ಬಂಡವಾಳಶಾಹಿಯ ಮತ್ತೊಂದು ವೈರುಧ್ಯ – ನಿರಂತರ ಸಾಮೂಹಿಕ ನಿರುದ್ಯೋಗದ ಸ್ಥಿತಿಯತ್ತ ವಿಶ್ವ ಬಂಡವಾಳಶಾಹಿ

ಪ್ರೊ.ಪ್ರಭಾತ್ ಪಟ್ನಾಯಕ್

ಒಟ್ಟು ಬೇಡಿಕೆಯ ಕೊರತೆಯನ್ನು ನೀಗಿಸುವ ಸಲುವಾಗಿ ರಾಷ್ಟ್ರ-ಪ್ರಭುತ್ವಗಳು ಮಧ್ಯಪ್ರವೇಶ ಮಾಡದಂತೆ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅವುಗಳನ್ನು ಸಾಕಷ್ಟು ದುರ್ಬಲಗೊಳಿಸಿದೆ. ಆದರೆ, ಅಮೆರಿಕದ ಪ್ರಭುತ್ವ ಮಾತ್ರ ಈ ಮಧ್ಯಪ್ರವೇಶಿಸುವ ಸಾಮರ್ಥ್ಯವನ್ನು ಇನ್ನೂ ಹೊಂದಿತ್ತು. ಅಥವಾ ಉಳಿಸಿಕೊಂಡಿತ್ತು.. ಏಕೆಂದರೆ, ಅಮೆರಿಕದ ಕರೆನ್ಸಿಯನ್ನು “ಚಿನ್ನಕ್ಕೆ ಸಮಾನ” ಎಂದು ಜಾಗತೀಕರಣಗೊಂಡ ಹಣಕಾಸು ಬಂಡವಾಳವೂ ಒಪ್ಪಿಕೊಂಡಿದೆ. ಹಾಗಾಗಿ, ಅಮೆರಿಕದ ಪ್ರಭುತ್ವವು ಅರ್ಥವ್ಯವಸ್ಥೆಯಲ್ಲಿ ಮಧ್ಯಪ್ರವೇಶ ಮಾಡಿದರೂ ಸಹ, ಹಣಕಾಸು ಬಂಡವಾಳವು ಅಲ್ಲಿಂದ ಪಲಾಯನಗೈಯುತ್ತಿರಲಿಲ್ಲ. ಆದರೆ, ಇನ್ನು ಮುಂದೆ ಇಂತಹ ಆಟ ನಡೆಯುವುದಿಲ್ಲ ಎಂದು ತೋರುತ್ತದೆ. ವಿಶ್ವ ಬಂಡವಾಳಶಾಹಿಯು ನಿರಂತರ ಸಾಮೂಹಿಕ ನಿರುದ್ಯೋಗದ ಸ್ಥಿತಿಗೆ ತಲುಪುತ್ತದೆ. ಈ ಪರಿಸ್ಥಿತಿಯು ರಾಜಕೀಯ ಸ್ಥಿರತೆಯನ್ನು ದುರ್ಬಲಗೊಳಿಸುತ್ತದೆ. ಭಾರತದಂತಹ ದೇಶಗಳಿಗೆ ಅಂತಹ ಪರಿಸ್ಥಿತಿಯ ಪರಿಣಾಮಗಳು ಅಪಾರವೂ ಮತ್ತು ಗಹನವೂ ಆಗುತ್ತವೆ.

ಕೊರೊನಾ ಮೊದಲಿನ ಅಮೆರಿಕದ ಪರಿಸ್ಥಿತಿಗೆ ಹೋಲಿಸಿದರೆ, ಈಗಲೂ ಅಲ್ಲಿ ನಲವತ್ತು ಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ. ಅಮೆರಿಕಾದ ಈ ಪರಿಸ್ಥಿತಿಯಲ್ಲಿ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಬಿಡೆನ್ ಆಡಳಿತದ ಪ್ರಯತ್ನವು ಅಲ್ಲಿ ತಲೆ ಎತ್ತುತ್ತಿರುವ ಹಣದುಬ್ಬರದಿಂದಾಗಿ ಮತ್ತಷ್ಟು ಜಟಿಲಗೊಂಡಿದೆ. ಅಮೆರಿಕದಲ್ಲಿ ಮಾತ್ರವಲ್ಲ, ಬೇರೆ ಬಂಡವಾಳಶಾಹಿ ದೇಶಗಳಲ್ಲೂ ಹಣದುಬ್ಬರ ತಲೆ ಎತ್ತಿದೆ. ಈ ಹಣದುಬ್ಬರದ ಸಮಸ್ಯೆಯನ್ನು ಎದುರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬೋರ್ಡ್ (ಭಾರತದ ರಿಸರ್ವ್ ಬ್ಯಾಂಕ್‌ಗೆ ಸಮಾನ) ಬಡ್ಡಿ ದರಗಳನ್ನು ಶೀಘ್ರದಲ್ಲೇ ಏರಿಸಲು ಹವಣಿಸುತ್ತಿದೆ. ಪ್ರಸ್ತುತ ಶೂನ್ಯಕ್ಕೆ ಹತ್ತಿರದಲ್ಲಿರುವ ಬಡ್ಡಿ ದರಗಳನ್ನು ಅಮೆರಿಕ ಹಣದುಬ್ಬರದ ಸನ್ನಿವೇಶದಲ್ಲಿ ಉಳಿಸಿಕೊಳ್ಳುವುದು ಮತ್ತು ಅದರ ವಿತ್ತೀಯ ವಿಸ್ತರಣೆಯ ಮುಂದುವರೆಕೆಯೂ ಕಷ್ಟದ ಕೆಲಸವೇ. ಚೇತರಿಸಿಕೊಳ್ಳುತ್ತಿದ್ದ ಈ ಸಮಯದಲ್ಲಿ ಅಮೆರಿಕಾದ ಅರ್ಥವ್ಯವಸ್ಥೆಯು ಹಣದುಬ್ಬರದಿಂದಾಗಿ ಮತ್ತೊಂದು ಆಘಾತಕ್ಕೊಳಗಾಗಿದೆ. ಈ ವಿದ್ಯಮಾನವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, “ಚಿನ್ನಕ್ಕೆ ಸಮಾನ” ಎನಿಸಿದ ಕರೆನ್ಸಿ ಹೊಂದಿರುವ ಮತ್ತು ಬಂಡವಾಳವು ಹೊರ ಹರಿಯಬಾರದಷ್ಟು ಬಲಶಾಲಿ ಕರೆನ್ಸಿ ಹೊಂದಿರುವ, ವಿಶ್ವದ ಅಗ್ರಮಾನ್ಯ ಬಂಡವಾಳಶಾಹಿ ಅಮೆರಿಕದ ಪ್ರಭುತ್ವದ ಸಾಮರ್ಥ್ಯವು, ತನ್ನದೇ ದೇಶದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಾರದಷ್ಟು ಗಂಭೀರ ನಿರ್ಬಂಧಗಳಿಗೆ ಒಳಗಾಗಿದೆ.

ಜಾಗತಿಕ ಬಂಡವಾಳಶಾಹಿಯಲ್ಲಿ ಉದ್ಭವಿಸಿರುವ ಮೂಲ ಸ್ವರೂಪದ ಈ ವಿರೋಧಾಭಾಸದ ಬಗ್ಗೆ ಗಮನ ಹರಿಸುವುದು ಇಂದಿನ ಅವಶ್ಯಕತೆಯಾಗುತ್ತದೆ. ಸ್ವಭಾವತಃ ಬಂಡವಾಳಶಾಹಿಯು ಬೃಹತ್ ಸಂಖ್ಯೆಯ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವ ಒಂದು ದೋಷಪೂರಿತ ವ್ಯವಸ್ಥೆಯಾಗಿದ್ದರೂ ಸಹ, ಪ್ರಭುತ್ವದ ಮಧ್ಯಸ್ತಿಕೆಯ ಮೂಲಕ ಈ ದೋಷವನ್ನು ಸರಿಪಡಿಸಬಹುದು ಎಂಬುದಾಗಿ ಇಪ್ಪತ್ತನೇ ಶತಮಾನದ ಅತ್ಯಂತ ಪ್ರಮುಖ ಬೂರ್ಜ್ವಾ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಕೊಟ್ಟಿದ್ದ ಮುನ್ಸೂಚನೆಯನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಈಗಾಗಲೇ ನಿರರ್ಥಕಗೊಳಿಸಿದೆ. ಒಟ್ಟು ಬೇಡಿಕೆಯ ಕೊರತೆಯನ್ನು ನೀಗಿಸುವ ಸಲುವಾಗಿ ರಾಷ್ಟ್ರ-ಪ್ರಭುತ್ವಗಳು ಮಧ್ಯಪ್ರವೇಶ ಮಾಡದಂತೆ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅವುಗಳನ್ನು ಸಾಕಷ್ಟು ದುರ್ಬಲಗೊಳಿಸಿದೆ. ಆದರೆ, ಅಮೆರಿಕದ ಪ್ರಭುತ್ವ ಮಾತ್ರ ಈ ಮಧ್ಯಪ್ರವೇಶಿಸುವ ಸಾಮರ್ಥ್ಯವನ್ನು ಇನ್ನೂ ಹೊಂದಿದೆ. ಅಥವಾ ಉಳಿಸಿಕೊಂಡಿದೆ. ಏಕೆಂದರೆ, ಅಮೆರಿಕದ ಕರೆನ್ಸಿಯನ್ನು “ಚಿನ್ನಕ್ಕೆ ಸಮಾನ” ಎಂದು ಜಾಗತೀಕರಣಗೊಂಡ ಹಣಕಾಸು ಬಂಡವಾಳವೂ ಒಪ್ಪಿಕೊಂಡಿದೆ. ಹಾಗಾಗಿ, ಅಮೆರಿಕದ ಪ್ರಭುತ್ವವು ಅರ್ಥವ್ಯವಸ್ಥೆಯಲ್ಲಿ ಮಧ್ಯಪ್ರವೇಶ ಮಾಡಿದರೂ ಸಹ, ಹಣಕಾಸು ಬಂಡವಾಳವು ಅಲ್ಲಿಂದ ಪಲಾಯನಗೈಯುತ್ತಿರಲಿಲ್ಲ. ಆದರೆ, ಇನ್ನು ಮುಂದೆ ಇಂತಹ ಆಟ ನಡೆಯುವುದಿಲ್ಲ ಎಂದು ತೋರುತ್ತದೆ. ಏಕೆ ನಡೆಯುವುದಿಲ್ಲ ಎಂಬುದನ್ನು ನೋಡೋಣ.

ಬೇರೆ ದೇಶಗಳ ಸರ್ಕಾರಗಳು ತಮ್ಮ ಅರ್ಥವ್ಯವಸ್ಥೆಯನ್ನು ಸಮರ್ಪಕವಾಗಿ ಉತ್ತೇಜಿಸಲು ಸಾಧ್ಯವಾಗದಿರುವುದಕ್ಕೆ ಕಾರಣವೆಂದರೆ, ಈ ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯ ಮಿತಿಯನ್ನು ತಮ್ಮ ಜಿಡಿಪಿಯ ಗಾತ್ರದ ಒಂದು ನಿರ್ದಿಷ್ಟ ಅನುಪಾತಕ್ಕೆ ಸೀಮಿತಗೊಳಿಸಿಕೊಳ್ಳುವಂತೆ ಹಣಕಾಸು ಬಂಡವಾಳವು ಹೇರಿದ ಷರತ್ತಿನಿಂದ ಈ ಸರ್ಕಾರಗಳ ವಿತ್ತೀಯ ನೀತಿಗಳು ನಿರ್ಬಂಧಿಸಲ್ಪಟ್ಟಿದ್ದವು. ಮತ್ತೊಂದೆಡೆಯಲ್ಲಿ, ಈ ದೇಶಗಳ ಹಣಕಾಸು ನೀತಿಗಳನ್ನು ಅಮೆರಿಕದ ಹಣಕಾಸು ನೀತಿಯೊಂದಿಗೆ ಹೊಂದಿಸಿಕೊಳ್ಳಬೇಕಾಗಿತ್ತು. ಉದಾಹರಣೆಗೆ, ಈ ದೇಶಗಳ ಬಡ್ಡಿ ದರಗಳು ಅಮೆರಿಕದ ಬಡ್ಡಿದರಕ್ಕಿಂತ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿರಬೇಕಿತ್ತು. ಇಲ್ಲದಿದ್ದರೆ, ಈ ದೇಶಗಳು ಬಂಡವಾಳವು ಹೊರಹರಿಯುವ ಗಂಭೀರ ಸಮಸ್ಯೆಯನ್ನು ಎದುರಿಸಬೇಕಿತ್ತು. ಮುಂದುವರಿದ ಬಂಡವಾಳಶಾಹಿ ದೇಶಗಳೂ ಸೇರಿದಂತೆ ಈ ದೇಶಗಳ ಕೈಗಳನ್ನು ಕಟ್ಟಿಹಾಕಲಾಗಿತ್ತು. ಅಮೆರಿಕ ಮಾತ್ರ ಈ ಬಗ್ಗೆ ಸ್ವಾಯತ್ತತೆ ಹೊಂದಿತ್ತು. ಬೇರೆ ದೇಶಗಳಿಗಿಂತ ಹೆಚ್ಚಿನ ವಿತ್ತೀಯ ಕೊರತೆಯನ್ನು ಅಮೆರಿಕ ಹೊಂದಿದ್ದರೂ ಸಹ ಮತ್ತು ಅಮೆರಿಕದ ಬಡ್ಡಿ ದರಗಳು ಶೂನ್ಯ ಮಟ್ಟದಲ್ಲಿದ್ದರೂ ಸಹ, ಬಂಡವಾಳವು ಹೊರ ಹರಿಯುವ ಪ್ರಚೋದನೆಗೆ ಒಳಗಾಗುತ್ತಿರಲಿಲ್ಲ. ಈ ಒಂದು ಎಣಿಕೆಯ ಮೇಲೆ ಬಿಡೆನ್ ಆಡಳಿತವು ತಯಾರಿಸಿದ ಪಾಯಸದಲ್ಲಿ ನೊಣವಿತ್ತು. ಅದು ಈಗ ಕಾಣಿಸಿಕೊಂಡಿದೆ.

ಬಡ್ಡಿ ದರಗಳು ಕೆಳ ಮಟ್ಟದಲ್ಲಿದ್ದಾಗ ಸಾಲದ ಮೇಲಿನ ಭಾರ ತಗ್ಗುವ ಕಾರಣದಿಂದ ಖಾಸಗಿ ಹೂಡಿಕೆಗೆ ಉತ್ತೇಜನ ದೊರೆಯುತ್ತದೆ ಎಂಬದನ್ನು ಅರ್ಥಶಾಸ್ತ್ರದ ಪಠ್ಯಪುಸ್ತಕಗಳು ತಿಳಿಸುತ್ತವೆ. ಇದು ನಿಜವೇ. ಆದರೆ, ಅತಿ ಕೆಳಮಟ್ಟದ ಬಡ್ಡಿ ದರಗಳು ಇನ್ನೂ ಒಂದು ಮಾರ್ಗದ ಮೂಲಕ ಆಸ್ತಿ ಬೆಲೆ ಗುಳ್ಳೆಗಳನ್ನು ಉತ್ತೇಜಿಸುವ ಒಂದು ವಿದ್ಯಮಾನವೂ ಇತ್ತೀಚೆಗೆ ನಡೆದಿದೆ. ಈ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ “ಡಾಟ್-ಕಾಮ್ ಗುಳ್ಳೆ” ಒಡೆದಾಗ, ಫೆಡರಲ್ ರಿಸರ್ವ್ ಬೋರ್ಡ್ನ ಅಂದಿನ ಅಧ್ಯಕ್ಷ ಅಲನ್ ಗ್ರೀನ್ ಸ್ಪಾನ್ ಅವರು ಬಡ್ಡಿ ದರಗಳನ್ನು ಇಳಿಸಿದರು. ಬಡ್ಡಿ ದರಗಳನ್ನು ಇಳಿಸಿದ ಈ ಕ್ರಮವು ಅಲ್ಲಿ ವಸತಿ ಗುಳ್ಳೆ ಎಂಬ ಹೊಸ ಗುಳ್ಳೆಯನ್ನು ಎಬ್ಬಿಸಿತು. ಈ ವಸತಿ ಗುಳ್ಳೆಯು, ಅನೇಕ ವ್ಯಕ್ತಿಗಳ ಸಂಪತ್ತನ್ನು ಕೃತಕವಾಗಿ ಹೆಚ್ಚಿಸುವ ಮೂಲಕ, ಅವರ ಬಳಕೆ ವೆಚ್ಚಗಳನ್ನು ಹೆಚ್ಚಿಸಿತು ಮತ್ತು ಅದರ ಜೊತೆಯಲ್ಲಿ ವಸತಿ ಮತ್ತು ಇತರ ಯೋಜನೆಗಳಲ್ಲಿ ಹೆಚ್ಚು ಹೂಡಿಕೆಯನ್ನು ಪ್ರೋತ್ಸಾಹಿಸಿ ಅಮೆರಿಕದ ಅರ್ಥವ್ಯವಸ್ಥೆಯನ್ನು ಒಂದು ಹೊಸ ಭರಾಟೆಯತ್ತ ಕೊಂಡೊಯ್ಯಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಫೆಡರಲ್ ರಿಸರ್ವ್ ಬೋರ್ಡ್  ಕೆಳ ಮಟ್ಟದ ಬಡ್ಡಿ ದರ ನೀತಿಯು, ಸಾಲದ ಮೇಲಿನ ಬಡ್ಡಿಯನ್ನು ತಗ್ಗಿಸುವ ನೇರ ಪರಿಣಾಮದ ಮೂಲಕ ಮಾತ್ರವಲ್ಲದೆ, ಗಮನಾರ್ಹವಾಗಿ, ಆಸ್ತಿಯ ಬೆಲೆಯನ್ನು ಅದರ “ನಿಜವಾದ ಮೌಲ್ಯ”ಕ್ಕಿಂತ ಅನೇಕ ಪಟ್ಟು ಹೆಚ್ಚಿಸುವ (ಅಂದರೆ, ಆಸ್ತಿಯ ಜೀವಿತಾವಧಿಯ ಗಳಿಕೆಯನ್ನು ರಿಯಾಯ್ತಿಯೊಂದಿಗೆ ಕೊಡುವ ಮುಂಗಡವನ್ನು) ಒಂದು ಸಟ್ಟಾಕೋರ ಆಸ್ತಿ-ಬೆಲೆ ಗುಳ್ಳೆಯನ್ನು ಉತ್ತೇಜಿಸುವ ಮೂಲಕವೂ ಕಾರ್ಯನಿರ್ವಹಿಸಿತು. ಈ ವಿದ್ಯಮಾನವು ಸಾಗುತ್ತಾ ಹೊಗುತ್ತದೆ, ಏಕೆಂದರೆ, ಈ ರೀತಿಯ ಆಸ್ತಿ ಬೆಲೆಗಳು ಅಂತಿಮವಾಗಿ ಕುಸಿಯುತ್ತವೆ ಎಂದು ಎಲ್ಲರೂ ಭಾವಿಸುತ್ತಿರುವಾಗ, ಆಸ್ತಿಯನ್ನು ಹೊಂದಿರುವವರು ಮಾತ್ರ ಬೆಲೆಗಳು ಇನ್ನೂ ಕೆಲ ದಿನಗಳ ಮಟ್ಟಿಗಾದರೂ ಹೆಚ್ಚುತ್ತಾ ಹೋಗುತ್ತವೆ ಎಂದು ನಂಬುತ್ತಾರೆ. ಈ ಏರಿಕೆಯ ಅವಧಿ ಕೊನೆಗೊಳ್ಳುವುದರೊಳಗೆ ಅವರು ತಮ್ಮ ಆಸ್ತಿಗಳನ್ನು(ಷೇರುಗಳನ್ನು) ಮಾರಾಟ ಮಾಡಿ ಲಾಭವನ್ನು ಜೇಬಿಗಿಳಿಸುತ್ತಾರೆ. ಬಡ್ಡಿ ದರಗಳನ್ನು ಕೆಳ ಮಟ್ಟದಲ್ಲಿ ಇರಿಸುವ ಮೂಲಕ ಇಂತಹ ಸಟ್ಟಾಕೋರ ಬೇಡಿಕೆಗಳು ನಿರಂತರವಾಗಿ ಉಳಿಯುವಂತೆ ನೋಡಿಕೊಳ್ಳಲಾಗುತ್ತದೆ.

ಆದರೆ, ಕೆಳ ಮಟ್ಟದ ಬಡ್ಡಿ ದರಗಳು ಆಸ್ತಿ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ಸರಕು ಮಾರುಕಟ್ಟೆಗಳಲ್ಲಿಯೂ ಸಹ ಸಟ್ಟಾಕೋರತನವನ್ನು ಪ್ರೋತ್ಸಾಹಿಸಬಹುದು. ಈ ತೆರನಾದ ವಿದ್ಯಮಾನಗಳು ಅಮೆರಿಕದಲ್ಲಿ ನಿಜಕ್ಕೂ ನಡೆಯುತ್ತಿವೆ. ಏಕೆಂದರೆ, ವಸತಿ ಗುಳ್ಳೆ ಕುಸಿತದ ನಂತರ ಸಟ್ಟಾ ಕೋರರು ವಿಶೇಷವಾಗಿ ಆಸ್ತಿ-ಮಾರುಕಟ್ಟೆಗಳ ಬಗ್ಗೆ ಹುಷಾರಾಗಿದ್ದಾರೆ. ಹಾಗಾಗಿ, ಒಂದಲ್ಲ ಒಂದು ಕಾರಣದಿಂದಾಗಿ ತಾತ್ಕಾಲಿಕ ಕೊರತೆ ಉಂಟಾಗಬಹುದಾದ ಅಥವಾ ಪೂರೈಕೆಯಲ್ಲಿ ತಾತ್ಕಾಲಿಕ ಅಡಚಣೆಗಳಿರುವ ಮತ್ತು ಬೆಲೆಗಳು ಶೀಘ್ರದಲ್ಲೇ ಏರುವ ಸಾಧ್ಯತೆಯಿರುವ ಸರಕುಗಳ ಮೇಲೆ ಹೂಡಿಕೆ ಮಾಡಲಾರಂಭಿಸಿದ್ದಾರೆ. ಮಾತ್ರವಲ್ಲ, ಬೇಡಿಕೆ ಸ್ಥಿತಿ-ಸ್ಥಾಪಕತ್ವವಿಲ್ಲದ(ಅಂದರೆ, ಬೆಲೆಗಳು ಹೆಚ್ಚಿದ ಕಾರಣದಿಂದ ಬೇಡಿಕೆ ಹೆಚ್ಚು ಕುಸಿಯದ) ಸರಕುಗಳ ಮೇಲೆಯೂ ಹೂಡಿಕೆ ಮಾಡುತ್ತಾರೆ. ಒಂದು ವೇಳೆ ಪೂರೈಕೆಯ ಅಡಚಣೆಗಳಿಲ್ಲದಿದ್ದರೂ, ಕೃತಕ ಕೊರತೆಯನ್ನು ಸೃಷ್ಟಿಸಿ ಲಾಭ ಮಾಡಿಕೊಳ್ಳಬಹುದು. ಮುಖ್ಯವಾದ ಅಂಶವೆAದರೆ, ಸಾಲಗಳು ಸುಲಭವಾಗಿ ಲಭ್ಯವಿದ್ದಾಗ ಬೇಡಿಕೆಯು ಸ್ಥಿತಿಸ್ಥಾಪಕತ್ವ ರಹಿತವಾಗುತ್ತದೆ. ಆಗ ಜನರು ತಮ್ಮ ಬೇಡಿಕೆಯ ವಸ್ತುಗಳನ್ನು ಪಡೆಯಲು ಸಾಲದ ಮೊರೆ ಹೋಗುತ್ತಾರೆ.

ಈ ರೀತಿಯಲ್ಲಿ ಬೆಲೆಗಳು ಏರಿದ ನಂತರ, ಈ ಬೆಲೆ ಏರಿಕೆಯಿಂದಾಗಿ ಉಂಟಾದ ನಷ್ಟವನ್ನು ಸರಿದೂಗಿಸಲು ಕಾರ್ಮಿಕರು ವೇತನ ಹೆಚ್ಚಳದ ಬೇಡಿಕೆಯನ್ನು ಮಂಡಿಸುತ್ತಾರೆ. ಕಾರ್ಮಿಕರ ವೇತನದ ಹೆಚ್ಚಳವನ್ನು ಬೆಲೆ ಏರಿಕೆ ಅನುಸರಿಸುತ್ತದೆ. ಹೀಗೆ, ಒಂದು ಸಂಪೂರ್ಣ ಬೆಲೆ-ವೇತನ ಸುರುಳಿ ಪ್ರಾರಂಭವಾಗಬಹುದು. ಈಗ ಅಮೆರಿಕದಲ್ಲಿ ಇದು ಘಟಿಸುತ್ತಿದೆ. ಇಂತಹ ಒಂದು ಹಣದುಬ್ಬರದ ಸುರುಳಿ ಪ್ರಾರಂಭವಾದ ನಂತರ, ಅರ್ಥವ್ಯವಸ್ಥೆಗೆ ಒದಗಿಸುವ ಉತ್ತೇಜನವನ್ನು, ಗತ್ಯಂತರವಿಲ್ಲದೆ, ನಿಲ್ಲಿಸಲೇ ಬೇಕಾಗುತ್ತದೆ.

ಬೆಲೆಗಳನ್ನು ಕೃತಕವಾಗಿ ಏರಿಸಲೇಬೇಕು ಎಂದಾದರೆ, ಅದಕ್ಕಾಗಿಯೇ ಹೇಳಿ ಮಾಡಿಸಿದಂತಹ ಯಾವುದಾದರೂ ಒಂದು ವಸ್ತು ಇದೆ ಎಂದಾದರೆ ಅದು ಪೆಟ್ರೋಲ್ ಮಾತ್ರ. ನವೆಂಬರ್ 2021 ರಲ್ಲಿ ಅಮೆರಿಕದಲ್ಲಿ ಪೆಟ್ರೋಲ್ ಬೆಲೆಗಳು ನವೆಂಬರ್ 2020ರ ಪೆಟ್ರೋಲ್ ಬೆಲೆಗಳಿಗೆ ಹೋಲಿಸಿದರೆ ಶೇಕಡಾ 58ರಷ್ಟು ಹೆಚ್ಚಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. 1980ರ ನಂತರ ಯಾವುದೇ ಒಂದು ತಿಂಗಳಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಬೆಲೆಗಳು ಏರಿಕೆಯಾದದ್ದಿಲ್ಲ. 1980ರಲ್ಲಿ ಒಪೆಕ್ ದೇಶಗಳು ಕಚ್ಚಾ ತೈಲದ ಬೆಲೆಗಳನ್ನು ಕಾರಣಾಂತರಗಳಿಂದ ತೀವ್ರವಾಗಿ ಏರಿಸಿದ ಎರಡನೇ ತೈಲ ಆಘಾತದ ಸಂದರ್ಭದಲ್ಲಿ ಪೆಟ್ರೋಲ್ ಬೆಲೆಗಳು ತೀಕ್ಷ್ಣವಾಗಿ ಏರಿದ್ದವು. ಹೇಳಿಕೊಳ್ಳಲಿಕ್ಕಾದರೂ ಅಂತಹ ಯಾವ ಕಾರಣವೂ ಇಲ್ಲದಿದ್ದರೂ ಈಗ ಅಮೆರಿಕದಲ್ಲಿ ಪೆಟ್ರೋಲ್ ಬೆಲೆಗಳು ಶೇಕಡಾ 58ರಷ್ಟು ಏರಿವೆ. ವಾಸ್ತವವಾಗಿ, ಅಮೆರಿಕದ ಆಡಳಿತವು ತೈಲ ಬೆಲೆಗಳನ್ನು ಇಳಿಸುವ ಉದ್ದೇಶದಿಂದ ತಾನು ಹೊಂದಿರುವ ತೈಲ ದಾಸ್ತಾನನ್ನು ಬಳಕೆ ಮಾಡಿಕೊಳ್ಳುವ ಸನ್ನಾಹದಲ್ಲಿದೆ.

ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ನೀತಿಗಳನ್ನು ರೂಪಿಸುವ ಸಮಯದಲ್ಲಿ ಸರಕುಗಳ ಸಟ್ಟಾ ಬಾಜಿತನವು, ಸಾಮಾನ್ಯವಾಗಿ, ಒಂದು ಅಂಶವಾಗಿ ಪರಿಗಣಿತವಾಗಿಲ್ಲ. ಕೆಳಮಟ್ಟದ ಬಡ್ಡಿ ದರಗಳು ಆಸ್ತಿ ಬೆಲೆ ಗುಳ್ಳೆಗಳನ್ನು ಉತ್ತೇಜಿಸುವ ಮೂಲಕ ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸುತ್ತವೆ ಮತ್ತು ಬಹುಶಃ ಸಾಲದ ಮೇಲಿನ ಬಡ್ಡಿಯನ್ನು ಇಳಿಸುವುದರಿಂದ ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂಬುದನ್ನು ಯಥಾಕ್ರಮದಲ್ಲಿ ಆಗತಕ್ಕ ಒಂದು ಕ್ರಿಯೆ ಎಂದು ತಿಳಿಯಲಾಗಿದೆ. ಆದರೆ, ಕೆಳಮಟ್ಟದ ಬಡ್ಡಿ ದರಗಳು ಸರಕುಗಳ ಸಟ್ಟಾ ಬಾಜಿತನವನ್ನೂ ಪ್ರೋತ್ಸಾಹಿಸಬಹುದು ಮತ್ತು ಅದರ ಪರಿಣಾಮವಾಗಿ ಉಂಟಾಗುವ ಬೆಲೆ ಏರಿಕೆಯು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಬದಲು ಅದರ ಇಳಿಕೆಗೂ ಕಾರಣವಾಗಬಹುದು ಎಂಬ ಅಂಶವನ್ನು ಇನ್ನೂ ಗುರುತಿಸಿಲ್ಲ. ಕೆಳ-ಬಡ್ಡಿ ದರ ನೀತಿಯ ಪರಿಣಾಮವಾಗಿ ಒಟ್ಟಾರೆ ಬೇಡಿಕೆಯು ಇಳಿಯುವ ಅಂಶವಂತೂ ಈಗ ನಿಚ್ಚಳವಾಗಿದೆ. ಆದಾಗ್ಯೂ, ಒಟ್ಟು ಬೇಡಿಕೆಯ ಮಟ್ಟವನ್ನು ಹೆಚ್ಚಿಸಲು ಮಧ್ಯಪ್ರವೇಶಿಸುವ ಪ್ರಭುತ್ವದ ಪ್ರಯತ್ನವು ಹೆಚ್ಚು ಕಷ್ಟಕರವಾಗಿ ಪರಿಣಮಿಸಿದೆ.

ಬೇಡಿಕೆಯನ್ನು ಉತ್ತೇಜಿಸುವ ಸಲುವಾಗಿ ವಿತ್ತೀಯ ಕ್ರಮಗಳ ಮೂಲಕ ಸರ್ಕಾರದ ಮಧ್ಯಪ್ರವೇಶವನ್ನು ಅಂತರರಾಷ್ಟ್ರೀಯ ಹಣಕಾಸು ಬಂಡವಾಳವು ಆಕ್ಷೇಪಿಸುತ್ತದೆ. ಆದರೆ, ಹಣಕಾಸು ನೀತಿಯ ಮೂಲಕ ಮಧ್ಯಪ್ರವೇಶ ಮಾಡುವುದನ್ನು ಅದು ಆಕ್ಷೇಪಿಸುವುದಿಲ್ಲ. ಏಕೆಂದರೆ, ಹಣಕಾಸು ನೀತಿಯು ಬಂಡವಾಳಶಾಹಿಗಳ ಮೂಲಕವೇ ಜಾರಿಯಾಗುತ್ತದೆ. ಹಾಗಾಗಿ, ಬಂಡವಾಳಶಾಹಿಗಳು ಪ್ರಸನ್ನರಾಗುತ್ತಾರೆ. ಆದರೆ, ಪೂರೈಕೆ-ಬದಿಯ ಯಾವುದೇ ಪ್ರಮುಖ ಅಡಚಣೆ ಕಾಣಿಸಿಕೊಳ್ಳುವ ಮೊದಲೇ ಹಣದುಬ್ಬರವು ಉದ್ಭವವಾಗುವ ಕಾರಣದಿಂದ ಅಮೆರಿಕದಂತಹ ದೇಶದಲ್ಲೂ ಹಣಕಾಸು ನೀತಿಯು ನಿಷ್ಫಲವಾದರೆ, ಆಗ, ಸಾಮೂಹಿಕ ನಿರುದ್ಯೋಗವನ್ನು ನಿವಾರಿಸಲು ಮತ್ತು ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ವ್ಯವಸ್ಥೆಯಲ್ಲಿ ಯಾವ ಸಾಧನವೂ ಉಳಿಯುವುದಿಲ್ಲ.

ಹಣಕಾಸು ನೀತಿಯನ್ನು ಒಂದು ಕೆಟ್ಟ ಪರಿಸ್ಥಿತಿಯಲ್ಲೂ ಉಪಯೋಗಿಸಬಹುದಾದ ಮತ್ತು ಕನಿಷ್ಟ ಪಕ್ಷ ಒಂದು ಮೊಂಡು ಸಾಧನವೆಂದು ಇಲ್ಲಿಯವರೆಗೂ ಪರಿಗಣಿಸಲಾಗಿತ್ತು. ಹತ್ತಿರ ಹತ್ತಿರ ಶೂನ್ಯ ಮಟ್ಟದ ಬಡ್ಡಿ ದರವಿದ್ದರೂ ಸಹ ಹೂಡಿಕೆಯ ಚೇತರಗೊಳ್ಳದಿರುವಾಗ, ಬಡ್ಡಿ ದರವನ್ನು ಋಣಾತ್ಮಕ ವಲಯಕ್ಕೆ ತಳ್ಳಬೇಕು ಎಂದು ಅನೇಕರು ವಾದಿಸಿದ್ದರು. ಋಣಾತ್ಮಕ ಬಡ್ಡಿ ದರಗಳ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಕಷ್ಟದ ಕೆಲಸವೇ. ಏಕೆಂದರೆ, ಹೂಡಿಕೆದಾರರಿಗೆ ಋಣಾತ್ಮಕ ಬಡ್ಡಿ ದರಗಳನ್ನು ವಿಧಿಸುವ ಯಾವುದೇ ಹಣಕಾಸು ವ್ಯವಸ್ಥೆಯು ಠೇವಣಿದಾರರಿಗೆ ಧನಾತ್ಮಕ ಬಡ್ಡಿ ದರಗಳನ್ನು ಪಾವತಿಸುವುದು ಸಾಧ್ಯವಿಲ್ಲ. ಠೇವಣಿದಾರರಿಗೆ ಕೊಡುವ ಬಡ್ಡಿ ದರಗಳೂ ಸಹ ಋಣಾತ್ಮಕವಾಗಿಯೇ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಹಣವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಬದಲು ಹಣಕಾಸು ಸಂಸ್ಥೆಯಲ್ಲಿ ಠೇವಣಿ ಮಾಡಲು ಯಾವ ಕಾರಣವೂ ಇಲ್ಲ.

ಶೂನ್ಯ ಮಟ್ಟದ ಹತ್ತಿರದಲ್ಲಿರುವ ಬಡ್ಡಿ ದರವು ಹೂಡಿಕೆಯನ್ನು ಚೇತರಗೊಳಿಸದಿರುವುದರ ಹೊರತಾಗಿಯೂ, ಅದು(ಈ ಶೂನ್ಯ ಮಟ್ಟದ ಬಡ್ಡಿ ದರವು) ಸರಕು ಸಟ್ಟಾಕೋರತನದ ಮೂಲಕ ಹಣದುಬ್ಬರಕ್ಕೂ ಕಾರಣವಾಗುವ ಪರಿಣಾಮವನ್ನೂ ಸಹ ಹೊಂದಿದೆ. ಹಾಗಾಗಿ, ಒಟ್ಟು ಬೇಡಿಕೆಯನ್ನು ಉತ್ತೇಜಿಸುವ ಯಾವ ಸಾಧನವೂ ಇಲ್ಲದ ಪ್ರಮುಖ ಬಂಡವಾಳಶಾಹಿ ದೇಶವು, ಬಂಡವಾಳಶಾಹಿ ವ್ಯವಸ್ಥೆಯನ್ನು ಪ್ರಧಾನವಾಗಿ ಜಾಗತಿಕ ಹಣಕಾಸು ಬಂಡವಾಳದ ಆಧಿಪತ್ಯಕ್ಕೆ ಬಿಟ್ಟುಕೊಡುತ್ತದೆ.

ನಿರುದ್ಯೋಗವು ನಿರಂತರವಾಗಿ ಮುಂದುವರೆಯುತ್ತಿರುವುದರಿಂದಾಗಿ ವಿಶ್ವದ ಎಲ್ಲೆಡೆಯೂ ನಿಜ ವೇತನಗಳು ಬಹುತೇಕ ಸ್ಥಗಿತವಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ಕಾರ್ಮಿಕ ಉತ್ಪಾದಕತೆಯು ವಿಶ್ವ ಉತ್ಪಾದನೆಯಲ್ಲಿ ಆರ್ಥಿಕ ಹೆಚ್ಚುವರಿಯ ಪಾಲನ್ನು ವೃದ್ಧಿಸಿದೆ ಮತ್ತು ಈ ಮೂಲಕ ಅತಿಯಾದ ಉತ್ಪಾದನೆಯು ಜಾಗತಿಕ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಆಳವಾದ ಬಿಕ್ಕಟ್ಟಿಗೆ ತಳ್ಳುತ್ತದೆ. ಅದೇ ಸಮಯದಲ್ಲಿ, ಒಟ್ಟು ಬೇಡಿಕೆಯ ಮಟ್ಟವನ್ನು ಹೆಚ್ಚಿಸಲು ಯಾವ ಸಾಧನವೂ ಲಭ್ಯವಿಲ್ಲದಿದ್ದರೆ, ಅಂದರೆ, ಅತಿಯಾದ ಉತ್ಪಾದನೆಯ ಬಿಕ್ಕಟ್ಟನ್ನು ಎದುರಿಸಲು, ವಿಶ್ವ ಬಂಡವಾಳಶಾಹಿಯು ನಿರಂತರ ಸಾಮೂಹಿಕ ನಿರುದ್ಯೋಗದ ಸ್ಥಿತಿಗೆ ತಲುಪುತ್ತದೆ. ಈ ಪರಿಸ್ಥಿತಿಯು ರಾಜಕೀಯ ಸ್ಥಿರತೆಯನ್ನು ದುರ್ಬಲಗೊಳಿಸುತ್ತದೆ. ಭಾರತದಂತಹ ದೇಶಗಳಿಗೆ ಅಂತಹ ಪರಿಸ್ಥಿತಿಯ ಪರಿಣಾಮಗಳು ಅಪಾರವೂ ಮತ್ತು ಗಹನವೂ ಆಗುತ್ತವೆ.

ಅನು:ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *