ಅಕ್ಟೋಬರ್ ನಿಂದ ತರಗತಿ ಶುರು: ಡಿಸಿಎಂ ಅಶ್ವಥ್ ನಾರಾಯಣ್

  • ನೀಟ್ ಅಡ್ಡಿಗೆ ಡಾ.ಅಶ್ವಥ್ ನಾರಾಯಣ ಕಿಡಿ

ಬೆಂಗಳೂರು: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಆಗಿರುವ ಎಲ್ಲಾ ಕಾಲೇಜು ತರಗತಿಗಳು ಆರಂಭವಾಗಲಿವೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಂದಿನ ತಿಂಗಳ ಸೆಪ್ಟೆಂಬರ್ 1 ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್‍ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುವುದು ಎಂದರು.
ಅಕ್ಟೋಬರ್ ತಿಂಗಳಿನಿಂದ ನೇರ(ಆಫ್‍ಲೈನ್) ತರಗತಿ ಶುರುವಾಗಲಿವೆ ಎಂದು ಮಾಹಿತಿ ನೀಡಿದರು.

ಮಾರ್ಗಸೂಚಿ ಬರಬೇಕಿದೆ:
ಕೇಂದ್ರ ಸರಕಾರದಿಂದ ನೇರವಾಗಿ ತರಗತಿ ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ.  ಹೀಗಾಗಿ ರಾಜ್ಯ ಸರಕಾರ ಮುಂದಿನ ತಿಂಗಳಿಂದ ಆನ್‍ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ಅದಾದ ಬಳಿಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.

ಪ್ರಾತಿನಿಧಿಕ ಚಿತ್ರ

ಪೂರ್ವಭಾವಿ ಸಿದ್ಧತೆ:
ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಕಾಲೇಜುಗಳನ್ನು ಪುನರಾರಂಭ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖ ವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಅಂತಿಮ ವರ್ಷದ ಪರೀಕ್ಷೆ:

ಶೈಕ್ಷಣಿಕ ವರ್ಷದ ಆರಂಭದ ಜೊತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ, ಡಿಪ್ಲೋಮಾ  ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜೊತೆಗೆ, ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ಹೇಳಿದರು.

ನೀಟ್‍ಗೆ ಅಡ್ಡಿ ಬೇಡ:
ಸರ್ಕಾರವು ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ. ಈ ಪೈಕಿ 63 ಮಂದಿ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳೂ ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಪಡೆದಿದ್ದಾರೆ.
ವಾಸ್ತವ ಹೀಗಿರಬೇಕಾದರೆ ಕೆಲವರು ನೀಟ್ ಪರೀಕ್ಷೆ ಏಕೆ ಬೇಡ ಅನ್ನುತ್ತಿದ್ದಾರೋ ಗೊತ್ತಿಲ್ಲ ಎಂದು ಪ್ರಶ್ನಿಸಿದ ಸಚಿವರು, ಅಂಥವರಿಗೆ ಒಂದು ಕಿವಿಮಾತು ಹೇಳಲು ಇಷ್ಟಪಡುತ್ತೇನೆ, ಯಾರೂ ಕೂಡ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು ಎಂದು ಮನವಿ ಮಾಡಿದರು.

ನೀಟ್ ಪರೀಕ್ಷೆ ಬೇಡ ಎನ್ನುವುದರ ಹಿಂದೆ ಏನೋ ಹುನ್ನಾರ ಇದ್ದ ಹಾಗಿದೆ, ಮೆರಿಟ್ ಮೂಲಕ ಸೀಟು ಸಿಗಬಾರದು. ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ಎಂಬ ದುರುದ್ದೇಶ ಇದ್ದಂತೆ ಕಾಣುತ್ತಿದೆ. ಯಾವುದೊ ಕಾಣದ ಕೈಗಳು ಇದರ ಹಿಂದಿವೆ. 

ಡಾ. ಸಿ.ಎನ್.ಅಶ್ವಥ್ ನಾರಾಯಣ್, ಉನ್ನತ ಶಿಕ್ಷಣ ಸಚಿವ

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಲವಾರು ವರ್ಷಗಳಿಂದ ಈ ದುಷ್ಪ್ರ ಯತ್ನ ಮುಂದುವರಿಸಲಾಗಿದೆ. ಆದರೆ ಅಂಥವರ ದುರುದ್ದೇಶ ಈಡೇರುತ್ತಿಲ್ಲ. ಹಾಗೆ ನೋಡಿದರೆ, ನೀಟ್ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆ ಮೂಲಕ ದೇಶ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ಆಗಲೇಬೇಕಿದೆ ಎಂದು ಒತ್ತಿ ಹೇಳುವ ಮೂಲಕ ಪರೀಕ್ಷೆ ನಡೆಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದು ಎಂದು ಪರೋಕ್ಷವಾಗಿ ಹೇಳಿದರು. ರಾಜ್ಯ ಸರಕಾರ ಈ ಪರೀಕ್ಷೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತದೆ. ನಾವೂ ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ ಎಂದು ಸ್ಪಷ್ಟ ಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *