ರಾಯಲ್‌ ವರ್ಸ್‌ಸ್‌ ಸಾಹುಕಾರ ನಡುವೆ ಗೆಲ್ಲೋರು ಯಾರು?

ಗುರುರಾಜ ದೇಸಾಯಿ 

ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಹಾಲಪ್ಪ ಆಚಾರ್‌ ಎಂಎಲ್‍ಸಿಯಾಗಿ, ನಂತರ 2018ರ ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಬಿಜೆಪಿಯ ಈಶಣ್ಣ ಗುಳಗಣ್ಣವರನ್ನು ರಾಯರಡ್ಡಿ ಸೋಲಿಸಿದರು. ಆದರೆ ನಂತರ 2008ರ ಚುನಾವಣೆಯಲ್ಲಿ ಕ್ಷೇತ್ರದ ಜನರು ಈಶಣ್ಣ ಗುಳಗಣ್ಣವರ ಅವರಿಗೆ ಅನುಕಂಪ ತೋರಿಸುವ ಮೂಲಕ ಗೆಲ್ಲಿಸಿದರು. ಈ ಮೂಲಕ ರಾಯರಡ್ಡಿಗೆ ಸೋಲಿನ ರುಚಿ ತೋರಿಸಿದರು. ಮತ್ತೆ 2013ರಲ್ಲಿ ಹಾಲಪ್ಪ ಮತ್ತು ಬಸವರಾಜ ರಾಯರಡ್ಡಿ ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರು. ಈ ಚುನಾವಣೆಯಲ್ಲಿ ರಾಯರಡ್ಡಿ ಗೆದ್ದು ಬೀಗಿ 2018ರ ಚುನಾವಣೆಯಲ್ಲಿ ಸೋಲನ್ನುಂಡರು. ಹೀಗಾಗಿ ಯಲಬುರ್ಗಾ ರಾಜಕಾರಣದಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಹಾಲಪ್ಪ ಆಚಾರ್ ಹಾಗೂ ಬಸವರಾಜ ರಾಯರೆಡ್ಡಿ ನಡುವೆ ಹಣಾಹಣಿ ಇದೆ.

 

ರಾಜ್ಯದಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕಾರಣ ನಿಂತಿರುವುದು ನೀರಾವರಿ ವಿಷಯದ ಮೇಲೆ. ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಮಳೆಯಾಧಾರಿತ ಕೃಷಿ ಭೂಮಿ ಅತಿಹೆಚ್ಚಾಗಿರುವ ಕಾರಣ ನೀರಾವರಿ ವಿಚಾರದಲ್ಲಿ ಚುನಾವಣೆ ನಡೆಯುತ್ತಾ ಬಂದಿದೆ. ಈ ಮೊದಲು ಕಾಂಗ್ರೆಸ್‌ ಹಿಡಿತದಲ್ಲಿದ್ದ ಕ್ಷೇತ್ರ 1985 ರಿಂದ 1999 ರ ವರೆಗೆ ಜನತಾ ದಳದ ಹಿಡಿತದಲ್ಲಿತ್ತು ನಂತರದಿಂದ ಒಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ ಬಿಜೆಪಿ ಎಂಬಂತೆ ಇಲ್ಲಿನ ಮತದಾರರು ತೀರ್ಪನ್ನು ನೀಡುತ್ತಿದ್ದಾರೆ.

ವಿಧಾನಸಭಾ ಚುನಾವಣಾ ಬಂದಾಗ ಯಲಬುರ್ಗಾ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಪಕ್ಷದವರಿಗೆ ನೀರಾವರಿ ಯೋಜನೆಯೇ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತಿದೆ. ಇದು ರಾಜಕೀಯ ಜಟಾಪಟಿಗೂ ಕಾರಣವಾಗುತ್ತದೆ. ಕಳೆದ 15 ವರ್ಷಗಳಿಂದ ನೀರಾವರಿ ವಿಷಯವೇ ಬಹುಚರ್ಚಿತ ವಿಷಯವಾಗಿದೆ. ಪರ ವಿರೋಧ, ಟೀಕೆ ಟಿಪ್ಪಣೆಗಳ ಭರಾಟೆ ಜೋರಾಗಿಯೇ ಇದೆ. ಆದರೆ ನೀರಾವರಿ ಯೋಜನೆಗಳ ಅನುಷ್ಠಾನ ಮಾತ್ರ ಕ್ಷೇತ್ರದ ಪಾಲಿಗೆ ಗಗನಕುಸುಮವಾದಂತಿದೆ. ರಾಯೆಲ್‌ ಎಂದು ಕರೆಯಿಸಿ ಕೊಳ್ಳುವ ಬಸವರಾಜ ರಾಯರೆಡ್ಡಿ ಹಾಗೂ ಸಾಹುಕಾರ್‌ ಎಂದು ಕರೆಯಿಸಿಕೊಳ್ಳುವ ಹಾಲಪ್‌ ಆಚಾರ್‌ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಕ್ಷೇತ್ರದ ಇತಿಹಾಸ ಹೇಗಿದೆ : ರಾಯಲ್‍ರೆಡ್ಡಿ ಎಂದು ಕರೆಯಿಸಿಕೊಳ್ಳುವ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರು ಸ್ಪರ್ಧಿಸುವ ಕ್ಷೇತ್ರ. 1985 ರಿಂದ ನಡೆದ ಚುನಾವಣೆಗಳಲ್ಲಿ ಒಟ್ಟು ಐದು ಬಾರಿ ಗೆಲುವು ದಾಖಲಿಸಿದ ಕೀರ್ತಿ‍ ಬಸವರಾಜ ರಾಯರಡ್ಡಿ ಅವರದ್ದು. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿ ಒಮ್ಮೆಲೆ ಮೂರು ಖಾತೆಗಳನ್ನು ಪಡೆದುಕೊಂಡ ಖ್ಯಾತಿ ಸಚಿವರಾಗಿರುವ ಬಿಜೆಪಿಯ ಹಾಲಪ್ಪ ಅವರದ್ದು.  ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಸ್ತುತ ಸಚಿವರಾಗಿರುವ ಹಾಲಪ್ಪ ಆಚಾರ್ ಈ ಇಬ್ಬರು ಸಹ ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

2013ರಲ್ಲಿ ‘ಕಾಂಗ್ರೆಸ್ ನಡೆಗೆ ಕೃಷ್ಣೆಯ ಕಡೆಗೆ’ ಎಂದು ಪಾದಯಾತ್ರೆ ಮಾಡಿದ್ದ ಮಾಜಿ ಸಚಿವ ಬಸವರಾಜ ರಾಯರಡ್ಡಿ  ಆಗಿನ ಚುನಾವಣೆಯಲ್ಲಿ ಆಯ್ಕೆಯಾದರು. ಆದರೆ ಆಲಮಟ್ಟಿಯಿಂದ ಕೃಷ್ಣೆಯಲಬುರ್ಗಾ ಕ್ಷೇತ್ರಕ್ಕೆ ಹರಿಯಲೇ ಇಲ್ಲ.  2018ರ ಚುನಾವಣೆಯಲ್ಲಿಯೂ ನೀರಾವರಿಗಾಗಿ ಬಿಜೆಪಿ ಬೆಂಬಲಿಸಿ ಎಂದು ಹಾಲಪ್ಪ ಅಬ್ಬರದ ಪ್ರಚಾರ ನಡೆಸಿದರು. ಮೂಗಿಗೆ ತುಪ್ಪ ಸವರಿದ್ದ ರಾಯರೆಡ್ಡಿಯ ವರ್ತನೆಗೆ ಬೇಸತ್ತಿದ್ದ ಜನ ವಿಶ್ವಾಸ ತೋರಿ ಹಾಲಪ್ಪ ಆಚಾರ್‌ ಅವರನ್ನು ಶಾಸಕರನ್ನಾಗಿ ಮಾಡಿದರು. ಸಚಿವರೂ ಆದರು ಆದರೆ ನೀರಾವರಿ ಯೋಜನೆ ಮಾತ್ರ ಜಾರಿಯಾಗಲೇ ಇಲ್ಲ.  ಕೃಷ್ಣಾ ನೀರಾವರಿ ಯೋಜನೆ ಜಾರಿಯಲ್ಲಿ ಕಾನೂನಿನ ತೊಡಕು ಇರುವ ಬಗ್ಗೆ ಗೊತ್ತಿದ್ದರೂ ಬಸವರಾಜ ರಾಯರೆಡ್ಡಿ ಮತ್ತು ಹಾಲಪ್ಪ ಆಚಾರ್‌ ನೀರಾವರಿ ರಾಜಕಾರಣ ಮಾಡುತ್ತಿರುವುದು ಮುಗ್ದ ಮತದಾರರ ಬದುಕಿನ ಜೊತೆ ಚಲ್ಲಾಟವಾಡಿದಂತಿದೆ ಎಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

“ ನಾನು ಶಾಸಕ ಏನು ಮಾಡೋದು ಎಂದು ನನ್ನ ಕೈಯಲ್ಲಿ ಇಷ್ಟೆ ಅಧಿಕಾರ ಇರೋದು ಎಂದು ಮೂರುವರೆ ವರ್ಷ ನಯಾಪೈಸೆ ಕೆಲಸ ಮಾಡದೆ ಹಾಲಪ್ಪ ಆಚಾರ್‌ ಕ್ಷೇತ್ರವನ್ನು ಮತ್ತಷ್ಟು ಹಿಂದಕ್ಕೆ ತಳ್ಳಿದರು. ಸಚಿವರಾದ ನಂತರವಾದರೂ ಬದಲಾಗಬಹುದು ಎಂದು ಜನ ನಂಬಿದ್ದರು. ಆದರೆ ನೆನಪಿನಲ್ಲಿಡಬಹುದಾದ ಕೆಲಸಗಳು ಕಾಣಲೇ ಇಲ್ಲ. ಮದುವೆ,ಜಾತ್ರೆ, ನಾಟಕ ಇತ್ಯಾದಿ, ಇತ್ಯಾದಿ ಕಾರ್ಯಕ್ರಮಗಳಲ್ಲಿ ಕಂಡಿದ್ದೆ ಹೆಚ್ಚು.  ರಸ್ತೆ, ಕೆರೆ ಹೂಳೆತ್ತುವ ಕೆಲಸ ಒಂದಿಷ್ಟು ಕಡೆಗಳಲ್ಲಿ ಆಗಿದೆ. ಅದೂ ಬಿಜೆಪಿಗೆ ಮತ ಬೀಳಬಹುದಾದ ಪ್ರದೇಶದಲ್ಲಿ. ಹಿಂಬಾಲಕರ ಆರ್ಭಟ, ದೌರ್ಜನ್ಯ, ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದೆ ಹೆಚ್ಚು ಎಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

5 ವರ್ಷದ ಅವಧಿಯಲ್ಲಿ ಶಾಸಕರು ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನೊಂದು ಅವಧಿಗೆ ಜನ ಅವರನ್ನು ಗೆಲ್ಲಿಸಲಿದ್ದಾರೆ. ನೀರಾವರಿ ವಿಷಯದಲ್ಲಿ ತೃಪ್ತಿಕರವಾಗುವಷ್ಟು ನಮ್ಮ ಶಾಸಕರು ಕೆಲಸ ಮಾಡಿದ್ದಾರೆ. ಹಾಗಾಗಿ ಈ ಬಾರಿ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ಯುವ ಮುಖಂಡ ಶರಣಪ್ಪ ಕುರ್ನಾಳ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರಚಾರ ಮೇಲ್ನೋಟಕ್ಕೆ ಭರ್ಜರಿಯಾಗಿ ಕಂಡು ಬಂದರೂ, ಒಳ ಹೊಡೆತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಬಹಳಷ್ಟು ಬಿಜೆಪಿ ನಾಯಕರು ಒಳಗೊಳಗೆ ಕಾಂಗ್ರೆಸ್‌ ಬೆಂಬಲಿಸುತ್ತಾದ್ದಾರೆ. ಕ್ಷೇತ್ರದ ಮೂರು ಜನ ಮಾಜಿ ಶಾಸಕರ ಪುತ್ರರು ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಸೆಲ್ಫ್ ಸುಸೈಡ್ ಮಾಡಿಕೊಂಡಿರುವ ಕಾಂಗ್ರೆಸ್, 5 ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, 1 ಬಾರಿ ಸಂಸದರಾಗಿರುವ ಬಸವರಾಜ ರಾಯರೆಡ್ಡಿಯನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ರಾಯರೆಡ್ಡಿ ಒಂದಿಷ್ಟು ಕೊಡುಗೆ ನೀಡಿದ್ದಾರೆ. ಹೋಬಳಿ ಮಟ್ಟದಲ್ಲಿ ಆಸ್ಪತ್ರೆಗಳು, ಮೂರಾರ್ಜಿ ವಸತಿ ಶಾಲೆ,‌ ನವೋದಯ, ಪಿಜಿ ಸೆಂಟರ್, ವಸತಿ ನಿಲಯಗಳು ಹೀಗೆ ಒಂದಿಷ್ಟು ನೆನಪಿನಲ್ಲಿಡಬಹುದಾದ ಕೆಲಸಗಳು ರಾಯರೆಡ್ಡಿ ಅವಧಿಯಲ್ಲಿ ಆಗಿವೆ. ಆದರೆ ದುರಹಂಕಾರದ ಮಾತುಗಳು, ಜನಸಮೂಹದಿಂದ ದೂರವೇ ಇರುವ ರಾಯರೆಡ್ಡಿಯವರನ್ನು ಜನ ದೂರ ಸರಿಸುತ್ತಲೇ ಬಂದಿದ್ದಾರೆ.

ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಹಾಲಪ್ಪ ಆಚಾರ್‌ ಎಂಎಲ್‍ಸಿಯಾಗಿ, ನಂತರ 2018ರ ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಬಿಜೆಪಿಯ ಈಶಣ್ಣ ಗುಳಗಣ್ಣವರನ್ನು ರಾಯರಡ್ಡಿ ಸೋಲಿಸಿದರು. ಆದರೆ ನಂತರ 2008ರ ಚುನಾವಣೆಯಲ್ಲಿ ಕ್ಷೇತ್ರದ ಜನರು ಈಶಣ್ಣ ಗುಳಗಣ್ಣವರ ಅವರಿಗೆ ಅನುಕಂಪ ತೋರಿಸುವ ಮೂಲಕ ಗೆಲ್ಲಿಸಿದರು. ಈ ಮೂಲಕ ರಾಯರಡ್ಡಿಗೆ ಸೋಲಿನ ರುಚಿ ತೋರಿಸಿದರು. ಮತ್ತೆ 2013ರಲ್ಲಿ ಹಾಲಪ್ಪ ಮತ್ತು ಬಸವರಾಜ ರಾಯರಡ್ಡಿ ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾದರು. ಈ ಚುನಾವಣೆಯಲ್ಲಿ ರಾಯರಡ್ಡಿ ಗೆದ್ದು ಬೀಗಿ 2018ರ ಚುನಾವಣೆಯಲ್ಲಿ ಸೋಲನ್ನುಂಡರು. ಹೀಗಾಗಿ ಯಲಬುರ್ಗಾ ರಾಜಕಾರಣದಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಹಾಲಪ್ಪ ಆಚಾರ್ ಹಾಗೂ ಬಸವರಾಜ ರಾಯರೆಡ್ಡಿ ನಡುವೆ ಹಣಾಹಣಿ ಇದೆ.

ಈ ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ರಾಯರೆಡ್ಡಿಯವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಲಿದೆ. 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ರಾಯರೆಡ್ಡಿ ಗೆಲುವು ಸಾಧಿಸುತ್ತಾರೆ ಎಂದೆನ್ನುತ್ತಾರೆ ಕಾಂಗ್ರೆಸ್‌ ಯುವ ಮುಖಂಡ ಬಸವರಾಜ ಪೂಜಾರ.

ಬಿಜೆಪಿಯ ಬಿ ಟೀಮ್‌ ಎನ್‌ಸಿಪಿ : ದೂರದ ಬೆಂಗಳೂರಿನಿಂದ ಆಗಮಿಸಿರುವ ಹರಿ. ಆರ್ NCP ಹೆಸರಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದ ಅಸಮಧಾನಗೊಂಡ ಕಾರ್ಯಕರ್ತರ ಪಡೆ ಇವರ ಜೊತೆಗಿದೆ. ಲಿಂಗಾಯತ, ದಲಿತ, ಮುಸ್ಲಿಂ ಮತ ಬುಟ್ಟಿಗೆ ಕೈ ಹಾಕದೆ ಹಿಂದುಳಿದ ವರ್ಗಗಳ ಮತಗಳ ಸುತ್ತ ಸುತ್ತು ಹಾಕುತ್ತಿದ್ದಾರೆ. ಇವರ ಸ್ಪರ್ಧೆ ಬಿಜೆಪಿಗೆ ಲಾಭವಾಗಲಿದೆ ಎಂದು ಕ್ಷೇತ್ರದ ಜನ ಹೇಳುತ್ತಿದ್ದಾರೆ. ಬಿಜೆಪಿಯವರೇ ಇವರನ್ನು ಈ ಕ್ಷೇತ್ರಕ್ಕೆ ನಿಯೋಜಿಸಿದ್ದಾರೆ ಎಂಬ ಆರೋಪವು ಇದೆ.

ಇನ್ನೂ ಕೃಷಿ ಇಲಾಖೆಯ ನೌಕರ ಗುಂಗಾಡಿ ಶರಣಪ್ಪ  ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಟಿಕೆಟ್‌ ಸಿಗದೇ ಹೋದಲ್ಲಿ ಪಕ್ಷೇತರನಾಗಿ ನಿಲ್ಲುವುದಾಗಿ ಘೋಷಿಸಿದ್ದರು. ಆದರೆ ಅವರು ಚುನಾವಣೆಗೂ ನಿಲ್ಲದೆ, ಪ್ರಚಾರದಲ್ಲೂ ಕಾಣಿಸಿಕೊಳ್ಳದೆ ಇರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಲಿಂಗಾಯತರೆಡ್ಡಿ ಪ್ರಾಬಲ್ಯ : ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಹಿಂದುಳಿದ ವರ್ಗದ ವ್ಯಕ್ತಿ ಆಯ್ಕೆಯಾಗಿಲ್ಲ. ಲಿಂಗಾಯತ ಮತ್ತು ಲಿಂಗಾಯತ ರೆಡ್ಡಿ ಜಾತಿಗೆ ಸೇರಿದವರೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 35 ಸಾವಿರ ಮತವಿರುವ ಕುರುಬ ಹಾಗೂ 30 ಸಾವಿರ ಎಸ್‌ಸಿ ಮತಗಳಿದ್ದು ಇಲ್ಲಿ ಮೇಲ್ಜಾತಿಗೆ ಸೇರಿದವರೆ ಗೆದ್ದು ಬರುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ಲೆಕ್ಕಾಚಾರವನ್ನು ತಲೆಕೆಳಗಾಗಿಸಲು ಕಾಂಗ್ರೆಸ್‌ನ ಹಿರಿಯ ನಾಯಕ, ಕುರುಬ ಸಮಾಜದ ಪ್ರಭಾವಿ ನಾಯಕ ವೀರಣ್ಣಗೌಡ ಪೊಲೀಸ್ ಪಾಟೀಲ 2018 ರಲ್ಲಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ 14,591 ಮತ ಪಡೆದು ವಿಫಲರಾದರು. ಈಗ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಹರಿದು ಹೋಗಿದ್ದ ಮತಗಳು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಗಾಣಿಗ, ಪಂಚಮಸಾಲಿ ಸಮುದಾಯದ ಮತದಾರರೇ ಅಧಿಕ. ಆದರೆ, ಕುರುಬ ಸಮುದಾಯದ ಮತಗಳೇ ಇಲ್ಲಿ ಗೆಲುವಿಗೆ ನಿರ್ಣಾಯಕವಾಗಿವೆ. ಸದ್ಯ ಹಣಾಹಣಿ ಇರುವ ಬಸವರಾಜ ರಾಯರೆಡ್ಡಿ ಹಾಗೂ ಹಾಲಪ್ಪ ಆಚಾರ್‌ ಇಬ್ಬರೂ ಕೂಡ ರೆಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಲಿಂಗಾಯತರು 80,000ದಷ್ಟು ಮತಗಳನ್ನು ಹೊಂದಿದ್ದರೆ, ಕುರುಬರು 35,000 ಮತಗಳನ್ನು ಹೊಂದಿದ್ದಾರೆ. ಎಸ್‌ಸಿ 30,000, ಮುಸ್ಲಿಂ 18,000, ಎಸ್‌ಟಿ 15,000 ಹಾಗೂ ಇತರೆ ಸಮುದಾಯಗಳು 40,000 ಮತದಾರರನ್ನು ಹೊಂದಿವೆ.

ರಾಯಲ್‌ ವರ್ಸ್‌ಸ್‌ ಸಾಹುಕಾರ ನಡುವೆ ಪೂಪೋಟಿ ಹೆಚ್ಚಾಗಿದ್ದು ಯಾರೇ ಗೆದ್ದರೂ 5 ಸಾವಿರ ಮತಗಳ ಒಳಗೆ ಗೆಲ್ಲಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *