ಯೋಗಿಯ ರಾಜ್ಯದಲ್ಲಿ ಭೋಗಿಗಳದೇ ಕಾರುಬಾರು..

ನವಿಲಿಗೆ ಕಾಳುಕೊಡುವ, ಬೇಟಿಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಕರೆ ಕೊಡುವ, ಬೇಟೀ ಬಚಾವ್ ಎನ್ನುವ ಘೋಷಣೆಯ ವೀರರೇ! ಬೇಟಿಯರ ನಾಲಿಗೆ ಕತ್ತರಿಸಲಾಗಿದೆ. ಬೆನ್ನು ಮೂಳೆ ಮುರಿಯಲಾಗಿದೆ. ಎಲ್ಲಿದ್ದೀರಿ? ಯಾವ ಬೇಟಿಯರು ಮಾತ್ರ ನಿಮ್ಮ ಪ್ರಕಾರ ಬಚಾವ್ ಆಗಲು ಅರ್ಹರು. ಉನ್ನಾವ್, ಕತುವಾ, ಹತ್ರಾಸ್ ಗಳ ದಲಿತ ಬೇಟಿಯರು ಬೇಟಿಯರಂತೆ ಕಾಣುತ್ತಿಲ್ಲವೇ? ಅವರ ಆಕ್ರಂದನ ಕಿವಿಗೆ ಕೇಳುತ್ತಿಲ್ಲವೇ? ನ್ಯಾಯದ ತಕ್ಕಡಿಯನ್ನು ಬೇಕಾದ ಹಾಗೆಲ್ಲ ತೂಗಿಸುವ ಅಖಂಡ ಭುಜಬಲರೇ! .ಸಾಕು ನಿಮ್ಮ ಘೋಷಣೆಗಳು. ನೆಲದ ಕಾನೂನು ನೆಲದ ಜನರ ಪರವಾಗಿ ನಿಲ್ಲಬೇಕು. ಬಲಾಢ್ಯರ, ಮೇಲ್ಜಾತಿಯ ವರ್ಗಗಳ ಆಟದ ಬೊಂಬೆಯಾಗಿಸಬೇಡಿ.

ಕೆ.ಎಸ್.ವಿಮಲ

 

ಮಾನವೀಯತೆಯೆಂಬ ಹೆಸರನ್ನೇ ಅಳಿಸಿ ಹಾಕುತ್ತಿರುವ ಘಟನೆಗಳಿಗೆ ನಾವೆಲ್ಲರೂ ಸಾಕ್ಷಿಗಳಾಗಿ ನಿಲ್ಲುತ್ತಿದ್ದೇವೆ. ಕ್ರೌರ್ಯದ ಪರಮಾವಧಿಯ ಘಟ್ಟ ತಲುಪಿದೆ.

ಆಕೆ ಹತ್ತೊಂಬತ್ತರ ಯುವತಿ. ಮಹಾನ್ ಹಿಂದೂ! ‘ದೇಶದ ಹಿಂದೂ ನಾವೆಲ್ಲ ಒಂದು’ ಎನ್ನುವ ಮಂತ್ರ ಜಪಿಸುವ ಮನುವಾದಿಗಳ ನೆಲದಲ್ಲಿ ‘ಹಿಂದು’ವಾಗಿಯೇ ಜನಿಸಿದವಳು ಆದರೆ. . . ಸಾರಿ ದಲಿತಳು. ಹಾಗಾಗಿ ಕನಿಷ್ಠ ಮಾನವ ಘನತೆಗೂ ಆಕೆ ಅರ್ಹಳಲ್ಲ, ಎಂದರೆ ಸತ್ತ ಮೇಲೂ ಸರಿಯಾದ ಸಂಸ್ಕಾರ ಮನೆಯವರ ಕಣ್ಣೀರಿನ ತರ್ಪಣಕ್ಕೆ ಅವಕಾಶವಿಲ್ಲ. ಮಹಿಳೆಯೊಬ್ಬಳು ಪೋಲೀಸರ ಕಾಲಿಗೆ ಬಿದ್ದು ಬೇಡುವ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಅದರ ಜೊತೆ ಬರುವ ಸುದ್ದಿ ಹೇಳುತ್ತಿದೆ, ಆಕೆ ಸೆರಗೊಡ್ಡಿ ಕೇಳುತ್ತಿದ್ದಾಳೆ. ನನ್ನ ಮಗಳಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು. ಇನ್ನೂ ಸುದ್ದಿಗಳು ಬರುತ್ತಿವೆ, ಕುಟುಂಬದ, ಊರಿನ ಜನರನ್ನು ರೂಮೊಂದರಲ್ಲಿ ಕೂಡಿ ಹಾಕಿ ಪೋಲೀಸರು ಶವಕ್ಕೆ ಬೆಂಕಿ ಹಾಕಿದರೆಂದು. ಓಹ್…ಮಹಾನ್ ಹಿಂದೂ ಸಂಸ್ಕಾರವಂತರೇ. . . .ನಿಮ್ಮ ಧರ್ಮದಲ್ಲಿ ಹೀಗೂ ನಡೆಯುತ್ತದೆಯಾ?

ಖಾಕಿಗಳು ಸಮವಸ್ತ್ರಧಾರಿಗಳು ಯಾವುದರ ರಕ್ಷಣೆಗೆ ನಿಂತಿದ್ದಾರೆ. ದಲಿತರು, ಮಹಿಳೆಯರು ಮನುಷ್ಯರಲ್ಲ ಎನ್ನುವ ಮನುಧರ್ಮ ಶಾಸ್ತ್ರದ ಎಲ್ಲ ಶ್ರೇಣಿಕೃತ ಕೋಡ್ ಗಳಿಗೆ ಯೋಗಿಗಳ ರಾಜ್ಯದಲ್ಲಿ ಸಂಪೂರ್ಣ ಫ್ರೀ ಹ್ಯಾಂಡ್. ನೆನಪಿಸಿಕೊಳ್ಳೋಣ. ಉನ್ನಾವ್ ನಲ್ಲಿ ಸೇಂಗರ್ ಎಂಬ ಶಾಸಕ ಹದಿನೇಳರ ಯುವತಿಯ ಮೇಲೆ ಬಲಾತ್ಕಾರ ಮಾಡಿದ. ಆದರೆ ತನ್ನ ಸ್ಥಾನ, ಅಧಿಕಾರ ಬಲದಿಂದ ಆಕೆಯ ತಂದೆಯನ್ನೇ ಅಪರಾಧಿಯಾಗಿಸಿದ, ಆಕೆಯ ವಾಹನದ ಮೇಲೆ ಅಪಘಾತವೆಸಗಲಾಯಿತು, ಬೆದರಿಕೆ ಭೀತಿ ಎಲ್ಲವೂ ನಡೆದವು. ಇಂಥಹ ಹತ್ತು ಹಲವು ಘಟನೆಗಳು ಮರೆಯಲು ಸಾಧ್ಯವಿಲ್ಲ. ಆ ರಾಜ್ಯದಲ್ಲಿ ಹೀಗೆ ಒಂದರ ಹಿಂದೆ ಒಂದರಂತೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳು ಅಲ್ಲಿನ ಅಧಿಕಾರಿಗಳನ್ನಾಗಲಿ, ಆಡಳಿತ ನ್ಯಾಯವ್ಯವಸ್ಥೆಯನ್ನಾಗಲಿ ಒಂದಿನಿತೂ ಕಂಗೆಡಿಸುತ್ತಿಲ್ಲ. ಬದಲಿಗೆ ಅಧಿಕಾರ, ಜಾತಿಮದಗಳು ಠೇಂಕರಿಸುತ್ತಿವೆ. ಇದು ಅಪಾಯಕಾರಿ ಸಂಗತಿ. ದೇಶದ ಬಹುತ್ವ, ಸಮರಸ ತತ್ವದ ಬುನಾದಿಗೇ ಕೊಡಲಿ ಏಟು ಬೀಳುತ್ತಿದೆ. ಜಾತಿ  ಆಧಾರಿತ ತಾರತಮ್ಯದ ಧರ್ಮಾಧಾರಿತ ವಿಭಜನೆಯ ಕೂರಂಬು ಇರಿಯುತ್ತಿದೆ. ಇದನ್ನು ಕೇವಲ ಮೇಲ್ನೋಟಕ್ಕೆ ಕಾಣುವ ದೌರ್ಜನ್ಯದ ಕುರಿತು ನಿಟ್ಟುಸಿರು ಆಕ್ರೋಶಕ್ಕೆ ಸೀಮಿತಗೊಳಿಸದೇ ಇದರ ದೀರ್ಘಕಾಲೀನ ಪರಿಣಾಮಗಳ ಬೇರುಗಳನ್ನಿಲ್ಲಿ ಹುಡುಕಲಾಗಬೇಕು.

ಯುವತಿ ಅತ್ಯಾಚಾರ ಆರೋಪಿಗಳು

ಇದು ನಿಧಾನವಾಗಿ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಗೋಚರಿಸುತ್ತಿದೆ. ಧರ್ಮ ಜಾತಿ ಶ್ರೇಷ್ಟತೆಯ ಅಮಲನ್ನು ಜನರ ತಲೆಯೊಳಗೆ ತುಂಬಿ ಮನುಷ್ಯತ್ವದ ಕನಿಷ್ಠ ಹಂಬಲವನ್ನೂ ಕಿತ್ತು ಹಾಕಿ ಅಲ್ಲಿ ದ್ವೇಷ ಕ್ರೌರ್ಯಗಳನ್ನು ನಾಜೂಕಾಗಿ ತುಂಬಲಾಗುತ್ತಿದೆ.

ಉತ್ತರ ಪ್ರದೇಶದ ಈ ಘಟನೆ ಹತ್ರಾಸ್ ಎಂಬ ಪ್ರದೇಶದ ಹತ್ತೊಂಬತ್ತು ವರ್ಷದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಆಕೆಯ ನಾಲಿಗೆಯನ್ನೇ ಹರಿಯಲಾಗಿದೆ. ಬೆನ್ನು ಮೂಳೆಯನ್ನು ಮುರಿಯಲಾಗಿದೆ. ಇಷ್ಟೆಲ್ಲದರ ನಂತರ ಬದುಕು ಸಾವಿನ ಮಧ್ಯೆ ಹೋರಾಡಿ ಜೀವ ಉಳಿಸಿಕೊಳ್ಳಲಾರದೆ ಅಸು ನೀಗಿದವಳನ್ನು ಅವಳ ಅಂತಿಮ ಸಂಸ್ಕಾರವನ್ನು ಆಕೆಯ ಕುಟುಂಬಕ್ಕೆ ಮಾಡಲು ಅವಕಾಶ ಕೊಡದೇ ಬೆಳಗಿನ ಜಾವ 2.45ರ ಹೊತ್ತಿನಲ್ಲಿ ಪೊಲೀಸರೇ ನಡೆಸಿದ್ದಾರೆ. ಅಲ್ಲಿನ ಬಿಜೆಪಿಯ ವಕ್ತಾರರು ಟೀವಿ ಮಾಧ್ಯಮಕ್ಕೆ ಕೊಟ್ಟ ಹೇಳಿಕೆಯಂತೆ ಆ ಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯ ಕಾರಣದಿಂದ ಪೊಲೀಸರೇ ಯುವತಿಯ ದೇಹವನ್ನು ಸುಟ್ಟುಹಾಕಿದರೆಂದು. ವಾವ್ಹ್‍! ಯಾವ  ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರು, ಬಾಲಕಿಯರು, ದಲಿತ ಸಮುದಾಯದ ಮೇಲೆ ನಡೆಯುವ ದೌರ್ಜನ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಬೆದರಿಕೆ ಎನಿಸದೇ, ಮಗಳನ್ನು ಕಳೆದುಕೊಂಡ ಕುಟುಂಬ ಮತ್ತು ಗ್ರಾಮದವರು ದೇಹವನ್ನು ಘನತೆಯ ಅಂತ್ಯ ಸಂಸ್ಕಾರಕ್ಕಾಗಿ ತಮಗೆ ಕೊಡಿರೆಂದು ಗೋಳಿಡುತ್ತಿರುವುದು ಕಾನೂನು ಸುವ್ಯವಸ್ಥೆಗೆ  ಬೆದರಿಕೆ ಎನ್ನಲಾಗುತ್ತಿದೆ. ಪೊಲಿಸರು ಸುಟ್ಟು ಹಾಕಿದ್ದರ ಸಮರ್ಥನೆಯ ಅರ್ಥ ಇದೇ ಅಲ್ಲವೇ?!

ಸೆಪ್ಟೆಂಬರ್ 14ರಂದು ತಾಯಿಯ ಜೊತೆ  ಹುಲ್ಲು ತರಲು ಹೋದ ಯುವತಿ ತಾಯಿಯಿಂದ ಬೇರ್ಪಡುತ್ತಾಳೆ. ಜೊತೆಗಿದ್ದ ಮಗಳು ಕಾಣದಾದಾಗ ಹುಡುಕುತ್ತ ಹೋದ ತಾಯಿಗೆ ಸಿಕ್ಕಿದ್ದು ರಕ್ತ ಸಿಕ್ತ, ನಾಲಿಗೆ ಹರಿದ ಸ್ಥಿತಿಯಲ್ಲಿದ್ದ, ಗುಪ್ತಾಂಗಗಳಿಂದ ರಕ್ತ ಸೋರುತ್ತಿದ್ದ ಮಗಳ ಅರೆಜೀವದ ದೇಹ. ಹೇಗೋ ಮಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆತರುವ ತಾಯಿಗೆ ಅಲ್ಲಿ ಸಿಕ್ಕಿದ್ದು ಅಪಹಾಸ್ಯ, ಅಸಹಜ ವಿಳಂಬ. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಬದಲು ಪೊಲೀಸರು ನಡೆದುಕೊಂಡ ರೀತಿಯನ್ನು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ನಾಲ್ಕೈದು ದಿನಗಳ ಕಾಲ ಪ್ರಕರಣ ದಾಖಲಿಸಿಕೊಳ್ಳದೇ ಸತಾಯಿಸಿದ ಪೊಲೀಸ್‍ ವ್ಯವಸ್ಥೆಯ ಬಗ್ಗೆ ಯಾರಿಗೆ ತಾನೇ ನಂಬಿಕೆ ಉಳಿಯಲು ಸಾಧ್ಯ. ಯಾವುದಾದರೂ ನೆಲದ ಕಾನೂನು ಇದಕ್ಕೆ ಅವಕಾಶ ನೀಡುತ್ತದೆಯೇ? ಮಾನವೀಯ ದೃಷ್ಟಿ ಇರುವವರು ಒಪ್ಪಲು ಸಾಧ್ಯವೇ. ಅತ್ಯಂತ ಕ್ರೂರಿ ರಕ್ತ ಪಿಪಾಸುಗಳಿಗೆ ಮಾತ್ರ ಇಂಥ ನಡವಳಿಕೆ ಸಾಧ್ಯ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಆರೋಪಿಗಳ ಫೋಟೋವನ್ನು ಸಾರ್ವಜನಿಕಗೊಳಿಸುತ್ತಾರಂತೆ. ನಾವು ಕೇಳುತ್ತೇವೆ ನ್ಯಾಯದ ದಾರಿಯಲ್ಲಿ ಅಡ್ಡ ಬರುತ್ತಿರುವ ಬಾಧೆಗಳನ್ನು ನಿವಾರಿಸದೇ ಇಂಥ ಕ್ರಮಗಳಿಂದ ಯಾವ ಉಪಯೋಗವೂ ಆಗಲಾರದು. ಉತ್ತರ ಪ್ರದೇಶದಲ್ಲಿ ದಲಿತರು, ಯುವತಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಹೀನಾಯವಾದ ದೌರ್ಜನ್ಯಗಳ ನಿಯಂತ್ರಣಕ್ಕೆ ಯಾವ ಕ್ರಮವನ್ನೂ ಕೈಗೊಳ್ಳಲಾಗುತ್ತಿಲ್ಲ ಅಷ್ಟೇ ಅಲ್ಲ ಆರೋಪಿಗಳಿಗೆ ಎಲ್ಲ ರೀತಿಯ ರಕ್ಷಣೆ ನೀಡಲಾಗುತ್ತದೆ.

ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ಬರ್ಬರ ಕೃತ್ಯ ಎಸಗಿದವರನ್ನು ಶಿಕ್ಷೆಗೆ ಒಳಪಡಿಸಿ ಎಂದು ದೇಶಾದ್ಯಂತ ಕೂಗು ಕೇಳುತ್ತಿದ್ದರೆ ಅಲ್ಲಿಯ ಮೇಲ್ಜಾತಿಯ ಒಂದಿಷ್ಟು ಜನ ಸವರ್ಣೀಯರ ಮೇಲೆ ವಿನಾಕಾರಣ ದೋಷ ಹೊರಿಸಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರಂತೆ. ಇದು ಈ ದೇಶದ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿಯವರ ಪಾರಮ್ಯಕ್ಕೆ ಸಿಗುವ ಸ್ಪಷ್ಟ ಉದಾಹರಣೆಯಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ದಿನದ ಸಂಗತಿಯೆಂಬಂತೆ ದಲಿತರ ಮೇಲೆ, ದಲಿತ ಮಹಿಳೆಯರ ಮೇಲೆ ಜಾತಿ ಮತ್ತು ಲಿಂಗಾಧಾರಿತ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ ದೌರ್ಜನ್ಯವನ್ನು ಲೈಂಗಿಕ ದೌರ್ಜನ್ಯವಾಗಿ ಮಾತ್ರ ನೋಡಬೇಕು. ಅದಕ್ಕೆ ಜಾತಿ ಹಣೆಪಟ್ಟಿ ಯಾಕೆ ಹಚ್ಚಬೇಕೆಂಬ ಅಪಸ್ವರ ಅಲ್ಲಲ್ಲಿ ಕೇಳುತ್ತಿದೆ. ಹೌದು,  ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಲಿಂಗಾಧಾರಿತವಾಗಿಯೇ ನೋಡಬೇಕೆನ್ನುವುದು ಒಂದು ಹಂತಕ್ಕೆ ಸರಿಯೇ, ಆದರೆ ತಳ ಸಮುದಾಯದ, ಆಸ್ತಿ, ಸಂಪತ್ತು ವಿದ್ಯೆ ಸಾಮಾಜಿಕ ಸ್ಥಾನ ಮಾನಗಳಿಲ್ಲದ ದಲಿತ ಸಮೂಹ ಈ ಎಲ್ಲ ದೌರ್ಜನ್ಯಗಳಿಗೆ ಅತಿ ಹೆಚ್ಚು ಬಲಿಯಾಗುತ್ತಿರುವಾಗ ಜೇಡವನ್ನು ಜೇಡವೆನ್ನದೆ ಒಂದು ಹುಳು ಎನ್ನಲಾದೀತೆ? ಮೇಲ್ಜಾತಿಯ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದವರ ಜಾತಿ ಅಹಂಕಾರದ ಬಲಿಪಶುಗಳು ದಲಿತ ದಮನಿತರು. ಮತ್ತು ಆ ಸಮೂಹದ ಹೆಣ್ಣುಮಕ್ಕಳು. ಅದನ್ನು ಮರೆಯಬಾರದು.

ಘಟನೆಯ ವಿರುದ್ಧ ದೊಡ್ಡ ಕೂಗೆದ್ದಿದೆ. ಪ್ರಧಾನಿಗಳಿಗೆ ಎಚ್ಚರವಾಗಿದೆ. ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಿಗೆ ಎಲ್ಲ ಸೂಕ್ತ ಕ್ರಮಕೈಗೊಳ್ಳಲು ಹೇಳಿಕೆ ನೀಡಿದ್ದಾರೆಂದು ವರದಿಯಾಗುತ್ತಿದೆ. ಆ ಅಸಹಾಯಕ ದಲಿತ ಯುವತಿ ನಮ್ಮ ದೇಶದ ರಾಜಧಾನಿಯ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಆಕೆ ತನ್ನ ಹರಿದ ನಾಲಿಗೆಯ ಮೂಲಕವೇ ತನ್ನ ಮೇಲೆ ಅತ್ಯಾಚಾರ ಮಾಡಿದವರ ಹೆಸರು ಹೇಳಿದ್ದಾಳೆ. ಮಾನ್ಯ ಪ್ರಧಾನಿಗಳ ಅಥವಾ ಸರಕಾರದ ಯಾವ ಪ್ರತಿನಿಧಿಗಳಿಗೂ ಸಮಯ ಮಾಹಿತಿ ಯಾವುದೂ ಸಿಗಲಿಲ್ಲವೇನೋ? ಮಹಿಳಾ ಮತ್ತು ಮಕ್ಕಳ ಸಚಿವರಾಗಲೀ ಮಹಿಳಾ ಆಯೋಗವಾಗಲೀ ಕನಿಷ್ಟ ಖಂಡನೆಯ ಹೇಳಿಕೆ ನೀಡಲಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಛೀಮಾರಿ ಹಾಕಲಿಲ್ಲ. ತನಿಖೆಗೆ ಪ್ರತಿನಿಧಿಗಳನ್ನು ಕಳಿಸಲಿಲ್ಲ. ಎಂದರೆ ಮೌನ ಸಮ್ಮತಿ. ಹಿಂದೂ ರಾಷ್ಟçದಲ್ಲಿ ಎಲ್ಲರೂ ಹಿಂದುಗಳು, ಆದರೆ ಮೇಲ್ಜಾತಿಯವರು ತುಸು ಹೆಚ್ಚು ಶ್ರೇಷ್ಟರು. ಅಲ್ಲಿಯ ಪೊಲೀಸ್ ಅಧಿಕಾರಿ ತನ್ನ ಮನಸ್ಸಿಗೆ ಬಂದ ಹಾಗೆಲ್ಲ ಹೇಳಿದ್ದಾರೆ. ಘಟನೆಯನ್ನು ಮುಚ್ಚಿ ಹಾಕಲು ಬೇಕಾದ ಹಾಗೆಲ್ಲ ಟ್ವಿಸ್ಟ್ ಮಾಡಲು ಪ್ರಯತ್ನಿಸಿದ್ದಾರೆ. ಅವರೆಲ್ಲರಿಗೆ ಕಠಿಣ ಶಿಕ್ಷೆ ಕೊಡಿಸುವಿರೇ? ಅಪರಾಧಿಗಳ ಅಪರಾಧವನ್ನು ಮುಚ್ಚಿ ಹಾಕಲೆಂದೇ ಅಧಿಕಾರಿ ವಲಯವನ್ನು ಸಾಕಿಟ್ಟುಕೊಂಡಿರುವ ವ್ಯವಸ್ಥೆಯಲ್ಲಿ ಕಾನೂನಿಗೆ ತಿದ್ದುಪಡಿ ತಂದು ಅತ್ಯಾಚಾರ ಮಾಡಿದವರಿಗೆ ನೇಣುಗಂಬದ ಶಿಕ್ಷೆ!  ಅಪರಾಧಿಗಳು ನ್ಯಾಯದ ಕಟಕಟೆಗೇ ಬಾರದಂತೆ ನೋಡಿಕೊಳ್ಳುವ ಈ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡಬೇಕಿರುವುದು ಯಾವುದನ್ನು? ಯೋಚಿಸಬೇಕಲ್ಲವೇ? ಶಿಕ್ಷೆಯ ಪ್ರಮಾಣವಲ್ಲ ಹೆಚ್ಚಬೇಕಿರುವುದು. ಪ್ರಕರಣಗಳು ನಡೆದರೆ ಅಪರಾಧಿ ತಪ್ಪಿಸಿಕೊಳ್ಳಲಾಗದಂಥಹ ಬಿಗಿ ಕ್ರಮ ಎಂಬುದು ಇಂಥ ಘಟನೆಗಳಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ.

ದೇಶದ ಜನರ ಮನಸ್ಸಿನಿಂದ ನಿರ್ಭಯಾ ಪ್ರಕರಣ ಮಾಸಿಲ್ಲ, ಮಾಸುವುದೂ ಇಲ್ಲ. ಅಂಥ ಬರ್ಭರ ಘಟನೆಯನ್ನು ದೇಶವೆದ್ದು ಖಂಡಿಸಿತು. ಖಂಡಿಸಲೇ ಬೇಕು. ನವಿಲಿಗೆ ಕಾಳುಕೊಡುವ, ಬೇಟಿಯರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಕರೆ ಕೊಡುವ, ಬೇಟೀ ಬಚಾವ್ ಎನ್ನುವ ಘೋಷಣೆಯ ವೀರರೇ! ಬೇಟಿಯರ ನಾಲಿಗೆ ಕತ್ತರಿಸಲಾಗಿದೆ. ಬೆನ್ನು ಮೂಳೆ ಮುರಿಯಲಾಗಿದೆ. ಎಲ್ಲಿದ್ದೀರಿ? ಯಾವ ಬೇಟಿಯರು ಮಾತ್ರ ನಿಮ್ಮ ಪ್ರಕಾರ ಬಚಾವ್ ಆಗಲು ಅರ್ಹರು. ಉನ್ನಾವ್ ಕತುವಾ ಹತ್ರಾಸ್ ಗಳ ದಲಿತ ಬೇಟಿಯರು ಬೇಟಿಯರಂತೆ ಕಾಣುತ್ತಿಲ್ಲವೇ? ಅವರ ಆಕ್ರಂದನ ಕಿವಿಗೆ ಕೇಳುತ್ತಿಲ್ಲವೇ? ನ್ಯಾಯದ ತಕ್ಕಡಿಯನ್ನು ಬೇಕಾದ ಹಾಗೆಲ್ಲ ತೂಗಿಸುವ ಅಖಂಡ ಭುಜಬಲರೇ! .ಸಾಕು ನಿಮ್ಮ ಘೋಷಣೆಗಳು. ನೆಲದ ಕಾನೂನು ನೆಲದ ಜನರ ಪರವಾಗಿ ನಿಲ್ಲಬೇಕು. ಬಲಾಢ್ಯರ, ಮೇಲ್ಜಾತಿಯ ವರ್ಗಗಳ ಆಟದ ಬೊಂಬೆಯಾಗಿಸಬೇಡಿ.

ದೇಶದ ಜನರೆದ್ದು ಕೂಗಬೇಕು. ಈ ದೇಶ ಮೇಲ್ಜಾತಿಯ ‘ಹಿಂದೂತ್ವ’ವಾದಿಗಳ ಆಡಂಬೋಲವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಘನತೆಯ ಬದುಕು, ಮತ್ತು ಸಾವಿನ ನಂತರವೂ ಘನತೆಯ ಅಂತ್ಯಸಂಸ್ಕಾರದ ಹಕ್ಕಿದೆ. ಸ್ವರವೆತ್ತಿ ಹೇಳೋಣ ಈ ದೇಶ ನಮ್ಮದು. ನಮ್ಮದಾಗಿಯೇ ಉಳಿಸಿಕೊಳ್ಳುತ್ತೇವೆ.

 

 

Donate Janashakthi Media

Leave a Reply

Your email address will not be published. Required fields are marked *