ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌; ಅನ್ನಭಾಗ್ಯ, ಪಿಂಚಣಿ ಯೋಜನೆ ಅನುದಾನಕ್ಕೆ ಕೈಹಾಕಿದ ಸರ್ಕಾರ

ಜಿ ಮಹಂತೇಶ್ 

ಬೆಂಗಳೂರು; ಕೆಲ ವಲಯಗಳಲ್ಲಿ ಅನಗತ್ಯವಾಗಿ ದುಂದುವೆಚ್ಚ ಮಾಡುತ್ತಿರುವ ರಾಜ್ಯ ಸರ್ಕಾರವು ಇದೀಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಪಿಹೆಚ್‌ಡಿ ವಿದ್ಯಾರ್ಥಿಗಳ ಶಿಷ್ಯ ವೇತನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲು ಅನುದಾನ ಮರು ಹೊಂದಾಣಿಕೆ ಮಾಡಲು ಹೆಣಗಾಡುತ್ತಿದೆ.

ಇದಕ್ಕಾಗಿ ಅನ್ನಭಾಗ್ಯ ಯೋಜನೆ ಮತ್ತು ಸಂಧ್ಯಾ ಸುರಕ್ಷಾ ಯೋಜನೆಗೆ ಹಂಚಿಕೆಯಾಗಿರುವ ಅನುದಾನಕ್ಕೆ ಕೈಹಾಕಿರುವ ಸರ್ಕಾರವು ಈ ಎರಡೂ ಯೋಜನೆಗಳಿಗೆ ಉಂಟಾಗುವ ಅನುದಾನದ ಕೊರತೆಗೂ ಕಾರಣವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳು, ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನುಷ್ಠಾನಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿರುವ 815.00 ಕೋಟಿ ರು ಮತ್ತು ಕಂದಾಯ ಇಲಾಖೆಯು ಜಾರಿಗೊಳಿಸಿರುವ ಸಂಧ್ಯಾ ಸುರಕ್ಷಾ ಅಡಿಯಲ್ಲಿ ವಯಸ್ಸಾದ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಯೋಜನೆಗೆಂದು ಹಂಚಿಕೆಯಾಗಿರುವ 2,354.71 ಕೋಟಿ ರು. ಮೊತ್ತದಲ್ಲಿ ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಲ್ಯಾಪ್‌ಟಾಪ್‌ ವಿತರಿಸಲು ಹೆಚ್ಚುವರಿಯಾಗಿ 106.79 ಕೋಟಿ ರು.ಗಳನ್ನು ಮರು ಹೊಂದಾಣಿಕೆ ಮಾಡಲು ಮುಂದಾಗಿದೆ.

ಅನ್ನಭಾಗ್ಯ ಮತ್ತು ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಲ್ಯಾಪ್‌ಟಾಪ್‌ ಮತ್ತು ಶಿಷ್ಯ ವೇತನ ನೀಡಲು ವಿಶ್ವವಿದ್ಯಾಲಯಗಳಿಗೆ ಮರು ಹೊಂದಾಣಿಕೆ ಮಾಡಿದರೆ ಈ ಎರಡೂ ಯೋಜನೆಗಳಿಗೆ ಅನುದಾನ ಕೊರತೆಯಾಗಲಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ಈ ಪ್ರಸ್ತಾವನೆಯನ್ನು ಒಪ್ಪಲು ಆರ್ಥಿಕ ಇಲಾಖೆಯು ಸಮ್ಮತಿಸಿಲ್ಲ.

ತಲಾ ಲ್ಯಾಪ್‌ಟಾಪ್‌ಗೆ 50,000 ರು.ನಂತೆ ರಾಜ್ಯದ ಒಟ್ಟು 17 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ 87.88 ಕೋಟಿ ರು., ಶಿಷ್ಯ ವೇತನ ನೀಡಲು 18.92 ಕೋಟಿ ರು. ಸೇರಿದಂತೆ ಒಟ್ಟಾರೆ 106.79 ಕೋಟಿ ರು. ಅಗತ್ಯವಿದ್ದು, ಇದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿನ ಅನ್ನ ಭಾಗ್ಯ ಯೋಜನೆ, ಕಂದಾಯ ಇಲಾಖೆಯ ಸಂಧ್ಯಾಸುರಕ್ಷಾ ಯೋಜನೆಯಡಿಯಲ್ಲಿನ ಅನುದಾನವನ್ನು ಮರು ಹೊಂದಾಣಿಕೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಕೋರಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಸಮಾಜ ಕಲ್ಯಾಣ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಕಂದಾಯ ಇಲಾಖೆಯು ತನ್ನ ಬದ್ಧತಾ ವೆಚ್ಚಗಳನ್ನು ಒಳಗೊಂಡಿದೆ. ಹೀಗಾಗಿ ಹಣವನ್ನು ಮರು ಹೊಂದಾಣಿಕೆ ಮಾಡಿದರೆ ಈ ಎರಡೂ ಇಲಾಖೆಗಳು ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ ತಡೆಯುಂಟಾಗುವ ಮೂಲಕ ಕಷ್ಟವಾಗಲಿದೆ. ಅನ್ನಭಾಗ್ಯ ಮತ್ತು ಸಾಮಾಜಿಕ ಸುರಕ್ಷತೆ ಯೋಜನೆಯ ಅನುದಾನಕ್ಕೆ ಕೊರತೆ ಬೀಳಲಿದೆ,’ ಎಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಅದೇ ರೀತಿ ವಿಶ್ವವಿದ್ಯಾಲಯಗಳು ಶುಲ್ಕ, ಬಾಡಿಗೆ, ಅನುದಾನ ಸೇರಿದಂತೆ ಇನ್ನಿತರೆ ಸಂಪನ್ಮೂಲಗಳು ಇರುವುದರಿಂದ ಆ ಎಲ್ಲಾ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಲ್ಯಾಪ್‌ಟಾಪ್‌, ಶಿಷ್ಯ ವೇತನ ವಿತರಣೆಗೆ ಬಳಸಿಕೊಳ್ಳಬೇಕು ಎಂದೂ ಆರ್ಥಿಕ ಇಲಾಖೆಯು ಸಲಹೆ ನೀಡಿದೆ.

ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ವಿದ್ಯಾರ್ಥಿಗೆ ಪ್ರತಿ ತಿಂಗಳು 10,000 ರುಗಳಂತೆ ಒಟ್ಟು 1,646 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿತರಿಸಬೇಕಿದೆ. ಅದೇ ರೀತಿ ಸ್ನಾತಕೋತ್ತರ ವಿಭಾಗದ ತಲಾ ವಿದ್ಯಾರ್ಥಿಗೆ ಲ್ಯಾಪ್‌ಟಾಪ್‌ವೊಂದಕ್ಕೆ 50,000 ರು ಲೆಕ್ಕದಲ್ಲಿ ಒಟ್ಟು 17,575 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಬೇಕಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅನುಷ್ಠಾನ, ಅನುದಾನ ಹಂಚಿಕೆ ಕುರಿತು ಸಭೆ ಕೂಡ ನಡೆದಿತ್ತು. ಆ ಸಭೆಯಲ್ಲಿಯೂ ಈ ವಿಚಾರದ ಬಗ್ಗೆ ಚರ್ಚೆಯಾಗಿತ್ತು ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *