ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ದಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಗಳವಾರ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಸೆಪ್ಟೆಂಬರ್ 19 ಅನ್ನು “ಐತಿಹಾಸಿಕ ದಿನ” ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಸುಮಾರು ಮೂರು ದಶಕಗಳಿಂದ ಬಾಕಿಯುಳಿದಿರುವ ‘ನಾರಿ ಶಕ್ತಿ ವಂದನ್ ಅಧಿನಿಯಮ್’ – ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಪ್ರತಿಪಕ್ಷಗಳನ್ನು ಒತ್ತಾಯಿಸಿದ್ದಾರೆ.
ಸಂವಿಧಾನದ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ-2023 ಅನ್ನು ಮಂಗಳವಾರ ಹೊಸ ಸಂಸತ್ ಭವನದ ಲೋಕಸಭೆಯಲ್ಲಿ ಗದ್ದಲದ ನಡುವೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಪರಿಚಯಿಸಿದರು. ಮಸೂದೆ ಮಂಡನೆಯಾದರೂ 2024ರ ಲೋಕಸಭೆ ಚುನಾವಣೆಯಲ್ಲಿ ಈ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. 2026ರ ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿದ ನಂತರ, ಬಹುಶಃ 2029 ರಲ್ಲಿ ಇದನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಬಿಜೆಪಿ ಜೊತೆಗಿನ ಮೈತ್ರಿ ಮುರಿದಿದ್ದೇವೆ: ಎಐಎಡಿಎಂಕೆ ನಾಯಕ ಜಯಕುಮಾರ್
ಮಂಗಳವಾರ ಸಂಸತ್ತಿಗೆ ಪ್ರವೇಶಿಸುವಾಗ ಮಸೂದೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ಇದು ನಮ್ಮದು, ಅಪ್ನಾ ಹೈ” ಎಂದು ಹೇಳಿದ್ದಾರೆ. ಒಂದು ದಿನದ ಹಿಂದೆಯಷ್ಟೆ ‘ಟ್ವಿಟರ್(ಎಕ್ಸ್)’ ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮಹಿಳಾ ಮೀಸಲಾತಿ ನೀಡುವ ಬಗ್ಗೆಗಿನ ಕೇಂದ್ರ ಸಚಿವ ಸಂಪುಟದ ವರದಿ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮಸೂದೆಯ ವಿವರಗಳಿಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದ್ದಾರೆ.
ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಚೆನ್ನಾಗಿ ಚರ್ಚಿಸಬಹುದಿತ್ತು. ಗೌಪ್ಯವಾಗಿ ಕಾರ್ಯನಿರ್ವಹಿಸುವ ಬದಲು ಒಮ್ಮತವನ್ನು ನಿರ್ಮಿಸಬಹುದಿತ್ತು. ಪಕ್ಷವು ದೀರ್ಘಕಾಲದಿಂದ ಈ ಬೇಡಿಕೆಯನ್ನು ಎತ್ತುತ್ತಿದ್ದು, ಸರ್ಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಹೇಳಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ಕಾರ ಮಂಡಿಸಿದರೆ, ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಜಯ ಸಿಕ್ಕಂತಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೋಮವಾರ ಹೇಳಿದ್ದರು.
ಯುಪಿಎ ಸರ್ಕಾರದ ಅವಧಿಯಲ್ಲಿ 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ಅದನ್ನು ಲೋಕಸಭೆಯಲ್ಲಿ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಯುಪಿಎ ಸರ್ಕಾರ ಮಂಡಿಸಿದ್ದ ಮಸೂದೆಯ ವೇಳೆ ಬಿಜೆಪಿಯ ಹಲವಾರು ಸಂಸದರು ತೀವ್ರವಾಗಿ ವಿರೋಧಿಸಿದ್ದರು.
ವಿಡಿಯೊ ನೋಡಿ: ಕ್ರೀಡಾ ಬದ್ಧತೆ ಮೆರೆದ ಮೊಹಮ್ಮದ್ ಸಿರಾಜ್ Janashakthi Media