ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ‘ಕಾವೇರಿ’ ಇಂದು ಬೆಳಗ್ಗಿಯಿಂದಲೇ ಹಲವು ಮಂದಿ ಮಾಜಿ ಸಚಿವರು, ಶಾಸಕರು, ಸ್ವಾಮೀಜಿಗಳು ಭೇಟಿ ನೀಡಿತ್ತಿದ್ದು, ಯಡಿಯೂರಪ್ಪ ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಶಾಸಕರಾದ ಆರ್.ಅಶೋಕ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ ಮುಂತಾದವರು ಭೇಟಿ ನೀಡಿದ್ದ ಪ್ರಮುಖರು.
ಮುರುಗೇಶ್ ನಿರಾಣಿ ಸುಮಾರು ಒಂದು ಘಂಟೆ ಕಾಲ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂಬ ಮಾಹಿತಿ ಇದೆ. ಈ ವೇಳೆ ಇತರ ಶಾಸಕರೂ ಇದ್ದರು, ಪ್ರತ್ಯೇಕ ಮಾತುಕತೆ ನಡೆದಿಲ್ಲ ಎಂದು ಕೆಲವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಚರ್ಚೆಗೆ ಗ್ರಾಸವಾಗಿದೆ ಯಡಿಯೂರಪ್ಪ ರಾಜೀನಾಮೆ ಪತ್ರದ ಆ ಎರಡು ಸಾಲು
ಸುದ್ದಿಗಾರರ ಜತೆ ಮಾತನಾಡಿದ ನಿರಾಣಿ, ಹೊಸ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಹುದ್ದೆಗಾಗಿ ನಾನು ಪ್ರಯತ್ನ ಮಾಡಿಲ್ಲ. ಇದು ಮಾಧ್ಯಮಗಳೇ ಸೃಷ್ಠಿ ಮಾಡಿದ್ದು ಎಂದು ಹೇಳಿದರು.
ಪಕ್ಷದ ಕೆಲವರಲ್ಲಿ ಹಲವು ರೀತಿಯ ಅಭಿಪ್ರಾಯಗಳು ಇರುತ್ತವೆ. ಮುಖ್ಯಮಂತ್ರಿ ಆಗಬೇಕೆಂದು, ಆಗಬಾರದೆಂದು ಹೇಳುವವರು ಇದ್ದಾರೆ. ಇದಕ್ಕೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ. ಸಚಿವನಾಗಿ ಆಗಿದ್ದರೂ ಪಕ್ಷಕ್ಕಾಗಿ ದುಡಿಯುವೆ. ವರಿಷ್ಠರ ತೀರ್ಮಾನದಂತೆ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಸಹಕಾರ ನೀಡುವೆ. ಮುಂದಿನ ಚುನಾವಣೆಯಲ್ಲಿ ಪೂರ್ಣ ಬಹುಮತ ಶ್ರಮಿಸುತ್ತೇವೆʼʼ ಎಂದು ಮುರುಗೇಶ್ ನಿರಾಣಿ ಹೇಳಿದರು.
ಇದನ್ನು ಓದಿ: ಬೆಂಗಳೂರಿನ ಕಡೆಗೆ ದೆಹಲಿ ವೀಕ್ಷಕರು: ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ
‘ದಕ್ಷಿಣ ಭಾರತದ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದವರು ಯಡಿಯೂರಪ್ಪನವರು ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಕ್ಷದ ಶಾಸಕರ ಗೆಲುವಿಗೆ ಶ್ರಮಿಸಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಹೇಳುತ್ತಿದ್ದೆವು. ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ದಾರೆ. ಅವರು ರಾಜೀನಾಮೆ ಕೊಟ್ಟಿರುವುದು ಬಹಳ ನೋವು ಉಂಟು ಮಾಡಿದೆ. ಇದು ಬಿಜೆಪಿಯಲ್ಲಿ ಅನಿವಾರ್ಯ. 75 ವರ್ಷದ ಬಳಿಕ ಯುವಕರಿಗೆ ಬಿಟ್ಟು ಕೊಡಬೇಕು. ಇದು ಬಿಜೆಪಿ ಸಿದ್ಧಾಂತ’ ಎಂದೂ ಹೇಳಿದರು.
ನೆನ್ನೆ ಬೆಂಗಳೂರಿನಲ್ಲಿ ಇರಲಿಲ್ಲ ಹಾಗಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರಲಿಲ್ಲ. ಅವರನ್ನು ಇಂದು ಭೇಟಿ ಮಾಡಿರುವೆ. ಕಾರ್ಯಚಟುವಟಿಕೆ, ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದೇನೆ. ರಾಜಕೀಯ ಚರ್ಚೆ ಮಾಡಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.