ನವದೆಹಲಿ: 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆಯಲ್ಲಿ ಭಾಗಿಯಾಗಿರುವ 11 ಅಪರಾಧಿಗಳ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ಜನವರಿ 8 ರಂದು ರದ್ದುಗೊಳಿಸಿತು. ಈ ಕಾನೂನು ಪ್ರಕ್ರಿಯೆಯಲ್ಲಿ ದೇಶದ ಹಲವಾರು ಸಂಘಟನೆಗಳು ಸೇರಿದಂತೆ ಗಣ್ಯ ಮಹಿಳೆಯರು ಬಿಲ್ಕಿಸ್ ಬಾನೋ ಅವರಿಗೆ ಬೆಂಬಲಿಸಿ, ಅವರ ಗೆಲುವಿಗೆ ಕಾರಣವಾಗಿದ್ದಾರೆ.
ಕಾನೂನು ಪ್ರಕ್ರಿಯೆಯಲ್ಲಿ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ, ಮತ್ತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಸೇರಿದಂತೆ ಪ್ರಮುಖ ಮಹಿಳಾ ಮುಖಂಡರು ಮತ್ತು ಸಂಘಟನೆಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ (ಪಿಐಎಲ್) ಮೂಲಕ ಅಪರಾಧಿಗಳ ಬಿಡುಗಡೆಯನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: ‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ
ನ್ಯಾಯಾಲಯವು ಇದೀಗ ಎಲ್ಲಾ 11 ಅತ್ಯಾಚಾರ ಅಪರಾಧಿಗಳನ್ನು ಎರಡು ವಾರಗಳಲ್ಲಿ ಶರಣಾಗುವಂತೆ ಮತ್ತು ಜೈಲಿಗೆ ಹಿಂತಿರುಗುವಂತೆ ಆದೇಶಿಸಿದೆ. 2022ರ ಆಗಸ್ಟ್ 15ದಂದು ಗುಜರಾತ್ ಸರ್ಕಾರ ಅವರಿಗೆ ನೀಡಿದ್ದ ವಿವಾದಾತ್ಮಕ ಕ್ಷಮಾದಾನದ ನಿರ್ಧಾರವನ್ನು ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಗುಜರಾತ್ ರಾಜ್ಯವು ಕ್ಷಮಾದಾನದ ಆದೇಶಗಳನ್ನು ಜಾರಿಗೊಳಿಸಲು ಅಧಿಕಾರವನ್ನು ಹೊಂದಿಲ್ಲ ಎಂದು ದೃಢವಾಗಿ ಘೋಷಿಸಿದ್ದು, ಇದು ಮಹಿಳೆಯರ ನೇತೃತ್ವದ ಕಾನೂನು ಹೋರಾಟಕ್ಕೆ ಸಿಕ್ಕ ಐತಿಹಾಸಿಕ ವಿಜಯವಾಗಿದೆ.
ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಒಂದು ಪಿಐಎಲ್‌ನ ಸಹ ಅರ್ಜಿದಾರರಾದ ಸುಭಾಷಿಣಿ ಅಲಿ ಮತ್ತು ರೇವತಿ ಲಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಆಗಸ್ಟ್ 15 ರಂದು ಮಹಿಳಾ ಗೌರವವನ್ನು ರಕ್ಷಿಸುವಂತೆ ಪ್ರಧಾನ ಮಂತ್ರಿಯ ಕರೆ ನೀಡಿದ್ದರು. ಆದರೆ ಅದೇ ಹೊತ್ತು ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳಿಗೆ ಹಾರ ಹಾಕಲಾದ ಆಘಾತಕಾರಿ ದೃಶ್ಯಗಳು ಸಾಮೂಹಿಕವಾಗಿ ಭಯಾನಕ ಮತ್ತು ಅಪನಂಬಿಕೆಯನ್ನು ಉಂಟು ಮಾಡಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಇದು ನ್ಯಾಯದ ಅಂತ್ಯವನ್ನು ಸೂಚಿಸುತ್ತದೆಯೇ ಎಂದು ಬಿಲ್ಕಿಸ್ ಆಶ್ಚರ್ಯಪಟ್ಟರು” ಎಂದು ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ ಹೇಳಿದ್ದಾರೆ.
“ಪಿಐಎಲ್ ಹಾಕಲು ವಕೀಲರಾದ ಕಪಿಲ್ ಸಿಬಲ್ ಮತ್ತು ಅಪರ್ಣಾ ಭಟ್ ಕಾನೂನು ಮಾರ್ಗಗಳನ್ನು ಆಲೋಚಿಸುತ್ತಿರುವಾಗ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನನ್ನನ್ನು ಪ್ರಶ್ನಿಸುವಂತೆ ಮಾಡಿತು. ನನ್ನನ್ನು ಸಂಪರ್ಕಿಸಿದಾಗ, ನಾನು ಯಾವುದೆ ಹಿಂಜರಿಕೆಯಿಲ್ಲದೆ ಅರ್ಜಿದಾರನಾಗಲು ಒಪ್ಪಿಕೊಂಡೆ” ಎಂದು ಸುಭಾಷಿಣಿ ಹೇಳಿದ್ದಾರೆ. ಜೊತೆಗೆ ರೇವತಿ ಲಾಲ್ ಮತ್ತು ಲಕ್ನೋ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕರಾದ ರೂಪ್ ರೇಖಾ ವರ್ಮಾ ಸಹ ಅರ್ಜಿದಾರರಾಗಲು ಒಪ್ಪಿಕೊಂಡರು ಎಂದು ಅವರು ಹೇಳಿದ್ದಾರೆ.
ಇದು ಪ್ರಕರಣದ ಮೊದಲ ಪಿಐಎಲ್ ಅರ್ಜಿಯಾಗಿದೆ. “ಆದಾಗ್ಯೂ, ಅತ್ಯಂತ ಮುಖ್ಯವಾದ ವಿಷಯವೆಂದರೆ ಬಿಲ್ಕಿಸ್ ಅವರೇ ಸ್ವತಃ ಅರ್ಜಿಯನ್ನು ಸಲ್ಲಿಸಿದರು, ಇದು ದೊಡ್ಡ ಬದಲಾವಣೆಯನ್ನು ಮಾಡಿತು” ಎಂದು ಸುಭಾಷಿಣಿ ಅಲಿ ಹೇಳಿದ್ದಾರೆ.
ತನ್ನ ಕಾಲೇಜು ವರ್ಷಗಳಲ್ಲಿ ಬಾಬರಿ ಮಸೀದಿ ಧ್ವಂಸವನ್ನು ನೋಡುವ ಮೂಲಕ ಪತ್ರಕರ್ತೆಯಾಗಿ ತನ್ನ ಸುಮಾರು ಮೂರು ದಶಕಗಳ ಪ್ರಯಾಣವು ಪ್ರಭಾವಿತಗೊಂಡಿದೆ ಎಂದು ರೇವತಿ ಲಾಲ್ ಹೇಳುತ್ತಾರೆ. “ಈ ಘಟನೆಯು ನನ್ನನ್ನು ದ್ವೇಷದ ರಾಜಕೀಯಕ್ಕೆ ಒಡ್ಡಿತು, ಸತ್ಯಗಳನ್ನು ಹಂಚಿಕೊಳ್ಳಲು ಮತ್ತು ನಮ್ಮ ದೇಶದ ವೈವಿಧ್ಯತೆಯನ್ನು ಕಾಪಾಡುವ ಸಾಧನವಾಗಿ ಪತ್ರಿಕೋದ್ಯಮ ಮುಂದುವರಿಸಲು ನನ್ನನ್ನು ಪ್ರೇರೇಪಿಸಿತು” ಎಂದು ಅವರು ಹೇಳಿದ್ದಾರೆ. ಅತ್ಯಾಚಾರಿಗಳು ಬಿಡುಗಡೆಯಾದ ನಂತರ ಏನಾದರೂ ಮಾಡಬೇಕೆಂಬ ತುಡಿತದಲ್ಲಿದ್ದಾಗ ಸುಭಾಷಿಣಿ ತನ್ನ ಬಳಿಗೆ ಬಂದಾಗ ಅರ್ಜಿದಾರಳಾಗಲು ತಾನು ತಕ್ಷಣ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.
ತೀರ್ಪಿನ ಕುರಿತು ಮಾತನಾಡಿದ ರೇವತಿ, ಮುಂದಿನ ಬಾರಿ ಈ ಅಪರಾಧಿಗಳಾಗಲಿ ಅಥವಾ ಬೇರೆ ಯಾರಾದರಾಗಲಿ ಮೇಲ್ಮನವಿ ಸಲ್ಲಿಸಲು ಬಂದಾಗ ತೀರ್ಪನ್ನು ನಿರ್ಲಕ್ಷಿಸಲಾಗದೆ ಕಾನೂನು ಪೂರ್ವನಿದರ್ಶನಗಳನ್ನು ಈ ತೀರ್ಪು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ಈ ತೀರ್ಪು ಧೈರ್ಯ ಹಾಗೂ ಕಾನೂನು ಮತ್ತು ನ್ಯಾಯದ ತೀವ್ರ ತಿಳುವಳಿಕೆಯನ್ನು ಪ್ರದರ್ಶಿಸುತ್ತದೆ ಎಂದು ಸುಭಾಷಿಣಿ ಅಲಿ ಹೇಳಿದ್ದು, ಇದು ಕಾನೂನಿನ ನಿಯಮವನ್ನು ಎತ್ತಿಹಿಡಿಯುವಲ್ಲಿ ನಾಗರಿಕರ ಪಾತ್ರದ ಪ್ರಾಮುಖ್ಯತೆಯನ್ನು ಗಟ್ಟಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: ಸಾಮಾಜಿಕ ಕ್ರೌರ್ಯವೂ ʼಸೌಜನ್ಯʼಳ ಆರ್ತನಾದವೂ
“ಗುಜರಾತ್ ಸರ್ಕಾರವು ಆರೋಪಿಗಳ ಜತೆ ಶಾಮೀಲಾಗಿ, ಅವರ ಕ್ರಮಗಳನ್ನು ಸುಗಮಗೊಳಿಸಿದೆ. ಇದೇ ಕಾರಣಕ್ಕೆ ಪ್ರಕರಣವು ಅಂತಿಮವಾಗಿ ಮಹಾರಾಷ್ಟ್ರಕ್ಕೆ ವರ್ಗಾವಣೆ ಆಯಿತು ಎಂದು ನ್ಯಾಯಾಲಯ ಪ್ರತಿಪಾದಿಸಿತು. ಈ ತೀರ್ಪು ರಾಧೇಶ್ಯಾಮ್ ಮಾತ್ರವಲ್ಲದೆ ಗುಜರಾತ್ ಸರ್ಕಾರವನ್ನೂ ಒಳಗೊಂಡಂತೆ ಸುಪ್ರೀಂ ಕೋರ್ಟ್‌ಗೆ ಮಾಡಿದ ವಂಚನೆಯನ್ನು ಬಹಿರಂಗಪಡಿಸಿದೆ” ಎಂದು ಸುಭಾಷಿಣಿ ಹೇಳಿದ್ದಾರೆ.
“ಬಿಲ್ಕಿಸ್ ಬಾನೋ ಅವರು 2002 ರಿಂದ ಗುಜರಾತ್ ಸರ್ಕಾರದ ಯಾವುದೇ ಸಹಾಯವಿಲ್ಲದೆ ಈ ಪ್ರಕರಣದ ವಿರುದ್ಧ ಹೋರಾಡುತ್ತಿದ್ದಾರೆ. ವಾಸ್ತವವಾಗಿ ಸರ್ಕಾರವೆ ಅಪರಾಧದ ಅಪರಾಧಿಗಳನ್ನು ಬೆಂಬಲಿಸಿತ್ತು. ಇನ್ಯಾವುದೆ ಅನ್ಯಾಯದ ವಿರುದ್ಧ ಹೋರಾಡುವ ಮಹಿಳೆಯರು ತಾವು ಏಕಾಂಗಿ ಎಂದು ಭಾವಿಸಬಾರದು” ಎಂದು ಸುಭಾಷಿಣಿ ಹೇಳುತ್ತಾರೆ.
“ದಯವಿಟ್ಟು ಇದಕ್ಕಾಗಿ ಕೆಲಸ ಮಾಡುವ ವಕೀಲರು, ಹೋರಾಟಗಾರರು ಮತ್ತು ಸಂಘಟನೆಗಳನ್ನು ಸಂಪರ್ಕಿಸಿ. ಈ ಹೋರಾಟದಲ್ಲಿ ನೀವು ಒಬ್ಬಂಟಿಯಾಗಿಲ್ಲ. ಹೋರಾಟವು ಸುಲಭವಾಗಿದೆ ಎಂದು ಭಾವಿಸಬೇಡಿ ಎಂದು ನಾನು ಭಾರತದ ನಾಗರಿಕರಿಗೆ ಮನವಿ ಮಾಡುತ್ತಿದ್ದೇನೆ… ಹೋರಾಡುತ್ತಿರುವವರಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ,” ಎಂದು ಸುಭಾಷಿಣಿ ಹೇಳಿದ್ದಾರೆ.
ವಿಡಿಯೊ ನೋಡಿ: ‘ಸೌಹಾರ್ದತೆಗೆ ಸಮಾನತೆ ಅತ್ಯಗತ್ಯ’ – ಪ್ರೊ. ಬರಗೂರು Janashakthi Media