ಮೇ16 ರಂದು ರೈತ ಗೌರವ ದಿನಾಚರಣೆ,
ಮೇ 22ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನಾ ದಿನಾಚರಣೆ
ಕೊವಿಡ್ ಮಹಾಮಾರಿಯ ವಿರುದ್ಧ ಲಾಕ್‍ಡೌನ್ ಲ್ಬಣಗೊಳಿಸಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ಹೆಸರಿನಲ್ಲಿ ಮೋದಿ ಸರಕಾರದ ಹಣಕಾಸು ಮಂತ್ರಿಗಳು ಮೇ 13ರಿಂದ ಪ್ರಕಟಿಸುತ್ತಿರುವ ‘ಆತ್ಮನಿರ್ಭರ್ ಭಾರತ್’ , ಅಂದರೆ ‘ಸ್ವಾವಲಂಬೀ ಭಾರತ’ ಪ್ಯಾಕೇಜ್ ಎಂಬುದು ರೈತ-ಕಾರ್ಮಿಕರಿಗೆ ಮಾಡುತ್ತಿರುವ ಕ್ರೂರ ವಂಚನ ಎಂದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮತ್ತು ಕಾರ್ಮಿಕರ ದೇಶವ್ಯಾಪಿ ಪ್ರತಿಭಟನೆಗಳು ಎದ್ದು ಬರುತ್ತಿವೆ.
ಈಗಾಗಲೇ ಮೇ 16ರಂದು ದೇಶಾದ್ಯಂತ ಲಕ್ಷಾಂತರ ರೈತರು ‘ಕಿಸಾನ್ ಸಮ್ಮಾನ್ ದಿವಸ್’ (ರೈತ ಗೌರವ ದಿನ’ ಆಚರಿಸಿದ್ದಾರೆ. ಮೇ 22ರಂದು ರಾಷ್ಟ್ರವ್ಯಾಪಿ ಮತಪ್ರದರ್ಶನ ನಡೆಸಲು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.
ಅಖಿಲ ಬಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ(ಎ.ಐ.ಕೆ.ಎಸ್.ಎಸ್.ಸಿ.) ಕರೆಯಂತೆ ದೇಶದ ಮೂಲೆ-ಮೂಲೆಗಳಲ್ಲೂ ರೈತರು ಕೊವಿಡ್-19 ಮಹಾಮಾರಿಯ ಮಿತಿಗಳ ನಡುವೆಯೂ ರೈತ-ಕಾರ್ಮಿಕರ ನೋವು-ಸಂಕಟಗಳ ಬಗ್ಗೆ ಮೋದಿ ಸರಕಾರದ ಅಸಡ್ಡೆಯ ವಿರುದ್ಧ ಮತ್ತು ಲಾಕ್‍ಡೌನ್ ಮರೆಯಲ್ಲಿ ಕೃಷಿ-ವ್ಯಾಪಾರಿಗಳ ಪರ ‘ಸುಧಾರಣೆ’ಗಳನ್ನು ಹರಿಯ ಬಿಡುತ್ತಿರುವುದರ ವಿರುದ್ಧ ಪ್ರತಿಭಟನೆಯ ಘೋಷಣೆಗಳನ್ನು ಹೊತ್ತ ಫಲಕಗಳನ್ನು ಹಿಡಿದುಕೊಂಡು ರೈತ ಗೌರವ ದಿನವನ್ನು ಆಚರಿಸಿದ್ದಾರೆ.
ದಿಲ್ಲಿಯಲ್ಲಿ ರೈತ ಗೌರವ ದಿನಾಚರಣೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮತ್ತು ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್, ಅಖಿಲ ಬಾರತ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಿಂಗ್, ಜತೆಗೆ ಸಿಐಟಿಯು ಅಖಿಲ ಭಾರತ ಮುಖಂಡರೂ ಈ ಆಚರಣೆಯಲ್ಲಿ ಪಾಲ್ಗೊಂಡರು.
ಕೊವಿಡ್-19 ಮಹಾಮಾರಿಯನ್ನು ಎದುರಿಸಿಯೂ ದೇಶಕ್ಕೆ ಆಹಾರವನ್ನು ಒದಗಿಸಲು ಶ್ರಮಿಸುತ್ತಿರುವ ರೈತರ ಕಾಣಿಕೆಯನ್ನು ಗುರುತಿಸಿ ಗೌರವಿಸಬೇಕು ಎಂದು ಹೇಳಿದ ಮುಖಂಡರು ಎಲ್ಲ ರೈತರು ಕೃಷಿ ಕಾರ್ಮಿಕ ಕುಟುಂಬಗಳ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು, ಸಿ2+50ಶೇ. ಸೂತ್ರದ ಪ್ರಕಾರ ಕನಿಷ್ಟ ಬೆಂಬಲ ಬೆಲೆಗಳಲ್ಲಿ ಬೆಳೆಗಳ ಖರೀದಿಯನ್ನು ಖಾತ್ರಿ ಪಡಿಸಬೇಕು, ಲಾಕ್‍ಡೌನ್ ಅವಧಿಯಲ್ಲಿ ತಿಂಗಳಿಗೆ 10,000ರೂ. ನಗದು ಬೆಂಬಲ ಕೊಡಬೇಕು ಮತ್ತು ಬೆಳೆನಾಶ ಮತ್ತು ಲಾಕ್‍ಡೌನಿನಿಂದ ಉದ್ಯೋಗ ನಾಶಕ್ಕೆ ನಿಜವಾದ ರೀತಿಯ ಪರಿಹಾರ ಕೊಡಬೇಕು ಎಂದು ಈ ಮುಖಂಡರು ಸರಕಾರವನ್ನು ಆಗ್ರಹಿಸಿದರು.
ಕೃಷಿ ಉತ್ಪನ್ನಗಳ ತಡೆಮುಕ್ತ ಅಂತರ-ರಾಜ್ಯ ವ್ಯಾಪಾರಕ್ಕೆ ಅವಕಾಶ ಕೊಡಲೆಂದು ಆವಶ್ಯಕ ಸರಕುಗಳ ಕಾಯ್ದೆ, 1955ಕ್ಕೆ ಮೋದಿ ಸರಕಾರ ತಿದ್ದುಪಡಿಯನ್ನು ಪ್ರಕಟಿಸಿರುವುದರ ವಿರುದ್ಧವೂ ರೈತರು ಘೋಷಣೆಗಳನ್ನು ಎತ್ತಿದರು. ಇದು ರಾಜ್ಯಗಳ ಅಧಿಕಾರಗಳನ್ನು ಸೊರಗಿಸಿ ದೇಶದ ಒಕ್ಕೂಟ ಸ್ವರೂಪದ ವಿರುದ್ಧ ಮಾಡಿರುವ ದಾಳಿ, ಇಂತಹ ಕೃಷಿ ವ್ಯಾಪಾರಸ್ಥರ ಪರವಾದ ಕ್ರಮಗಳಿಂದ ರೈತಾಪಿ ಜನಗಳ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸುವುದರ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ರೈತರು ಕೊಟ್ಟಿದ್ದಾರೆ.
ಮೇ 22ರಂದು ಕಾರ್ಮಿಕರ ರಾಷ್ಟ್ರವ್ಯಾಪಿ ಮತಪ್ರದರ್ಶನ -ರಾಜಘಾಟ್ ನಲ್ಲಿ ಕಾರ್ಮಿಕ ಮುಖಂಡರಿಂದ ಉಪವಾಸ ಸತ್ಯಾಗ್ರಹ
ಕೇಂದ್ರೀ ಯ ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ವಲಯಗಳ ಸ್ವತಂತ್ರ ಅಖಿಲ ಭಾರತ ಒಕ್ಕೂಟಗಳ ಮುಖಂಡರು ಮೇ 14ರಂದು ಸಭೆ ಸೇರಿ ಲಾಕ್‍ಡೌನ್ ಅವಧಿಯಲ್ಲಿ ಶ್ರಮಜೀವಿಗಳು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಈ ಸವಾಲನ್ನು ಎದುರಿಸಲು ಐಕ್ಯ ಕಾರ್ಯಾಚರಣೆಗಳನ್ನು ನಡೆಸಲು ನಿರ್ಧರಿಸಿದರು.
ಕೊವಿಡ್-19 ರ ಛತ್ರಛಾಯೆಯ ಅಡಿಯಲ್ಲಿ ಪ್ರತಿದಿನ ಸರಕಾರ ದೇಶದ ಕಾರ್ಮಿಕ ವರ್ಗ ಮತ್ತು ಜನಸಾಮಾನ್ಯರ ವಿರುದ್ಧ ಒಂದಿಲ್ಲೊಂದು ದಾಳಿಯನ್ನು ಮಾಡುತ್ತಲೇ ಇದೆ, ದುಡಿಯುವ ಜನಗಳ ಸಂಕಟಗಳನ್ನು ಪರಿಹರಿಸುವ ಬದಲು ಹೆಚ್ಚಿಸುತ್ತಲೇ ಇದೆ.
ಲಾಕ್‍ಡೌನ್ ಅವಧಿಯಲ್ಲಿ ಸಂಬಳ ಕಡಿತ ಮಾಡಬಾರದು, ಕೆಲಸದಿಂದ ತೆಗೆದು ಹಾಕಬಾರದು ಎಂದು ಸ್ವತಃ ಸರಕಾರವೇ ಕೊಟ್ಟಿರುವ ನಿರ್ದೇಶನಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದರೂ, ಕಾರ್ಮಿಕ ಸಂಘಟನೆಗಳು ಈ ಕುರಿತು ಪ್ರಧಾನ ಮಂತ್ರಿಗಳು ಮತ್ತು ಕಾರ್ಮಿಕ ಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸಿದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಲಾಕ್‍ಡೌನ್ ಆರಂಭಿಸಿದಾಗ ಸರಕಾರ ಪ್ರಕಟಿಸಿದ ರೇಷನ್ ಹೆಚ್ಚಳ, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ನಗದಿನ ಸಣ್ಣ ಮೊತ್ತ ಕೂಡ ಬುಡಮಟ್ಟಕ್ಕೆ ತಲುಪಿಲ್ಲ.
ಲಕ್ಷಾಂತರ ಹತಾಶ ವಲಸೆ ಕಾರ್ಮಿಕರು ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ತಿನ್ನಲು ಅನ್ನವಿಲ್ಲದಂತಾಗುತ್ತಿರುವುದರಿಂದ ಬೇರೆ ದಾರಿಗಾಣದೆ ರಸ್ತೆಗಳು, ರೈಲು ಹಳಿಗಳ ಮೇಲೆಯೇ ನಡೆದು, ಕಾಡು-ಮೇಡುಗಳನ್ನು ದಾಟಿ, ಹೆಂಡತಿ-ಮಕ್ಕಳನ್ನು ಕಟ್ಟಿಕೊಂಡು ಹೋಗುತ್ತಿರುವ ದೃಶ್ಯಗಳು, ಪಡುತ್ತಿರುವ ಪಾಡುಗಳ ಬಗ್ಗೆ ಸರಕಾರ ಸಂವೇದನಾಶೂನ್ಯವಾಗಿದೆಯಷ್ಟೇ ಅಲ್ಲ, ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಕೊಡುತ್ತಿದೆ. ಲಾಕ್‍ಡೌನಿನ ಅವಧಿ ದೀರ್ಘಗೊಂಡಿರುವ ಪರಿಸ್ಥಿತಿಯಲ್ಲಿ ಕಾರ್ಮಿಕರ ಪ್ರತಿರೋಧಗಳಿಗೆ ಅವಕಾಶವಿರದ ಸನ್ನಿವೇಶವನ್ನು ಬಳಸಿಕೊಂಡು ವಂಚನೆಯಿಂದ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿಗಳನ್ನು ಮಾಡುತ್ತಿದೆ.
ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಮೊದಲ ಹಂತದಲ್ಲಿ ಎಂಟು ರಾಜ್ಯಗಳಲ್ಲಿ ಕೆಲಸದ ಅವಧಿಯನ್ನು 8 ಗಂಟೆಗಳಿಂದ 12 ಗಂಟೆಗಳಿಗೆ ಏರಿಸಿದ ನಂತರ, ಉತ್ತರಪ್ರದೇಶ, ಮಧ್ಯಪ್ದೇಶ ಮತ್ತು ಗುಜರಾತಿನಲ್ಲಿ ಸುಮಾರಾಗಿ ಎಲ್ಲ ಕಾರ್ಮಿಕ ಕಾಯ್ದೆಗಳನ್ನು ಕನಿಷ್ಟ ಮೂರು ವರ್ಷಗಳ ಕಾಲ ಅಮಾನತುಗೊಳಿಸುವ ಇನ್ನೂ ಕರಾಳವಾದ ಕ್ರಮಗಳನ್ನು ಪ್ರಕಟಿಸಲಾಗಿದೆ.
ಈ ರೀತಿಯಲ್ಲಿ ಕಾರ್ಮಿಕರನ್ನು ಜೀತದಾಳುಗಳಾಗಿ ಮಾಡುವ ಪ್ರಯತ್ನಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಇದನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಈಗ ರಾಜ್ಯಮಟ್ಟದಲ್ಲಿ ಪ್ರತಿರೋಧ ಕಾರ್ಯಾಚರಣೆಗಳನ್ನು ಆರಂಭಿಸಲು ಮೇ 22ನ್ನು ರಾಷ್ಟ್ರವ್ಯಾಪಿ ಪತ್ರಿಭಟನಾ ದಿನವಾಗಿ ಆಚರಿಸಲು ಕರೆ ನೀಡಿವೆ. ಜತೆಗೆ ಆ ದಿನವಿಡೀ ಈ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮುಖಂಡರು ದಿಲ್ಲಿಯ ರಾಜಘಾಟ್ ನಲ್ಲಿ ಗಾಂದೀಜಿಯ ಸಮಾಧಿಯ ಎದುರು ಉಪವಾಸ ಮುಷ್ಕರ ನಡೆಸುತ್ತಾರೆ.
ನಂತರ ಲಕ್ಷಾಂತರ ಮನವಿಗಳನ್ನು ಸರಕಾರಗಳಿಗೆ ಕಳಿಸಲಾಗುವುದು. ಈ ನಡುವೆ ರಾಜ್ಯಗಳಲ್ಲಿ ಮತ್ತು ವಿವಿಧ ಉದ್ದಿಮೆ ವಲಯಗಳಲ್ಲಿ ಐಕ್ಯ ಚಳುವಳಿಯನ್ನು ಬಲಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಲಾಗುವುದು.
ಭಾರತ ಸರಕಾರ ಕಾರ್ಮಿಕರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಕುರಿತ ಅಂತರ್ ರಾಷ್ಟ್ರೀಯ ಅಧಿನಿರ್ಣಯಗಳನ್ನು ಉಲ್ಲಂಘಿಸುತ್ತಿದೆ ಎಂದು ಅಂತರ್ ರಾಷ್ಟ್ರೀಯ ಕಾರ್ಮಿಕ ಸಂಘಟನೆ, ಐಎಲ್‍ಒಗೆ ಒಂದು ಜಂಟಿ ದೂರನ್ನು ಸಲ್ಲಿಸಲೂ ಈ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.