಾಜಕೀಯ ಮತ್ತು ಧರ್ಮವನ್ನು ಬೆರೆಸಿದ್ದನ್ನು. ಜನಗಳನ್ನು ಧಾರ್ಮಿಕ ಮತ್ತು ಜನಾಂಗೀಯ ಗುರುತಿನ ಮೇಲೆ ಅಣಿನೆರೆಸಲು ಪ್ರಯತ್ನಿಸುವ ಸಂಕುಚಿತ ಜನಾಂಗೀಯ-ಮತೀಯ ರಾಷ್ಟ್ರವಾದ ಹಲವು ಬಲಪಂಥೀಯ ಸರ್ವಾಧಿಕಾರಶಾಹೀ ಆಳ್ವಿಕೆಗಳ ಹೆಗ್ಗುರುತು ಆಗಿಬಿಟ್ಟಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆಯ ಸಮಾರಂಭವನ್ನು ರಾಮ ಜನ್ಮಭೂಮಿ ಟ್ರಸ್ಟ್ ಏರ್ಪಡಿಸಿದ್ದರೂ, ಅದು ಪ್ರಧಾನ ಮಂತ್ರಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಹಾಜರಿಯಲ್ಲಿ ಮಂದಿರದ ಅಡಿಗಲ್ಲು ಹಾಕಿದ ಒಂದು ಅಧಿಕೃತ ಸರಕಾರೀ ಸಮಾರಂಭವಾಯಿತು.
ಹೀಗೆ, ಆಗಸ್ಟ್ 5 , ಹಿಂದುತ್ವದ ರಾಜಕೀಯ ಪರಿಯೋಜನೆಯಲ್ಲಿ ಒಂದು ಮಹತ್ವದ ಘಟ್ಟವಾಗಿ ಸ್ಥಾಪಿತಗೊಂಡಿದೆ; ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಒಂದು ರಾಮ ಮಂದಿರ ಕಟ್ಟುವುದು ಒಂದು ಹಿಂದೂ ಬಹುಸಂಖ್ಯಾತವಾದಿ ಪ್ರಭುತ್ವವನ್ನು ರೂಪಿಸಲು ಜನಗಳನ್ನು ಅಣಿನೆರೆಸುವ ಕಾರ್ಯವ್ಯೂಹದ ಕೇಂದ್ರ ಅಂಶವಾಗಿತ್ತು. ಬಿಜೆಪಿ-ಆರೆಸ್ಸೆಸ್ ಕೂಟಕ್ಕೆ, ರಾಮ ಮಂದಿರ ಪರಿಯೋಜನೆ ಚರಿತ್ರೆಯ ಭೂತಕಾಲದಲ್ಲಿ ಹಿಂದೂಗಳ ಮೇಲೆ ಎಸಗಲಾಯಿತು ಎನ್ನಲಾದ ತಪ್ಪುಗಳನ್ನು ಸರಿಪಡಿಸುವ “ರಾಷ್ಟ್ರೀಯ ಗೌರವದ ಒಂದು ವಿಷಯವಾಗಿದೆ. ರಾಮ ಒಂದು ದೈವ ಮಾತ್ರವೇ ಅಲ್ಲ, ಒಂದು ರಾಷ್ಟ್ರೀಯ ಸಂಕೇತವೆನ್ನಲಾಗಿದೆ.
ಎಲ್.ಕೆ.ಅಡ್ವಾಣಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿ 1989ರಲ್ಲಿ ಮಸೀದಿ ಇದ್ದ ಜಾಗದಲ್ಲಿ ಒಂದು ರಾಮ ಮಂದಿರ ಕಟ್ಟುವ ತನ್ನ ಪಾಲಂಪುರ ಠರಾವನ್ನು ಅಂಗೀಕರಿಸಿತು. ಹಿಂದುತ್ವದ ಕೋಮುವಾದಿ ಅಣಿನೆರಿಕೆಯ ರಾಜಕೀಯ ಯಾತ್ರೆ ಅಡ್ವಾಣಿಯವರ ‘ರಥಯಾತ್ರೆ’ಯೊಂದಿಗೆ ಆರಂಭವಾಯಿತು. ಆ ಯಾತ್ರೆ ಸಾಗಿದ ದಾರಿಯಲ್ಲಿ ಕೋಮುವಾದಿ ಹಿಂಸಾಚಾರ ಸಾವಿರಾರು ಜನಗಳನ್ನು ಕೊಂದಿತು, ಬಾಬ್ರಿ ಮಸೀದಿ ಧ್ವಂಸ ಮತ್ತಷ್ಟು ಭೀಕರ ಹಿಂಸಾಚಾರವನ್ನು ಬಡಿದೆಬ್ಬಿಸಿತು. ಅದನ್ನನುಸರಿಸಿ ಮಂದಿರ ನಿರ್ಮಾಣಕ್ಕೆ ಕಾನೂನಿನ ಮಂಜೂರಾತಿ ಪಡೆಯುವತ್ತ ವಿವಿಧ ಕಸರತ್ತುಗಳನ್ನು ನಡೆದವು.
ಸರ್ವೋಚ್ಚ ನ್ಯಾಯಾಲಯ ವಿಚಾರಣೆಯನ್ನು ತ್ವರಿತಗೊಳಿಸಿ, ದೈನಂದಿನ ವಿಚಾರಣೆಗಳನ್ನು ನಡೆಸಿದ್ದು ಮತ್ತು ಸರಕಾರಕ್ಕೆ ಬೇಕಾಗಿದ್ದ ತೀರ್ಪನ್ನು ನೀಡಿದ್ದು ಬಿಜೆಪಿ ಮೇ 2019ರಲ್ಲಿ ಒಂದು ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ನಂತರ. ಮಸೀದಿಯ ಧ್ವಂಸವನ್ನು ಒಂದು ‘ಪಕ್ಕಾ ಕಾನೂನು ಉಲ್ಲಂಘನೆ’ ಎಂದು ಹೇಳಿದ ಮೇಲೆ, ನ್ಯಾಯಾಲಯ ಮುಂದುವರೆದು ಸಮಸ್ತ 2.77 ಎಕರೆಯನ್ನು ಹಿಂದೂ ಫಿರ್ಯಾದಿಗಳಿಗೆ ಮಂದಿರ ಕಟ್ಟಲು ವಹಿಸಿ ಕೊಟ್ಟಿತು.
ಮಂದಿರ ನಿರ್ಮಾಣವನ್ನು ಶ್ರೀರಾಮದೇವರಲ್ಲಿ ಪರಮೋಚ್ಚ ಆಸ್ಥೆ ಹೊಂದಿರುವ ಬಹುಸಂಖ್ಯೆಯ ಹಿಂದೂಗಳು ಸ್ವಾಗತಿಸುತ್ತಾರೆ. ‘ಗಣತಂತ್ರ’ (ಅಂದರೆ ಜನರ ಸರಕಾರ, ರಾಜಪ್ರಭುತ್ವವಲ್ಲ) ಎಂಬ ಪದವನ್ನು ಜಾತ್ಯತೀತ ಎಂದೇ ಅರ್ಥೈಸಬೇಕಾಗಿಲ್ಲ. ಉದಾಹರಣೆಗೆ, ಇರಾನ್ ಇಸ್ಲಾಮಿಕ್ ಗಣತಂತ್ರ ತನ್ನ ಕಾನೂನುಬದ್ಧತೆಯನ್ನು ಇಸ್ಲಾಮೀ ತತ್ವಸಿದ್ಧಾಂತದಿಂದ ಪಡೆದಿದೆ. ಇಸ್ರೇಲ್ ಪ್ರಭುತ್ವ ಒಂದು ಯೆಹೂದಿ ಪ್ರಭುತ್ವ ಆಗಬಯಸುತ್ತದೆ, ಅದಕ್ಕಾಗಿ ತನ್ನ ಅರಬ್ ಜನಗಳನ್ನು ಎರಡನೇ ದರ್ಜೆಯ ಪೌರರ ಮಟ್ಟಕ್ಕೆ ಇಳಿಸಬಯಸುತ್ತದೆ. ಇಲ್ಲಿ, ಭಾರತವನ್ನು ಒಂದು ಹಿಂದೂ ಬಹುಸಂಖ್ಯಾತವಾದಿ ಗಣತಂತ್ರವಾಗಿ ಪರಿವರ್ತಿಸುವ ರಾಜಕೀಯ ಪರಿಯೋಜನೆ ರಾಮಮಂದಿರ ನಿರ್ಮಾಣದೊಂದಿಗೆ ಒಂದು ಮಹತ್ವಪೂರ್ಣ ವಿಜಯವನ್ನು ಗಳಿಸಿದೆ. ಮಸೀದಿಯನ್ನು ಧ್ವಂಸ ಮಾಡುವ ಒಂದು ವಿಧ್ವಂಸಕ ಕೃತ್ಯದ ಮೂಲಕ ಕಾನೂನು ಮತ್ತು ಸಂವಿಧಾನವನ್ನು ಭಂಡತನದಿಂದ ಉಲ್ಲಂಘಿಸಿದವರಿಗೆ ಯಾವುದೇ ಶಿಕ್ಷೆ ಆಗಿಲ್ಲ.

ಮೋದಿ ಅಯೋಧ್ಯೆಯಲ್ಲಿ ತನ್ನ ಭಾಷಣದಲ್ಲಿ ರಾಮನ ಪ್ರತಿಮೆಯನ್ನು ರಾಷ್ಟ್ರೀಯ ಗೌರವ ಮತ್ತು ರಾಷ್ಟ್ರೀಯ ಐಕ್ಯತೆಯೊಂದಿಗೆ ಬೆರೆಸಿದರು. ಅವರು ರಾಮಮಂದಿರವನ್ನು ರಾಷ್ಟ್ರೀಯ ಭಾವನೆಯ ಒಂದು ಸಂಕೇತ ಎಂದು ಕರೆದರು. ಮಂದಿರ ಚಳುವಳಿ ವಿಭಜನಕಾರಿ ಮತ್ತು ಹಿಂಸಾತ್ಮಕ ದಾರಿಯಲ್ಲಿ ಸಾಗಿ ಬಂದ ನಂತರ ಸೋದರತ್ವ ಮತ್ತು ಐಕ್ಯತೆಯ ಮಾತು ಬೂಟಾಟಿಕೆಯಷ್ಟೇ.

ಅಯೋಧ್ಯೆಯಲ್ಲಿ ಮೋದಿ ಮೆರೆಸಿರುವುದು ಪ್ರಭುತ್ವ, ರಾಜಕೀಯ ಮತ್ತು ಧರ್ಮದ ಬೆರಕೆಯನ್ನು. ಭಾರತದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಗುಜರಾತಿನಲ್ಲಿ ಸೋಮನಾಥ ಮಂದಿರದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ತಳೆದ ನಿಲುವಿಗೂ ಇದಕ್ಕೂ ಎಷ್ಟೊಂದು ವ್ಯತ್ಯಾಸ. ಅವರು ಆ ಉದ್ದೇಶಕ್ಕೆ ಸರಕಾರದ ನಿಧಿಯನ್ನು ನಿರಾಕರಿಸಿದರು, ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮಂದಿರ ಉದ್ಘಾಟಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರ ನೀತಿ ಸ್ಪಷ್ಟ ಮತ್ತು ಸರಳವಾಗಿತ್ತು: ಒಂದು ಜಾತ್ಯತೀತ ಪ್ರಭುತ್ವ ಒಂದು ಧಾರ್ಮಿಕ ಪೂಜಾಸ್ಥಳ ನಿರ್ಮಾಣಕ್ಕೆ ಕೃಪಾಪೋಷಣೆ ನೀಡುವುದಾಗಲೀ, ನಿಧಿ ಒದಗಿಸುವುದಾಗಲೀ ಸಾಧ್ಯವಿಲ್ಲ.
ಜನಗಳನ್ನು ಧಾರ್ಮಿಕ ಮತ್ತು ಜನಾಂಗೀಯ ಗುರುತಿನ ಮೇಲೆ ಅಣಿನೆರೆಸಲು ಪ್ರಯತ್ನಿಸುವ ಜನಾಂಗೀಯ-ಧಾರ್ಮಿಕ ರಾಷ್ಟçವಾದ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವತಂತ್ರ ಭಾರತೀಯ ಪ್ರಭುತ್ವದ ಸ್ಥಾಪನೆಯಲ್ಲಿ ಹಾಸುಹೊಕ್ಕಾಗಿದ್ದ ಎಲ್ಲರನ್ನೂ ಒಳಗೊಳ್ಳುವ ವಸಾಹತುಶಾಹಿ-ವಿರೋಧಿ ರಾಷ್ಟçವಾದಕ್ಕೆ ತದ್ವಿರುದ್ಧವಾಗಿದೆ. ಸೇಡಿನ ರಾಜಕೀಯ ಮತ್ತು ಅಲ್ಪಸಂಖ್ಯಾತರ ಮೇಲೆ ಗುರಿಯಿಡುವ ಈ ಸಂಕುಚಿತ ರಾಷ್ಟ್ರವಾದ ಹಲವು ಬಲಪಂಥೀಯ ಸರ್ವಾಧಿಕಾರಶಾಹೀ ಆಳ್ವಿಕೆಗಳ ಹೆಗ್ಗುರುತು ಆಗಿಬಿಟ್ಟಿದೆ.
ಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು ಹಾಕುವ ಎರಡು ವಾರಗಳ ಮೊದಲಷ್ಟೇ, ಜುಲೈ 24 ರಂದು ಟರ್ಕಿಯ ಅಧ್ಯಕ್ಷ ರೆಸೆಪ್ ಎರ್ಡೊಗನ್, ಇಸ್ತಾಂಬುಲ್‌ನ ಜಗತ್ಪ್ರಸಿದ್ಧ ಹಗಿಯ ಸೋಫಿಯದಲ್ಲಿ ಶುಕ್ರವಾರದ ಪ್ರಾರ್ಥನೆಯ ನೇತೃತ್ವ ವಹಿಸಿದರು. ಈ ಚಾರಿತ್ರಿಕ ಸ್ಮಾರಕವನ್ನು ಕ್ರಿ.ಶ. ಆರನೇ ಶತಮಾನದಲ್ಲಿ ಬೈಜಾಂಟೈನ್ ದೊರೆ ಜಸ್ಟಿನಿಯನ್ ಕಾನ್ಸ್ಟಾಂಟಿನೋಪಲ್(ನಂತರ ಇಸ್ತಾಂಬುಲ್)ನಲ್ಲಿ ಒಂದು ಚರ್ಚ್ ಆಗಿ ಕಟ್ಟಿಸಿದ. 900 ವರ್ಷಗಳ ಕಾಲ ಚರ್ಚ್ ಅಗಿದ್ದ ಇದು ಕ್ರಿ.ಶ. 1453 ರಲ್ಲಿ ಒಟ್ಟೊಮಾನ್‌ಗಳು ಕಾನ್ಸ್ಟಾಂಟಿನೋಪಲನ್ನು ವಶಪಡಿಸಿಕೊಂಡಾಗ ಮಸೀದಿಯಾಗಿ ವರಿವರ್ತಿಸಿದರು. ಕೆಮಾಲ್ ಅತಾತುರ್ಕ್ ಕಳೆಗುಂದಿದ್ದ ಒಟ್ಟೊಮಾನ್ ಆಳ್ವಿಕೆಯನ್ನು ಕಿತ್ತೆಸೆದು ಒಂದು ಜಾತ್ಯತೀತ ಗಣತಂತ್ರವನ್ನು ಸ್ಥಾಪಿಸುವ ಕ್ರಾಂತಿಕಾರಿ ಹೆಜ್ಜೆಯಿಟ್ಟ ಮೇಲೆ, 1934ರಲ್ಲಿ, ಒಂದು ಸಂಪುಟ ನಿರ್ಣಯದ ಮೂಲಕ, ಈ 1500 ವರ್ಷದ ಧಾರ್ಮಿಕ ಸ್ಮಾರಕ ಒಂದು ಸಂಗ್ರಹಾಲಯವಾಗಿ ಪರಿವರ್ತನೆಗೊಂಡಿತು. ಕಳೆದ ತಿಂಗಳ ವರೆಗೂ ಈ ವಾಸ್ತುಶಿಲ್ಪದ ಅಚ್ಚರಿ ಒಂದು ಸಂಗ್ರಹಾಲಯವಾಗಿಯೇ ಉಳಿದಿತ್ತು.
ಈಗ ಟರ್ಕಿಯಲ್ಲಿ ಆಡಳಿತ ನಡೆಸುತ್ತಿರುವ ಇಸ್ಲಾಮ್‌ವಾದೀ ಎಕೆಪಿ ಪಕ್ಷ ಹಗಿಯ ಸೊಫಿಯ ಸಂಗ್ರಹಾಲಯವನ್ನು ಮತ್ತೆ ಒಂದು ಮಸೀದಿಯಾಗಿ ಮಾಡಬೇಕೆಂದು ಬೇಡಿಕೆಯಿಟ್ಟಿತ್ತು. ಟರ್ಕಿಯ ಅತ್ಯುನ್ನತ ಆಡಳಿತ ನ್ಯಾಯಾಲಯವಾದ ಪ್ರಭುತ್ವ ಮಂಡಳಿ( ಕೌನ್ಸಿಲ್ ಆಫ್ ಸ್ಟೇಟ್), ವಿನೀತವಾಗಿ 1934ರ ಸಂಪುಟ ನಿರ್ಧಾರ ಕಾನೂನುಬಾಹಿರ ಎಂದು ಒಮ್ಮತದ ತೀರ್ಪು ನೀಡಿತು. ಅಧ್ಯಕ್ಷ ಎರ್ಡೊಗನ್ ಒಂದು ಡಿಕ್ರಿ ಹೊರಡಿಸಿದ ದಿನವೇ ಅದನ್ನು ಮತ್ತೆ ಮಸೀದಿಯಾಗಿ ಮಾಡಲಾಯಿತು. ಮೋದಿಯಂತೆ, ಎರ್ಡೊಗನ್‌ಗೆ ಇದು ರಾಷ್ಟ್ರೀಯ ಗೌರವವನ್ನು ರಕ್ಷಿಸುವ ಒಂದು ಹೆಜ್ಜೆ.
ಇಸ್ರೇಲಿನಲ್ಲಿ, ಮೋದಿಯವರ ಆತ್ಮ-ಸಂಗಾತಿ, ನೆತನ್ಯಾಹು ಒಂದು ಜನಾಂಗ-ರಾಷ್ಟ್ರವಾದಿ ಸರಕಾರದ ಮುಖ್ಯಸ್ಥರಾಗಿದ್ದು, ಅಲ್ಲಿ ಟೆಂಪಲ್ ಮೌಂಟ್‌ನ ಅಡಿಯಲ್ಲಿ ಕ್ರಿಸ್ತ ಹುಟ್ಟುವ ನೂರಾರು ವರ್ಷಗಳ ಹಿಂದೆ ಕಟ್ಟಿದ್ದೆನ್ನಲಾದ ಯೆಹೂದ್ಯರ ಮೊದಲ ಮಂದಿರದ ಅವಶೇಷಗಳಿಗಾಗಿ ದಶಕಗಳಿಂದ ಉತ್ಖನನ ನಡೆಯುತ್ತಿದೆ. ಈ ಬೆಟ್ಟದ ಮೇಲೆ ಮಕ್ಕಾ ಮತ್ತು ಮದೀನಾದ ನಂತರ ಮುಸ್ಲಿಮರಿಗೆ ಪರಮ ಪವಿತ್ರವಾದ ಅಲ್ ಅಕ್ಸ ಮಸೀದಿಯಿದೆ. ಯೆಹೂದಿ ಉಗ್ರಗಾಮಿಗಳು ಬಹಳ ಕಾಲದಿಂದ ಈ ಮಸೀದಿಯನ್ನು ಧ್ವಂಸ ಮಾಡಿ ಅಲ್ಲಿ ಒಂದು ಯೆಹೂದಿ ಮಂದಿರವನ್ನು ಕಟ್ಟಬೇಕೆಂದು ಆಗ್ರಹಿಸುತ್ತಿದ್ದಾರೆ. ಯೆಹೂದ್ಯರು, ಕ್ರೈಸ್ತರು ಮತ್ತು ಮುಸ್ಲಿಮರಿಗೆ ಪವಿತ್ರ ಸ್ಥಳವಾದ ಈ ಬೆಟ್ಟ ಪ್ಯಾಲೆಸ್ತೀನಿಯರು ಮತ್ತು ಅರಬರ ವಿರುದ್ಧ ಯೆಹೂದಿ ಉಗ್ರಗಾಮಿ ಶಕ್ತಿಗಳನ್ನು ಅಣಿನೆರೆಸುವ ಒಂದು ಶಾಶ್ವತ ಮೂಲವಾಗಿದೆ.
ಅಯೋಧ್ಯೆಯಲ್ಲಿ ತಾವು ಬಯಸಿದಂತೆ ರಾಮ ಮಂದಿರ ನಿರ್ಮಾಣದ ಉದ್ದೇಶ ಈಡೇರಿದ ಮೇಲೆ ಹಿಂದುತ್ವ ಕೋಮುವಾದಿ ಉಬ್ಬರ ಇಳಿಯುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅವರು ತಪ್ಪು ಮಾಡುತ್ತಿದ್ದಾರೆ. ಹಿಂದುತ್ವ ಆಳ್ವಿಕೆದಾರರ ರಾಜಕೀಯ ಪರಿಯೋಜನೆಗೆ ನಿರಂತರವಾಗಿ ಕೋಮುವಾದಿ ಧ್ರುವೀಕರಣವನ್ನು ಸೃಷ್ಟಿಸಬಲ್ಲ ಪ್ರಶ್ನೆಗಳಿಗೆ ಇಂಧನಗಳು ಬೇಕಾಗುತ್ತವೆ. ಇವು ಅಧಿಕಾರದ ಮೇಲೆ ಅವರ ಹಿಡಿತವನ್ನು ಕ್ರೋಡೀಕರಿಸಲು ನೆರವಾಗುತ್ತವೆ. ಉದಾಹರಣೆಗೆ, 1992ರ ಪೂಜಾಸ್ಥಳಗಳ ಕಾಯ್ದೆ 15 ಆಗಸ್ಟ್ 1947ರಂದು ಇದ್ದಂತೆ ಧಾರ್ಮಿಕ ಸ್ಥಳಗಳ ಸ್ಥಾನಮಾನವನ್ನು ಬದಲಿಸಬಾರದು ಎಂದು ವಿಧಿಸುತ್ತದೆ. ಅಯೋಧ್ಯಾ ವಿವಾದ ಸ್ವಾತಂತ್ರ್ಯದ ಮೊದಲಿಂದಲೇ ಇದ್ದುದರಿಂದ ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನಲಾಯಿತು.
ಆರೆಸ್ಸೆಸ್-ವಿಹೆಚ್‌ಪಿಯ ಮೂಲ ಪ್ರಚಾರ ಅಯೋಧ್ಯೆಯಲ್ಲಿ ಮಾತ್ರವಲ್ಲ, ಕಾಶಿ ಮತ್ತು ಮಥುರಾದಲೂ ಮಸೀದಿಗಳಿರುವ ಸ್ಥಳವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂದಿತ್ತು. ಹಿಂದುತ್ವ ಶಕ್ತಿಗಳು ಇವನ್ನು ವಿವಾದಗಳೆಂದು ಬಡಿದೆಬ್ಬಿಸಲು ನಿರ್ಧರಿಸಿದರೆ ಈ ಕಾಯ್ದೆ ಅವರಿಗೇನೂ ಅಡಚಣೆಯಾಗಲಾರದು.

ಅಂತಿಮವಾಗಿ, ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಆರಿಸಿದ ದಿನಾಂಕ ಆಗಸ್ಟ್ 5 ಎಂದು ನೆನಪಿರಬೇಕು. ಒಂದು ವರ್ಷದ ಹಿಂದೆ ಇದೇ ದಿನದಂದು ಜಮ್ಮು ಮತ್ತು ಕಾಶ್ಮೀರ ತನ್ನ ವಿಶೇಷ ಸ್ಥಾನಮಾನವನ್ನು ಕಳೆದು ಕೊಂಡಿತು, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ತುಂಡರಿಸಲಾಯಿತು. ಈ ಹೊಸ ಆಳುವ ಮಂದಿ ಭಾರತೀಯ ಒಕ್ಕೂಟದಲ್ಲಿ ಒಂದು ಮುಸ್ಲಿಂ-ಬಹುಸಂಖ್ಯಾತ ರಾಜ್ಯವನ್ನು ಸಹಿಸಿಕೊಳ್ಳಲಾರರು.
ಈಗ ರಾಮಮಂದಿರದ ನಿರ್ಮಾಣವನ್ನು ಆಚರಿಸುತ್ತಿರುವವರ ಸಮೂಹಗಾನದಲ್ಲಿ ದನಿಗೂಡಿಸುತ್ತಿರುವ ಮತ್ತು ಶ್ರೀರಾಮನಲ್ಲಿ ತಮ್ಮ ಆಸ್ಥೆಯನ್ನು ಸಾರ್ವಜನಿಕವಾಗಿ ಸಾರುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಮತ್ತು ಕೆಲವು ಜಾತ್ಯತೀತ ರಾಜಕಾರಣಿಗಳಿಗೆ ಈ ಸಮಾರಂಭವನ್ನು ಆಗಸ್ಟ್ 5ರಂದು ನಡೆಸುತ್ತಿರುವುದರ ಹಿಂದಿರುವ ಸಾಂಕೇತಿಕತೆ ಒಂದು ಎಚ್ಚರಿಕೆಯಾಗಿದೆ. ಅವರು ಈ ಸಂದರ್ಭಸಾಧಕ ನಿಲುವನ್ನು ಅಂಗೀಕರಿಸಿದರೆ, ಅದು ಒಂದು ಹಿಂದೂರಾಷ್ಟ್ರವನ್ನು ಸ್ಥಾಪಿಸ ಬಯಸುವವರಿಗೆ ಅನುಕೂಲ ಕಲ್ಪಿಸಿ ಕೊಡುತ್ತದಷ್ಟೇ.
