ಎಲ್ಲ ಗೊಂದಲ-ರಕ್ತಪಾತಕ್ಕೆ ಅಮೆರಿಕವೇ ಕಾರಣ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಮಾಸ್ಕೊ: ‘ಉಕ್ರೇನ್ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಬೇಕಾದ ಅನಿವಾರ್ಯತೆಯೇ ಉದ್ಭವಿಸಿಲ್ಲ. ಅಂಥ ಕ್ರಮಕ್ಕೆ ಮುಂದಾಗಬೇಕಾದ ರಾಜಕೀಯ ಅಥವಾ ಮಿಲಿಟರಿ ಕಾರಣಗಳೂ ಗೋಚರಿಸುತ್ತಿಲ್ಲ. ಅಣ್ವಸ್ತ್ರ ಸಿಡಿತಲೆಗಳನ್ನು ಸಜ್ಜುಗೊಳ್ಳಲು ಸಶಸ್ತ್ರ ಪಡೆಗಳಿಗೆ ಸೂಚಿಸಿರುವುದರ ಹಿಂದೆ ರಷ್ಯಾವನ್ನು ರಕ್ಷಿಸಿಕೊಳ್ಳಬೇಕೆಂಬ ಉದ್ದೇಶ‌ ಮಾತ್ರವೇ ಇದೆ’ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಜಾಗತಿಕ ತಜ್ಞರ ಸಮಾವೇಶದಲ್ಲಿ ಮಾತನಾಡಿದ ಅವರು, ಉಕ್ರೇನ್ ವಿರುದ್ಧ ಅಣ್ವಸ್ತ್ರ ಬಳಸುವ ಸಾಧ್ಯತೆಯನ್ನು ಪುಟಿನ್ ಸ್ಪಷ್ಟವಾಗಿ ತಳ್ಳಿ ಹಾಕಿದರು. ಜಾಗತಿಕ ಮೇಲ್ಮೆ ಸಾಧಿಸುವ ಪಾಶ್ಚಿಮಾತ್ಯ ದೇಶಗಳ ಪ್ರಯತ್ನಗಳಿಂದಾಗಿ ಇಂಥ ಪರಿಸ್ಥಿತಿ ಉದ್ಭವಿಸಿದೆ. ಅವರ ಪ್ರಯತ್ನಗಳು ವಿಫಲವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಅಣ್ವಸ್ತ್ರ ಬಳಕೆ ಸಂಬಂಧಿಸಿ ಬ್ರಿಟನ್‌ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಹೇಳಿಕೆಗೆ ಪ್ರತಿಕ್ರಿಸಿದ ಪುಟಿನ್‌ ‘ನಾನು ಬ್ರಿಟನ್ ಪ್ರಧಾನಿಯಾದರೆ ರಷ್ಯಾ ವಿರುದ್ಧ ಅಣ್ವಸ್ತ್ರ ಬಳಸಲು ಹಿಂಜರಿಯುವುದಿಲ್ಲ ಎಂಬ ಅವರ ಮಾತನ್ನು ನಾವು ಏನೆಂದು ಅರ್ಥೈಸಿಕೊಳ್ಳಬೇಕು. ಇದು ಪಾಶ್ಚಿಮಾತ್ಯ ದೇಶಗಳು ನಮ್ಮನ್ನು ಬೆದರಿಸಲು ಅನುಸರಿಸುತ್ತಿರುವ ತಂತ್ರವೆಂದುಕೊಂಡಿದ್ದೇವೆ. ನಿಜಕ್ಕೂ ನಮಗೆ ಆತಂಕದ ವಿಚಾರವೆಂದು ತಿಳಿಸಿದರು.

ಅಮೆರಿಕ ಮತ್ತು ಅದರ ಮಿತ್ರಪಕ್ಷ ಕೂಟದ ನಡೆಯ ಬಗ್ಗೆ ಪ್ರಸ್ತಾಪಿಸಿ ಸುದೀರ್ಘ ಭಾಷಣ ಮಾಡಿದ ಪುಟಿನ್, ‘ಅವರಿಗೆ ತಮಗೆ ಇಷ್ಟವಿರುವ ನಿಯಮದಂತೆಯೇ ಜಗತ್ತು ನಡೆಯಬೇಕೆಂಬ ನಿಲುವಾಗಿದೆ. ಇದು ಅತ್ಯಂತ ಅಪಾಯಕಾರಿ, ರಕ್ತಸಿಕ್ತ ಮತ್ತು ಕೆಟ್ಟ ರೀತಿಯಲ್ಲಿ ಪಾರಮ್ಯ ಸಾಬೀತುಪಡಿಸುವ ಆಟಕ್ಕೆ ಮುನ್ನುಡಿ ಬರೆಯುತ್ತಿದೆ’ ಎಂದು ಟೀಕಿಸಿದರು.

‘ಭವಿಷ್ಯದಲ್ಲಿ ಜಾಗತಿಕ ಶಾಂತಿ ನೆಲೆಸಬೇಕೆಂದರೆ ರಷ್ಯಾ ಮತ್ತು ಇತರ ದೇಶಗಳೊಂದಿಗೆ ಅಮೆರಿಕ ಮತ್ತು ಇತರ ದೇಶಗಳು ಮಾತುಕತೆ ನಡೆಸಬೇಕು’ ಎಂದು ವ್ಲಾದಿಮಿರ್‌ ಪುಟಿನ್‌ ತಾಕೀತು ಮಾಡಿದರು.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಪಾಶ್ಚಾತ್ಯ ಶಕ್ತಿಗಳೊಂದಿಗಿನ ಸಂಘರ್ಷ ಎಂದು ವ್ಯಾಖ್ಯಾನಿಸಿದ ಅವರು, ಈಗ ಜಗತ್ತು ಮಹತ್ವದ ತಿರುವಿಗೆ ಬಂದು ನಿಂತಿದೆ. ಪಾಶ್ಚಾತ್ಯ ಶಕ್ತಿಗಳು ಜಗತ್ತು ಹೇಗೆ ನಡೆಯಬೇಕು ಎಂಬುದನ್ನು ಏಕಮುಖವಾಗಿ ನಿರ್ಧರಿಸಲು ಈಗ ಸಾಧ್ಯವಿಲ್ಲ. ವಿಶ್ವದ ಬಹುತೇಕ ದೇಶಗಳು ಈ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಶ್ಚಾತ್ಯ ದೇಶಗಳ ದಬ್ಬಾಳಿಕೆ ನೀತಿಗಳು ಗೊಂದಲಗಳನ್ನು ಸೃಷ್ಟಿ ಮಾಡುತ್ತಿವೆ. ಯಾರು ಗಾಳಿ ಬೀಸುವ ಪ್ರಕ್ರಿಯೆ ಆರಂಭಿಸುತ್ತಾರೋ ಅವರು ಖಂಡಿತ ಬಿರುಗಾಳಿಯಲ್ಲಿ ಕೊಚ್ಚಿಹೋಗುತ್ತಾರೆ. ಈಗ ವಿಶ್ವದ ಎದುರು ಇರುವುದು ಎರಡೇ ಆಯ್ಕೆ. ಒಂದು ನಮ್ಮನ್ನು ತುಳಿದುಹಾಕುವ ಸಮಸ್ಯೆಗಳ ಮಹಾಪೂರವನ್ನು ಹೊರುವುದು ಅಥವಾ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಈ ಪರಿಹಾರಗಳು ಎಲ್ಲ ಸಂದರ್ಭದಲ್ಲಿಯೂ ಅತ್ಯುತ್ತಮವಾದುವೇ ಆಗಿರುತ್ತವೆ ಎಂದಲ್ಲ. ಆದರೆ, ಜಗತ್ತನ್ನು ಮತ್ತಷ್ಟು ಸ್ಥಿರ ಮತ್ತು ಸುರಕ್ಷಿತ ಸ್ಥಿತಿಗೆ ಕೊಂಡೊಯ್ಯಬಲ್ಲದು ನಿಲುವಾಗಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *