ಬೆಂಗಳೂರು: ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಹೆಣ್ಣನ್ನು ಹುಟ್ಟಿನಿಂದಲೇ ನಿರಾಕರಿಸುವ ಈ ಸಮಾಜ ಮಹಿಳೆಗೆ ಯಾವ ರೀತಿಯಲ್ಲಿಯೂ ಸಮಾನವಾದ ಅವಕಾಶಗಳನ್ನು, ಸ್ಥಾನಮಾನಗಳನ್ನು ಕೊಟ್ಟಿಲ್ಲ, ಮಹಿಳೆಯನ್ನು ಕೇವಲ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಹಿತಿ ರೂಪ ಹಾಸನ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ವೇದಿಕೆ ಮತ್ತು ಸಿಐಟಿಯು, ಕೆಪಿಆರ್‌ಎಸ್, ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಚ್‌ಎಸ್, ಶ್ರಮ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಮಹಿಳಾ ಸರ್ಕಾರಿ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ “ಲಿಂಗ ಅಸಮಾನತೆ, ಮಹಿಳೆಯರ ಘನತೆ ಮತ್ತು ಅಭಿವೃದ್ಧಿಗಿರುವ ಸಂಬಂಧ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡುತ್ತಿದ್ದರು. ಅಕ್ಟೋಬರ್ 20 ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯುವ “ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿ” ಕುರಿತು ನಡೆಯುವ ಬೃಹತ್ ವಿಚಾರ ಸಂಕಿರಣದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಸರಣಿ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು ಇದರಿಂದ ಶೇಖಡ 30 ರಷ್ಟು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಹಿಳೆಯರ ಸುರಕ್ಷತೆಯ ಪ್ರಶ್ನೆ ಇಂದಿನ ಪೋಷಕರುಗಳಿಗೆ ದೊಡ್ಡ ಸವಾಲಾಗಿದ್ದು ಸಮಾಜದಲ್ಲಿ ಹೆಣ್ಣುಮಕ್ಕಳು ಘನತೆಯಿಂದ ಬದುಕುವ ವಾತಾವರಣವನ್ನು ಹಾಳು ಮಾಡಲಾಗಿದೆ. ಮಹಿಳೆಯರ ಮೇಲೆ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಗಿಕ ಕಿರುಕುಳ, ದೌರ್ಜನ್ಯ ಹತ್ಯಾಚಾರದಂತಹ ಪ್ರಕರಣಗಳು ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.ಇವುಗಳ ವಿರುದ್ದ ಹೆಣ್ಣು ಮಕ್ಕಳು ಜಾಗೃತರಾಗಿ ಸಂಘಟಿತ ಪ್ರತಿಭಟನೆ ನಡೆಸಬೇಕೆಂದರು.
ಇದನ್ನು ಓದಿ : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬಿಜೆಪಿ
ಒಂದೆಡೆ ಹೆಣ್ಣು ಮಕ್ಕಳ ಕಳ್ಳಸಾಗಾಣೆ ಮಾಡಿ ಅವರನ್ನು ವ್ಯೇಶ್ಯಾವಾಟಿಕೆಯಂತಹ ದಂದೆಗಳಿಗೆ ತಳ್ಳುತ್ತಿರುವ ದೊಡ್ಡ ಜಾಲ ಭಾರತದಲ್ಲಿ ಮತ್ತು ರಾಜ್ಯದಲ್ಲಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಬಾಲ್ಯವಿವಾಹಗಳು ಹೆಚ್ಚಾಗಿ ಬಾಲ ತಾಯಂದಿರ ಸಂಖ್ಯೆ ಹೆಚ್ಚಾಗಿತ್ತಿದೆ. ಹಾಸನದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಆತ್ಯಹತ್ಯೆ, ಬಾಲ ವಿವಾಹ, ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ. ಸಂವಿಧಾನ ಶಿಲ್ಪ ಬಿ.ಆರ್. ಅಂಬೇಡ್ಕರ್ ರವರು ಹೇಳಿದಂತೆ “ಮಹಿಳೆಯರ ಪ್ರಗತಿಯ ಮಟ್ಟದಿಂದ ಸಮಾಜದ ಪ್ರಗತಿಯ ಮಟ್ಟವನ್ನು ಅಳೆಯುತ್ತೇನೆ” ಎಂಬ ಮಾತಿನಂತೆ ಮಹಿಳೆಯರನ್ನು ಸಮಾನವಾಗಿ ಕಾಣುವ, ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಮತ್ತು ಅವರನ್ನೂ ಅಭಿವೃದ್ಧಿಯ ಪಥದಲ್ಲಿ ಒಳಗೊಂಡಾಗ ಮಾತ್ರ ನೈಜ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪರವರು ಮಾತನಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಕಡೆಗಣಿಸಲಾಗಿದೆ ಮಾತ್ರವಲ್ಲ. ದುಡಿಯುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ, ವೇತನದಲ್ಲಿ ತಾರತಮ್ಯ ನೀತಿ ಜಾರಿಯಲ್ಲಿದೆ. ಹಲವು ಹೋರಾಟಗಳ ನಂತರ ಮಹಿಳೆಯರಿಗೆ ಸಮಾನ ಮತದಾನದ ಹಕ್ಕು ಸಿಕ್ಕಿದ್ದರೂ ರಾಜಕೀಯದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನಗಳು ಇದುವರೆಗೂ ಲಭಿಸಿಲ್ಲ. ಶೇಖಡ 50 ರಷ್ಟಿರುವ ಮಹಿಳೆಯರಿಗೆ ರಾಜಕೀಯದಲ್ಲಿ ಶೇಖಡ 33 ರಷ್ಟು ಮೀಸಲಾತಿಯನ್ನು ಒದಗಿಸುವ ಕುರಿತು ಇನ್ನೂ ಚರ್ಚಿಸುತ್ತಿದ್ದೇವೆ, ಸಿಕ್ಕ ಅವಕಾಶಗಳನ್ನು ಮಹಿಳೆಯರೇ ಸಂಪೂರ್ಣವಾಗಿ ಚಲಾಯಿಸುವ ಮುಕ್ತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಪುರುಷ ಪ್ರಧಾನ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ಕವಿತ ಅವರು ಮಾತನಾಡಿ ಕಾಲೇಜು ಅಭ್ಯಾಸ ಮಾಡುತ್ತಿರುವ ಹೆಣ್ಣು ಮಕ್ಕಳ ವಯಸ್ಸು ಅತ್ಯಂತ ಚಂಚಲವಾಗಿರುತ್ತದೆ. ಈ ಸಂದರ್ಭದಲ್ಲಿ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕು. ಪೋಷಕರು ತಮ್ಮ ಮೇಲೆ ಇಟ್ಟಿರುವ ನಿರೀಕ್ಷಗಳನ್ನು ಹುಸಿಗೊಳಿಸದಂತೆ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಆರಂಭದಲ್ಲಿ ದೀಪಬೆಳಗಿಸುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾದ ಡಾ. ಶ್ರೀದೇವಿ ಮತ್ತು ಡಾ.ಪೂರ್ಣಿಮಾ ಉಪಸ್ಥಿತರಿದ್ದರು. ಕಾಲೇಜಿನ ಮೂರನೇ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯರಾದ ಸಿಂಧು ಕೊಲೇರ ಸ್ವಾಗತಿಸಿದರು, ಸ್ವಾತಿ ಬಿ.ಕೆ ನಿರ್ವಹಿಸಿದರು.
ಇದನ್ನು ನೋಡಿ : ಸತ್ತವರ ಹೆಸರಲ್ಲಿ ಭೂಮಿ ಕಬಳಿಸಿದ ಕುಮಾರಸ್ವಾಮಿ, ಯಡಿಯೂರಪ್ಪ – ಕೃಷ್ಣ ಬೈರೇಗೌಡ ಆರೋಪ