ನವದೆಹಲಿ: ಪ್ರಧಾನಿ ಮೋದಿಯವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ಗುಜರಾತ್‌ನ ಸೂರತ್ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು.
ಸೂರತ್ ನ್ಯಾಯಾಲಯದ ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಲಾಯಿತು. ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯವರ ಅನರ್ಹಗೊಳಿಸುವಿಕೆ ಪ್ರಶ್ನಿಸಿ ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಖಂಡಿಸಿದ್ದರು. ಈ ಮಧ್ಯೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯನ್ನು ಬುದ್ಧು ಎಂದು ಕರೆದಿರುವ ಸುಬ್ರಮಣಿಯನ್ ಸ್ವಾಮಿ, ‘ಬುದ್ಧುವಿನ ವಿರುದ್ಧ ಪ್ರಧಾನಿ ಮೋದಿ ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಇದಕ್ಕೆ ಮೋದಿ ಸರ್ಕಾರದ ಉತ್ತರವೇನು?’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ರಾಹುಲ್ ಪಪ್ಪು ಅಲ್ಲ, ಅವರೊಂದಿಗೆ ಲಕ್ಷಾಂತರ ಜನರು ನಡೆಯುತ್ತಿದ್ದಾರೆ : ಪ್ರಿಯಾಂಕಾ ಗಾಂಧಿ
ಸುಬ್ರಮಣಿಯನ್ ಸ್ವಾಮಿಯವರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಇಂಟರ್‍ನೆಟ್ ಬಳಕೆದಾರರೊಬ್ಬರು, ‘ಚಿಂತೆ ಮಾಡಬೇಡಿ, ಕೇಂದ್ರದ ವಿದೇಶಾಂಗ ಸಚಿವ ಡಾ.ಜೈಶಂಕರ್ ಇದನ್ನು ನಿಭಾಯಿಸುತ್ತಾರೆ’ ಎಂದು ಹೇಳಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ‘ಚೀನಾದೊಂದಿಗೆ ತೆವಳುತ್ತಾ ಭಿಕ್ಷೆ ಬೇಡಿದಂತೆಯಾ?’ ಎಂದು ಹೇಳಿದ್ದಾರೆ.