ಯಲಬುರ್ಗಾ : ಊಳಿಗಮಾನ್ಯ, ಕೈಗಾರಿಕರಣ, ಕುರುಡು ಧಾರ್ಮಿಕತೆ, ರಾಷ್ಟ್ರೀಯವಾದಗಳ ಕೈಯಿಂದ “ಜಾಗತಿಕ ಶಿಕ್ಷಣ ವ್ಯವಸ್ಥೆ” ಬಿಡುಗಡೆಗೊಳ್ಳಲು ಶತಮಾನಗಳೇ ಹಿಡಿದಿವೆ ಎಂದು ಉಪನ್ಯಾಸಕ ಡಾ. ಕಿರಣ್ ಎಂ. ಗಾಜನೂರು ಆರೋಪಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟಾದಲ್ಲಿ ನಡೆದ ಯಲಬುರ್ಗಾ ತಾಲ್ಲೂಕ 13 ನೇ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣ ಗೋಷ್ಠಿಯ ಪ್ರಮುಖ ಉಪನ್ಯಾಸಕರಾಗಿ ಮಾತನಾಡುತ್ತಾ, ನಮ್ಮ ದೇಶ ಸ್ವಾತಂತ್ರ್ಯಗೊಂಡ ಮರುಕ್ಷಣ (1950) ದೇಶದ ನಾಯಕರು ಈ ದೇಶದ ಶಿಕ್ಷಣ ಕ್ಷೇತ್ರವನ್ನು ಮೂರು ಮುಖ್ಯ ಉದ್ದೇಶಗಳನ್ನು ಸಾಧಿಸುವ ಭಾಗವಾಗಿ ರೂಪಿಸಿದರು.
1) ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯ ವೃದ್ದಿಗೆ ಅದ್ಯತೆ.
2) ಜಾತಿ/ಧರ್ಮ/ಲಿಂಗಾಧಾರಿತ ತಾರತಮ್ಯ ಮೀರಿ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಶಿಕ್ಷಣ ವ್ಯವಸ್ಥೆ ರೂಪಿಸಬೇಕು
3) ಪ್ರಜಾತಂತ್ರ, ವೈಜ್ಞಾನಿಕ ಮನೋಧೋರಣೆ, ಭ್ರಾತೃತ್ವ ಇತ್ಯಾದಿ ಸಾಂವಿಧಾನಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಭಾಗವಾಗಿ ಶಿಕ್ಷಣ ವ್ಯವಸ್ಥೆ ಇರಬೇಕು.
ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹುತೇಕ ಈ ಎಲ್ಲಾ ಉದ್ದೇಶಗಳನ್ನು ‘ನಮ್ಮ ಸರ್ಕಾರಿ ಶಿಕ್ಷಣ’ ವ್ಯವಸ್ಥೆ ಸಾಧಿಸಿದೆ ಇಂದು ದೇಶದಲ್ಲಿ ಸುಮಾರು ಸಾವಿರದಷ್ಟು ವಿಶ್ವವಿದ್ಯಾಲಯಗಳು, 38 ಲಕ್ಷ ಕಾಲೇಜುಗಳು, ಪ್ರತಿದಿನ 12ಕೋಟಿ ಮಕ್ಕಳಿಗೆ ಬಿಸಿಯೂಟ, ಲಕ್ಷಗಳ ಲೆಕ್ಕದಲ್ಲಿ ಪ್ರಾಥಮಿಕ ಮತ್ತು ಫ್ರೌಡಶಾಲೆಗಳು, ಜಾಗತಿಕ ಮಾನ್ಯತೆ ಪಡೆದ ವೈಜ್ಞಾನಿಕ ಕಾಲೇಜುಗಳು, IIT, IIM ಎಲ್ಲವನ್ನು ನಾವು ರೂಪಿಸಿದ್ದೇವೆ ಎಂದರು.
ಇದರ ಪರಿಣಾಮ ಹೆಣ್ಣುಮಕ್ಕಳು, ದಲಿತರು, ಆದಿವಾಸಿಗಳು ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪಡೆಯಲು ಸಾಧ್ಯವಾಗಿದೆ ಒಂದು ಅಂದಾಜಿನ ಪ್ರಕಾರ ಇಂದಿಗೂ ಭಾರತದಲ್ಲಿ 65.12% ಮಕ್ಕಳು ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುತ್ತಿದ್ದಾರೆ…! ನಮ್ಮ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಪ್ರಪಂಚದ 40 ವಿವಿಧ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚಿದೆ. ಇಷ್ಟು ಅಗಾಧ ಮತ್ತು ವಿಸ್ತಾರವಾದ ‘ಸರ್ಕಾರಿ ಶಿಕ್ಷಣ ವ್ಯವಸ್ಥೆ’ ಇಂದು ಸ್ವತಃ ಪ್ರಭುತ್ವದ ನೀತಿಗಳ ಕಾರಣಕ್ಕೆ ನಗೆಪಾಟಲಿಗೆ ಈಡಾಗಿದೆ, ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ.
1990ರ ನಂತರ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಆದರಲ್ಲೂ ಉನ್ನತ ಮತ್ತು ತಾಂತ್ರಿಕ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಎಲ್ಲಾ ತಯಾರಿಗಳು ನಡೆಯುತ್ತಿವೆ, ನಮ್ಮ ಹೊಸ ಶಿಕ್ಷಣ ನೀತಿ ನೂರು ವಿದೇಶಿ ವಿವಿಗಳ ಪ್ರಸ್ತಾಪ ಮಾಡಿದೆ ಅವುಗಳ ಕಾರ್ಯಚರಣೆಯ ಸ್ವರೂಪ ಹೇಗಿರಲಿದೆ ಎಂಬುದು ಅತಂಕವನ್ನು ಇನ್ನೂ ಹೆಚ್ಚಿಸಿದೆ.
ಇಂತಹ ಸಂಧರ್ಭದಲ್ಲಿ ಶಿಕ್ಷಣ ವ್ಯವಸ್ಥೆಯ ವರ್ತಮಾನದ ಮುಖ್ಯ ಸವಾಲು ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು, ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು, ನಮ್ಮ ಕಾಲದ ಅಗತ್ಯತೆಗಳನ್ನು ಪೂರೈಸಲು ಬೇಕಾದ ನೆರವನ್ನು ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಒದಗಿಸುವ ಹಕ್ಕೊತ್ತಾಯವನ್ನು ಪ್ರಭುತ್ವಗಳ ಮುಂದೆ ಇಡುವುದಾಗಿದೆ.
ಇದಕ್ಕೆ ಪಕ್ಷಾತೀತವಾದ ಪ್ರಬುದ್ಧ ಜನಚಳಿಯೊಂದರ ಅಗತ್ಯವಿದೆ..! ಏಕೆಂದರೆ ಶಿಕ್ಷಣ ಮತ್ತು ಪ್ರಜಾಪ್ರಭುತ್ವ ಎರಡೂ ಒಂದೇ ನಾಣ್ಯದ ಎರಡು ಮುಖಗಳು…! ಆ ಕಾರಣಕ್ಕೆ ಇಂದು ಸಮಾನ ಮತ್ತು ಮೌಲ್ಯಧಾರಿತ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬೇಡಿಕೆ ಆಳದಲ್ಲಿ ಪ್ರಜಾಪ್ರಭುತ್ವದ ಬೇಡಿಕೆಯೇ ಆಗಿದೆ ಎಂದು ಕಿರಣ್ ಗಾಜನೂರು ಅಭಿಪ್ರಾಯ ಪಟ್ಟಿದ್ದಾರೆ.
ಗೋಷ್ಠಿಯಲ್ಲಿ ಹಿರಿಯ ಸಾಹಿತಿ ವೀರಣ್ಣ ವಾಲಿ, ಮಂಜುನಾಥ್ ಡೊಳ್ಳಿನ್, ಆನಂದತೀರ್ಥ ಪ್ಯಾಟಿ, ಶಿವರಾಜ ಗುರಿಕಾರ, ಕಸಾಪ ತಾಲ್ಲೂಕ ಅಧ್ಯಕ್ಷ ದೇವೇಂದ್ರಪ್ಪ ಜಿರ್ಲಿ, ಗೌರವ ಕಾರ್ಯದರ್ಶಿ ಬಸವರಾಜ ಮೇಟಿ, ಸೇರಿದಂತೆ ನೂರಾರು ಸಾಹಿತ್ಯಾಸಕ್ತರು ಇದ್ದರು.