ಜೇನು ಬ್ಯಾಡ್ಜರ್ ಎಂಬ ಹೆದರಿಕೆಯೇ ಗೊತ್ತಿಲ್ಲದ ಪ್ರಾಣಿ!
ಬ್ಯಾಡ್ಜರ್ ಎಂದರೆ ಮಧ್ಯಮ ಗಾತ್ರದ ಸಣ್ಣ ಕಾಲಿನ ಸರ್ವಭಕ್ಷಕ ಪ್ರಾಣಿಗಳು. ಪ್ರಪಂಚದಲ್ಲಿ ಮತ್ತು ಭಾರತದಲ್ಲಿರುವ ಮೆಲ್ಲಿವೊರಾ ಕ್ಯಾಪೆನ್ಸಿಸ್ ಎಂಬ ಹೆಸರಿನ ಹನ್ ಬ್ಯಾಡ್ಜರ್ ಇತರ ಬ್ಯಾಡ್ಜರ್ ಜಾತಿಗಳನ್ನು ಹೋಲುವುದಿಲ್ಲ, ಬದಲಾಗಿ, ಅದರದೇ ವಿಶಿಷ್ಟ ಅಂಗರಚನಾ ಹೋಲಿಕೆಗಳನ್ನು ಹೊಂದಿದೆ. ಪಕ್ಷಿ
– ಡಾ| ಎನ್. ಬಿ. ಶ್ರೀಧರ
ಅವು ಆಫ್ರಿಕಾ ಖಂಡದಲ್ಲಿ ದೊಡ್ಡ ಪ್ರಮಾಣದಲ್ಲಿ ಬದುಕುವ ಜೀವಿಗಳು. ವಯಸ್ಕ ಜೇನು ಬ್ಯಾಡ್ಜರ್ ಭುಜದ ಎತ್ತರದಲ್ಲಿ 28 ಸೆಂಮೀ ಮತ್ತು ಉದ್ದದಲ್ಲಿ 55-77 ಸೆಂಮೀ ಮತ್ತು ಬಾಲವು 12–30 ಸೆಂಮೀ ಇರುತ್ತದೆ. ವರೆಗೆ ಹೆಣ್ಣುಗಳು ಗಂಡಿಗಿAತ ಚಿಕ್ಕದಾಗಿರುತ್ತವೆ. ಗಂಡುಗಳು 16 ಕೆಜಿ ತೂಕವಿದ್ದರೆ, ಹೆಣ್ಣುಗಳು 10 ಕೆಜಿ ವರೆಗೆ ತೂಕವಿರುತ್ತವೆ. ಕಾಡಿನಲ್ಲಿ ಸರಾಸರಿ ಜೀವಿತಾವಧಿ ಸುಮಾರು 7-10 ವರ್ಷಗಳು, ಆದರೆ ಮೃಗಾಲಯದಂತ ಸೆರೆಯಲ್ಲಿ ಅವು 20-24 ವರ್ಷಗಳವರೆಗೆ ಬದುಕಬಹುದು. ಆಫ್ರಿಕಾದಲ್ಲಿ ಅತಿ ಜಾಸ್ತಿ ಇರುವ ಇವು ಏಶಿಯಾ ಖಂಡ ಮತ್ತು ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿವೆ. ಅರಣ್ಯದಲ್ಲಿ ಬದುಕುವ ಇವು ಒಣಭೂಮಿಯಲ್ಲಿಯೂ ಸಹ ಇರಬಲ್ಲವು. ಪಕ್ಷಿ
ಹನಿ ಬ್ಯಾಡ್ಜರ್ಗಳು ಹೆಚ್ಚಾಗಿ ಒಂಟಿಯಾಗಿರುವ ಪ್ರಾಣಿಗಳಾಗಿದ್ದು, ಸಾಮಾನ್ಯವಾಗಿ ರಾತ್ರಿಯ ವೇಳೆ ಓಡಾಡುತ್ತವೆ, ಅವು ತಂಪಾದ ವಾತಾವರಣದಲ್ಲಿ ಹಗಲಿನಲ್ಲಿ ಸಕ್ರಿಯವಾಗಿರಬಹುದು. ಅವು ತಮ್ಮ ದಿಟ್ಟ ಮತ್ತು ಆಕ್ರಮಣಕಾರಿ ರಕ್ಷಣಾ ನಡವಳಿಕೆಗೆ ಹೆಸರುವಾಸಿಯಾಗಿದ್ದು, ದೊಡ್ಡ ಮಾಂಸಾಹಾರಿಗಳು ಸೇರಿದಂತೆ ಅವುಗಳ ಗಾತ್ರಕ್ಕಿಂತ ಹಲವು ಪಟ್ಟು ಹೆಚ್ಚು ಪರಭಕ್ಷಕಗಳ ವಿರುದ್ಧ ತಮ್ಮ ನೆಲೆಯನ್ನು ಉಳಿಸಿಕೊಳ್ಳುತ್ತವೆ.
ಇದನ್ನೂ ಓದಿ: ಸಂಪೂರ್ಣವಾಗಿ ಜನವಿರೋಧಿ, ಒಕ್ಕೂಟತತ್ವ-ವಿರೋಧಿ ಕೇಂದ್ರ ಬಜೆಟ್-ಸಿಪಿಐ(ಎಂ) ಪೊಲಿಟ್ಬ್ಯುರೊ
ಇದು ಪ್ರಾಥಮಿಕವಾಗಿ ಮಾಂಸಾಹಾರಿ ಜಾತಿಯಾಗಿದ್ದು, ಅದರ ದಪ್ಪ ಚರ್ಮ ಮತ್ತು ಉಗ್ರ ರಕ್ಷಣಾತ್ಮಕ ಸಾಮರ್ಥ್ಯಗಳಿಂದಾಗಿ ಕೆಲವೇ ಕೆಲವು ವೈರಿಗಳನ್ನು ಹೊಂದಿದೆ. ಚೂಪಾದ ಹಲ್ಲುಗಳ ಜೊತೆಗೆ, ಜೇನು ಬ್ಯಾಡ್ಜರ್ಗಳು ಅತ್ಯಂತ ಪ್ರಬಲ ದವಡೆಗಳನ್ನು ಹೊಂದಿವೆ.ಅದು ಎಷ್ಟು ಗಟ್ಟಿಯಿರುತ್ತದೆಯೆಂದರೆ ಇವು ಆಮೆಯ ಚಿಪ್ಪನ್ನು ಆರಾಮವಾಗಿ ಮುರಿದು ತಿಂದು ಮುಗಿಸುತ್ತವೆ. ಇದರ ಚರ್ಮವು ದಪ್ಪವಾಗಿದ್ದು ಸಾಮಾನ್ಯವಾಗಿ ಇತರ ಬೇಟೆಗಾರ ಪ್ರಾಣಿಗಳಿಂದ ಘಾಸಿ ಮಾಡಲು ಸಾಧ್ಯವೇ ಇಲ್ಲ.

ಅವುಗಳ ಮುಂಗಾಲುಗಳು ಸರಿಸುಮಾರು 4 ಸೆಂಟಿಮೀಟರ್ ಉದ್ದವಿರುತ್ತವೆ. ಇದಕ್ಕಿರುವ ಉಗುರುಗಳುಬಿಸಿಲಿನಲ್ಲಿ ಸುಟ್ಟು ಗಟ್ಟಿಯಾಗಿರುವ ಭೂಮಿಯನ್ನು ಅಗೆಯಲು ಸವರ್ಥವಾಗಿರುವಂತೆ ಅತ್ಯಂತ ಚೂಪು ಮತ್ತು ಗಟ್ಟಿಯಾಗಿವೆ. ಅವು ಎದುರಾಳಿಯ ಹೊಟ್ಟೆಯನ್ನು ಸೀಳಲು ಅಥವಾ ಕೆಡವಲು ಅಥವಾ ಕುರುಡಾಗಿಸಲು ಬಾಗಿದ ಕಠಾರಿಗಳಂತೆ ಕಾರ್ಯನಿರ್ವಹಿಸುತ್ತವೆ.
ಭಾರತದ ಹನಿ ಬ್ಯಾಡ್ಜರುಗಳು
ಮೆಲ್ಲಿವೊರಾ ಕ್ಯಾಪೆನ್ಸಿಸ್ ಇಂಡಿಕಾ ಎಂದು ಕರೆಯಲ್ಪಡುವ ಇವು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ಉತ್ತರಾಖಂಡ (ತಾರೈ ಪ್ರದೇಶ) ರಾಜ್ಯಗಳಲ್ಲಿ ಇವು ಇವೆ. ಇವು ಬಹುತೇಕ ನಿಶಾಚರವಾಗಿರುವುದರಿಂದ ಕ್ಯಾಮರಾ ಕಣ್ಣಿಗೆ ಕಾಣುವುದು ಅಪರೂಪ. ಒಣ ಭೂಮಿ ಅಥವಾ ಕುರುಚಲು ಪ್ರದೇಶಗಳಲ್ಲಿ ಇರುವ ಇವುಗಳ ಕುರಿತು ಮಾಹಿತಿ ಕಡಿಮೆ.
ಹಾವುಗಳೇ ಮುಖ್ಯ ಆಹಾರ
ಇವುಗಳ ಆಹಾರದ ಶೇ 25 ವಿಷಕಾರಕ ಹಾವುಗಳು. ಯಾವ ಹಾವಿನ ವಿಷಕ್ಕೂ ಸಹ ಇವು ಬಗ್ಗುವುದಿಲ್ಲ. ಎಲ್ಲಾ ರೀತಿಯ ಹಕ್ಕಿಗಳನ್ನೂ ಸಹ ಇದು ಬೇಟೆಯಾಡುತ್ತದೆ. ಅದರಲ್ಲೂ ಹಕ್ಕಿಗಳ ಮೊಟ್ಟೆ ಇದಕ್ಕೆ ಬಲು ಇಷ್ಟ.

ಇದರ ಹೊರತಾಗಿ ಜೇನುತುಪ್ಪ, ಜೇನುಗೂಡು, ಜೇನುನೊಣಗಳು, ಗೆದ್ದಲುಗಳು, ಜೀರುಂಡೆಗಳು ಮತ್ತು ಲಾರ್ವಾಗಳಂತಹ ಕೀಟಗಳು, ಇಲಿ ಹೆಗ್ಗಣಗಳಂತ ದಂಶಕಗಳಂತಹ ಸಣ್ಣ ಸ್ತನಿಗಳು, ಪಕ್ಷಿಗಳು ಮತ್ತು ಪಕ್ಷಿ ಮೊಟ್ಟೆಗಳು, ಕಪ್ಪೆಗಳು ಇತ್ಯಾದಿ ಇದರ ಆಹಾರಗಳು. ಏನೂ ಸಿಗದಾಗ ಇದು ಬೇರುಗಳು, ಗೆಡ್ಡೆಗಳು, ಹಣ್ಣುಗಳು ಮತ್ತು ಹಣ್ಣುಗಳು ಮತ್ತು ಕೆಲವೊಮ್ಮೆ ಸತ್ತ ಪ್ರಾಣಿಗಳ ಶವವನ್ನು ಭಕ್ಷಿಸುತ್ತದೆ.
ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ
ದೊಡ್ಡ ಶರೀರ, ಭಾರಿ ಗಾತ್ರ ಬಲಶಾಲಿ ಪ್ರಾಣಿಗಳಾದ ಹುಲಿ, ಸಿಂಗ, ತೋಳ, ಸೀಳು ನಾಯಿಯಂತ ಪ್ರಾಣಿಗಳಿಗೇ ಇದು ಸುಖಾಸುಮ್ಮನೆ ಅಟ್ಟಾಡಿಸಿಕೊಂಡು ಕಚ್ಚಿ ಅವುಗಳ ಪ್ರಾಣಕ್ಕೇ ಸಂಚಕಾರ ತರುವುದರಿಂದ ಈ ಚಿಕ್ಕ ಪ್ರಾಣಿಯನ್ನು ಕಂಡರೆ ಇದರ ಸಹವಾಸವೇ ಸಾಕು ಎಂದು ಪಲಾಯನ ಮಾಡುತ್ತವೆ. ಕೆಲವೊಮ್ಮೆ ಆನೆಗಳಿಗೇ ಕಾಟ ಕೊಡುವಷ್ಟು ತುಂಟಾಟ ಇದರದು.ಇದರ ಶರೀರ ಸಣ್ಣದಿದ್ದು ಅತ್ಯಂತ ವೇಗದ ಚಲನೆ ಇರುವುದರಿಂದ ಯಾರ ಕೈಗೂ ಸಹ ಇದು ಸಿಗುವುದೇ ಇಲ್ಲ. ಹೆಚ್ಚಿನ ಸ್ತನಿಗಳಿಗಿಂತ ನೋವು ಮತ್ತು ಗಾಯವನ್ನು ಉತ್ತಮವಾಗಿ ಸಹಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ರೈತನ ಹಿತ್ತಲಲ್ಲಿ ಕೋಳಿ ಗೂಡು ಇದೆ ಎಂದು ಗೊತ್ತಾದರೆ ಸಾಕು, ಇವು ಸುರಂಗ ಕೊರೆದುಕೊಂಡು ಕೋಳಿ ಮನೆಗೆ ಪ್ರವೇಶಿಸಿ ಕೋಳಿಗಳನ್ನು ಎಗರಿಸುತ್ತವೆ. ಸಾಮಾನ್ಯವಾಗಿ ಪ್ರಾಣಿಗಳು ಅವುಗಳ ಆಹಾರಕ್ಕೆ ಅವಶ್ಯವಿರುಷ್ಟೆ ಬೇಟೆಯಾಡುತ್ತವೆ. ಆದರೆ ಜೇನು ಬ್ಯಾಡ್ಜರ್ ಮಾತ್ರ ಸಿಕ್ಕ ಸಿಕ್ಕ ಪ್ರಾಣಿಗಳ ಮೇಲೆ ಎಗರಿ ತಿನ್ನದೇ ಹಾಗೆಯೆ ಬಿಟ್ಟು ಹೋಗುವ ವಿಚಿತ್ರ ಜೀವಿ. ಕಾರಣ ಇದಕ್ಕೆ ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ ಎಂದು ಹೆಸರು ಬಂದಿದೆ. ಬೆದರಿಕೆ ಎಂಬುದೇ ಗೊತ್ತಿಲ್ಲದ ಇವುಗಳು ಕಠಿಣವಾದ ವಿರೋಧ ಎದುರಾದಾಗ ವಿಚಿತ್ರ ಭಯಾನಕ ಶಬ್ಧ ಹೊರಡಿಸುತ್ತವೆ ಮತ್ತು ತಮ್ಮ ಗುದ ಗ್ರಂಥಿಗಳಿAದ ಶಕ್ತಿಯುತವಾದ, ದುರ್ವಾಸನೆಯ ದ್ರವವನ್ನು ಹೂಸಿನ ರೂಪದಲ್ಲಿ ಬಿಡುಗಡೆ ಮಾಡುತ್ತವೆ. ಇದರ ದುರ್ವಾಸನೆ ತಡೆಯಲು ಸಾಧ್ಯವಿಲ್ಲದೇ ಅನೇಕ ಪ್ರಾಣಿಗಳು ಓಡಿ ಹೋಗುತ್ತವೆ. ಒಮ್ಮೆ ಆಹಾರದ ಮೂಲವನ್ನು ನಿರ್ಧರಿಸಿದ ನಂತರ, ಅವು ಬಿಟ್ಟು ಕೊಡುವುದು ವಿರಳ.
ವಿಶಿಷ್ಟ ಪ್ರಾಣಿ
ಸ್ತನಿ ಪ್ರಾಣಿಗಳಲ್ಲಿ ಇದು ಬಹಳ ಬುದ್ಧಿವಂತ. ಮಂಗಗಳಂತೆ ಇದು ಮೃಗಾಲಯದಲ್ಲಿಟ್ಟರೆ ಗೇಟು ತೆರೆದುಕೊಂಡು ಪಲಾಯನ ಮಾಡುತ್ತದೆ.
ಹನಿಗೈಡ್ಗಳು ಜೇನು ಬ್ಯಾಡ್ಜರ್ಗಳನ್ನು ಜೇನುಗೂಡುಗಳಿಗೆ ಕರೆದೊಯ್ಯುತ್ತವೆಯೇ? ಜೂನು ಗೈಡ್ ಪಕ್ಷಿಗಳು ಬ್ಯಾಡ್ಜರ್ಗಳನ್ನು ಜೇನುಗೂಡುಗಳಿಗೆ ಕರೆದೊಯ್ಯುತ್ತವೆ ಎಂದು ಪ್ರತೀತಿ ಇದೆಯಾದರೂ ಸಹ ಇದು ಅಷ್ಟೊಂದು ಸಾಬೀತಾಗಿಲ್ಲ. ಜೇನುಗೂಡನ್ನು ಒಡೆದು ಆಹಾರ ನೀಡಿದ ನಂತರ ಈ ಹಕ್ಕಿಗೆ ಜೇನು ತುಣುಕು ನೀಡುವುದರಿಂದ ಈ ರೀತಿ ನಂಬಲಾಗಿದೆ. ಬದಲಾಗಿ ಹನಿಗೈಡ್ ಪಕ್ಷಿಗಳೇ ಬ್ಯಾಡ್ಜರ್ಗಳನ್ನು ಹಿಂಬಾಲಿಸಬಹುದು ಎಂದು ನಂಬಲಾಗಿದೆ.
ಸಂತಾನೋತ್ಪತ್ತಿ
ಜೇನು ಬ್ಯಾಡ್ಜರ್ಗಳು ಕಟ್ಟುನಿಟ್ಟಾದ ಸಂತಾನೋತ್ಪತ್ತಿ ಋತುವನ್ನು ಅನುಸರಿಸುವುದಿಲ್ಲ. ಗಂಡು ಜೇನು ಬ್ಯಾಡ್ಜರ್ಗಳು ಒಂಟಿಯಾಗಿರುತ್ತವೆ ಮತ್ತು ಅಲೆಮಾರಿಗಳಾಗಿರುತ್ತವೆ. ಕೂಡುವಿಕೆ ಕ್ರಿಯೆ ಮುಗಿದ ನಂತರ, ಹೆಣ್ಣು ಸಂಪೂರ್ಣವಾಗಿ ಒಂಟಿಯಾಗಿರುತ್ತದೆ. ಅದು ಸಾಮಾನ್ಯವಾಗಿ ಆಳವಾದ, ಸಂರಕ್ಷಿತ ಬಿಲದಲ್ಲಿ ಒಂದೇ ಮರಿ ಅಥವಾ ವಿರಳವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತದೆ. ಇದರ ಗರ್ಭಾವಧಿ 6-8 ವಾರಗಳು.

ಹುಟ್ಟಿದಾಗ ಮರಿಗಳು ಕುರುಡಾಗಿ ಮತ್ತು ಅಸಹಾಯಕವಾಗಿ ಜನಿಸುತ್ತವೆ. ಅವು 14 ರಿಂದ 18 ತಿಂಗಳವರೆಗೆ ತಮ್ಮ ತಾಯಿಯೊಂದಿಗೆ ಇರುತ್ತವೆ. ಈ ಸಮಯದಲ್ಲಿ ತಾಯಿ ಚೇಳುಗಳನ್ನು ಹೇಗೆ ಬೇಟೆಯಾಡುವುದು, ಗೆಡ್ಡೆಗಳನ್ನು ಹೇಗೆ ಅಗೆಯುವುದು, ಹೇಗೆ ಆಕ್ರಮಣಕಾರಿಯಾಗಿರುವುದು, ಬೇಟೆ ಹೇಗೆ ಆಡುವುದು, ಎಂಬುದನ್ನು ತಾಯಿ ಮರಿಗೆ ಕಲಿಸಲು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆಯುತ್ತದೆ. ತಾಯಿಗೆ ಕಠಿಣ ಸ್ವಭಾವ ಇದ್ದರೂ ಸಹ ಅತ್ಯಂತ ಮಾತೃತ್ವವನ್ನು ಹೊಂದಿದ್ದು ಮರಿಗಳನ್ನು ಹೊತ್ತೊಯ್ಯಲು ಯಾವುದೇ ಹುಲಿಯಂತ ಬಲಶಾಲಿ ಪ್ರಾಣಿ ಅಥವಾ ಮನುಷ್ಯ ಬಂದರೆ ಕೊನೆಯ ಉಸಿರು ಇರುವವರೆಗೆ ಅತ್ಯಂತ ಉಗ್ರವಾಗಿ ಹೋರಾಡಿ ಮರಿಯನ್ನು ರಕ್ಷಿಸಿಕೊಳ್ಳುತ್ತದೆ. ಪಕ್ಷಿ
ಪರಿಸರ ಪ್ರಾಮುಖ್ಯತೆ
ಜೇನು ಬ್ಯಾಡ್ಜರ್ಗಳು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದಂಶಕಗಳು, ಕೀಟಗಳು ಮತ್ತು ಹಾವುಗಳ ಸಂಖ್ಯೆಯನ್ನು ನಿಯಂತ್ರಿಸಿ ಪರಿಸರವನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿ, ಭೂಮಿಯ ಅಗೆಯುವಿಕೆ ಮತ್ತು ಮಣ್ಣಿನ ಸಾಂದ್ರತೆ ಸುಧಾರಿಸಿ ಪರಿಸರದ ಆರೀಗ್ಯ ಕಾಪಾಡುತ್ತವೆ.
ಆತ್ಮಸ್ಥೈರ್ಯ
ಪ್ರಾಣಿ ಪ್ರಿಯರಿಗೆ ಮತ್ತು ವಿಜ್ಞಾನಿಗಳಿಗೆ, ಹನಿ ಬ್ಯಾಡ್ಜರ್ ಬುದ್ಧಿವಂತಿಕೆ ಮತ್ತು ಬೇಗ ಕಠಿಣ ಪರಿಸರಕ್ಕೆ ಹೊಂದಿಕೊಳ್ಳುವುದನ್ನು ಕಲಿಸಿಕೊಡುತ್ತದೆ. ಗಾತ್ರ ಮತ್ತು ವೇಗವನ್ನು ಹೆಚ್ಚಾಗಿ ಹೊಂದಿದ ದೊಡ್ಡ ಪ್ರಾಣಿಗಳು ಮೇಲ್ಗೈ ಸಾಧಿಸುವ ಈ ಕಾಲದಲ್ಲಿ, ಈ ಸಣ್ಣ ಸ್ತನಿ ಧೈರ್ಯಶಾಲಿ, ಮತ್ತು ಅಂಜದ ಜೀವಿ ಅದೆಷ್ಟೇ ಕಷ್ಟ ಬಂದರೂ ಜಯ ಸಾಧಿಸುವ ಛಲ ಮನುಷ್ಯನಿಗೆ ಪ್ರೇರಣೆಯಾಗಿದೆ. ಪಕ್ಷಿ
ಬದುಕುಳಿಯುವಿಕೆ ಹಕ್ಕು ಕೇವಲ ಬಲಿಷ್ಠರಿಗೆ ಅಲ್ಲ, ಆದರೆ ಯಾವುದೇ ಕಾರಣಕ್ಕೂ ಜಪ್ಪಯ್ಯ ಅಂದರೂ ಬಿಟ್ಟುಕೊಡಲು ನಿರಾಕರಿಸುವವರಿಗೆ ಮಾತ್ರ ಎಂಬ ಈ ಶ್ರೇಷ್ಠ ಎಂಬ ಸಂದೇಶ ಹನಿ ಬ್ಯಾಡ್ಜರ್ನ ನೀಡುತ್ತದೆ. ಮನುಷ್ಯನ ಲಾಲಸೆಗೆ ಈ ಪ್ರಾಣಿಗಳು ಬಲಿಯಾಗಿ ವಿನಾಶದತ್ತ ಬಂದಿವೆ. ಪ್ರಕೃತಿಯ ಸಮತೋಲನ ಮತ್ತು ಜೀವ ವೈವಿಧ್ಯತೆಯ ಮುಖ್ಯ ಕೊಂಡಿಗಳಾದ ಇವುಗಳನ್ನು ವಿನಾಶದತ್ತ ಸಾಗದಂತೆ ತಡೆಯಬೇಕಿದೆ.
ಇದನ್ನೂ ನೋಡಿ: ಬೀದಿ ನಾಟಕ | ಒಂದನ್ನಾದರೂ ಒತ್ತಿ ಎರಡನ್ನಾದರೂ ಒತ್ತಿ’ Janashakthi Media
