ಅಪತ್ರಿಮ ದೇಶಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ನೆನೆಯೋಣ

ಅಪತ್ರಿಮ ದೇಶಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನ ಇಂದು.  ಓದುಗರಿಗಾಗಿ ಅವರ ಕೆಲ ವಿಚಾರಗಳು

ಭಾರತದ ವಿಮೋಚನೆಗೆ  ‌INA ಅಥವಾ ಆಜಾದ್ ಹಿಂದ್ ಫೌಜ್ ಸೈನ್ಯ ಕಟ್ಟಿದ್ದ ಅವರು ಎರಡನೆಯ ಮಹಾಯುದ್ಧದ ಕೊನೆಯ ಹೊತ್ತಿಗೆ ತಮ್ಮ ಸೈನ್ಯದೊಂದಿಗೆ ಭಾರತದ ಗಡಿಯನ್ನು ತಲುಪಿದ್ದರು.

1930 ಮತ್ತು 1940ರ ದಶಕದಲ್ಲಿ ಯುವಕರ ಕಣ್ಮಣಿಯಾಗಿದ್ದು ಲಕ್ಷಾಂತರ ಯುವಜನರನ್ನು ಸ್ವಾತಂತ್ರ್ಯ ಚಳುವಳಿಗೆ ಆಕರ್ಷಿಸಿದವರು. ‘ದಿಲ್ಲಿ ಚಲೋ’, ‘ತುಮ್ ಖೂನ್ ದೋ, ಮೈ ಆಜಾದಿ ದೂಂಗಾ’ ಮುಂತಾದ ಅವರ ಘೋಷಣೆಗಳು ರೋಮಾಂಚನಕಾರಿಯಾಗಿದ್ದವು. ವಿಮಾನ ಅಫಘಾತವೊಂದರಲ್ಲಿ ಮಡಿದ  ಬೋಸ್ ಅವರು ಇಂದು ದಂತಕತೆಯಾಗಿದ್ದಾರೆ.

ದೇಶ ಕಂಡ ಹೆಮ್ಮೆಯ ಮಹಿಳಾ ಸ್ವಾತಂತ್ರ್ಯ ಸೇನಾನಿ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರು ಬೋಸ್ ಅವರ ಒಡನಾಡಿಗಳಾಗಿದ್ದರು. ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಚಳುವಳಿ ಆರಂಭಿಸಿದ ಅವರು  ಸಮಾಜವಾದಿಯಾಗಿದ್ದು ಕಾಂಗ್ರೆಸ್ ಎಡಪಂಥದ ಪ್ರಮುಖ ನಾಯಕರಾಗಿ ಹೊಮ್ಮಿದ್ದರು. ಉತ್ತಮ ಮಾತುಗಾರ, ಸಂಘಟಕ ಹಾಗೂ ವರ್ಚಸ್ವಿ ವ್ಯಕ್ತಿತ್ವ ಹೊಂದಿದ್ದ ಬೋಸ್ ಕಾಂಗ್ರೆಸಿನ ಉನ್ನತ ನಾಯಕರಾಗಿ ಹೊಮ್ಮಿದರು.

ಗಾಂಧೀಜಿಯವರ ಜತೆ ಚಳುವಳಿಯ ವ್ಯೂಹ ತಂತ್ರಗಳ ಕುರಿತು ಭಿನ್ನಾಭಿಪ್ರಾಯ ಹೊಂದಿದ್ದ  ಬೋಸ್, ಅವರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬೋಸ್ ಅವರ ಚಟುವಟಿಕೆಗಳಿಂದ ಭೀತವಾದ ಬ್ರಿಟಿಷ್ ಸರಕಾರ ಅವರನ್ನು ಗೃಹಬಂಧನದಲ್ಲಿ ಇಟ್ಟಿತ್ತು. ಅಲ್ಲಿಂದ ವೇಷಮರೆಸಿ ವಿದೇಶಕ್ಕೆ ಹೋದ ಬೋಸ್ INA ಕಟ್ಟಲಾರಂಭಿಸಿದ್ದರು.

‘ಅನ್ಯಾಯ ಮತ್ತು ತಪ್ಪುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅತಿ ದೊಡ್ಡ ಅಪರಾಧ ಎಂಬುದನ್ನು ಮರೆಯಬೇಡಿ. ಒಂದು ಪಡೆಯಲು ಬಯಸಿದರೆ ಮತ್ತೊಂದನ್ನು ನೀಡಲೇಬೇಕು ಎಂಬ ಶಾಶ್ವತ ನಿಯಮ ನೆನಪಿನಲ್ಲಿಡಿ’ ಎಂಬುದು ಅವರ ಪ್ರಸಿದ್ಧ ಹೇಳಿಕೆ. ಶ್ರೀಮಂತ ಕುಲೀನ ಕುಟುಂಬದಲ್ಲಿ ಹುಟ್ಟಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಬೋಸ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ರಾಷ್ಟೀಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಂಡಿದ್ದರು. ಅವರ ಕುಟುಂಬದ  ಆಗ್ರಹದ ಮೇರೆಗೆ ಇಂಗ್ಲೆಂಡಿಗೆ ತೆರಳಿ ಐ.ಸಿ.ಎಸ್ ಪಾಸು ಮಾಡಿದರೂ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸುದ್ದಿ ಕೇಳಿ ಅದನ್ನು ತೊರೆದರು. ಭಾರತಕ್ಕೆ ಮರಳಿ ಕಾಂಗ್ರೆಸ್  ಸೇರಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.

ಸ್ವಾತಂತ್ರ್ಯ ಚಳುವಳಿಯ ಮತ್ತು ಸಂವಿಧಾನದ ಆಶಯಗಳಾದ ಸಮಾನತೆ, ಜಾತ್ಯತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ, ಇವುಗಳಿಗಾಗಿ ಜೀವತೆತ್ತ ಬೋಸ್ ರಂತಹ ದೇಶಪ್ರೇಮಿಗಳನ್ನು ಸದಾ ಸ್ಮರಿಸಿಕೊಂಡು ಅವರ ಆಶಯ ಈಡೇರಿಸಲು ದೇಶದ ಯುವಜನತೆ ಪಣತೊಡಬೇಕಾಗಿದೆ.

ಬಸವಾರಜ್ ಪೂಜಾರ್
ಡಿವೈಎಫ್ ಐ ರಾಜ್ಯ ಕಾರ್ಯದರ್ಶಿ

Donate Janashakthi Media

Leave a Reply

Your email address will not be published. Required fields are marked *