ತೀಸ್ತಾ ಬಂಧನ: ಹಲವೆಡೆಗಳಿಂದ ಖಂಡನೆ

ಸುಳ್ಳು ಆರೋಪಗಳನ್ನು ಹಿಂತೆಗೆದುಕೊಂಡು ಬಿಡುಗಡೆ ಮಾಡಬೇಕು-ಯೆಚುರಿ

2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಕ್ಲೀನ್‍ ಚಿಟ್‍ ಅನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರಿಂ ಕೋರ್ಟ್ ತಳ್ಳಿ ಹಾಕಿದ ಬೆನ್ನಲ್ಲೇ ಆ ಅರ್ಜಿದಾರರಲ್ಲಿ ಒಬ್ಬರಾದ ತೀಸ್ತಾ ಸೆಟಲ್ವಾಡ್ ಮತ್ತು ಈ ಹಿಂಸಾಚಾರದ ವೇಳೆಯಲ್ಲಿ ಆಗಿನ ಗುಜರಾತ್‍ ಸರಕಾರದ ನಡವಳಿಕೆಯನ್ನು ಪ್ರಶ್ನಿಸಿದ್ದ ಗುಜರಾತಿನ ಇಬ್ಬರು ಹಿರಿಯ ಪೊಲೀಸ್‍ ಅಧಿಕಾರಿಗಳಾದ ಶ್ರೀಕುಮಾರ್ ಮತ್ತು ಸಂಜೀವ ಭಟ್ ರವರುಗಳನ್ನು ಗುಜರಾತಿನ ‘ಭಯೋತ್ಪಾದಕ ನಿಗ್ರಹ ದಳ’ ಬಂಧಿಸಿರುವದರ ವಿರುದ‍್ದ ಹಲವೆಡೆಗಳಿಂದ ಖಂಡನೆ ಮತ್ತು ಬಂಧಿತರಿಗೆ ಬೆಂಬಲ ವ್ಯಕ್ತವಾಗುತ್ತಿದೆ.

ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಅವಿರತವಾಗಿ ಪ್ರತಿಪಾದಿಸುತ್ತ ಬಂದಿರುವವರಿಗೆ ಕಿರುಕುಳ ಕೊಡುವುದನ್ನು ಮತ್ತು ವಿಚಾರಣೆಗೆ ಗುರಿಪಡಿಸುವುದನ್ನು ನಿಲ್ಲಿಸಬೇಕು, ಸುಳ್ಳು ಆರೋಪಗಳನ್ನುಹಿಂತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಆಗ್ರಹ ಪಡಿಸಿದ್ದಾರೆ.

2002ರ ಗುಜರಾತ್ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿರುವ ತೀಸ್ತಾ ಸೆಟಲ್ವಾಡ್ ಅವರ ಬಂಧನ ಕುರಿತ ಒಂದು  ಹೇಳಿಕೆಯಲ್ಲಿ  ಸಿಪಿಐ(ಎಂ) ಪೊಲಿಟ್ ಬ್ಯೂರೋ ಈ ಕ್ರಮವನ್ನು  ಖಂಡಿಸಿದೆ. ತೀಸ್ತಾ ಅವರ ಬಂಧನವು ಯಾವ ಆಳ್ವಿಕೆಯ ಅಡಿಯಲ್ಲಿ ಕೋಮು ಹಿಂಸಾಚಾರ ನಡೆಯುತ್ತದೋ ಆ ಪ್ರಭುತ್ವ  ಅಥವಾ ಸರ್ಕಾರದ ಪಾತ್ರವನ್ನು ಪ್ರಶ್ನಿಸುವ ಧೈರ್ಯ ಮಾಡಬಾರದು ಎಂದು ಎಲ್ಲಾ ಜನವಾದೀ ಮನೋಭಾವದ ನಾಗರಿಕರಿಗೆ ಕೊಟ್ಟಿರುವ ಕೇಡಿನ ಬೆದರಿಕೆಯಾಗಿದೆ, ಇದು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಮಾಡಿರುವ ಅಪಚಾರವಾಗಿದೆ ಎಂದು ಅದು ಹೇಳಿದೆ.

“ದೂರುದಾರರನ್ನೇ ಆರೋಪಿಯಾಗಿಸಿದ ಪ್ರಶ್ನಾರ್ಹ ತೀರ್ಪು”

ಆದಾಗ್ಯೂ, ಅವರನ್ನು ಬಂಧಿಸುವ  ಗುಜರಾತ್ ಆಡಳಿತದ ಕ್ರಮವು ಸಾಧ್ಯವಾಗಿರುವುದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಪ್ರಶ್ನಾರ್ಹ ತೀರ್ಪಿನಿಂದ ಎಂಬುದನ್ನು ಕೂಡ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಮನಿಸಿದೆ. ಈ ತೀರ್ಪು ದೂರುದಾರರನ್ನು ಆರೋಪಿಯನ್ನಾಗಿ ಮಾಡಿದೆ ಮತ್ತು “ಇಂತಹ ಪ್ರಕ್ರಿಯೆಯ ದುರುಪಯೋಗದಲ್ಲಿ ಭಾಗಿಯಾಗಿರುವ ಎಲ್ಲರೂ ಕಟಕಟೆಯಲ್ಲಿ ನಿಲ್ಲಬೇಕಾಗಿದೆ ಮತ್ತು ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಜರುಗಬೇಕಾಗಿದೆ” ಎಂದು ಆದೇಶಿಸಿದೆ.

ಇದರರ್ಥ ನ್ಯಾಯಾಲಯವು ಸ್ಥಾಪಿಸಿದ ಯಾವುದೇ ಎಸ್‍ಐಟಿ (ವಿಶೇಷ ತನಿಖಾ ತಂಡ)ಯನ್ನು ನ್ಯಾಯಾಂಗ ಮೇಲ್ಮನವಿಗಳ ವ್ಯಾಪ್ತಿಯಿಂದ ಹೊರಗಿರುವಂತದ್ದು ಎಂದು ಪರಿಗಣಿಸಬೇಕು ಮತ್ತು ಪ್ರಸ್ತುತ ಪ್ರಕರಣದಲ್ಲಿ ಝಾಕಿಯಾ ಜಾಫ್ರಿ ಮತ್ತು ತೀಸ್ತಾ ಸೆಟಲ್ವಾಡ್ ಮಾಡಿದಂತೆ, ಯಾರಾದರೂ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ,  ಆಗ ಅವರ ವಿರುದ್ಧ “ಪ್ರಕ್ರಿಯೆಯ ದುರುಪಯೋಗ” ದ ಆರೋಪವನ್ನು ಹೊರಿಸಲಾಗುತ್ತದೆ. 16 ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆದ ಒಂದು ಹೋರಾಟವನ್ನು “ದುರುದ್ದೇಶದಿಂದ ಮಡಕೆ ಬೇಯುತ್ತಲೇ ಇರು”ವಂತೆ ಮಾಡುವ ಕೆಲಸ ಎಂದು ಅಸಾಮಾನ್ಯ ಅವಹೇಳನಕಾರಿ ಪದಗಳಲ್ಲಿ ವರ್ಣಿಸಲಾಗಿದೆ ಎಂದು ಪೊಲಿಟ್‍ ಬ್ಯುರೊ ಖೇದ ವ್ಯಕ್ತಪಡಿಸಿದೆ.

ಈ ಎಸ್‌ಐಟಿ ಪ್ರಕರಣದಲ್ಲಿ ನ್ಯಾಯಾಲಯವು ನೇಮಿಸಿದ ನ್ಯಾಯ ಸಲಹೆಗಾರ(ಅಮಿಕಸ್ ಕ್ಯೂರಿ) ಕೂಡ, ಎಸ್‌ಐಟಿಯ ಹಲವು ಶಿಫಾರಸುಗಳನ್ನು ಒಪ್ಪುತ್ತಲೇ, ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಕುರಿತ ಐಪಿಸಿಯ ಕೆಲವು ಸೆಕ್ಷನ್‌ಗಳನ್ನು ಪರಿಗಣಿಸಬೇಕು ಎಂದು ದಾಖಲಿಸಿದೆ ಎಂಬುದನ್ನು ಗಮನಿಸಬೇಕು. ಈ ಹಿಂದೆ, ಏಪ್ರಿಲ್ 2004ರಲ್ಲಿ, ಸ್ವತಃ ಸುಪ್ರೀಂ ಕೋರ್ಟ್ ಆಗಿನ ಸರ್ಕಾರದ ನಾಯಕರನ್ನು “ಆಧುನಿಕ ಕಾಲದ ನೀರೋಗಳು” ಎಂದು ಬಣ್ಣಿಸಿತ್ತು. ಪ್ರಸ್ತುತ ತೀರ್ಪು ಈ ಯಾವುದೇ ಸಮಸ್ಯೆಗಳನ್ನು ಪರಿಶೀಲಿಸುವುದಿಲ್ಲ. ತೀಸ್ತಾ ಅವರಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಶಿಕ್ಷೆ ನೀಡುತ್ತದೆ. ಇದು ಸರಿಪಡಿಕೆ ಅರ್ಜಿ(ಕ್ಯುರೇಟಿವ್ ಪಿಟಿಷನ್‍)ಗೆ ಸೂಕ್ತವಾದ ಒಂದು ಪ್ರಕರಣವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಈ ಕೇಸುಗಳನ್ನು ಹಿಂಪಡೆಯಬೇಕು ಮತ್ತು ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಇತರರನ್ನು ಬಿಡುಗಡೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ತೀಸ್ತಾ ವಿರುದ್ಧ ಸುಳ್ಳು ಆರೋಪಗಳನ್ನು, ಕಿರುಕುಳ ನಿಲ್ಲಿಸಿ-ಎಐಡಿಡಬ್ಲ್ಯುಎ

ಗುಜರಾತ್ ಹತ್ಯಾಕಾಂಡದಲ್ಲಿ ಅಮಾನುಷವಾಗಿ ಹತ್ಯೆಯಾದ ಕಾಂಗ್ರೆಸ್‍ ಸಂಸತ್‍ ಸದಸ್ಯ ಎಹ್ಸಾನ್ ಜಾಫ್ರಿಯವರ ಹೆಂಡತಿ ಝಾಕಿಯ ಜಾಫ್ರಿ ಅವರ ಮನವಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸುತ್ತಿರುವಂತೆಯೇ, ತಡಮಾಡದೆ, ಗುಜರಾತ್‍ ಸರಕಾರ, ಝಾಕಿಯಾ ಅವರ ಜೊತೆಗೆ ದೃಢವಾಗಿ ನಿಂತಿರುವ ತೀಸ್ತಾ ರವರನ್ನು ಬಂಧಿಸಿದೆ ಎಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಕೂಡ ಇದನ್ನು ಬಲವಾಗಿ ಖಂಡಿಸಿದೆ.

ತೀಸ್ತಾ ಇವರ ಇಂತಹ ಧೀರ ಕೃತ್ಯಗಳಿಗಾಗಿ ಅವರನ್ನು ಬಲಿಹಾಕಲಾಗುತ್ತಿದೆ ಎಂದಿರುವ ಎಐಡಿಡಬ್ಲ್ಯುಎ ತಕ್ಷಣವೇ ಅವರ ವಿರುದ್ದ ಹಾಕಿರುವ ಸುಳ್ಳು ಆರೋಪಗಳನ್ನು ಹಿಂಗೆದುಕೊಳ್ಳಬೇಕು ಮತ್ತು ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ತೀಸ್ತಾ ಅವರನ್ನು ಬಂಧಿಸಿರುವುದು ಕೋಮುವಾದದ ವಿರುದ್ಧ, ನ್ಯಾಯ ಮತ್ತು ಮಾನವ ಹಕ್ಕುಗಳಿಗೆ ಅವರ ದಶಕಗಳ ಹೋರಾಟಕ್ಕಾಗಿ ಎಂದು; ʻಸಹಮತ್‍’ ಹೇಳಿದೆ. “ ಆಕೆಯ ಬಾಯಿ ಮುಚ್ಚಿಸಲು ಮತ್ತು ಈ ಹಕ್ಕುಗಳಿಗೆ ಹೋರಾಡುತ್ತಿರುವ ಇತರರಲ್ಲಿ ಭೀತಿ ಹುಟ್ಟಿಸಲು ಮತ್ತು ಅವರ ಬಾಯಿಗಳನ್ನೂ ಮುಚ್ಚಿಸಲು ಈ ಬಂಧನ ನಡೆಸಲಾಗಿದೆ” ಎಂದು ಅದು ಹೇಳಿದೆ.

ಈ ಬಂಧನದ ಕೆಲವೇ ಗಂಟೆಗಳ ಮೊದಲು ಕೇಂದ್ರ ಗೃಹಮಂತ್ರಿ ಅಮಿತ್ ‍ಷಾ, ತೀಸ್ತಾ ಅವರ ಸಂಸ್ಥೆ ಗುಜರಾತ್‍ ಗಲಭೆಗಳನ್ನು ಕುರಿತು ಪೊಲೀಸರಿಗೆ ಆಧಾರಹೀನ ಮಾಹಿತಿಗಳನ್ನು ಕೊಟ್ಟಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಗುಜರಾತ್‍ ಎಟಿಎಸ್‍ ಅವರ ವಿರುದ್ಧ ಫೋರ್ಜರಿಯ ಕೇಸು ದಾಖಲಿಸಿದೆ ಎಂದು ವರದಿಯಾಗಿದೆ.

ತೀಸ್ತಾ ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಮತ್ತೊಂದು ಪ್ರಯತ್ನ-ಲೆಫ್ಟ್ ವರ್ಡ್

ತೀಸ್ತಾ ಅವರ ಈ ಹೋರಾಟಗಳ ದಾಖಲೆಗಳನ್ನು ನೀಡುವ ಕೃತಿ “ಫೂಟ್‍ ಸೋಲ್ಜರ್ ಆಫ್‍ ಕನ್ಸಿಟ್ಯೂಷನ್’(ಕನ್ನಡದಲ್ಲಿ ‘ಸಂವಿಧಾನದ ಕಾಲಾಳು’ ಎಂದು ಪ್ರಕಟವಾಗಿದೆ)ನ್ನು ಪ್ರಕಟಿಸಿರುವ ʻಲೆಫ್ಟ್ ವರ್ಡ್’ ಪ್ರಕಟಣ ಸಂಸ್ಥೆ ತೀಸ್ತಾ ಅವರಿಗೆ ಬೆಂಬಲ ನೀಡಿದೆ. ಗುಜರಾತ್‍ ಹಿಂಸಾಚಾರದಲ್ಲಿ ಪ್ರಾಣ ಕಳಕೊಂಡವರಿಗೆ ನ್ಯಾಯಕ್ಕಾಗಿ ತೀಸ್ತಾ ಮತ್ತು ಅವರ ಸಹಯೋಗಿಗಳು ನಡೆಸುತ್ತ ಬಂದಿರುವ ಹೋರಾಟದ ಭಾಗವಾಗಿ, ಎಸ್‍ಐಟಿ ಯ ವರದಿಗಳಲ್ಲಿ ಇರುವ ಹಲವು ದೋಷಗಳನ್ನು ತೋರಿಸಿಕೊಡುತ್ತ, ಇದರಿಂದಾಗಿ ನ್ಯಾಯ ಸಿಗಲಾರದಾಗಿದೆ ಎಂದು ಹೇಳುತ್ತ ಬಂದಿದ್ದಾರೆ ಇದಕ್ಕಾಗಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹಲವು ಸುಳ್ಳುಗಳನ್ನು ಪಸರಿಸಲಾಗಿದೆ. ಆದರೆ ಅವೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ ಎಂದು ʻಲೆಫ್ಟ್ ವರ್ಡ್’ ತೀಸ್ತಾ ಬಂಧನದ ನಂತರ ನೀಡಿರುವ ತನ್ನ ಹೇಳಿಕೆಯಲ್ಲಿ ನೆನಪಿಸಿದೆ.

ಸುಪ್ರಿಂ ಕೋರ್ಟಿನ ತೀರ್ಪಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿತ್ತ, ಅದು ಗುಜರಾತ್‍ ಹಿಂಸಾಚಾರದ ಬಗ್ಗೆ ಎಸ್‍ಐಟಿ ಕಥನವನ್ನು ಎತ್ತಿ ಹಿಡಿದಿರುವುದು ಮಾತ್ರವಲ್ಲದೆ, ಯಾವುದೇ ವಾಸ್ತವ ಸಂಗತಿಯ ಆಧಾರವಿಲ್ಲದೆ ತೀಸ್ತಾ ಸೆಟಲ್ವಾಡ್‍ ರವರ ಆಶಯಗಳನ್ನೂ ಪ್ರಶ್ನಿಸಿದೆ, ಆಮೂಲಕ ಝಾಕಿಯಾ ಜಾಫ್ರಿಯವರ ಧೈರ್ಯವನ್ನೂ  ಪ್ರಶ್ನಿಸಿದೆ ಎಂದು ʻಲೆಫ್ಟ್ ವರ್ಡ್’ ಖೇದ ವ್ಯಕ್ತಪಡಿಸಿದೆ.

ತೀಸ್ತಾ ಅವರು ತಮ್ಮ ತಾತ ಹಾಗೂ ಸ್ವತಂತ್ರ ಭಾರತದ ಮೊದಲ ಅಟಾರ್ನಿ ಜನರಲ್‍ ಎಂ.ಸಿ.ಸೆಲ್ವಾಡ್‍ ಮತ್ತು ಬ್ರಿಟಿಷ್‍ ಸರಕಾರ ಜಲಿಯಾನ್‍ ವಾಲಾಬಾಗ್ ಹತ್ಯಾಕಾಂಡದ ತನಿಖೆಗೆ ನೇಮಿಸಿದ್ದ ಸಮಿತಿಯಲ್ಲಿ ಏಕೈಕ ಭಾರತೀಯ ಸದಸ್ಯರಾಗಿದ್ದ. ಮುತ್ತಾತ ಸರ್ ಚಿಮನ್‍ಲಾಲ್ ಹರಿಲಾಲ್  ಸೆಟಲ್ವಾಡ್‍ ರವರ ಪರಂಪರೆಯನ್ನು ಮುಂದುವರೆಸಿ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾರ್ವಜನಿಕ ಸೇವೆಯ ನಿಷ್ಕಳಂಕ ದಾಖಲೆ ಹೊಂದಿರುವವರು.

“ಭಾರತಕ್ಕೆ ಝಾಕಿಯಾ ಜಾಫ್ರಿಯಂತಹ ಧೈರ್ಯ ಮತ್ತು ಸ್ಥೈರ್ಯ ಹೊಂದಿರುವ ನಾಗರಿಕರು ಮತ್ತು ತೀಸ್ತಾ ಸೆಟಲ್ವಾಡ್‍ ತೆರನ ಮಾನವ ಹಕ್ಕು ಹೋರಾಟಗಾರರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ನಾವು ಅವರ ಜತೆಗೆ ನಿಲ್ಲುತ್ತೇವೆ” ಎಂದು ಲೆಫ್ಟ್ ವರ್ಡ್ ಹೇಳಿದೆ.

‘ಜೀವ ಬೆದರಿಕೆ ಇದೆ’

ಜೂನ್‍ 25ರ ಸಂಜೆ ಗುಜರಾತ್‍ ಎಟಿಎಸ್‍ನ ತಂಡ ಮುಂಬೈನ ತಮ್ಮ ಮನೆಗೆ ಏಕಾಏಕಿ ನುಗ್ಗಿ ತಮ್ಮ ಮೇಲೆ ಕೈಮಾಡಿದರು, ಅದರಿಂದಾಗಿ ಎಡಗೈ ಮೇಲೆ ಗಾಯವಾಗಿದೆ, ಸಾಂತಾಕ್ರೂಝ್ ಪೊಲೀಸ್‍ ಸ್ಟೇಷನ್‍ಗೆ ಒಯ್ದು ಬಂಧಿಸಲಾಯಿತು, ಅಲ್ಲಿಂದ ಅಹಮದಾಬಾದ್ ಗೆ ಒಯ್ಯುವ ಮೊದಲು ತನಗೆ ಜೀವ ಭಯವಿದೆ ಎಂದು ಸಾಂತಾಕ್ರೂಝ್‍ ಪೊಲೀಸ್‍ ಸ್ಟೇಷನಿನಲ್ಲಿ ದೂರು ಸಲ್ಲಿಸಿದ್ದು, ಅದರಲ್ಲಿ ಅಹಮದಾಬಾದ್‍ ಎಟಿಎಸ್‍ನ ಪೊಲೀಸ್‍ ಇನ್ಸ್ ಪೆಕ್ಟರ್ ಜೆ ಹೆಚ್‍ ಪಟೇಲ್‍ ಹೆಸರು ಉಲ್ಲೇಖಿಸಿರುವುದಾಗಿ ತೀಸ್ತಾ ಸೆಟಲ್ವಾಡ್‍ ಹೇಳಿದ್ದಾರೆ. ತಮ್ಮ ಲಾಯರ್ ಬರುವ ವರೆಗೂ ತಮಗೆ ಎಫ್‍ಐಆರ್ ವಾರಂಟ್‍ ತೋರಿಸಿರಲಿಲ್ಲ ಎಂದೂ ಅವರು ಹೇಳಿರುವುದಾಗಿ ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *