ವರದಿ: ಬಿ.ಎನ್ ವಾಸರೆ
ಕಾರವಾರ: ಇಂದು ಶಿಕ್ಷತರೇ ಸುಳ್ಳು ದಾಖಲೆಗಳನ್ನ ಹಾಗೂ ಯಾರೋ ಬಿತ್ತರಿಸುವ ಸುಳ್ಳು ಮಾಹಿತಿಗಳನ್ನು ನಂಬಿ ಭಕ್ತರಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತ. ಶಿಕ್ಷಿತ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು , ಆಂಧ ಭಕ್ತಿಯನ್ನು ಮೊದಲು ಹೋಗಲಾಡಿಸಬೇಕು ಎಂದು ನಾಡಿನ ಹಿರಿಯ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ನುಡಿದರು. ಪ್ರಜಾಪ್ರಭುತ್ವ
ಕಾರವಾರದಲ್ಲಿ ನಡೆದ ಪ್ರೀತಿಪದ (ಡಾ. ವಿಠಲ್ ಭಂಡಾರಿ ಸಮಾಜ ಅಧ್ಯಯನ ಕೇಂದ್ರ) ದ ಆಶ್ರಯದಲ್ಲಿ ನಡೆದ ‘ ಬಿಕ್ಕಟ್ಟಿನಲ್ಲಿ ಪ್ರಜಾ ಪ್ರಭುತ್ವ : ಜನ ಚಳುವಳಿಗಳ ಪಾತ್ರ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡುತ್ತಿದ ಪ್ರೊ. ರಾಜೇಂದ್ರ ಚೆನ್ನಿ ಅವರು, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ 75 ವರ್ಷಗಳೇ ಕಳೆದರೂ ಪ್ರಜೆಗಳು ಅಸಮಾನತೆಯ ಬಿಕ್ಕಟ್ಟಿನಲ್ಲಿರುವುದು ವಿಪರ್ಯಾಸ. ನಮ್ಮೊಳಗಿನ ಬಂಡವಾಳಶಾಹಿ ದೌರ್ಜನ್ಯಗಳು ನಿಲ್ಲಬೇಕು. ಇಂದು ಪ್ರಜಾಪ್ರಭುತ್ವದ ಜಾಗದಲ್ಲಿ ಪ್ಯಾಸಿಸಂ ಬಂದು ಮುಟ್ಟಿದೆ. ಇದು ಬಹಳ ಆತಂಕಕಾರಿಯಾದುದ್ದು. ಜನಪರ ಚಳುವಳಿಗಳನ್ನು ರೂಪಿಸದೇ ಇದ್ದರೆ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿಯೇ ಮುಂದುವರೆಯಲಿದೆ ಎಂದರು.
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಯಲ್ಲಿ ಮತ ಹಾಕುವುದಷ್ಟೇ ಕೆಲಸ ಎಂಬಷ್ಟರ ಮಟ್ಟಿಗೆ ಸೀಮಿತಗೊಳಿಸುವಿಕೆ ನೋಡುತ್ತಿದ್ದೇವೆ. ಸುಳ್ಳನ್ನು ಸೃಷ್ಟಿಮಾಡುವ ಆಳುವವರಿಂದ ಪ್ರಜಾಪ್ರಭುತ್ವದ ಅವಸಾನವಾಗುತ್ತಿದೆ. ಯಾರು ತನ್ನ ಪರವಾಗಿದ್ದಾರೋ ಅವರು ಮಾತ್ರ ಸಮಾಜದಲ್ಲಿ ಬದುಕಿರಬೇಕು. ಯಾರು ತನ್ನ ವಿರುದ್ದ ಇದ್ದಾರೋ ಅವರು ಇಲ್ಲಿ ಇರಕೂಡದು ಎನ್ನುವ ಹಿಂಸೆಯ ಕಾಲಕ್ಕೆ ನಾವು ತಲುಪಿದ್ದೇವೆ. ಪ್ರಾಯಶ: ಪ್ರಜಾಪ್ರಭುತ್ವ ಎನ್ನುವುದು ಭಾರತದಲ್ಲಿ ಅಂತಿಮ ಘಟ್ಟ ತಲುಪುತ್ತಿದೆಯೇ ಎನ್ನುವಂತ ಸಂಶಯ ಉಂಟಾಗಿದೆ. ಇದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಹುಟ್ಟಿದ್ದೇ ಬಿಕ್ಕಟ್ಟಿನಲ್ಲಿ. ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ ಇದೆ ಎಂಬ ಅರಿವು ನಮಗೆ ಬಾರದಿರುವುದೇ ದೊಡ್ಡ ಬಿಕ್ಕಟ್ಟಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ಸ್ವಾರ್ಥಿಗಳ ಪಾಲಾಗಿದ್ದು, ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಎಣಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕು ಅಂತಿದ್ದರೆ ಯಾರು ಆಡಳಿತದಲ್ಲಿ ಉಳಿಯುತ್ತಾರೋ ಅವರು ಜನರ ಅಭಿಪ್ರಾಯವನ್ನ ಕೇಳಿಸಿಕೊಳ್ಳಬೇಕು. ಅವರು ತಮ್ಮ ಬಗ್ಗೆ ಪ್ರಜೆಗಳೋ ಆಥವಾ ಮಾದ್ಯಮದವರೋ ಟೀಕೆ ಮಾಡಿದ್ರೆ, ತಾವೇ ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾವು ಸರಿಯಾದ ದಾರಿಯಲ್ಲಿ ಇದ್ದೀವಾ ಎಂದು ಚಿಂತನೆ ಮಾಡಬೇಕು. ಆದರೆ ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಮಾತಾಡಿದರೆ ದಾಳಿನಡೆಸುವಂತಹ ವ್ಯವಸ್ಥೆ ಎದುರಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಪರವಾಗಿ ಮಾತನಾಡಿದವರಿಗೆ ಯಾವ ರೀತಿಯಿಂದ ಹಗೆ ಸಾಧಿಸಲಾಗಿದೆ ಎನ್ನುವದನ್ನು ನಾವೆಲ್ಲ ನೋಡಿದ್ದೇವೆ. ಇದು ಪತ್ರಿಕೆಗಳಿಗೂ ಹೊರತಾಗಿಲ್ಲ. ವಾಸ್ತವ ಸಂಗತಿಗಳನ್ನು ಹೊರ ಚೆಲ್ಲಿದ್ದಕ್ಕೆ ಆಡಳಿತದಲ್ಲಿದ್ದವರು ಆ ಪತ್ರಿಕೆಯವರನ್ನು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಸುಳ್ಳುಗಳನ್ನು ಸೃಷ್ಠಿ ಮಾಡುವ ಸರಕಾರಗಳಿಗೆ ಅದನ್ನು ಪ್ರಶ್ನೆ ಮಾಡಿದ್ರೆ ದೇಶದಲ್ಲಿ ಹಸಿವೇ ಇಲ್ಲ ಎನ್ನುವಂತೆ ವಾಸ್ತವದ ಬದಲಾಗಿ ವಾಸ್ತವದಲ್ಲಿ ಇಲ್ಲದನ್ನು ಹೆಚ್ಚಾಗಿ ವಿಜ್ರಂಭಿಸಿ ಪ್ರಜಾಪ್ರಭುತ್ವನ್ನು ನಾಶ ಮಾಡುತ್ತಿದ್ದಾರೆ. ದೇಶದಲ್ಲಿ ಹಸಿವು ಎಷ್ಟಿದೆ ಎಂದು ಕೆಲವು ಸಂಸ್ಥೆಗಳು ಅಂಕೆ ಸಂಖ್ಯೆಗಳು ಕೊಟ್ಟಾಗ ಈ ಸಂಸ್ಥೆಗಳು ಸುಳ್ಳು ಹೇಳುತ್ತಿವೆ. ಯಾರು ಆ ಸತ್ಯವನ್ನು ನಮ್ಮೆದುರಿಗೆ ಹೇಳುತ್ತಾ ಇದ್ದಾರೋ ಧ್ವನಿ ಎತ್ತದಂತೆ ಸತ್ಯವನ್ನ ಜನತೆಯ ಎದುರಿಗೆ ಇಡದೇ ಇರುವ ಹಾಗೆ ಪ್ರಯತ್ನಗಳು ನಡೆಯುತ್ತಿದೆ ಎಂದರೆ ಪ್ರಜಾಪ್ರಭುತ್ವ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ನಾವೆಲ್ಲೂ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ರಾಜೇಂದ್ರ ಚೆನ್ನಿ ಜನ ಚಳುವಳಿಗಳ ಅಗತ್ಯತೆಯ ಬಗ್ಗೆ ತಿಳಿಸಿದರು.
ಇದನ್ನೂ ಓದಿ: ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇದ್ದರೆ ಮಾತ್ರ ಘನತೆಯ ಬದುಕು ಸಾಧ್ಯ – ಮೂಡ್ನಾಕೂಡು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ, ಸಾಹಿತಿ ಡಾ. ಎಂ.ಜಿ ಹೆಗಡೆ ಮಾತನಾಡಿ ಜಿಲ್ಲೆಯ ಹಾಗೂ ನಾಡಿನ ಸೌಹಾರ್ದಗೆ ಮತ್ತು ಸಮಾನತೆಯನ್ನು ಉಳಿಸಿ ಮುಂದುವರೆಸಿಕೊಂಡು ಹೋಗಲು ಪ್ರೀತಿ ಪದದಂತ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿ. ಡಾ. ವಿಠ್ಠಲ ಭಂಡಾರಿ ನೆನಪಿನ ಈ ಕಾರ್ಯಕ್ರಮದ ಮೂಲಕ ಸಮ ಸಮಾಜ ನಿರ್ಮಾಣದ ಬೀಜವನ್ನು ಎಲ್ಲರೆದೆಯಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತದೆ. ಜನಚಳುವಳಿಗಳ ಹತ್ತಿಕ್ಕಲು, ನೈಜ ಬೇಡಿಕೆಗಳ ದಾರಿ ತಪ್ಪಿಸಲು ಪ್ರಭುತ್ವ ಪ್ರೇರಿತ ಸುಳ್ಳು ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ದುರಂತ. ಈ ಬಗ್ಗೆ ಎಚ್ಚರ ವಹಿಸಿ ಪ್ರಜಾಪ್ರಭುತ್ವ ರಕ್ಷಿಸುವ ಜವಾಬ್ದಾರಿ ಇದೆ ಎಂದರು.
ಯಮುನಾ ಗಾಂವ್ಕರ್ ಅವರ ‘ಬೆಂದ ಅಕ್ಕಿಯ ಘಮಲು’ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಕೃಷ್ಣ ನಾಯ್ಕ ಮಾತನಾಡಿ ಯಮುನಾ ಗಾಂವ್ಕರವರು ತಮ್ಮ ಕವಿತೆಗಳ ಮೂಲಕ ಸಮಾಜದ ಆಗು ಹೋಗುಗಳ, ಶೋಷಣೆಗಳ, ಹಸಿವಿನ ಚಿತ್ರಣಗಳನ್ನು ಚಿತ್ರಿಸಿದ್ದಾರೆ. ಪ್ರತಿಯೊಂದು ಕವಿತೆಗಳಲ್ಲಿ ಒಂದೊಂದು ಸಂದೇಶಗಳಿವೆ ಎಂದರು. ಪ್ರೀತಿಪದ ಜಾಲತಾಣಕ್ಕೆ ಚಾಲನೆ ನೀಡಿದ ರೈತ ಹೋರಾಟಗಾರ ಚಿಂತಕ ನವೀನಕುಮಾರ ಹಾಸನ ಈ ಸೋಶಿಯಲ್ ಮೀಡಿಯಾದ ಮೂಲಕ ವಿಠ್ಠಲರ ವಿಚಾರಗಳ ಜೊತೆಗೆ ವರ್ತಮಾನದ ಅಗತ್ಯತೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದೆಂದರು. ಆ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಚಿಕ್ಕ ಪ್ರಯತ್ನ ತಮ್ಮದು ಎಂದರು.
ಶ್ರಮಜೀವಿ ಸಾಂಸ್ಕೃತಿಕ ಅಭಿವ್ಯಕ್ತಿಗೆ ಚಾಲನೆ ನೀಡಿದ ಜನಪದ ಕಲಾವಿದೆ ನುಗ್ಲಿ ಗೌಡಾರವರು ತಮ್ಮ ಸಂಗಡಿಗರ ಜೊತೆ ಹಾಲಕ್ಕಿಗಳ ಜನಪದ ಹಾಡು ಮತ್ತು ತಾರ್ಲೆ ನರ್ತನ ಪ್ರದರ್ಶಿಸಿದರು. ಲಕ್ಷ್ಮಿ ಸಿದ್ದಿ ಮತ್ತು ಸಂಗಡಿಗರು ಸಿದ್ದಿಗಳ ಜನಪದ ನೃತ್ಯ ಡಮಾಮಿ ಪ್ರದರ್ಶನಗೊಂಡಿತು. ಸ್ವಾಮಿ ಗಾಮನಹಳ್ಳಿ ಶ್ರಮ ಜೀವಿಗಳ ಹಾಡನ್ನು ಪ್ರಸ್ತುತ ಪಡಿಸಿದರು.
ವೇದಿಕೆಯಲ್ಲಿ ಹಿರಿಯ ಸಹಕಾರಿ ಧುರೀಣ ಜೋರ್ಜ್ ಫರ್ನಾಂಡೀಸ್, ಸಾಹಿತಿ ಮಾಧವಿ ಭಂಡಾರಿ ಕೆರೆಕೋಣ ಉಪಸ್ಥಿತರಿದ್ದರು. ಪ್ರೀತಿಪದ ಸಮಿತಿಯ ಅಧ್ಯಕ್ಷರೂ, ಕಸಾಪ ಜಿಲ್ಲಾಧ್ಯಕ್ಷರೂ ಆದ ಬಿ.ಎನ್. ವಾಸರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲುಕಾಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಸಿ.ಆರ್ ಶಾನಭಾಗ ಮತ್ತು ಯಮುನಾ ಗಾಂವ್ಕರ್ ನಿರ್ವಹಿಸಿದರು. ಗಣೇಶ ರಾಥೋಡ ವಂದಿಸಿದರು.
ಪ್ರೀತಿಪದ ಸಮ್ಮಾನ
ಪ್ರೀತಿಪದ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ) ದಿಂದ ಈ ಬಾರಿಯಿಂದ, ನಾಡಿನಲ್ಲಿ ವಿವಿಧ ರಂಗದಲ್ಲಿ ಕೆಲಸ ಮಾಡುತ್ತಿರುವವರ ಗುರ್ತಿಸಿ ಸಮ್ಮಾನ ನೀಡಲು ತೀರ್ಮಾನಿಸಿದಂತೆ, ನಿವೃತ್ತ ಪ್ರಾಚಾರ್ಯ, ಜನಚಳುವಳಿಗಳ ಒಡನಾಡಿ, ಚಿಂತಕ ಜಿಡಿ ಮನೋಜೆಯವರಿಗೆ ಪ್ರೀತಿಪದ ಸಮ್ಮಾನವನ್ನು ನೀಡಲಾಯಿತು. ಪ್ರೊ. ರಾಜೇಂದ್ರ ಚೆನ್ನಿ, ಡಾ. ಎಂ. ಜಿ. ಹೆಗಡೆ, ಯವರು ಸಮ್ಮಾನ ಮಾಡಿದರು. ಎನ್. ಜಿ ನಾಯ್ಕ ಸಮ್ಮಾನ ಪತ್ರ ಓದಿದರು. ಎಂಟು ವಿದ್ಯಾರ್ಥಿಗಳಿಗೆ ಪ್ರೀತಿಪದ ವಿದ್ಯಾರ್ಥಿ ಸಮ್ಮಾನವನ್ನು ನೀಡಲಾಯಿತು ಹಾಗೂ ಜಿ.ಡಿ. ಮನೋಜೆ ಸನ್ಮಾನಿತರ ಉದ್ದೇಶಿಸಿ ಮಾತನಾಡಿದರು.
ಪ್ರೀತಿ ನಾಯ್ಕ, ರಂಜಿತ್ ಜೊನ್ ಬಿಳ್ಕಿಕರ್ ಸಿದ್ದಿ, ಆಕಾಶ ರಾಮ ನಾಯ್ಕ, ಗಣಪತಿ ರಾಠೋಡ್, ವಿಜೇತ ನಾಯ್ಕ ಸಫಲ್ ಕೆರೆಕೋಣ, ಶ್ರೀರಕ್ಷಾ ಗೋಳಿಕಟ್ಟಿ ಹಾಗೂ ಅನನ್ಯ ಶೆಟ್ಟಿ ಇವರಿಗೆ ನೀಡಲಾಯಿತು. ಸಾಹಿತಿ ಕಲೀಂ ಭಾಷ, ಹರಿಹರ, ಪ್ರೊ. ಮೋಹನ ಹಬ್ಬು, ತಿಲಕ ಗೌಡ, ಪ್ರೊ. ಆರ್.ಎಸ್. ಹಬ್ಬು, ಎಂ ಎ ಖತೀಬ್, ಸಯ್ಯದ್ ಸಲಿಂ, ಜೊರ್ಜ ಫರ್ನಾಂಡೀಸ್, ಬಾಬು ಶೇಖ್, ಮುರ್ತುಜಾ ಹುಸೇನ್, ಮಾಧವ ನಾಯ್ಕ ವಿದ್ಯಾರ್ಥಿ ಸಮ್ಮಾನವನ್ನು ನೆರವೇರಿಸಿದರು.
ಕೃಷ್ಣ ನಾಯಕ ಹಿಚ್ಕಡ, ಮಾಧವಿ ಭಂಡಾರಿ, ಕೆರೆಕೋಣ, ನವೀನಕುಮಾರ್ ಹಾಸನ, ನುಗ್ಲಿ ಗೌಡ, ಬಿ.ಎನ್. ವಾಸರೆ ಉಪಸ್ಥಿತರಿದ್ದರು.
ವಿಡಿಯೋ ನೋಡಿ: ಪೋಕ್ಸೋ ಪ್ರಕರಣದ ಆರೋಪಿ ಸ್ವಾಮಿಗೆ ಪಾದಪೂಜೆ ! ಜನರ ಪ್ರಜ್ಞೆಗೆ ಏನಾಗಿದೆ? – ಮೂಡ್ನಾಕೂಡು ಚಿನ್ನಸ್ವಾಮಿ