ಮಹಿಳಾ ಮೀಸಲಾತಿ ಮಸೂದೆ ನಡೆದು ಬಂದ ಹಾದಿ ಹೀಗಿದೆ!

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು (WRB) ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ. ಮಸೂದೆಯು ಈ ಮೀಸಲಾತಿಯೊಳಗೆ SC-ST ಗಳು ಮತ್ತು ಆಂಗ್ಲೋ-ಇಂಡಿಯನ್‌ಗಳಿಗೆ ಒಳ-ಮೀಸಲಾತಿಯನ್ನು ಸಹ ಪ್ರಸ್ತಾಪಿಸುತ್ತದೆ ಎನ್ನಲಾಗಿದೆ.

ದೇಶದ ಅರ್ಧದಷ್ಟು ಮತದಾರರು ಮಹಿಳೆಯರಿದ್ದರೂ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಉಪಸ್ಥಿತಿಯು ನೀರಸವಾಗಿದೆ. ದೇಶದ 17ನೇ ಲೋಕಸಭೆಯು ಸುಮಾರು 14% ಮಹಿಳಾ ಸದಸ್ಯರನ್ನಷ್ಟೆ ಹೊಂದಿದೆ. ಮಹಿಳಾ ಮೀಸಲಾತಿಯ ಬಗ್ಗೆ ಹಲವಾರು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಿದ್ದರೂ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ಅನೇಕ ಅಡೆ ತಡೆಗಳಿಂದಾಗಿ ಯಾವುದೇ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: “ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ” ಮಹೇಶ್ ವಿಕ್ರಮ್ ಹೆಗ್ಡೆಯಿಂದ ಬೆದರಿಕೆ – ಪ್ರಕರಣ ದಾಖಲು

WRB ಒಪ್ಪಿಗೆ ನೀಡುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ( AIDWA) ಸೇರಿದಂತೆ ಎಡಪಕ್ಷಗಳ ಸಂಸತ್ ಸದಸ್ಯರು ಸಂಸತ್ತಿನ ಒಳಗೆ ಮತ್ತೆ ಹೊರಗೆ ಮಹಿಳಾ ಮೀಸಲಾತಿ ಜಾರಿ ಆಬೇಕು ಎಂದು ಪ್ರತಿಭಟಿಸುತ್ತಲೆ ಬಂದಿವೆ. ಇತ್ತೀಚೆಗೆ ಭಾರತ್ ರಾಷ್ಟ್ರ ಸಮಿತಿ ಶಾಸಕಿ ಕೆ. ಕವಿತಾ ಅವರು ಮಸೂದೆ ಅಂಗೀಕಾರವನ್ನು ಬೆಂಬಲಿಸಲು 47 ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್ ಕೂಡ ಇದೇ ಬೇಡಿಕೆಯನ್ನು ಎತ್ತಿತ್ತು ಮತ್ತು ಸೆಪ್ಟೆಂಬರ್ 16 ಮತ್ತು 17 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡಬೇಕೆಂದು ನಿರ್ಣಯವನ್ನು ಅಂಗೀಕರಿಸಿತ್ತು.

ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆ ಕಲ್ಪನೆಯನ್ನು 1989 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ ಅವರ ಅಡಿಯಲ್ಲಿ ”ಮಹಿಳೆಯರಿಗಾಗಿ ರಾಷ್ಟ್ರೀಯ ದೃಷ್ಟಿಕೋನ ಯೋಜನೆ(National Perspective Plan for Women)”ಯ ಸಮಿತಿಯನ್ನು ರಚಿಸಿದಾಗ ಪ್ರಸ್ತಾಪಿಸಲಾಗಿತ್ತು. ಈ ಸಮಿತಿಯು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಲ್ಪನೆಯನ್ನು ಪ್ರಸ್ತಾಪಿಸಿತ್ತು.

ಸಮಿತಿಯ ಈ ಪ್ರಸ್ತಾಪವನ್ನು ಒಳಗೊಳ್ಳುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂದು ಅಂಗೀಕರಿಸಲಾಯಿತು. ಆದರೆ ರಾಜ್ಯಸಭೆಯಲ್ಲಿ ಇದು ಒಪ್ಪಿಗೆ ಪಡೆಯುವಲ್ಲಿ ವಿಫಲವಾಯಿತು. ನಂತರ, 1992 ಮತ್ತು 1993 ರಲ್ಲಿ, ಕಾಂಗ್ರೆಸ್ ನಾಯಕ ಮತ್ತು ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ಇದು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳು ಮತ್ತು ಅಧ್ಯಕ್ಷ ಸ್ಥಾನಗಳನ್ನು ಮೀಸಲಿಟ್ಟಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸುವ ಮೂಲಕ ಈ ಮಸೂದೆಗಳನ್ನು ಅಂದು ಅಂಗೀಕರಿಸಲಾಯಿತು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ:ದೇವೇಗೌಡರ ಕನಸು ನನಸಾಗುತ್ತಿದೆ ಎಂದ ಎಚ್‌ಡಿ ಕುಮಾರಸ್ವಾಮಿ

ಮಹಿಳಾ ಮೀಸಲಾತಿಯ ಈ ವ್ಯಾಪ್ತಿಯನ್ನು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ವಿಸ್ತರಿಸಲು, ಮಹಿಳೆಯರಿಗೆ 33% ಸ್ಥಾನಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ಮೊದಲ ಬಾರಿಗೆ 1996 ರಲ್ಲಿ ಪ್ರಧಾನಿಯಾಗಿದ್ದ ಎಚ್‌.ಡಿ. ದೇವೇಗೌಡ ನೇತೃತ್ವದ ಅಂದಿನ ಯುನೈಟೆಡ್ ಫ್ರಂಟ್ ಮೈತ್ರಿ ಸರ್ಕಾರವು ಪರಿಚಯಿಸಿತು. ಆ ವರ್ಷದ ಸೆಪ್ಟೆಂಬರ್‌ನಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯಾಗಿ ಮಂಡಿಸಲಾಯಿತು.  ಪಶ್ಚಿಮ ಬಂಗಾಳದ ಲೋಕಸಭೆ ಸದಸ್ಯರಾಗಿದ್ದ,  ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ)  ಗೀತಾ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಂಸತ್ತಿನ ಉಭಯ ಸದನಗಳ ಜಂಟಿ ಸಮಿತಿಗೆ ಇದನ್ನು ವಹಿಸಲಾಯಿತು.  ಮಸೂದೆಯನ್ನು ಅದೇ ವರ್ಷದ ಡಿಸೆಂಬರ್‌ನಲ್ಲಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. 1996ರ ಡಿಸೆಂಬರ್​ನಲ್ಲಿ ಗೀತಾ ಮುಖರ್ಜಿ ನೇತೃತ್ವದ ಜಂಟಿ ಸಂಸದೀಯ ಸಮಿತಿಯು ಹಲವಾರು ಶಿಫಾರಸ್ಸುಗಳೊಂದಿಗೆ ತನ್ನ ವರದಿಯನ್ನು ಸಲ್ಲಿಸಿದರೂ, ಮಸೂದೆ ಅಂಗೀಕರಿಸಲಾಗಲಿಲ್ಲ. ಜೊತೆಗೆ 11ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಈ ಮಸೂದೆಯು ರದ್ದುಗೊಂಡಿತು.

ದೇವೇಗೌಡರ ನಂತರ ಪ್ರಧಾನಿಯಾದ ಐಕೆ ಗುಜ್ರಾಲ್ ಅವರು 1997ರ ಮೇ ತಿಂಗಳಲ್ಲಿ ಮತ್ತೆ ಮಸೂದೆಯನ್ನು ಕೈಗೆತ್ತಿಕೊಂಡರು. ಆದಾಗ್ಯೂ, ಈ ಮಸೂದೆ ಪ್ರಬಲ ವಿರೋಧವನ್ನು ಎದುರಿಸಿತು. ಅದರಲ್ಲೂ ವಿಶೇಷವಾಗಿ ನಿತೀಶ್ ಕುಮಾರ್ ಅವರ ಸಮತಾ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸಿತು. ಅಂದು ಮಸೂದೆಯ ಬಗ್ಗೆ ಮಾತನಾಡಿದ್ದ ನಿತೀಶ್‌ ಕುಮಾರ್ ಅವರು, “ಇಂದು ಇರುವ 39 ಮಹಿಳಾ ಸದಸ್ಯರಲ್ಲಿ, ಕೇವಲ ನಾಲ್ವರು ಮಾತ್ರ OBC ಸಮುದಾಯಕ್ಕೆ ಸೇರಿದ ಮಹಿಳೆಯರಿದ್ದಾರೆ… ಆದರೆ ದೇಶದ 50% ಜನಸಂಖ್ಯೆ ಇರುವ ಮಹಿಳೆಯರಲ್ಲಿ OBC ಸಮುದಾಯಕ್ಕೆ ಸೇರಿದ ಮಹಿಳೆಯರ ಜನಸಂಖ್ಯೆ 60% ಇದೆ. 50% ಮಹಿಳೆಯರ ಬಗ್ಗೆ ಮಾತನಾಡುವವರು, ಮಹಿಳೆಯರಲ್ಲೆ 60% ಜನಸಂಖ್ಯೆ ಹೊಂದಿರುವ OBC ಮಹಿಳೆಯರ ಪರವಾಗಿ ಮಾತನಾಡುವ ಯಾರಾದರೂ ಇದ್ದಾರೆಯೇ?” ಎಂದು ಹೇಳಿದ್ದರು.

ಮಹಿಳಾ ಮೀಸಲಾತಿ ವಿಷಯದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪಕ್ಷಗಳ ಒಳಗೆ ಭಿನ್ನ ಅಭಿಪ್ರಾಯಗಳಿವೆ ಎಂದು ಪ್ರಧಾನಿ ಗುಜ್ರಾಲ್ ಅವರು ಮುಂಗಾರು ಅಧಿವೇಶನದಲ್ಲಿ ಒಪ್ಪಿಕೊಂಡರು. ಅದೇ ವರ್ಷ ನವೆಂಬರ್‌ನಲ್ಲಿ ಗುಜ್ರಾಲ್ ಸರ್ಕಾರವನ್ನು ವಿಸರ್ಜಿಸಲಾಯಿತು. ಹೀಗಾಗಿ ಮಸೂದೆಯು ಮತ್ತೊಮ್ಮೆ ರದ್ದುಗೊಂಡಿತು.

ಇದನ್ನೂ ಓದಿ: ಚೈತ್ರಾ ಕುಂದಾಪುರ ಗ್ಯಾಂಗ್​ನ ಪ್ರಮುಖ ಆರೋಪಿ ಹಾಲಶ್ರೀ ಬಂಧನ

ನಂತರ ಎನ್‌ಡಿಎ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ ಅವರ ಮೈತ್ರಿ ಸರ್ಕಾರವು 1998 ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮತ್ತೊಂದು ಪ್ರಯತ್ನವನ್ನು ಮಾಡಿತು. ಆದರೆ ಮಸೂದೆಯ ಮಂಡನೆಯಂದು ಸಂಸತ್ತಿನಲ್ಲಿ ಭಾರಿ ಗದ್ದಲಗಳಾಗಿತ್ತು. ಅಂದು ರಾಷ್ಟ್ರೀಯ ಜನತಾ ದಳದ ಸಂಸದ ಸುರೇಂದ್ರ ಪ್ರಕಾಶ್ ಯಾದವ್ ಅವರು ಸದನದ ಬಾವಿಯಲ್ಲಿ ದಾಖಲೆಯನ್ನು ಹರಿದು ಹಾಕಿದ್ದರು. 1999ರ ಏಪ್ರಿಲ್‌ನಲ್ಲಿ ವಾಜಪೇಯಿ ಸರ್ಕಾರ ಪತನವಾದಾಗ ಈ ಮಸೂದೆ ಮತ್ತೆ ರದ್ದಾಯಿತು.

1999, 2002, ಮತ್ತು 2003 ರಲ್ಲಿ ಎನ್‌ಡಿಎ ನೇತೃತ್ವದ ವಾಜಪೇಯಿ ಸರ್ಕಾರ ಮಸೂದೆಯನ್ನು ಪುನಃ ಮಂಡಿಸಿದರು. 2005 ರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಇಬ್ಬರೂ ಈ ವಿಷಯದ ಬಗ್ಗೆ ಒಮ್ಮತವನ್ನು ರೂಪಿಸಲು ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಿದರು. ನಂತರ 2008 ರಲ್ಲಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಮೊದಲ ಯುಪಿಎ ಸರ್ಕಾರವು ರಾಜ್ಯಸಭೆಯಲ್ಲಿ ಸಂವಿಧಾನ (ನೂರಾ ಎಂಟನೇ ತಿದ್ದುಪಡಿ) ಮಸೂದೆಯನ್ನು ಪರಿಚಯಿಸಿತು.

2008 ರಲ್ಲಿ ಇದನ್ನು ಮಂಡಿಸಿದ ನಂತರ, ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. 2010ರ ಮಾರ್ಚ್ ತಿಂಗಳಲ್ಲಿ ಇದನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು (33%) ಸ್ಥಾನಗಳನ್ನು ಮೀಸಲಿಡಲು ಪ್ರಯತ್ನಿಸಿತು. ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು ಸಮುದಾಯದ ಮಹಿಳೆಯರಿಗೆ ಮೀಸಲಿಡಬೇಕೆಂದು ಮಸೂದೆ ಸೂಚಿಸಿತ್ತು. ಸಂವಿಧಾನ ತಿದ್ದುಪಡಿಯನ್ನು ಸಂಸತ್ತು ಅಂಗೀಕರಿಸಿದ ನಂತರ 15 ವರ್ಷಗಳವರೆಗೆ ಮಾತ್ರ ಮೀಸಲಾತಿಯ ನಿಬಂಧನೆಯು ಅನ್ವಯಿಸುತ್ತದೆ ಎಂದು 2008 ರ ಮಸೂದೆಯು ಹೇಳಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ; ‘ಇದು ನಮ್ಮದು’ ಎಂದ ಕಾಂಗ್ರೆಸ್!

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಮೀಸಲಾತಿ ಪರವಾಗಿ ಪುನರಾವರ್ತಿತ ಪ್ರಯತ್ನ ನಡೆಸಿದರೂ ಮತ್ತು ಸಂಸತ್ತಿನಲ್ಲಿ ಅದನ್ನು ಪರಿಚಯಿಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ, ಮಹಿಳಾ ಮೀಸಲಾತಿ ಮಸೂದೆಯು ಇದುವರೆಗೆ ಕಾನೂನಾಗಲು ವಿಫಲವಾಗಿದೆ. ವಾಸ್ತವವಾಗಿ, ಬಿಜೆಪಿಯ 2014 ಮತ್ತು 2019 ರ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಹೇಳಿತ್ತು.

ಇದೀಗ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಿದೆ. ಮಸೂದೆ ಮಂಡನೆಯಾದರೂ 2024ರ ಲೋಕಸಭೆ ಚುನಾವಣೆಯಲ್ಲಿ ಈ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. 2026ರ ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿದ ನಂತರ, ಬಹುಶಃ 2029 ರಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ವರದಿಯಾಗಿದೆ.

ಇನ್‌ಪುಟ್: ನ್ಯೂಸ್‌ ಮಿನಿಟ್

ವಿಡಿಯೊ ನೋಡಿ: ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ

Donate Janashakthi Media

Leave a Reply

Your email address will not be published. Required fields are marked *