ಚೆನ್ನೈ: ತಮಿಳುನಾಡಿನಲ್ಲಿ ಚಿನ್ನ ಕದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಂದರ್ಭದಲ್ಲಿ ಯುವಕನೊಬ್ಬ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಕುಮಾರ್ (27) ಮೃತ ಯುವಕ ಎಂದು ಗುರುತಿಸಲಾಗಿದೆ. ಈತ ಮಾದಪುರಂ ಭದ್ರಕಾಳಿಯಮ್ಮನ್ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.
ಆಗಿದ್ದೇನು?:
ಜೂನ್ 29 ಭಾನುವಾರದಂದು ಶಿವಗಾಮಿ ಎಂಬ ವೃದ್ಧ ಮಹಿಳೆ ತನ್ನ ಮೊಮ್ಮಗಳೊಂದಿಗೆ ತಿರುಮಂಗಲದಿಂದ ದೇವಸ್ಥಾನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಕಾರಿನ ಕೀಯನ್ನು ಅಜಿತ್ ಅವರಿಗೆ ನೀಡಿ, ಕಾರು ಪಾರ್ಕ್ ಮಾಡುವಂತೆ ಹೇಳಿದ್ದರು. ಅದರಂತೆ ಅಜಿತ್ ಕಾರು ಪಾರ್ಕ್ ಮಾಡಿದ್ದರು. ದೇವಸ್ಥಾನದಿಂದ ವಾಪಾಸ್ ಬಂದಾಗ, ಕಾರಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಆಗಿದೆ ಎಂದು ದೂರಿದ್ದಾರೆ.
ಕಾರಿನಿಂದ 9.5 ಪವನ್ ಚಿನ್ನವನ್ನು ಕದ್ದಿದ್ದಾರೆ ಎಂದು ವೃದ್ಧೆ ಆರೋಪಿಸಿ, ದೂರು ನೀಡಿದ್ದಾರೆ. ಈ ಸಂಬಂಧ ಅಜಿತ್ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜಿತ್ ತಪ್ಪೊಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ತಾನು ಚಿನ್ನ ಕದ್ದಿಲ್ಲವೆಂದು ಹೇಳಿದ್ದಾರೆ. ಇದಾದ ಬಳಿಕ ಪೊಲೀಸರು ವಶಕ್ಕೆ ಪಡೆದವರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು?- ಭಾಗ 1
ವಿಚಾರಣೆ ಸಂದರ್ಭದಲ್ಲಿ ಅಜಿತ್ ನಿಗೂಢವಾಗಿ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಅಜಿತ್ ಸಾವಿನ ಸುದ್ದಿ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದ್ದೂ, ಅಮಾಯಕನನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಜಿತ್ ಮೇಲೆ ಪದೇ ಪದೇ ಪೈಪ್ ನಿಂದ ಹಲ್ಲೆ ಮಾಡಲಾಗುತ್ತಿತ್ತು. ಮೆಣಸಿನ ಪುಡಿಯಿಂದ ಹಾಕಿ ಹಿಂಸೆ ನೀಡಲಾಗಿದೆ. ನೀರು ಕುಡಿಯಲು ಸಹ ಬಿಡುತ್ತಿರಲಿಲ್ಲ. ಪದೇ ಪದೇ ಹೊಡೆದ ನಂತರ ಅವನು ಮೂತ್ರ ವಿಸರ್ಜನೆ ಮಾಡಿದ್ದಾನೆ. ನಿತ್ರಾಣಗೊಂಡು, ಕೊನೆಗೆ ಆತನು ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಅಜಿತ್ ರ ಸಂಬಂಧಿಕರು ಮತ್ತು ಮದಪುರಂ ಮತ್ತು ತಿರುಪ್ಪುವನಂ ನಿವಾಸಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತುಭಟನೆ ನಡೆಸಿದ್ದಾರೆ. ಶಿವಗಂಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ರಾವತ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಉದ್ರಿಕ್ತ ಜನರೊಂದಿಗೆ ಮಾತುಕತೆ ನಡೆಸಿ ಪರಿಸ್ಙಿತಿ ತಿಳಿಗೊಳಿಸಿದ್ದಾರೆ.
ಕಸ್ಟಡಿಯಲ್ಲಿ ಅಜಿತ್ ಸಾವಿನ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ. ಈ ಸಂಬಂಧ ತಿರುಪ್ಪುವನಂ ಪೊಲೀಸ್ ಠಾಣೆಯ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ನೋಡಿ: ತುರ್ತುಪರಿಸ್ಥಿತಿ | ಇತಿಹಾಸ ಮರೆತಿದ್ದೇ ದುರಂತ – ರಾಜೇಂದ್ರ ಚೆನ್ನಿ | Janashakthi Media
