ಕೋಲಾರ : ನರಸಾಪುರ ಕೈಗಾರಿಕಾ ಪ್ರದೇಶದ ‘ಎಕ್ಸಿಡಿ ಕ್ಲಚ್ ಇಂಡಿಯಾ ಪ್ರೈ. ಲಿ.’ ಕಾರ್ಖಾನೆಯ ಕಾರ್ಮಿಕರು ನ್ಯಾಯಬದ್ಧವಾದ ವೇತನ ಹೆಚ್ಚಳಕ್ಕಾಗಿ, ಕಾರ್ಮಿಕರನ್ನು ಬಲಿಪಶು ಮಾಡುವ ನೀತಿಯ ವಿರುದ್ಧ ಸಿ.ಐ.ಟಿ.ಯು. ನೇತೃತ್ವದಲ್ಲಿ ನಡೆಸಿದ ಸುದೀರ್ಘ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದ್ದು, ಹೋರಾಟ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ.
‘ಎಕ್ಸಿಡಿ ಕ್ಲಚ್ ಇಂಡಿಯಾ ಪ್ರೈ. ಲಿ.’ ಎಂಬುದು 2010 ರಿಂದ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಕಾರ್ಖಾನೆ. ಇದು ಜಪಾನ್ ಮೂಲದ ಒಂದು ಕಂಪನಿ. ಕಾರುಗಳು ಹಾಗು ದ್ವಿಚಕ್ರ ವಾಹನಗಳಿಗೆ ಅಗತ್ಯವಾದ ಕ್ಲಚ್ ಗಳನ್ನು ಈ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಕಾರ್ಖಾನೆಯಲ್ಲಿ ಸುಮಾರು 450 ಜನ ಖಾಯಂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುಮಾರು 600 ಜನ ಖಾಯೇಮತರ ಹಂಗಾಮಿ ಕೆಲಸಗಾರರು ಕೆಲಸಮಾಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಕಾರ್ಮಿಕರು ಇದೇ ಕಾರ್ಖಾನೆಯಲ್ಲಿ ಕನಿಷ್ಟ 10 ವರ್ಷಗಳ ಅನುಭವ ಹೊಂದಿರುವವರಾಗಿದ್ದಾರೆ.
ಕನಿಷ್ಟ ಹತ್ತು ವರ್ಷಗಳ ಶ್ರಮವಹಿಸಿ ದುಡಿದ ಕಾರ್ಮಿಕರಿಗೂ ಗರಿಷ್ಟ ಎಂದರೆ 30 ಸಾವಿರ ತಿಂಗಳ ವೇತನ. ಶಿಕ್ಷಣ ಶುಲ್ಕಗಳು, ಆರೋಗ್ಯ ವೆಚ್ಚ, ಆಹಾರ ವಸ್ತುಗಳ ಬೆಲೆಗಳು, ಗ್ಯಾಸ್, ಪೆಟ್ರೋಲ್ ಡಿಸೇಲ್, ಮನೆ ಬಾಡಿಗೆ ಮುಂತಾದವುಗಳೆಲ್ಲವುಗಳ ವೆಚ್ಚವೂ ಯದ್ವಾತದ್ವಾ ಏರುತ್ತಿರುವ ಈ ದಿನಗಳಲ್ಲಿ ಈ ವೇತನದಲ್ಲಿ ಬದುಕುವುದು, ಕುಟುಂಬವನ್ನು ಸಲಹುವುದು ಕಾರ್ಮಿಕರಿಗೆ ದುಸ್ತರವಾಗಿದೆ. ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘದ ಜೊತೆಗೆ ಈ ಹಿಂದೆ 2020 ರಲ್ಲಿ ಆಗಿದ್ದ ವೇತನ ಒಪ್ಪಂದದ ಅವಧಿ ಮುಗಿದಿದ್ದರಿಂದ ಕಾರ್ಮಿಕ ಸಂಘವು ನ್ಯಾಯಬದ್ಧವಾಗಿ, ಕಾನೂನುಬದ್ಧವಾಗಿ ಆಗಬೇಕಾದ ವೇತನ ಹೆಚ್ಚಳದ ಸಂಬಂಧ ಆಡಳಿತ ಮಂಡಳಿಗೆ ಬೇಡಿಕೆ ಪಟ್ಟಿ ಸಲ್ಲಿಸಿತು.
ಶ್ರಮವಹಿಸಿ, ಬೆವರು ಸುರಿಸಿ ಉತ್ಪಾದನೆ ಮಾಡುವ ಕಾರ್ಮಿಕರು, ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ವೇತನಕ್ಕಾಗಿ, ವೇತನ ಹೆಚ್ಚಳಕ್ಕಾಗಿ ಕಾನೂನುಬದ್ಧ ಮಾರ್ಗದಲ್ಲಿ ಹೋಗುತ್ತಿದ್ದರೆ, ಇಲ್ಲಿ ಆಡಳಿತ ಮಂಡಳಿಯದು ಕಾರ್ಮಿಕ ವಿರೋಧಿ ಧೋರಣೆಯ ಭಿನ್ನ ಮಾರ್ಗವಾಗಿದೆ. 2020 ರಲ್ಲಿ ಆದ ವೇತನ ಒಪ್ಪಂದವೂ ಸರಾಗವಾಗಿಯೇನೂ ಆಗಿರಲಿಲ್ಲ. ಕಾರ್ಮಿಕರು ನ್ಯಾಯಕ್ಕಾಗಿ 2016, 2018 ರಲ್ಲೂ ಮತ್ತು ನಂತರವೂ ಹೋರಾಟಗಳನ್ನು ಮಾಡಿಕೊಂಡೇ ಬಂದಿದ್ದಾರೆ. 2018 ರಲ್ಲಿ ಕಾರ್ಖಾನೆಯ ಆಡಳಿತ ವರ್ಗವು ಸುಮಾರು 24 ಕಾರ್ಮಿಕರ ಮೇಲೆ, ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅಗತ್ಯ ಪ್ರಮಾಣದ ಉತ್ಪಾದನೆಯನ್ನು ನೀಡುತ್ತಿಲ್ಲ, ಸೂಪರ್ ವೈಸರ್ ರನ್ನು ನಿಂದಿಸಿದ್ದಾರೆ ಮುಂತಾದ ಸುಳ್ಳು ಆಪಾಧನೆಗಳನ್ನು ಹೊರಿಸಿ ಕಾರ್ಮಿಕರನ್ನು ಅಮಾನತ್ತುಗೊಳಿಸುವ ಶಿಸ್ತಿನ ಕ್ರಮ ಜರುಗಿಸಿತ್ತು. ಈ ಕಾರ್ಮಿಕರ ಅಮಾನತ್ತು ಆದೇಶವನ್ನು ಹಿಂಪಡೆದು ಅವರಿಗೆ ಕೆಲಸಕೊಡಬೇಕೆಂದು ಹಾಗು ಎಲ್ಲಾ ಕಾರ್ಮಿಕರಿಗೂ ವೇತನ ಹೆಚ್ಚಳವನ್ನು ಕೊಡಬೇಕೆಂದು ಕಾರ್ಮಿಕ ಸಂಘವು ಒತ್ತಾಯಿಸಿತ್ತು. ಎಕ್ಸಿಡಿ
ಇದರ ಪರಿಣಾಮ 2020ರಲ್ಲಿ ವೇತನ ಒಪ್ಪಂದ ಏರ್ಪಟ್ಟಿತ್ತು. ಆ ವೇತನ ಒಪ್ಪಂದಕ್ಕೆ ಸಹಿ ಆದ ದಿನದಿಂದ 15 ದಿನಗಳ ಒಳಗಾಗಿ ಅಥವಾ 5 ಸಭೆಗಳಲ್ಲಿ ಅಮಾನತ್ತಿನಲ್ಲಿರುವ ಕಾರ್ಮಿಕರ ವಿಚಾರವನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡುವುದಾಗಿ ಆಗ ಆಡಳಿತ ವರ್ಗವು ಲಿಖಿತವಾಗಿ ಒಪ್ಪಿಗೆ ನೀಡಿತ್ತು. ಆದರೆ ಒಂದು ವರ್ಷಗಳು ಕಳೆದರೂ ಸಮಸ್ಯೆಯನ್ನು ಇತ್ಯರ್ಥ ಮಾಡಲಿಲ್ಲ. ಈ ಎಲ್ಲಾ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಕಾರ್ಮಿಕ ಸಂಘವು ಪ್ರತಿಭಟನೆಗಳನ್ನು ನಡೆಸಿತ್ತು.
ಇದನ್ನು ಓದಿ : ನಕಲಿ ಎನ್‌ಕೌಂಟರ್‌ಗೆ ಸೊಪ್ಪುಕೀಳಲು ಹೋಗಿದ್ದ ಗ್ರಾಮಸ್ಥರು ಬಲಿ
ಕಾರ್ಮಿಕರ ಹೋರಾಟದ ಪರಿಣಾಮವಾಗಿ ಈ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶವಾಯಿತು. ಈ ಹಿನ್ನೆಲೆಯಲ್ಲಿ 2021ರ ಆಗಸ್ಟ್ ತಿಂಗಳಲ್ಲಿ ಕಾರ್ಮಿಕ ಸಂಘಟನೆ ಹಾಗೂ ಆಡಳಿತ ವರ್ಗದ ನಡುವಿನಲ್ಲಿ ಆದ ಒಪ್ಪಂದದ ಅನ್ವಯ 17 ಜನ ಕಾರ್ಮಿಕರನ್ನು ಅವರ ಸಮಾನ ಕಾರ್ಮಿಕರು ತೆಗೆದುಕೊಳ್ಳುತ್ತಿದ್ದ ವೇತನಕ್ಕಿಂತ ಕಡಿಮೆ ವೇತನಕ್ಕೆ ಮತ್ತೆ ‘ಸ್ಟಾಫ್ ಗ್ರೇಡ’ಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ಹಾಗೂ ಒಂಬತ್ತು ತಿಂಗಳುಗಳ ನಂತರ ಅವರನ್ನು ಮತ್ತೆ ‘ಕಾರ್ಮಿಕರ ಗ್ರೇಡ್’ಗೆ’ ತರಲು ಆಡಳಿತವರ್ಗವು ಲಿಖಿತ ಒಪ್ಪಿಗೆ ನೀಡಿತ್ತು. ಆದರೆ ಆಡಳಿತ ವರ್ಗವು ಮತ್ತೆ ಕಾರ್ಮಿಕರಲ್ಲಿ ಮೂಡಿಸಿದ ಭರವಸೆಗಳನ್ನು ಹುಸಿಗೊಳಿಸಿತು. ಲಿಖಿತವಾಗಿ ಕೊಟ್ಟ ಮಾತನ್ನೂ ಈಡೇರಿಸದೆ ಮೋಸ ಮಾಡಿತು. ಎಕ್ಸಿಡಿ
ಕಾರ್ಖಾನೆಯಲ್ಲಿನ ಎಲ್ಲಾ ಕಾರ್ಮಿಕರಿಗೂ ದಿನಾಂಕ 01.04.2023ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಇದರ ಬಗ್ಗೆ ಕಾರ್ಮಿಕ ಸಂಘಟನೆಯು ಬೇಡಿಕೆ ಪಟ್ಟಿಯನ್ನು ಸಲ್ಲಿಸಿತ್ತು. ಆಡಳಿತ ವರ್ಗ ಮಾತುಕತೆಗೆ ಮುಂದಾಗುವ ಬದಲು ಕಾರ್ಮಿಕ ಇಲಾಖೆಯಲ್ಲಿ ಸಂಘದ ವಿರುದ್ಧ ದೂರು ಸಲ್ಲಿಸಿತು. ಈ ಸಂಬಂಧ ಬೆಂಗಳೂರಿನಲ್ಲಿರುವ ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ಕಾರ್ಮಿಕರಿಗೆ ರೂ. 12,000/- ವೇತನ ಹೆಚ್ಚಳವನ್ನು ಮಾಡಲು ಹಾಗು ಎಲ್ಲಾ ಕಾರ್ಮಿಕರು ಸ್ಥಾಯಿ ಆದೇಶಗಳಲ್ಲಿನ ಶಿಸ್ತು ಪರಿಪಾಲನೆ ಮಾಡುವುದಾಗಿ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಗು ಹೆಬ್ಬಟ್ಟು ಮುದ್ರೆ ಹಾಕಿ ಕೊಟ್ಟಲ್ಲಿ 17 ಜನರನ್ನು ಕಾರ್ಮಿಕರ ಗ್ರೇಡಿಗೆ ಪರಿವರ್ತಿಸುವುದಾಗಿ ವೇತನ ಒಪ್ಪಂದದ ಕರಡನ್ನು ಆಡಳಿತ ವರ್ಗವೇ ಮಂಡಿಸಿತ್ತು.ಎಕ್ಸಿಡಿ
ಕಾರ್ಖಾನೆಯಲ್ಲಿನ ಎಲ್ಲಾ ಕಾರ್ಮಿಕರು ಐಟಿಐ ವಿದ್ಯಾಭ್ಯಾಸ ಪಡೆದವರಾಗಿದ್ದು, ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು ಸರಿಯಾದ ವಿಧಾನವಲ್ಲ ಎಂದು ತಿಳಿಸಿದ ಕಾರ್ಮಿಕ ಸಂಘವು, ಶಿಸ್ತು ಪರಿಪಾಲನೆಯ ಮುಚ್ಚಳಿಕೆ ನೀಡಲು ಸಿದ್ದವಿದ್ದೇವೆ ಎಂದು ತಿಳಿಸಿ ಒಪ್ಪಂದಕ್ಕೆ ಸಹಿ ಹಾಕ ಬೇಕೆಂದು ಕೋರಿತು. ಇದನ್ನು ಒಂದು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡ ಆಡಳಿತ ವರ್ಗವು ಕಾರ್ಮಿಕರು ಸಹಿ ಹಾಕುವ ಜೊತೆಗೆ ಹೆಬ್ಬೆಟ್ಟು ಮುದ್ರೆ ಕೊಡಲು ಒತ್ತಾಯಿಸಿತು. ಈ ಸಂದರ್ಭದಲ್ಲಿ ವೇತನ ಒಪ್ಪಂದಕ್ಕೆ ಸಹಿ ಮಾಡುವ ಜೊತೆಗೆ ಕಾರ್ಮಿಕರು ಹೆಬ್ಬೆಟ್ಟು ಒತ್ತಬೇಕೆಂದಾದರೆ, ಆಡಳಿತ ವರ್ಗದ ಪ್ರತಿನಿಧಿಗಳು ಸಹ ಸಹಿಯ ಜೊತೆಗೆ ಹೆಬ್ಬೆಟ್ಟು ಒತ್ತಬೇಕೆಂದು ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು.
ಕೊನೆಯಲ್ಲಿ ಕಾರ್ಮಿಕರು ಪ್ರತಿಷ್ಠೆ ಬಿಟ್ಟು ಹೆಬ್ಬೆಟ್ಟು ಒತ್ತಲು ಒಪ್ಪಿದರೂ, ಆಡಳಿತ ವರ್ಗವು 17 ಜನರನ್ನು ಕಾರ್ಮಿಕರೆಂದು ಪರಿಗಣಿಸುವುದಿಲ್ಲ ಎಂದು ಒಪ್ಪಂದದ ಶರತ್ತುಗಳಿಂದ ಹಿಂದಕ್ಕೆ ಸರಿಯಿತು. ಈ ಮೋಸದ ವಿರುದ್ಧ ಮಾರ್ಚ್ 25, 2024 ರಿಂದ ಎಲ್ಲಾ ಕಾರ್ಮಿಕರು ಶಾಂತಿಯುತ ಮುಷ್ಕರದಲ್ಲಿ ಭಾಗಿಯಾಗಿ ಚಳುವಳಿ ಆರಂಭಿಸಿದರು. ಒಂದು ತಿಂಗಳು ದಾಟಿ ಮುಂದೆ ಹೋದರೂ ಆಡಳಿತ ವರ್ಗವು ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಮುಂದಾಗಲಿಲ್ಲ. ಈ ಅವಧಿಯಲ್ಲಿ ಕಾನೂನು ಬಾಹಿರವಾಗಿ ತರಬೇತಿಯ ಹೆಸರಿನಲ್ಲಿ ಸುಮಾರು 200 ಜನ ಟ್ರೈನಿಗಳನ್ನು ನೇಮಕಮಾಡಿಕೊಂಡಿತು. 17 ಜನರ ಜೊತೆಗೆ ಏಪ್ರಿಲ್ 30, 2024 ರಂದು ಮತ್ತೆ 11 ಜನರನ್ನು ಅಮಾನತು ಮಾಡಿತು. ಎಕ್ಸಿಡಿ
ಕಾರ್ಮಿಕ ಇಲಾಖೆಯ ಯಾವುದೇ ಸಲಹೆಗಳನ್ನು ಒಪ್ಪಲಿಲ್ಲ. ದೇಶದ ಕಾನೂನುಗಳನ್ನು ಉಲ್ಲಂಘನೆ ಮಾಡಿತು. ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರ ಮಕ್ಕಳು ಹಾಗು ಈ ಉದ್ಯೋಗವನ್ನೇ ಆಧರಿಸಿ ಜೀವನ ರೂಪಿಸಿಕೊಂಡಿರುವ ಕಾರ್ಮಿಕರು ಬೀದಿಪಾಲಾಗುವ ಸನ್ನಿವೇಶ ಬಂದರೂ ಆಡಳಿತ ವರ್ಗ ಹಠ ಮಾಡಿತು. ಇದರಿಂದಾಗಿ ಹೋರಾಟವನ್ನು ತೀವ್ರಗೊಳಿಸಿದ ಕಾರ್ಮಿಕರು ಉಪವಾಸ ಮುಷ್ಕರ ಆರಂಭಿಸಿದರು. ಸಿ.ಐ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ನೇತೃತ್ವ ನೀಡುತ್ತಿರುವ ಈ ‘ಎಕ್ಸಿಡಿ ಕ್ಲಚ್ ಎಂಪ್ಲಾಯಿಸ್ ಯೂನಿಯನ್ ‘ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ವಿ. ಹರೀಶ್, ಉಪಾಧ್ಯಕ್ಷರಾದ ಶರತ್ ಕುಮಾರ್, ಹಾಗೂ ಖಜಾಂಜಿ ಮಂಜುನಾಥ್ ಸೇರಿದಂತೆ ಒಟ್ಟು ಹತ್ತು ಜನರು 7 ದಿನಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಿದರು. ಈ ಎಲ್ಲ ಹೋರಾಟಗಳ ಫಲವಾಗಿ ವಿಷಯದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶವಾಗಿದೆ ಮತ್ತು ಕಾರ್ಮಿಕರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ.
ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ
ಕಾರ್ಮಿಕ ಚಳುವಳಿ, ಹೋರಾಟಗಳ ನಡುವೆ 6 ಮೇ 2024 ರಂದು ಕಾರ್ಮಿಕ ಇಲಾಖೆಯು ಆಡಳಿತ ಮಂಡಳಿ ಮತ್ತು ಕಾರ್ಮಿಕ ವರ್ಗ ಎರಡೂ ಪಕ್ಷಗಳಿಗೂ ಅನ್ವಯವಾಗುವ ಆದೇಶ ನೀಡಿ, ಕಾರ್ಮಿಕರು ಮುಷ್ಕರವನ್ನು ನಿಲ್ಲಿಸಿ ಕೆಲಸಕ್ಕೆ ತೆರಳಬೇಕೆಂದೂ ಹಾಗೂ ಈ ಕಾರ್ಮಿಕ ವಿವಾದವನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಲು ಕ್ರಮವಹಿಸಲಾಗುವುದು ಎಂದೂ ತಿಳಿಸಿತು. ಕಾರ್ಮಿಕ ಇಲಾಖೆಯ ಈ ಆದೇಶವನ್ನು ಗೌರವಿಸಿ ಕಾರ್ಮಿಕರು ಕೆಲಸಕ್ಕೆ ಮರಳಿ ಬರುತ್ತಿರುವುದಾಗಿ ಆಡಳಿತ ವರ್ಗಕ್ಕೆ ಅಂದೇ ಪತ್ರದ ಮುಖೇನ ತಿಳಿಸಿದರು. ಆದರೆ ಆಡಳಿತ ವರ್ಗದವರು ಮೇ 9 , 2024 ರಂದು ಕೆಲಸಕ್ಕೆ ಬರುವಂತೆ ಸೂಚಿಸಿದರು. ಅದರಂತೆ ಮೇ 9 ರಂದು ಕಾರ್ಮಿಕರು ಕೆಲಸಕ್ಕೆಂದು ಬಂದಾಗ ಆಡಳಿತ ವರ್ಗದವರು ಕಾರ್ಮಿಕ ಇಲಾಖೆಯ ಆದೇಶವನ್ನು ಗೌರವಿಸದೇ, ಕಾರ್ಮಿಕರನ್ನು ಕೆಲಸಕ್ಕೆ ಒಳಗಡೆ ಬಿಡದೆ ಗೇಟ್ ಮುಂಭಾಗದಲ್ಲಿ ನಿಲ್ಲಿಸಿ ಕಾರ್ಮಿಕರಿಗೆ ಕೆಲಸ ನಿರಾಕರಿಸಿದರು.
ಆಡಳಿತ ವರ್ಗದವರು ಕಾರ್ಮಿಕ ಇಲಾಖೆಯ ಆದೇಶವನ್ನು ಧಿಕ್ಕರಿಸಿ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸಿದಾಗ ಕೋಲಾರ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಶರವರು ಮಧ್ಯ ಪ್ರವೇಶಿಸಿ ಆಡಳಿತ ಮಂಡಳಿ ಹಾಗೂ ಸಂಘದ ಜೊತೆ ಜಂಟಿ ಸಭೆ ನಡೆಸಿ ಒಂದು ಹಂತದ ನ್ಯಾಯ ಒದಗಿಸಿರುತ್ತಾರೆ. ಸಭೆಯಲ್ಲಿ ಆಗಿರುವ ಸಂಧಾನದಂತೆ ಕಾರ್ಮಿಕರು ಕಾರ್ಖಾನೆಗೆ ಹೋಗಿ ಕೆಲಸವನ್ನು ಆರಂಭಿಸಿದ್ದಾರೆ. ಜಿಲ್ಲಾಧಿಕಾರಿಗಳು ಮೇ 14, 2024 ರಂದು ಮುಂದಿನ ಸಭೆಯನ್ನು ನಿಗದಿ ಪಡಿಸಿದ್ದು, ಕಾರ್ಮಿಕರು ಆ ಸಭೆಯಲ್ಲಿ ಈಗ ಕಾರ್ಖಾನೆಯಿಂದ ಹೊರಗುಳಿಸಲಾಗಿರುವ 17 ಮತ್ತು 11, ಒಟ್ಟು 28 ಕಾರ್ಮಿಕರ ವಿಚಾರವಾಗಿ ನ್ಯಾಯ ಒದಗಿಸುವ ಭರವಸೆಯನ್ನು ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ಭರವಸೆ ಮತ್ತು ಮಾತುಗಳನ್ನು ಗೌರವಿಸಿ ಕಾರ್ಮಿಕರು ಮುಷ್ಕರ ನಿಲ್ಲಿಸಿ ಕಾರ್ಖಾನೆಯಲ್ಲಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಅದೇ ರೀತಿ ಕಾರ್ಖಾನೆಯ ಆಡಳಿತ ಮಂಡಳಿ ಸಹ ಕಾರ್ಮಿಕ ಕಾನೂನುಗಳನ್ನು ಗೌರವಿಸಿ ಅದರಂತೆ ನಡೆದುಕೊಳ್ಳುತ್ತದೆ ಎಂದು ಕಾರ್ಮಿಕರು ನಿರೀಕ್ಷಿಸುತ್ತಿದ್ದಾರೆ. ಎಕ್ಸಿಡಿ
ಇದನ್ನು ನೋಡಿ : ಎರಡು ಕೋಟಿ ಉದ್ಯೋಗ : ಎಲ್ಲಿ ಹೋದವು? ಮೋದಿ ಸರ್ಕಾರದ ಉತ್ತರವೇನು? Janashakthi Media