ವಿಝಿಂಜಂ ಬಂದರು ಪ್ರಾಜೆಕ್ಟ್ ನಿಲ್ಲಿಸಲು ಸಾಧ್ಯವಿಲ್ಲ- ಕೇರಳ ಮುಖ್ಯಮಂತ್ರಿ

ಕೇರಳದ ವಿಝಿಂಜಂ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆಯುತ್ತಿರುವ ಗಲಭೆಗಳು ಹಲವರಿಗೆ ಹಲವು ಅಭಿಪ್ರಾಯಗಳನ್ನು ಉಂಟುಮಾಡಿರುವಂತೆ ಕಾಣುತ್ತಿದೆ.  ಎಲ್‌ ಡಿ ಎಫ್ ಸರಕಾರದ ವಿರುದ್ಧ ಕತ್ತಿ ಮಸೆಯುತ್ತಿರುವವರು ಎಂದಿನಂತೆ ಸರಕಾರ ಪ್ರತಿಭಟನಾಕಾರರ ವಿರುದ್ಧ ದಮನ ನಡೆಸುತ್ತಿದೆ ಎಂದರೆ, ಎಲ್‌ಡಿ ಎಫ್ ಸರಕಾರದ ಬಗ್ಗೆ ಸಹಾನುಭೂತಿ ಇರುವವರು ಕೂಡ ಸಿಪಿಐ(ಎಂ) ಕೂಡ ಅದಾನಿ ಪ್ರಾಜೆಕ್ಟಿನ ಪರವಾಗಿ ನಿಂತಿದೆ ಎಂದು ಭಾವಿಸಿ ಅದನ್ನು ಟೀಕಿಸುತ್ತಿದ್ದಾರೆ. ಇದನ್ನು ಸ್ಥಳೀಯ ಚರ್ಚ್ ಮೀನುಗಾರರ ಹಿತದೃಷ್ಟಿಯಿಂದ ವಿರೋಧಿಸುತ್ತಿದೆ, ಆದರೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೂಡ ಸೇರಿದಂತೆ ರಾಜಕೀಯ ಪಕ್ಷಗಳು ಅವರ ವಿರುದ್ದ ಕೆಲಸ ಮಾಡುತ್ತಿವೆ ಎಂಬ ಭಾವನೆಯೂ ಉಂಟಾಗಿದೆ.

ಈ ಯೋಜನೆಯಿಂದ ಸಮುದ್ರ ಕೊರೆತ ಆಗುವುದಿಲ್ಲ ಎಂದು ತಜ್ಞರ ಅಧ್ಯಯನ ಸಮಿತಿ ಹೇಳಿದೆ. ಆದ್ದರಿಂದ ಈ ಪ್ರಾಜೆಕ್ಟನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ, ಸರಕಾರ ಪ್ರತಿಭಟನಾಕಾರರ ಏಳು ಬೇಡಿಕೆಗಳಲ್ಲಿ 6 ನ್ನು ಒಪ್ಪಿಕೊಂಡಿದೆ. 7 ನೇಯದ್ದು ಈ ಪ್ರಾಜೆಕ್ಟನ್ನು ನಿಲ್ಲಿಸಬೇಕು ಎಂಬುದು. ಇದನ್ನು ಒಪ್ಪಲು ಸಾಧ್ಯವಿಲ್ಲ, ಏಕೆಂದರೆ ಹೀಗೆ ಮಾಡಿದರೆ, ಅಭಿವೃದ್ಧಿ ಕಾರ್ಯಗಳಲ್ಲಿ ಹೂಡಿಕೆಗೆ ಧಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಪ್ರಾಜೆಕ್ಟನ್ನು ಕೇರಳದ ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬೆಂಬಲಿಸಿದ್ದವು. ಈಗ ಇದನ್ನು ವಿರೋಧಿಸುತ್ತಿರುವ ಲ್ಯಾಟಿನ್ ಕ್ಯಾಥೊಲಿಕ್ ಚರ್ಚ್ ಕೂಡ ಇದನ್ನು ಆರಂಭದಲ್ಲಿ ಬೆಂಬಲಿಸಿತ್ತು. ಆಗಿನ ಆರ್ಚ್ ಬಿಷಫ್ ಸ್ಥಳೀಯ ಮೀನುಗಾರರಿಗೆ ಇದರಿಂದ ಆಗುವ ಪ್ರಯೋಜನಗಳನ್ನು ಸಂದರ್ಶನವೊಂದರಲ್ಲಿ ಶ್ಲಾಘಿಸಿದ್ದರು ಕೂಡ ಎಂದು ಹೇಳಲಾಗಿದೆ.

ಈ ಪ್ರಾಜೆಕ್ಟನ್ನು ಆರಂಭಿಸಿದ್ದು ಹಿಂದಿನ ಯುಡಿಎಫ್ ಸರಕಾರದ ಅವಧಿಯಲ್ಲಿ ಎಂಬುದೂ ಗಮನಾರ್ಹ. ಆಗ ಇದನ್ನು ಪಿಪಿಪಿ(ಸಾರ್ವಜನಿಕ -ಖಾಸಗಿ ಭಾಗೀದಾರಿಕೆ) ವಿಧಾನಕ್ಕೆ ಬದಲಿಸಿ ಅದಾನಿ ಗುಂಪಿಗೆ ಕೊಡುವುದನ್ನು ವಿರೋಧಿಸಿದ್ದು ಸಿಪಿಐ(ಎಂ) ನೇತೃತ್ವದ ಎಲ್‌ ಡಿ ಎಫ್. ಆದರೆ ಈ ಪ್ರಾಜೆಕ್ಟ್ ಈಗ ಬಹಳಷ್ಟು ಮುಂದುವರೆದ ಘಟ್ಟದಲ್ಲಿ ಇರುವುದರಿಂದ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ದರಿಂದ ಅದೊಂದು ಬೇಡಿಕೆಯನ್ನು ಬಿಟ್ಟು ಈ ಪ್ರಾಜೆಕ್ಟನ್ನು ವಿರೋಧಿಸುವವರ ಉಳಿದ ಎಲ್ಲ ಬೇಡಿಕೆಗಳನ್ನು ಎಲ್‌ ಡಿ ಎಫ್ ಸರಕಾರ ಒಪ್ಪಿಕೊಂಡಿದೆ. ಅಲ್ಲದೆ ಈ ಪ್ರಾಜೆಕ್ಟನ್ನು ವಿರೋಧಿಸುವ ಪಾದ್ರಿಗಳು ಮತ್ತು ಇತರ ಪ್ರತಿಭಟನಾಕಾರರು ನಿರ್ಮಾಣ ಸ್ಥಳಕ್ಕೆ ಬರುವ ಟ್ರಕ್ಕುಗಳನ್ನು ತಡೆಯವುದಿಲ್ಲ, ಸಿಬ್ಬಂದಿಯ ಮೇಲೆ ದಾಳಿ ಮಾಡುವುದಿಲ್ಲ ಎಂದು ಹೈಕೋರ್ಟಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೂ ನಿರ್ಮಾಣ ಕಾರ್ಯ ಪುನರಾರಂಭಗೊಂಡಾಗ ಟ್ರಕ್ಕುಗಳನ್ನು ತಡೆದಿರುವುದು ಮತ್ತು ಸಿಬ್ಬಂದಿಯ ಮೇಲೆ ಪೋಲೀಸರ ಮೇಲೆ ಹಲ್ಲೆ ನಡೆದಿರುವುದು ಸಹಜವಾಗಿಯೇ ಇದರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದೆ. ಇದು ಚುನಾಯಿತ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಇತ್ತೀಚೆಗೆ ಹೆಚ್ಚುತ್ತಿರುವ ಪಿತೂರಿಗಳ ಭಾಗವಾಗಿರುವಂತೆ ಕಾಣುತ್ತದೆ ಎಂದು ಸರಕಾರದ ಮತ್ತು ಎಲ್‌ ಡಿ ಎಫ್‌ ನ ವಕ್ತಾರರು ಹೇಳುತ್ತಿದ್ದಾರೆ.

ಈ ಪ್ರಾಜೆಕ್ಟನ್ನು ಸ್ವಾಗತಿಸಿದ್ದ ಪಾದ್ರಿಗಳು ಈಗ, ಇದರ ನಿರ್ಮಾಣ ಕಾರ್ಯದ ಗಮನಾರ್ಹ ಭಾಗ ಮುಗಿದಿರುವಾಗ ಮೀನುಗಾರರ ಒಂದು ವಿಭಾಗವನ್ನು ದಾರಿ ತಪ್ಪಿಸುತ್ತಿದ್ದಾರೆ. ಹೈಕೋರ್ಟಿಗೆ ಕೊಟ್ಟಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿರುವುದು ಇದಕ್ಕೆ ಒಂದು ಉದಾಹರಣೆ ಎಂದು ಎಲ್‌ ಡಿ ಎಫ್ ವಕ್ತಾರರು ಹೇಳುತ್ತಾರೆ. ಸರಕಾರ ಮತ್ತು ಪೊಲೀಸರು ಇದುವರೆಗೆ ಈ ಚಳುವಳಿಯನ್ನು ಕುರಿತಂತೆ ಮಾತುಕತೆ ನಡೆಸುತ್ತ ಸಂಯಮದಿಂದ ವರ್ತಿಸುತ್ತಿದ್ದರೂ ಈ ಬಾರಿ ಪೊಲೀಸರ ಮೇಲೂ ಮತ್ತು ಪೋಲೀಸ್ ಠಾಣೆ ಮೇಲೂ ದಾಳಿ ನಡೆದಿದೆ. ಇದನ್ನು ವಿರೋಧಿಸಿ ಪ್ರಾಜೆಕ್ಟನ್ನು ಬೆಂಬಲಿಸುತ್ತಿರುವ ಸ್ಥಳೀಯರ ಮೇಲೂ ಪ್ರತಿಭಟನಾಕಾರರು ಕಾರಣವಿಲ್ಲದೆ ಹಲ್ಲೆ ನಡೆಸಿರುವುದು ಪ್ರತಿಭಟನೆಯ ವೀಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಲಾಗಿದೆ.

ಈಗ ಸಿಕ್ಕಿರುವ ವೀಡಿಯೋ ಮತ್ತು ಆಡಿಯೋ ಸಂದೇಶಗಳು ಕೂಡ ಇದು ಸ್ವಯಂಸ್ಫೂರ್ತಿಯಿಂದ ನಡೆದ ಪ್ರತಿಭಟನೆ ಅಲ್ಲ, ಪ್ರಾಜೆಕ್ಟನ್ನು ವಿರೋಧಿಸುತ್ತಿರುವವರ ಸಂಖ್ಯೆ ಇಳಿಯುತ್ತಿದೆ, ಅವರು ಜನರಿಂದ ದೂರವಾಗುತ್ತಿದ್ದಾರೆ ಎಂಬ ಸಂಗತಿಯೇ ಇದಕ್ಕೆ ಕಾರಣ. ಪುಥಿತುರ ಪಾರಿಷ್‌ನ ವೈಕಾರ್ ಫಾದರ್ ಸಜು ರೊಲ್ಡೆನ್ ಪೋಲೀಸ್ ಸ್ಟೇಷನ್ನಿಗೆ ಬೆಂಕಿ ಹಚ್ಚುವಂತೆ ಬಹಿರಂಗವಾಗಿಯೇ ಹೇಳುವ ವೀಡಿಯೋ ಓಡಾಡುತ್ತಿದೆ.

ಅಲ್ಲದೆ ಸನ್ನಿವೇಶವನ್ನು ಕೋಮುಗ್ರಸ್ತಗೊಳಿಸುವ ಪ್ರಯತ್ನವೂ ಕಾಣ ಬಂದಿದೆ. ಮೀನುಗಾರಿಕಾ ಮಂತ್ರಿ ಇ.ಅಬ್ದುರ್‌ರಹಿಮಾನ್ ಹೆಸರಲ್ಲೇ ಭಯೋತ್ಪಾದಕನೊಬ್ಬ ಇದ್ದಾನೆ ಎಂದು ಫಾದರ್ ಥಿಯೊಡೊಸಿಯಸ್ ಡಿ ಕ್ರುಝ್ ಹೇಳಿರುವುದು ದಾಖಲಾಗಿದೆ.

ಪ್ರತಿಭಟನಾಕಾರರು ಅನುಸರಿಸುತ್ತಿರುವ ಕಾರ್ಯವಿಧಾನವೂ ಇತ್ತೀಚಿನ ಎಲ್‌ಡಿಎಫ್ ಸರಕಾರದ ವಿರುದ್ಧ ನಡೆಸಿರುವ ಕಾರ್ಯತಂತ್ರಗಳಂತೆಯೇ ಇದೆ. ಇದರಲ್ಲಿ ಒಂದು ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡುವುದು. ಈ ಯೋಜನೆಯನ್ನು ತಂದಿರುವ ಮತ್ತು ಬೆಂಬಲಿಸಿರುವ ವಿರೋಧ ಪಕ್ಷಗಳು ಸಮಯಸಾಧಕತನದಿಂದ ಇದಕ್ಕೆ ಬೆಂಬಲ ಕೊಡುತ್ತಿವೆ, ಅದರಲ್ಲಿ ಕೋಮುವಾದಿಗಳು ಮತ್ತು ಪರಿಸರದ ಹೆಸರಲ್ಲಿ ರಾಜಕೀಯ ನಡೆಸುವವರು ಸೇರಿಕೊಂಡಿದ್ದಾರೆ. ಪ್ರತಿಭಟನೆಗಳನ್ನು ನಿಲ್ಲಿಸಲು ಕೇಂದ್ರೀಯ ಪಡೆಗಳ ಮಧ್ಯಪ್ರವೇಶ ಅಗತ್ಯ ಎಂದೂ ಇವರಲ್ಲಿ ಕೆಲವರು ಹೇಳುತ್ತಿದ್ದಾರೆ. ಹೀಗೆ ಇದು ಎಲ್‌ ಡಿ ಎಫ್ ಸರಕಾರವನ್ನು ಉರುಳಿಸುವ ಪ್ರಯತ್ನವನ್ನು ಒಂದು ಹೆಜ್ಜೆ ಮುಂದೆ ಒಯ್ದಿದೆ. 60 ವರ್ಷಗಳ ಹಿಂದೆ ರಾಜ್ಯದಲ್ಲಿ ಶಿಕ್ಷಣವನ್ನು ಜನಪರಗೊಳಿಸುವುದನ್ನು ತಡೆಯಲು ‘ವಿಮೋಚನಾ ಸಮರಂ’ ಹೆಸರಿನಲ್ಲಿ ನಡೆಸಿದ್ದನ್ನು ಪುನರಾವರ್ತಿಸುವ ಪ್ರಯತ್ನ ನಡೆದಿದೆ, ಆದರೆ ಇದಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಎಲ್‌ ಡಿ ಎಫ್ ಮುಖಂಡರು ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *