ಬೆಂಗಳೂರು : ಕಾರ್ಮಿಕ ವರ್ಗದ ಹೋರಾಟಗಾರ ವಿ.ಪಿ.ಕುಲಕರ್ಣಿಯವರು ನಿಧನರಾಗಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ಅನೇಕ ಜನಪರ ಸಂಘಟನೆಗಳಿಗೆ ನಾಯಕತ್ವ ನೀಡಿದ್ದರು. ಐಕ್ಯರಂಗ ಪತ್ರಿಕೆಯ ಜಾವಾಬ್ದಾರಿ ವಹಿಸಿಕೊಂಡು ಹಲವು ಲೇಖಕರಿಗೆ, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಿದ್ದರು.
ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ . ಗ್ರಾಮ ಪಂಚಾಯತ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಟನಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಆರ್.ಎಸ್. ಬಸವರಾಜು, ಮಹೇಶ್ ಪತ್ತಾರ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಭಾಗವಹಿಸಿದ್ದರು.
ವಿ.ಪಿ.ಕುಲಕರ್ಣಿ ಅವರ ಮಗ, ಪತ್ರಕರ್ತ ನಿಖಿಲ್ ಕುಲಕರ್ಣಿ ಅವರು ತಮ್ಮ ತಂದೆಯ ಕುರಿತು ಈ ರೀತಿಯಾಗಿ ಹೇಳಿಕೊಂಡಿದ್ದಾರೆ.
ಬಂಡಪ್ಪ, ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು, ಬಂಧುಗಳಿಂದ ದೂರ ತಳ್ಳಲ್ಪಟ್ಟು 10ನೇ ವಯಸ್ಸಿಗೆ ಒಂದು ಅಂಗಿ, ಚಡ್ಡಿಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೇ 70 ಕಿ.ಮೀ ನಡೆದು ಹುಬ್ಬಳ್ಳಿ ತಲುಪಿದ ಬಾಲಕ.
ಸತತ ಮೂರು ದಿನ ಅನ್ನ, ಆಹಾರವಿಲ್ಲದೇ ನಡೆದು ಸುಸ್ತಾಗಿ ಹುಬ್ಬಳ್ಳಿಯ ಪಾಲಿಕೆ ಕಡ್ಟಡದೆದುರು ಚಳಿಗಾಲದಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದ ಕಾರ್ಮಿಕರ ಬಳಿ ಹೋಗಿ ಕುಳಿತ ಬಾಲಕ.
ಮಾತನಾಡುವ ಮೊದಲೇ ಪ್ರಜ್ಞೆ ತಪ್ಪಿ ಬೆಂಕಿಯ ಮೇಲೆ ಬಿದ್ದಾಗ, ಅಲ್ಲಿದ್ದ ಬಡ ಕಾರ್ಮಿಕನೊರ್ವ ಮನೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಣ್ಣಲು ಖಡಕ್ ರೊಟ್ಟಿ ಕೊಟ್ಟಾಗ, ಕಾರ್ಮಿಕನಲ್ಲಿ ಅಮ್ಮನನ್ನು ಕಂಡ ಬಾಲಕ.
ಇಲ್ಲೇಕೆ ಬಂದಿದ್ದಿಯ? ಏನು ಬೇಕು ಎಂದು ಕೇಳಿದಾಗ ‘ಕೆಲಸ’ ಎಂದು ಉದ್ಧರಿಸಿದ್ದ ಈ ಬಾಲಕ. ಬಡ ಕಾರ್ಮಿಕನ ನೆರವಿನಿಂದ ಹುಬ್ಬಳ್ಳಿಯ ಧೋಬಿಯೊರ್ವನ ಬಳಿ ದಿನಕ್ಕೆ ಎರಡು ರೂ. ಸಂಬಳದ ಕೆಲಸ ಗಿಟ್ಟಿಸಿಕೊಂಡ ಬಾಲಕ.
ಕೆಲಸವಿಷ್ಟೇ ಸೈಕಲ್ ನಲ್ಲಿ ಮನೆ ಮನೆಗೆ ತೆರಳಿ ಒಗೆಯುವ, ಇಸ್ತ್ರಿ ಮಾಡುವ ಬಟ್ಟೆ ಸಂಗ್ರಹಿಸಿ ಅಂಗಡಿಗೆ ತರುವುದು, ಒಗೆದ, ಇಸ್ತ್ರಿ ಮಾಡಿದ ಬಟ್ಟೆಗಳನ್ನು ಮನೆ ಮನೆಗೆ ತೆರಳಿ ಕೊಟ್ಟು ಬರುವುದು.
ಇದಿಷ್ಟೇ ಆಗಿದಿದ್ದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನಕೊಪ್ಪ ಎಂಬ ಕುಗ್ರಾಮದ ವೆಂಕಟೇಶ್ ಕುಲಕರ್ಣಿ, ಹೊರ ಜಗತ್ತಿಗೆ ತನ್ನನ್ನು ತೆರೆದುಕೊಳ್ಳದೇ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿ ಬಿಡುತ್ತಿದ್ದ.
ಆದರೆ ಧೋಬಿ ಅಂಗಡಿಯ ಕೆಲಸ ಆತನ ಬದುಕನ್ನು, ಆಲೋಚನೆಯನ್ನು ಬದಲಿಸಿ ಬಿಟ್ಟಿತ್ತು. ಬಟ್ಟೆ ಸಂಗ್ರಹಣೆ ಸಂದರ್ಭದಲ್ಲಿ ಶ್ರೀಮಂತರ, ಬಡವರ ನಡುವಿನ ವ್ಯತ್ಯಾಸ ಆ ಬಾಲಕನ ಗ್ರಹಿಕೆಗೆ ಬಂದಿತ್ತು.
ಶ್ರೀಮಂತರ ಬದುಕು, ಬಡವರ ಬದುಕಿನ ನಡುವಿನ ಅಗಾಧ ವ್ಯತ್ಯಾಸ ಆತನನ್ನು ಬಹುವಾಗಿ ಕಾಡಿತು. ಅಸಮಾನತೆಯ ವಿರುದ್ಧದ ಧ್ವನಿ ಆ ಬಾಲಕನ ಆಂತರ್ಯದಲ್ಲಿ ಅದಾಗಲೇ ಮೊಳಗಲು ಶುರು ಮಾಡಿತ್ತು.
ಮುಂದೆ 15ನೇ ವಯಸ್ಸಿಗೆ ಧಾರವಾಡದ ಟೈವಾಕ್ ಕಂಪನಿಯಲ್ಲಿ ಕಾರ್ಮಿಕನಾಗಿ ಸೇರಿದಾಗ, ಎಡ ಚಿಂತನೆಗಳಿಗೆ ಆಕರ್ಷಿತಗೊಂಡು, ಎಡ ಕಾರ್ಮಿಕ ಸಂಘಟನೆಯ ಸದಸ್ಯನಾದ ಈ ಬಾಲಕ, 17ನೇ ವಯಸ್ಸಿನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ(ಹೆಸರು ಬೇಡ)ಯ ಕೊರಳು ಪಟ್ಟಿ ಹಿಡಿದು ಎಳೆದು ಬಿಟ್ಟಿದ್ದ.
ಬಿಸಿ ರಕ್ತ ಮತ್ತು ಆವೇಶದ ಭರದಲ್ಲಿ ಕಾನೂನಿನ ಎಲ್ಲೆ ಮೀರಿದ ಈ ತರುಣನನ್ನು ಠಾಣೆಗೆ ಎಳೆದೊಯ್ದಿದ್ದ ಪೊಲೀಸರು, ರಕ್ತ ತಣ್ಣಗಾಗುವಷ್ಟು ಹೊಡದಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಹೋದಾಗ, ನ್ಯಾಯಾಧೀಶರು ಆತನ ವಯಸ್ಸು ತಿಳಿದು, ಮನೆಗೆ ಹೋಗು ಎಂದು ಗದರಿ ಕಳಿಸಿದ್ದರು. ಆಗಿನ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ, ಇನ್ನೊಮ್ಮೆ ಗದ್ದಲ, ದೊಂಬಿಯಲ್ಲಿ ಕಾಣಿಸಿಕೊಂಡರೆ ಹುಷಾರ್ ಅಂದಿದ್ದರು.
ಆದರೆ ಅಷ್ಟೊತ್ತಿಗಾಗಲೇ ಮಾರ್ಕ್ಸ್, ಲೆನಿನ್ ಸಾಹಿತ್ಯ ಓದಿದ್ದ ಈ ತರುಣ, ಸಮತೆಯ ಸಮಾಜಕ್ಕಾಗಿ ಹೋರಾಡುವ ನಿರ್ಧಾರ ಮಾಡಿಬಿಟ್ಟಿದ್ದ. ಇದೇ ಕಾರಣಕ್ಕೆ ಸಂಗಡಿಗರಿಂದ, ಊರ ಗೆಳೆಯರಿಂದ ಬಂಡು, ಬಂಡಪ್ಪ(ಬಂಡಾಯಗಾರ) ಎಂಬ ಉಪನಾಮ ಗಳಿಸಿದ.
ಭಗತ್ ಸಿಂಗ್ ರ ‘ನಾನೇಕೆ ನಾಸ್ತಿಕ’ ಪ್ರಭಾವಿತನಾಗಿ, ಧರ್ಮ, ಜಾತಿ, ಆಚರಣೆಗಳನ್ನು ಧಿಕ್ಕರಿಸಿದ ಈ ತರುಣ ನಾನು ನಾಸ್ತಿಕ ಎಂದು ಘಂಟಾಘೋಷದಿಂದ ಸಾರಿದ್ದ. ಮುಂದೆ ತನ್ನ ಮಕ್ಕಳನ್ನೂ ಇದರತ್ತ ಸುಳಿಯಲು ಬಿಡಲಿಲ್ಲ. ತನ್ನಿಬ್ಬರು ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ಜಾತಿಯ ಕಾಲಂನಲ್ಲಿ ಭಾರತೀಯ ಎಂದು ಬರೆಸಿದ.
ಮುಂದೆ ಸಂಘಟನೆಯ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಲು ಬೆಂಗಳೂರಿಗೆ ತೆರಳಿದ ತರುಣ, ಅಲ್ಲಿಯೂ ಕಾರ್ಮಿಕರ ಬೇಡಿಕೆಗಳಿಗಾಗಿ ಹೋರಾಡುತ್ತಾ ಸೆರೆವಾಸ, ಪೊಲಿಸರ ಲಾಠಿ ಏಟು ತಿನ್ನುತ್ತಾ ಅದನ್ನು ಪುರಸ್ಕಾರವೆಂಬಂತೆ ಸ್ವೀಕರಿಸುತ್ತಾ ಮುಂದುವರೆದ.
ಮುಂದೆ ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷನಾಗಿ, ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ವಿರೋಧಿಗಳಿಂದ ಚಾಕು ಇರಿತಕ್ಕೆ ಒಳಗಾಗಿ, ಸಾವು ಬದುಕಿನ ಹೋರಾಟದಲ್ಲಿ ಅಂತಿಮವಾಗಿ ಜಯಗಳಿಸಿ, ಮತ್ತೆ ಹೋರಾಟದಲ್ಲಿ ತೊಡಗಿಸಿಕೊಂಡ
ಅಷ್ಟೊತ್ತಿಗೆ ಕಾರ್ಮಿಕ ಸಂಘಟನೆಯ ಓರ್ವ ಮಹಿಳಾ ಸದಸ್ಯೆಯ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಪರಸ್ಪರ ವಿವಾಹ ಬಂಧನಕೊಳಪಟ್ಟು, ಪಕ್ಷದ ಸಲಹೆಯ ಮೇರೆಗೆ, ಸ್ವಂತ ಊರಿಗೆ ಮರಳಿ, ಬೆಳಗಾವಿ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ. ಇಷ್ಟೊತ್ತಿಗೆ ಬಂಡಪ್ಪ ಎರಡು ಗಂಡುಮಕ್ಕಳ ತಂದೆ ಕೂಡ ಆಗಿದ್ದ. ಹೀಗೆ ಕುಟುಂಬವಿಲ್ಲದೇ ಏಕಾಂಗಿಯಾಗಿ ಶುರುವಾದ ಆತನ ಪಯಣ, ಹೆಂಡತಿ, ಮಕ್ಕಳ ಕುಟುಂಬದ ಒಡೆಯನಾಗುವ ಹಂತಕ್ಕೆ ಬಂದು ನಿಂತಿತು.
ಮುಂದೆ ರಾಮದುರ್ಗದಲ್ಲಿ ಬೀಡಿ ಕಾರ್ಮಿಕರು, ಕಟ್ಟಡ ಕೂಲಿ ಕಾರ್ಮಿಕರ ಸಂಘಗಳನ್ನು ಸ್ಥಾಪಿಸಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲಿ ಬಂಡಪ್ಪ ನಿರತನಾದ. ನಗರ ಪುರಸಭೆ ಚುನಾವಣೆಯಲ್ಲಿ ಜಯಗಳಿಸಿ, ಅಲ್ಲಿನ ಭ್ರಷ್ಟಾಚಾರ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕೇವಲ 15 ದಿನದಲ್ಲಿ ರಾಜೀನಾಮೆ ಬಿಸಾಕಿ ಹೊರಬಂದಿದ್ದ.
ಮುಂದೆ ರಾಮದುರ್ಗ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪ್ರಚಾರ ಮುಗಿಸಿ ತಡರಾತ್ರಿ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ. ದುರುಳರು ಕಣ್ಣಿಗೆ ಖಾರದ ಪುಡಿಯ ನೀರು ಎರಚಿ ಲಾಠಿ, ಕಬ್ಬಿಣದ ರಾಡುಗಳಿಂದ ಹೊಡೆದಿದ್ದರು.
ಮೂರ್ಛೆ ಹೋದ ಬಂಡಪ್ಪನನ್ನು ಸತ್ತ ಎಂದು ಭಾವಿಸಿ ದುರುಳರು ಓಡಿ ಹೋಗಿದ್ದರು. ಆದರೆ ನಂತರ ಧೋ..ಎಂದು ಸುರಿದ ಮಳೆಯಿಂದ ಎಚ್ಚರಗೊಂಡ ಈ ಹೋರಾಟಗಾರ, ರಕ್ತಸಿಕ್ತ ಸ್ಥಿತಿಯಲ್ಲೇ ಪೊಲಿಸ್ ಠಾಣೆಗೆ ನಡೆದುಕೊಂಡು ಹೋಗಿದ್ದ. ಈತನ ಸ್ಥಿತಿ ಕಂಡು ಬೆಚ್ಚಿಬಿದ್ದ ಪೊಲೀಸರು ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕುರಿತು ಆತನ ಮಕ್ಕಳಿಗೆ ಹೆಚ್ಚೇನೂ ಗೊತ್ತಿರದಿದ್ದರೂ, ಮರುದಿನ ಶಾಲೆಗೆ ಹೊರಟಾಗ ಆಸ್ಪತ್ರೆ ಮುಂದೆ ಸೇರಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು, ಕೊನೆಗೆ ನೆರೆಯ ಬೈಲಹೊಂಗಲದಿಂದ ಹೆಚ್ಚುವರಿ ಪಡೆಗಳನ್ನು ಕರೆಸಿಕೊಂಡಿದ್ದನ್ನು ನೋಡಿದ್ದರು. ಜನರ ಸಹಕಾರಕ್ಕಾಗಿ ಕೋರಿ ಆಸ್ಪತ್ರೆಯ ಒಳಗಿನಿಂದಲೇ ಮೈಕ್ ಮೂಲಕ ಸ್ವತಃ ಬಂಡಪ್ಪನಿಂದಲೇ ಮನವಿ ಮಾಡಿಸಿದ್ದರು ಪೊಲೀಸರು. ನಾನು ಜಿವಂತವಾಗಿ ಮತ್ತೆ ನಿಮ್ಮೊಂದಿಗೆ ಬೆರೆಯುವಂತಾಗಬೇಕಾದರೆ, ಶಾಂತಿಯುತವಾಗಿ ನಿಮ್ಮ ಮನೆಗೆ ತೆರಳಿ ಎಂದು ಮನವಿ ಮಾಡಿದ್ದ ಬಂಡಪ್ಪ. ಆದರೆ ಜನಪ್ರೀತಿ ಮತ್ತು ಚುನಾವಣಾ ರಾಜಕೀಯ ಬೇರೆ ಬೇರೆಯಾಗಿರುವುದರಿಂದ ತಾನು ಸ್ಪರ್ಧಿಸಿದ್ದ ಎರಡೂ ವಿಧಾನಸಭೆ ಚುನಾವಣೆಯಲ್ಲಿ ಬಂಡಪ್ಪ ಸೋಲುಂಡಿದ್ದ ಎಂಬುದು ಬೇರೆ ಮಾತು.
ಆದರೆ ಹೋರಾಟದ ಹಾದಿಯಿಂದ ವಿಮುಖಗೊಳ್ಳದ ಬಂಡಪ್ಪ, ಜನ ಚಳುವಳಿಯನ್ನು ಮುಂದುವರೆಸಿದ. ತೀರ ಇತ್ತೀಚಿಗೆ ಅನಾರೋಗ್ಯದಿಂದ ಹಾಸಿಗೆ ಹಿಡಿಯುವವರೆಗೂ ಮತ್ತು ಹಿಡಿದಾದ ಮೇಲೂ ಹೋರಾಟದ ಛಲ ಬಿಟ್ಟಿಲ್ಲ. ಆರೋಗ್ಯ ಸಂಪೂರ್ಣವಾಗಿ ಹದಗೆಡುವ ಮೊದಲು ಆತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದ.
ಈ ಬಂಡಪ್ಪ ಈಗ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾನೆ. ಆದರೆ ಎದ್ದು ಓಡಾಡಲು ಮತ್ತೊಬ್ಬರ ಸಹಾಯ ಪಡೆಯಲು ಸ್ವಾಭಿಮಾನ ಒಪ್ಪುತ್ತಿಲ್ಲ. ಏಳಲು ಹೋಗಿ ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರೂ ಆತನ ಅಹಂ ಕಡಿಮೆಯಾಗಿಲ್ಲ. ಈಗಂತೂ ಮಡದಿ, ಮಕ್ಕಳನ್ನೂ ಗುರುತು ಹಿಡಿಯದ ಆತ, ಸಹಾಯಕ್ಕೆ ಮುಂದಾದರೆ ಕೈಸನ್ನೆ ಮಾಡಿ ದೂರ ಸರಿಸುತ್ತಾನೆ. ಒಂಟಿತನದಲ್ಲಿ ಬಾಲ್ಯದ ದಿನಗಳನ್ನು ಕಳೆದಿದ್ದ ಆತ, ಜ್ವರ ಬಂದಾಗಲೂ ತನ್ನನ್ನು ತಾನೇ ಸಾವರಿಸಿಕೊಂಡಿದ್ದ ಕಾರಣವೋ ಏನೋ, ಈಗಲೂ ಆತನಿಗೆ ಅವನೊಬ್ಬನೇ ಬಂಧು.
ಮುಂದೆನಾಗುತ್ತೋ ಗೊತ್ತಿಲ್ಲ. ಆದರೆ ಆತ ಕೊನೆಯ ಕ್ಷಣದವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಖಾತರಿ ಇಲ್ಲಿರುವ ಪ್ರತಿಯೊಬ್ಬರಿಗೂ ಇದೆ. ಈ ಬಂಡಪ್ಪನೇ ನನ್ನ ಹೆಮ್ಮೆಯ ಅಪ್ಪ.
ನನ್ನಪ್ಪನಾಗಿ ಬಂಡಪ್ಪ
ನಾನಾಗ ಹೈಸ್ಕೂಲ್ ನಲ್ಲಿ ಇದ್ದಿರಬಹುದು. ಸಮಾನತೆ ಎಂದರೇನು ಎಂದು ನಾನು ಕೇಳಿದ ಪ್ರಶ್ನೆಗೆ ಆತ ಹೀಗೆ ಉತ್ತರಿಸಿದ್ದ- ”ಈ ಜಗತ್ತಿನಲ್ಲೊ 700 ಕೋಟಿ(ಆಗಿನ ಲೆಕ್ಕಾಚಾರ)ಜನರಿದ್ದಾರೆ, ಇಷ್ಟೂ ಜನ ಮಾಡದ ಯಾವುದಾದರೂ ಒಂದು ಪ್ರತ್ಯೇಕ ಕೆಲಸ ನೀನು ಮಾಡುತ್ತಿಯ? ರಾತ್ರಿ ಮಲಗುವುದು, ಬೆಳಗ್ಗೆ ಏಳುವುದು, ಪ್ರಾಕೃತಿಕ ಕರೆಗಳು, ಊಟ-ತಿಂಡಿ, ಹೀಗೆ ಇದ್ಯಾವುದರಲ್ಲಾದರೂ ನೀನು ಅನ್ಯರಿಗಿಂತ ಭಿನ್ನವಾದುದೇನಾದರೂ ಮಾಡುತ್ತೀಯ? ಯೋಚನೆ ಮಾಡುವ ನಿನ್ನ ಮೆದುಳಿನ ಶಕ್ತಿ ಹೊರತುಪಡಿಸಿ ಉಳಿದೆಲ್ಲಾ ವಿಷಯದಲ್ಲಿ ನೀನು ಈ ಜಗತ್ತಿನ ಇತರ ಮನುಷ್ಯನಿಗೆ ಸಮ. ಹಾಗಿದ್ದರೂ ನಿನಗಿರುವ ಸೌಲಭ್ಯ ಬೇರೊಬ್ಬನಿಗೆ ಏಕಿಲ್ಲ?ಚಿಂತಿಸು, ಸಮಾನತೆ ಎಂದರೇನು ಎಂದು ನಿನಗೆ ತಿಳಿಯುತ್ತದೆ.”
“ಜಗತ್ತಿನ ಎಲ್ಲ ಧರ್ಮಿಯರಿಗೂ ನೀರು, ಗಾಳಿ, ಬೆಳಕು ಪವಿತ್ರ. ಒಂದು ಧರ್ಮದ ಜನ ನೀರು ಕುಡಿಯುತ್ತಾರೆ ಹಾಗಾಗಿ ಈ ಧರ್ಮದವನಾಗಿ ನೀನು ನೀರು ಕುಡಿಯಬೇಡ, ಒಂದು ಧರ್ಮದ ಜನರು ಗಾಳಿಯನ್ನು ಉಸಿರಾಡುತ್ತಾರೆ ಹಾಗಾಗಿ ಈ ಗಾಳಿಯನ್ನು ಉಸಿರಾಡಬೇಡ, ಒಂದು ಧರ್ಮದ ಜನ ಬೆಂಕಿಯಲ್ಲಿ ಆಹಾರ ಬೇಯಿಸುತ್ತಾರೆ, ಹಾಗಾಗಿ ನೀನು ಈ ಬೆಂಕಿಯನ್ನು ಬಳಸಬೇಡ ಎಂದು ಹೇಳುವ ಛಾತಿ ಯಾವ ಧರ್ಮಕ್ಕೂ ಇಲ್ಲ. ಗೊಡ್ಡು ಆಚರಣೆಯ ಗುಲಾಮನಾಗಿರುವ ಮನುಷ್ಯ ಮಾತ್ರ ಜಾತಿ-ಧರ್ಮದ ನೆರಳನ್ನು ಆಶ್ರಯಿಸುವುದು”.
ಆತ ಹೋಗುತ್ತಾನೆ, ಹೋರಾಡುತ್ತಲೇ ಹೋಗುತ್ತಾನೆ. ಹೋರಾಟದ ಸಂದೇಶದ ಮೂಲಕ ಆತ ನಮ್ಮೊಳಗೆ ಸದಾ ಬದುಕಿರುತ್ತಾನೆ.
ನನಗಾಗಿ ಬಂಡಪ್ಪನ ಸಂದೇಶ-
ಇಡೀ ಜಗತ್ತಿನಲ್ಲಿ ಕಾರ್ಮಿಕನ ಪಟ್ಟಕ್ಕಿಂತ ಶ್ರೇಷ್ಠ ಪಟ್ಟ ಮತ್ತೊಂದಿಲ್ಲ. ಕೊನೆಯವರೆಗೂ ಕಾರ್ಮಿಕನಾಗಿ ದುಡಿ. ನೀನು ಕೆಲಸಮಾಡುವ ಸಂಸ್ಥೆಗೆ ನಿಯತ್ತಿನಿಂದ ದುಡಿ. ನಾನಿಲ್ಲದ ಮರುದಿನವೇ ನೀನು ಕೆಲಸ ಮಾಡಬೇಕು. ಈ ಜಗತ್ತಿಗೆ ನಾನೊಬ್ಬ ಕಾರ್ಮಿಕನನ್ನು ಕಾಣಿಕೆಯಾಗಿ ಕೊಟ್ಟಿದ್ದೇನೆ. ಅದನ್ನು ನೀನು ಎಂದಿಗೂ ಮರೆಯಕೂಡದು..