ಅಕ್ರಮ ಆಸ್ತಿ ಪ್ರಕರಣ: ರವಿ ಚನ್ನಣ್ಣನವರ್ ವಿರುದ್ಧ ಸಿಬಿಐ ತನಿಖೆಯಾಗಬೇಕೆಂದು ರಿಟ್‌ ಅರ್ಜಿ

ಬೆಂಗಳೂರು: ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನಲಾದ ಆಸ್ತಿಯ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಅಥವಾ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ರವಿ ಡಿ. ಚನ್ನಣ್ಣನವರ್‌ ತಮ್ಮ ಪೋಷಕರು ಮತ್ತು ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಆಸ್ತಿ ಸಂಪಾದಿಸಿರುವ ಬಗ್ಗೆ ರಿಟ್‌ ಅರ್ಜಿ ಸಲ್ಲಿಸಿರುವ ವಕೀಲ ಕೆ ಎನ್‌ ಜಗದೀಶ್‌ ಕುಮಾರ್‌ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಸಿಬಿಐ, ಇಡಿ ಮತ್ತು ರವಿ ಡಿ. ಚನ್ನಣ್ಣನವರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಿದ್ದಾರೆ.

ಇದನ್ನು ಓದಿ: 55 ಲಕ್ಷ ಸುಲಿಗೆ ಆರೋಪ: ರವಿ ಚನ್ನಣ್ಣನವರ್‌, ಇತರೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ದೂರು

ಅರ್ಜಿಯ ವಿಚಾರಣೆ ಇನ್ನಷ್ಟೇ ಬರಬೇಕಾಗಿದೆ. ಚನ್ನಣ್ಣನವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎನ್ನಲಾದ ಆಸ್ತಿಯ ಮಾಹಿತಿ ನೀಡಲಾಗಿದ್ದು, ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ.

ರವಿ ಡಿ. ಚನ್ನಣ್ಣನವರ್ ಅವರು 2018ರಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 13 ವರ್ಷಗಳ ಸೇವಾವಧಿಯಲ್ಲಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ.

ಚನ್ನಣ್ಣನವರ್‌ ಅವರು ತಂದೆ-ತಾಯಿ, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಬೇನಾಮಿ ಹೆಸರಿನಲ್ಲಿ ಒಟ್ಟು 44 ಎಕರೆ 34 ಗುಂಟೆ ಎಕರೆ ಜಮೀನು ಖರೀದಿಸಿದ್ದಾರೆ. ಅದರಲ್ಲಿ 37 ಎಕರೆ ಚನ್ನಣ್ಣನವರ್ ತಂದೆ-ತಾಯಿ ಒಡೆತನದಲ್ಲಿದೆ. ಈ ಜಮೀನು ಖರೀದಿಸಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ. ಇನ್ನೂ ರೇಣುಕಾ ಎಂಟರ್‌ಪ್ರೈಸೆಸ್ ಎಂಬ ಸಂಸ್ಥೆಯ ಹೆಸರಿನಲ್ಲಿ 20 ವರ್ಷದ ಅವಧಿಗೆ ಕ್ವಾರಿ ಗುತ್ತಿಗೆ ಪಡೆದಿದ್ದಾರೆ. ಈ ಕಂಪೆನಿಯಲ್ಲಿ ಚನ್ನಣ್ಣನವರ್ ತಾಯಿ ಪಾಲುದಾರರಾಗಿದ್ದಾರೆ. ಈ ಕಂಪೆನಿಗೆ ಕೋಟ್ಯಂತರ ಹಣ ಬಂಡವಾಳ ಹೂಡಿಕೆ ಮಾಡಿದ್ದು, ಗುತ್ತಿಗೆ ಪಡೆಯಲು ತಮ್ಮ ಪ್ರಭಾವ, ಅಧಿಕಾರ ಮತ್ತು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಚನ್ನಣ್ಣನವರ್ ಅವರ ಭ್ರಷ್ಟಾಚಾರದ ಬಗ್ಗೆ ಮಂಜುನಾಥ್ ಎಂಬುವರು ಸಹ ದೂರು ದಾಖಲಿಸಿದ್ದಾರೆ. ಸರ್ಕಾರ ಇಲ್ಲಿಯವರೆಗೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಚನ್ನಣ್ಣನವರ್ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಸಿಬಿಐ ಅಥವಾ ಇಡಿಗೆ ಆದೇಶಿಸಬೇಕು. ಅವರನ್ನು ಸೇವೆಯಿಂದ ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *