ಬೆಂಗಳೂರು: ರಾಜ್ಯದ ಎಲ್ಲಾ 3614 ಕಂದಾಯ ಗ್ರಾಮಗಳಿಗೂ ಜೂನ್ ತಿಂಗಳ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಹಕ್ಕುಪತ್ರ ನೀಡುವ ಮೂಲಕ ಬಡವರ ಕೆಲಸವನ್ನು ಈ ವರ್ಷದೊಳಗೆ ಮುಗಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮೇ 3 ಶನಿವಾರದಂದು ಗಡುವು ನಿಗದಿಗೊಳಿಸಿದ್ದಾರೆ. ಜೂನ್
ಶನಿವಾರ ವಿಕಾಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ ಅವರು, “ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಡು ಬಡವರಿಗೆ ಕಂದಾಯ ಗ್ರಾಮಗಳನ್ನು ರಚಿಸಿ ಶಾಶ್ವತ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದಲೇ 2017 ರಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಆದರೆ ಅನುಷ್ಠಾನ ಈವರೆಗೆ ಪೂರ್ಣಗೊಳ್ಳದಿರುವುದು ದುರಾದೃಷ್ಟ. ಈ ಹಿಂದೆ ಹಲವರಿಗೆ ಹಕ್ಕುಪತ್ರ ನೀಡಿದ್ದರೂ, ಇನ್ನೂ ಆಗಬೇಕಾದ ಕೆಲಸ ಸಾಕಷ್ಟು ಬಾಕಿ ಇದೆ” ಎಂದು ವಿಷಾದಿಸಿದರು.
“ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ರಾಜ್ಯಾದ್ಯಂತ 3,614 ಕಂದಾಯ ಗ್ರಾಮಗಳಿದ್ದು, ಈವರೆಗೆ 2600 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ಸರ್ಕಾರದ ಅವಧಿಯಲ್ಲಿ 1400 ಗ್ರಾಮಗಳ ರಚನೆ ಆಗಿದ್ದರೆ, ಕಳೆದ ಎರಡು ವರ್ಷದ ಅವಧಿಯಲ್ಲಿ 1,200 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ವಾಸ್ತವದಲ್ಲಿ ಇನ್ನೂ 1014 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ” ಎಂದರು.
ಇದನ್ನೂ ಓದಿ: ವಕೀಲ ಜಗದೀಶ್ ಸಾವು ಅನುಮಾನಾಸ್ಪದ, ಸೂಕ್ತ ತನಿಖೆಗೆ ಒತ್ತಾಯ – ಎ ಐ ಎಲ್ ಯು ಜೂನ್
ಮುಂದುವರೆದು “ಕೇಂದ್ರ ಸರ್ಕಾರ ದೇಶದಾದ್ಯಂತ ಜನಗಣತಿ ಆರಂಭಿಸುವುದಾಗಿ ಘೋಷಿಸಿದೆ. ಜನಗಣತಿ ಆರಂಭವಾದರೆ ಜುಲೈ ತಿಂಗಳಿನಿಂದ ಕೇಂದ್ರ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಲು ಅವಕಾಶ ನೀಡುವುದಿಲ್ಲ. ಪರಿಣಾಮ ಬಡವರ ಅತಿಮುಖ್ಯ ಕೆಲಸಕ್ಕೆ ತೊಡಕುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬಾಕಿ ಇರುವ 1014 ಗ್ರಾಮಗಳಿಗೂ ಇದೇ ವರ್ಷದ ಜೂನ್ ಅಂತ್ಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸಿ ಜುಲೈ ನಂತರ ಹಕ್ಕುಪತ್ರ ವಿತರಿಸಿ. ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ಮಾತಿನಂತೆ ಈ ಕೆಲಸವನ್ನು ಈ ವರ್ಷಾಂತ್ಯದೊಳಗೆ ಮುಗಿಸಿ” ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸಮಯದ ಗಡುವು ನಿಗದಿಪಡಿಸಿದರು.
ಬಡವರ ಕೆಲಸವೇ ಸರ್ಕಾರದ ಧ್ಯೇಯ!
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಎಲ್ಲಾ ಕಾಲದಲ್ಲೂ ಸಮಾಜದ ಅತ್ಯಂತ ಹಿಂದುಳಿದವರು ಹಾಗೂ ಕಡು ಬಡವರ ಪರ ಕೆಲಸ ಮಾಡುವುದೇ ಸರ್ಕಾರದ ಧ್ಯೇಯ. ಆ ನಿಟ್ಟಿನಲ್ಲಿ ಆಡಳಿತ ವರ್ಗವೂ ಸಹಕರಿಸಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಕಿವಿಮಾತು ಹೇಳಿದರು.
ಈ ತಿಂಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ನಾಗರೀಕ ಸಮಾಜದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಾಗೂ ಹಿಂದುಳಿದ ಜನ ಸಮೂಹಕ್ಕೆ ಸಹಾಯವಾಗುವ ಕೆಲಸ ಮಾಡಿ ಆ ಮೂಲಕ ಎರಡು ವರ್ಷ ಪೂರೈಸಿದ ಹರ್ಷಾಚರಣೆ ನಡೆಸಿದರೆ ಮಾತ್ರ ಆ ಕಾರ್ಯಕ್ರಮ ಅರ್ಥಪೂರ್ಣ. ಆ ನಿಟ್ಟಿನಲ್ಲಿ ಮೇ. 20ಕ್ಕೆ ಹೊಸಪೇಟೆಯಲ್ಲಿ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ” ಎಂದು ತಿಳಿಸಿದರು.
“ಕಾರ್ಯಕ್ರಮದ ಭಾಗವಾಗಿ ಈಗಾಗಲೇ ಅಂತಿಮ ಅಧಿಸೂಚನೆ ಆಗಿರುವ 2600 ಕಂದಾಯ ಗ್ರಾಮಗಳ 1.41 ಲಕ್ಷ ಫಲಾನುಭವಿಗಳ ಪೈಕಿ 92,719 ಜನ ಹಕ್ಕುಪತ್ರ ಸಿದ್ದವಾಗಿದೆ. ಇನ್ನೂ 50 ಸಾವಿರ ಹಕ್ಕುಪತ್ರಗಳು ಬಾಕಿ ಇದ್ದು, ಬಾಕಿ ಹಕ್ಕುಪತ್ರಗಳನ್ನೂ ಶೀಘ್ರ ಸಿದ್ದಪಡಿಸಿ. ತುಮಕೂರು, ಚಿತ್ರದುರ್ಗ, ಬೆಳಗಾವಿ, ಹಾವೇರಿ, ರಾಯಚೂರು, ಬಾಗಲಕೋಟೆ, ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಾಕಿ ಇರುವ ಅಥವಾ ಬಿಟ್ಟುಹೋಗಿರುವ ಗ್ರಾಮಗಳನ್ನು ಗುರುತಿಸಿದರೆ ಇನ್ನೂ 30 ರಿಂದ 35 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ಸಿದ್ದಪಡಿಸಬೇಕಾಗಬಹುದು. ಆ ಕೆಲಸವನ್ನೂ ಸಹ ಶೀಘ್ರ ಪೂರ್ಣಗೊಳಿಸಿ” ಎಂದರು.
ಮುಂದುವರೆದು, “ಹಾಡಿ, ಹಟ್ಟಿ, ತಾಂಡಾಗಳಲ್ಲಿ ವಾಸಿಸುತ್ತಿರುವವರು ಸಾಮಾಜಿಕವಾಗಿ ಹಾಗೂ ಆರ್ಥಿವಾಗಿ ಸಾಕಷ್ಟು ಹಿಂದುಳಿದವರು. ಆದರೆ, ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸದ ಕಾರಣ ದಶಕಗಳಿಂದಲೂ ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚೆಗೆ ಕಳೆದೊಂದು ದಶಕಗಳಿಂದ ರಾಜ್ಯ ಸರ್ಕಾರ ಗ್ರಾಮಠಾಣಾ ಗಡಿಗಳನ್ನೂ ಮೀರಿ “ಹಾಡಿ, ಹಟ್ಟಿ, ತಾಂಡಾಗಳಿಗೆ ರಸ್ತೆ ಹಾಗೂ ನೀರಿನ ಸೌಲಭ್ಯ ನೀಡಿದ್ದೇವೆ. ಈ ಹಿಂದೆ ಶಾಲೆ, ನೀರು ಸರಬರಾಜು ಸಹ ನೀಡುತ್ತಿರಲಿಲ್ಲ ಎಂಬುದೇ ಕಟು ವಾಸ್ತವ. ಇಂತಹ ಜನರಿಗೆ ಶಾಶ್ವತ ಪರಿಹಾರ ನೀಡಿದರೆ ಮಾತ್ರ ಸರ್ಕಾರ ಎರಡು ವರ್ಷ ಪೂರೈಸಿದ್ದೂ ಅರ್ಥಪೂರ್ಣವಾಗುತ್ತದೆ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳೂ ಬಡವರ ಕೆಲಸಗಳನ್ನು ಆದ್ಯತೆ ಮೇಲೆ ಮಾಡಬೇಕು” ಎಂದು ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಭೂ ಮಾಪನಾ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.
ಇದನ್ನೂ ನೋಡಿ: ಮೇ ದಿನದ ವಿಶೇಷ | ಕೆಲಸದ ಅವಧಿ ಎಷ್ಟಿರಬೇಕು? ಕಾರ್ಮಿಕ ಕಾನೂನು ಏನು ಹೇಳುತ್ತದೆ? Janashakthi Media ಜೂನ್