- ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನೂ ಕಡೆಗಣಿಸಲಾಗಿದೆ: ಪಿಣರಾಯಿ ವಿಜಯನ್
ತಿರುವನಂತಪುರಂ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಯಮಿ ಗೌತಮ್ ಅದಾನಿಗೆ ಹಸ್ತಾಂತರಿಸುವ ಕೇಂದ್ರದ ನಿರ್ಧಾರಕ್ಕೆ ಕೇರಳ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ವಿಮಾನ ನಿಲ್ದಾಣದ ಕಾರ್ಯಚರಣೆ ಮತ್ತು ನಿರ್ವಹಣೆಯನ್ನು ಸರಕಾರಿ ಸ್ವಾಮ್ಯದ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ)ಗೆ ಹಸ್ತಾಂತರಿಸಬೇಕು ಎಂಬ ನಿರಂತರ ಬೇಡಿಕೆಯನ್ನು ಕಡೆಗಣಿಸಿ ಅದಾನಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವೈಯಕ್ತಿಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನೂ ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ.
ವಿಮಾನ ನಿಲ್ದಾಣದ ಅಭಿವೃದ್ಧಿಗೆ ರಾಜ್ಯ ಸರಕಾರ ಕೊಡುಗೆ ನೀಡಿದ್ದು, ಇದನ್ನು ಪರಿಗಣಿಸಿ ನಾಗರಿಕ ವಿಮಾನಯಾನ ಸಚಿವಾಲಯ 2003ರಲ್ಲಿ ನೀಡಿದ್ದ ಭರವಸೆಗೆ ಈ ನಿರ್ಧಾರ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ತಗಾದೆ ತೆಗೆದಿದ್ದಾರೆ.
2005ರಲ್ಲಿ ರಾಜ್ಯ ಸರಕಾರ 23.57 ಎಕರೆ ಭೂಮಿಯನ್ನು ಉಚಿತವಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡಿತ್ತು. ಈ ವೇಳೆ ನಿಲ್ದಾಣದ ನಿರ್ವಹಣೆ ಹೊಣೆ ಹೊತ್ತಿರುವ ‘ಎಸ್‌ಪಿವಿ’ನಲ್ಲಿ ರಾಜ್ಯ ಸರಕಾರ ನೀಡಿದ ಭೂಮಿಯ ಮೌಲ್ಯವನ್ನು ಷೇರಿನ ರೂಪದಲ್ಲಿ ಪರಿಗಣಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಈ ಸಂಬಂಧ ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಸಲ್ಲಿಸಿರುವ ಪಿಣರಾಯಿ ವಿಜಯನ್, ಬುಧವಾರ ಕೇಂದ್ರ ಸಂಪುಟ ಸಭೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರದಿಂದ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡುವುದು ಕಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಸಂಬಂಧ ಟ್ಟೀಟ್ ಮಾಡಿರುವ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್, ‘ಅದಾನಿ ಪ್ರಸ್ತಾಪಿಸಿದ್ದ ದರವನ್ನು ಸರಿಹೊಂದಿಸುವ ಪ್ರಸ್ತಾಪದ ನಂತರವೂ ಕೇರಳ ಸರಕಾರದ ಹಕ್ಕನ್ನು ತಿರಸ್ಕರಿಸಲಾಗಿದೆ. ಲಜ್ಜೆಗೆಟ್ಟ ಈ ಸ್ವಜನ ಪಕ್ಷಪಾತವನ್ನು (ಕ್ರೋನಿಯಂ) ಕೇರಳದ ಜನರು ಒಪ್ಪುವುದಿಲ್ಲ,’ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: ಅದಾನಿ ಗ್ರೂಪ್ ಗೆ ದೇಶದ 3 ವಿಮಾನ ನಿಲ್ದಾಣ ಗುತ್ತಿಗೆ: ಕೇಂದ್ರ ಸಂಪುಟ ಒಪ್ಪಿಗೆ
ಈ ನಿರ್ಧಾರದ ಸಂಬಂಧ ಗುರುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷಗಳ ಸಭೆಯನ್ನೂ ಸಿಎಂ ಕರೆದಿದ್ದರು. ಆದರೆ ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಶಶಿ ತರೂರ್ ವಿಮಾನ ನಿಲ್ದಾಣವನ್ನು ಖಾಸಗಿಗೆ ವಹಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.