ಸುಧೀಂದ್ರ ಕುಲಕರ್ಣಿ
ಕೃಪೆ: NDTV ವೆಬ್‌ಸೈಟ್
ಚೈನಾದ ನಾಯಕತ್ವವು ಹಲವಾರು ಪ್ರಜಾಪ್ರಭುತ್ವಗಳಿಗಿಂತ ಹೆಚ್ಚು ಸಾಮೂಹಿಕವಾದುದು ಮತ್ತು ಪರಸ್ಪರ ಸಮಾಲೋಚನೆಗೆ ಒಳಪಟ್ಟಿದ್ದಾಗಿದೆ….. ಷಿ ಅವರ ಭಾಷಣದ ವಸ್ತು ಹಾಗೂ ಮಂಡಿಸಿದ ವಿಷಯಕ್ಕೆ ಬಂದರೆ, ,,,ಅಲ್ಲಿ ಯಾವುದೇ ರೀತಿಯ ಪುಡಾರಿಕೆ ಇರಲಿಲ್ಲ – ಬಾಹ್ಯ ವಿರೋಧಿಗಳು ಅಥವಾ ಶತ್ರುಗಳ ಬಗ್ಗೆ ಸಂಬಂಧಪಟ್ಟಂತೆ “ಮನೆ ಒಳಗೆ ಹೋಗಿ ಹೊಡೆಯುತ್ತೇವೆ” ಎಂಬ ಭಾವೋತ್ತೇಜಕ ಮಾತುಗಳಿರಲಿಲ್ಲ. ಭಾರತದಲ್ಲಿ ಇಂತಹ ರಾಜಕೀಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವಂತೆ, ಆಂತರಿಕ ವಿರೋಧಿಗಳನ್ನು ಗುರಿಯಾಗಿಸಿ ಅಲ್ಲಿ ಒಂದೇ ಒಂದು ಶಬ್ದವೂ ಇರಲಿಲ್ಲ… ..ಷಿ ಅವರು ಲಿಖಿತ ವರದಿಯಿಂದ ಓದಿದ ಎರಡು ಗಂಟೆಗಳ ಭಾಷಣದಲ್ಲಿ ಬಹಳಷ್ಟು ಸ್ವಾರಸ್ಯಪೂರ್ಣ ಸಂದೇಶಗಳು ಇದ್ದವು. ಒಂದು ದಶಕದ ಹಿಂದೆ ಷಿ ಅವರು ಪಕ್ಷದ ಮುಖ್ಯಸ್ಥರಾಗಿ “ಹೊಸ ಯುಗ” ಪ್ರಾರಂಭವಾದಾಗಿನಿಂದ ಚೈನಾದಲ್ಲಿ ಆದ ಎಲ್ಲಾ ಸಾಧನೆಗಳನ್ನು ಅದು ಸಮಗ್ರವಾಗಿ ಒಳಗೊಂಡಿತ್ತು. ಆದರೆ ಅದು ದೇಶವು ಇಂದು ಎದುರಿಸುತ್ತಿರುವ ಅಗಾಧ ಸವಾಲುಗಳನ್ನು ಮರೆಮಾಚಲಿಲ್ಲ. “ಭ್ರಷ್ಟಾಚಾರವು ಅತಿ ದೊಡ್ಡ ಕ್ಯಾನ್ಸರ್ ಆಗಿದ್ದು ಅದು ಪಕ್ಷದ ಚೈತನ್ಯವನ್ನು ಮತ್ತು ಹೋರಾಟದ ಶಕ್ತಿಯನ್ನು ಉಡುಗಿಸುತ್ತದೆ.” ಎಂದು ಹೇಳಿದರು….. “ಭ್ರಷ್ಟಾಚಾರ-ವಿರೋಧಿ ಆಂದೋಲನವು ಸ್ವಯಂ-ಕ್ರಾಂತಿಯ ಅತ್ಯಂತ ಶುದ್ಧ ವಿಧಾನವಾಗಿದೆ.” ಎಂದು ಷಿ ಹೇಳಿದರು. ಷಿ ಅವರ ಭಾಷಣದ ಬಹು ಭಾಗವು ಕಮ್ಯುನಿಸ್ಟ್ ಪಕ್ಷದ “ಸ್ವಯಂ-ಸುಧಾರಣಾ” ಕಾರ್ಯಕ್ಕೆ ಮೀಸಲಾಗಿತ್ತು.
ನಾವು ಭಾರತೀಯರು ಸಮಕಾಲೀನ ಚೈನಾವನ್ನು ಪಾಶ್ಚಾತ್ಯ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳ ಕಣ್ಣಿನಿಂದ ನೋಡುವ ಒಂದು ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ; ಅದರಿಂದಾಗಿ ನಮ್ಮ ನೆರೆಹೊರೆ ಚೈನಾವು ಸಾಧಿಸಿರುವ ಬೃಹದಾಕಾರದ ಸ್ವಯಂಪರಿವರ್ತನೆಯ ನೈಜ ಸ್ವರೂಪವನ್ನು ಅರಿಯುವಲ್ಲಿ ನಾವು ವಿಫಲರಾಗಿದ್ದೇವೆ. ಪಾಶ್ಚಾತ್ಯರು ಬಹಳ ಮುಖ್ಯವಾಗಿ ಅಮೆರಿಕಾ, ಚೈನಾದ ಬೆಳವಣಿಗೆಯ ಕುರಿತಂತೆ ಸಂಶಯಪಿಶಾಚಿಯಂತೆ ವರ್ತಿಸುತ್ತಿದ್ದಾರೆ. ಏಕೆಂದರೆ ಅವುಗಳಿಗೆ ತಮ್ಮ ಜಾಗತಿಕ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಭಯ ಶುರುವಾಗಿದೆ ಆದಕಾರಣ, ಅಮೆರಿಕಾ ಮತ್ತು ಯೂರೋಪಿನ ಬಲಪಂಥೀಯರು ಚೈನಾವನ್ನು – ವಿಶೇಷವಾಗಿ ದೃಢಸಂಕಲ್ಪದ ನೇತಾರ ಷಿ ಜಿಂಗ್‌ಪಿಂಗ್ ಅವರನ್ನು – ದೊಡ್ಡ ಅಪಾಯವೆಂದು ಪರಿಗಣಿಸುತ್ತಾರೆ. ಚೈನಾವನ್ನು ನಿಗ್ರಹಿಸಲು ವಾಷಿಂಗ್ಟನ್ (ಅಮೆರಿಕಾ ಸರಕಾರವು) ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ; ಚೈನಾವು ತಮ್ಮದೆಂದು ಹೇಳಿಕೊಳ್ಳುತ್ತಿರುವ ತೈವಾನ್‌ನಲ್ಲಿ ಅರೆವಾಹಕ ತಂತ್ರಜ್ಞಾನದ ಶಸ್ತ್ರದಂತಹ ಬಳಕೆಯಿಂದ ಹಿಡಿದು ಪ್ರಚೋದನಕಾರಿ ಕಾರ್ಯಾಚರಣೆಗಳವರೆಗೆ ಎಲ್ಲವನ್ನೂ ಆರಂಭಿಸಿದೆ.
ರಾಜಕೀಯವನ್ನು ವೈಯಕ್ತಿಕ ನೆಲೆಯಲ್ಲಿ ಚರ್ಚಿಸುವ ಚಾಳಿಯನ್ನೂ ಪಾಶ್ಚಾತ್ಯರು ಹೊಂದಿದ್ದಾರೆ. ಆದ್ದರಿಂದ, ಚೈನಾ ಕಮ್ಯುನಿಸ್ಟ್ ಪಕ್ಷದ 20 ನೇ ರಾಷ್ಟ್ರೀಯ ಮಹಾಧಿವೇಶನದಲ್ಲಿ ಷಿ ಜಿಂಗ್‌ಪಿಂಗ್ ಹೇಗೆ ನಿಯಮಗಳನ್ನು ಉಲ್ಲಂಘಿಸಿ ಪಕ್ಷದ ಮುಖ್ಯಸ್ಥನಾಗಿ ಮರು ಆಯ್ಕೆಗೊಳ್ಳುವ ಮೂಲಕ ತನ್ನ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೇ ಬಹುತೇಕ ಪಾಶ್ಚಾತ್ಯ ಮಾಧ್ಯಮಗಳ ವ್ಯಾಖ್ಯಾನಗಳೆಲ್ಲವೂ ಕೇಂದ್ರೀಕೃತವಾಗಿವೆ.
ಆದರೆ, ಅಕ್ಟೋಬರ್ 16ರಂದು ಚೈನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಮಹಾಧಿವೇಶನದಲ್ಲಿನ ಬಹಿರಂಗ ಸಭೆಯ ಕಲಾಪಗಳನ್ನು ವೀಕ್ಷಿಸಿದ ಹಾಗೂ ಷಿ ಅವರು ಮಾಡಿದ ಭಾಷಣವನ್ನು ಹೆಚ್ಚು ಗಮನ ಕೊಟ್ಟು ಆಲಿಸಿದವರು ಬೇರೆಯದೇ ಅಭಿಪ್ರಾಯಕ್ಕೆ ಬರುತ್ತಾರೆ. ಚೈನಾದ ಕಮ್ಯುನಿಸ್ಟ್ ಪಕ್ಷವು ಬಹು ದೊಡ್ಡ ಘಟಕವಾಗಿದ್ದು ಹಾಗೂ ಬಹಳ ಉತ್ತಮವಾದ ಸಾಂಸ್ಥಿಕ ಸಂರಚನೆಯನ್ನು ಹೊಂದಿದ್ದಾಗಿದೆ: ತನ್ನ ಉನ್ನತ ನೇತಾರನ ಮನಸೋ ಇಚ್ಛೆ ನಡೆಯುವ ಪಕ್ಷವಲ್ಲ ಅದು. ಸಿಪಿಸಿಯು ಮಾವೋ-ತ್ಸೆ-ತುಂಗ್ ಅವರ ಆಳ್ವಿಕೆಯ ಕೊನೆಯ ದಶಕಗಳಲ್ಲಿ ನಡೆದ ‘ಸಾಂಸ್ಕೃತಿಕ ಕ್ರಾಂತಿ’ ಎಂದು ಕರೆಯಲ್ಪಡುವ ಹುಚ್ಚಾಟದಿಂದ ಕಹಿ ಪಾಠಗಳನ್ನು ಕಲಿತಿದೆ; ‘ಸಾಂಸ್ಕೃತಿಕ ಕ್ರಾಂತಿ’ಯು ಇಡೀ ಚೀನಿ ಸಮಾಜವನ್ನು ಘಾಸಿಗೊಳಿಸಿತ್ತು ಮತ್ತು ಕಮ್ಯುನಿಸ್ಟ್ ಪಕ್ಷವನ್ನು ಹೆಚ್ಚೂ ಕಡಿಮೆ ನಾಶಗೊಳಿಸಿತ್ತು. ಷಿ ಜಿನ್‌ಪಿಂಗ್ ನಿಸ್ಸಂದೇಹವಾಗಿಯೂ ಶಕ್ತಿಶಾಲಿ ಹೌದು, ಆದರೆ ಅವರು ಪಕ್ಷವನ್ನು ಮಾವೋ ತನ್ನ ಕೊನೆಕಾಲದಲ್ಲಿ ಒಯ್ದ ಹಾದಿಯಲ್ಲಿ ಕೊಂಡೊಯ್ಯುತ್ತಿಲ್ಲ, ಅಥವಾ ಪಕ್ಷವು ಅವರನ್ನು ಹಾಗೆ ಮಾಡಲು ಬಿಡುವುದಿಲ್ಲ ಕೂಡ. 2012 ರಲ್ಲಿ ಸಿಪಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ಮೊಟ್ಟ ಮೊದಲು ಆಯ್ಕೆಯಾದ ಕೂಡಲೇ ಷಿ ಅವರು ಹೇಳಿದ್ದರು: “ಈಗ ಚೈನಾದಲ್ಲಿ ಅಧಿಕಾರವನ್ನು ನಿಯಮ ಹಾಗೂ ಕಟ್ಟಳೆಗಳ ಪಂಜರದೊಳಗೆ ಭದ್ರವಾಗಿ ಇರಿಸಲಾಗಿದೆ.” ಈ ರೀತಿಯಲ್ಲಿ ನೋಡಿದರೆ, ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್, ರೆಸೆಪ್ ತಯ್ಯಿಪ್ ರ‍್ಡೊಗನ್ ಅಥವಾ ಡೊನಾಲ್ಡ್ ಟ್ರಂಪ್ (ಅಮೆರಿಕಾದ ಅಧ್ಯಕ್ಷನಾಗಿದ್ದಾಗ) ಅವರುಗಳು ವ್ಯಕ್ತಿಗತ ನೆಲೆಯಲ್ಲಿ ತಮ್ಮ ಕೈಯಲ್ಲಿ ಬಹಳ ಹೆಚ್ಚಿನ ಅಧಿಕಾರವನ್ನು ಹೊಂದಿದ್ದಾರೆ.
ಷಿ ಅವರು ಭಾನುವಾರ ಮಾಡಿದ ಭಾಷಣವು ಅವರೊಬ್ಬರದ್ದೇ ಆಗಿರಲಿಲ್ಲ ಎನ್ನುವುದು ಬಹಳ ಜನರಿಗೆ ಅಚ್ಚರಿ ಉಂಟುಮಾಡಬಹುದು. 19ನೇ ಮಹಾಧಿವೇಶನದಲ್ಲಿ ಐದು ವರ್ಷಗಳ ಹಿಂದೆ ಆಯ್ಕೆಯಾಗಿ ಈಗ ನಿರ್ಗಮಿಸುತ್ತಿರುವ ಕೇಂದ್ರ ಸಮಿತಿಯ ಪರವಾಗಿ ಅವರು ಸಿಪಿಸಿಯ 20 ನೇ ಮಹಾಧಿವೇಶನದಲ್ಲಿ ಅದನ್ನು ಮಂಡಿಸಿದರು. ಈ ಭಾಷಣದ ಸಿದ್ಧತೆಯು ಸರಿಸುಮಾರು ಒಂದು ವರ್ಷದ ಹಿಂದೆಯೇ ಆರಂಭವಾಗಿದೆ, ಮತ್ತು ಬಹಳಷ್ಟು ಮುಖಂಡರು ಅದಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ ಹಾಗೂ ಹಲವಾರು ಹಂತಗಳಲ್ಲಿ ಅದನ್ನು ಮರುಪರಿಶೀಲನೆಗೆ ಒಡ್ಡಲಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಚೈನಾದ ನಾಯಕತ್ವವು ಹಲವಾರು ಪ್ರಜಾಪ್ರಭುತ್ವಗಳಿಗಿಂತ ಹೆಚ್ಚು ಸಾಮೂಹಿಕವಾದುದು ಮತ್ತು ಪರಸ್ಪರ ಸಮಾಲೋಚನೆಗೆ ಒಳಪಟ್ಟಿದ್ದಾಗಿದೆ.
ಷಿ ಅವರ ಭಾಷಣದ ವಸ್ತು ಹಾಗೂ ಮಂಡಿಸಿದ ವಿಷಯಕ್ಕೆ ಬಂದರೆ, ಪೂರ್ವಾಗ್ರಹವಿಲ್ಲದ ಯಾವುದೇ ಟೀಕಾಕಾರರು ಮತ್ತೊಂದು ಪ್ರಮುಖವಾದ ಭಿನ್ನತೆಯನ್ನು ಸುಲಭವಾಗಿ ಗಮನಿಸುತ್ತಾರೆ. ಅಲ್ಲಿ ಯಾವುದೇ ರೀತಿಯ ಪುಡಾರಿಕೆ ಇರಲಿಲ್ಲ – ಬಾಹ್ಯ ವಿರೋಧಿಗಳು ಅಥವಾ ಶತ್ರುಗಳ ಬಗ್ಗೆ ಸಂಬಂಧಪಟ್ಟಂತೆ “ಮನೆ ಒಳಗೆ ಹೋಗಿ ಹೊಡೆಯುತ್ತೇವೆ” ಎಂಬ ಭಾವೋತ್ತೇಜಕ ಮಾತುಗಳಿರಲಿಲ್ಲ. ಭಾರತದಲ್ಲಿ ಇಂತಹ ರಾಜಕೀಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವಂತೆ, ಆಂತರಿಕ ವಿರೋಧಿಗಳನ್ನು ಗುರಿಯಾಗಿಸಿ ಅಲ್ಲಿ ಒಂದೇ ಒಂದು ಶಬ್ದವೂ ಇರಲಿಲ್ಲ. ದಿಟವಾಗಿಯೂ ಅದು, ದಿ ಇಕಾನಾಮಿಸ್ಟ್ ಪತ್ರಿಕೆಯಲ್ಲಿ ಇತ್ತೀಚೆಗೆ ಒಬ್ಬರು ಹೇಳಿದಂತೆ “ಜಗತ್ತಿನ ಅತಿ ದೊಡ್ಡ ಶಕ್ತಿಶಾಲಿ ನೇತಾರ”, ಷಿ ಅವರ ಬಾಷಣವು ನೀರಸವಾಗಿತ್ತು, ಯಾವುದೇ ವಾಗಾಡಂಬರವಿಲ್ಲದೆ ಶೂನ್ಯವಾಗಿತ್ತು.
ಆದಾಗ್ಯೂ ಷಿ ಅವರು ಲಿಖಿತ ವರದಿಯಿಂದ ಓದಿದ ಎರಡು ಗಂಟೆಗಳ ಭಾಷಣದಲ್ಲಿ ಬಹಳಷ್ಟು ಸ್ವಾರಸ್ಯಪೂರ್ಣ ಸಂದೇಶಗಳು ಇದ್ದವು. ಒಂದು ದಶಕದ ಹಿಂದೆ ಷಿ ಅವರು ಪಕ್ಷದ ಮುಖ್ಯಸ್ಥರಾಗಿ “ಹೊಸ ಯುಗ” ಪ್ರಾರಂಭವಾದಾಗಿನಿಂದ ಚೈನಾದಲ್ಲಿ ಆದ ಎಲ್ಲಾ ಸಾಧನೆಗಳನ್ನು ಅದು ಸಮಗ್ರವಾಗಿ ಒಳಗೊಂಡಿತ್ತು. ಆದರೆ ಅದು ದೇಶವು ಇಂದು ಎದುರಿಸುತ್ತಿರುವ ಅಗಾಧ ಸವಾಲುಗಳನ್ನು ಮರೆಮಾಚಲಿಲ್ಲ. “ಭ್ರಷ್ಟಾಚಾರವು ಅತಿ ದೊಡ್ಡ ಕ್ಯಾನ್ಸರ್ ಆಗಿದ್ದು ಅದು ಪಕ್ಷದ ಚೈತನ್ಯವನ್ನು ಮತ್ತು ಹೋರಾಟದ ಶಕ್ತಿಯನ್ನು ಉಡುಗಿಸುತ್ತದೆ.” ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧದ ಅವರ ರಾಜಿಯಿಲ್ಲದೆ ಸಮರದ ಅವಧಿಯಲ್ಲಿ, ಚೈನಾವು ಸಾವಿರಾರು “ಹುಲಿಗಳನ್ನು” (ಉನ್ನತ ದರ್ಜೆಯ ಅಧಿಕಾರಿಗಳನ್ನು) ಮತ್ತು “ನೊಣಗಳನ್ನು” (ಕೆಳ ಹಂತದ ಕಾರ್ಯಕರ್ತರನ್ನು) ಲಂಚ ಪಡೆದಿದ್ದಕ್ಕೆ ಜೈಲಿಗೆ ಕಳಿಸಿತ್ತು. “ಭ್ರಷ್ಟಾಚಾರ-ವಿರೋಧಿ ಆಂದೋಲನವು ಸ್ವಯಂ-ಕ್ರಾಂತಿಯ ಅತ್ಯಂತ ಶುದ್ಧ ವಿಧಾನವಾಗಿದೆ.” ಎಂದು ಷಿ ಹೇಳಿದರು.
ಷಿ ಅವರ ಭಾಷಣದ ಬಹು ಭಾಗವು ಕಮ್ಯುನಿಸ್ಟ್ ಪಕ್ಷದ “ಸ್ವಯಂ-ಸುಧಾರಣಾ” ಕಾರ್ಯಕ್ಕೆ ಮೀಸಲಾಗಿತ್ತು. ಸಿಪಿಸಿಯ 59 ಲಕ್ಷ ಸದಸ್ಯರು “ಪಕ್ಷದ ಸ್ಥಾಪಕ ಆಕಾಂಕ್ಷೆಗಳು ಮತ್ತು ಮೂಲ ಆಶಯಗಳಿಗೆ” ಸತ್ವನಿಷ್ಠರಾಗಿರಬೇಕೆಂದು ಅವರು ಮತ್ತೆ ಮತ್ತೆ ಹುರಿದುಂಬಿಸಿದರು. ಇದು ಖಂಡಿತವಾಗಿಯೂ ಸುಲಭವಲ್ಲ. 1921 ರಲ್ಲಿ ಸಿಪಿಸಿಯನ್ನು ಸ್ಥಾಪನೆ ಮಾಡಿದಾಗಿನ ಪರಿಸ್ಥಿತಿಯಿಂದ ಅಥವಾ 1949 ರಲ್ಲಿ ಅದು ಕ್ರಾಂತಿಯನ್ನು ಮಾಡಿದಾಗಿನ ಸಮಯದಿಂದ ಇವತ್ತು ಚೈನಾ ಗುರುತಿಸಲಾಗದಷ್ಟು ಬದಲಾಗಿದೆ, 1978 ರಲ್ಲಿ ಡೆಂಗ್ ಷಿಯೋ ಪಿಂಗ್ ಆರಂಭಿಸಿದ “ಸುಧಾರಣೆಗಳು ಮತ್ತು ತೆರೆದುಕೊಳ್ಳುವುದು” ಎಂಬ ದಿಟ್ಟತನದ ನೀತಿಯ ಅವಧಿಗಿಂತಲೂ ಅದು ಬಹಳ ಭಿನ್ನವಾಗಿದೆ. ಪಕ್ಷವು ಹೇಗೆ ಜೀವಂತವಾಗಿ ಹಾಗೂ ಪರಿಣಾಮಕಾರಿಯಾಗಿ ಉಳಿಯಬೇಕು ಮತ್ತು ಕೊಳೆತು ನಾಶವಾಗದಂತೆ (ಸೋವಿಯತ್ ಯೂನಿಯನ್ನಿನ ಕಮ್ಯುನಿಸ್ಟ್ ಪಕ್ಷಕ್ಕಾದಂತೆ ಆಗದೆ) ಇರಬೇಕು? ಕಮ್ಯುನಿಸ್ಟ್ ಪಕ್ಷದ ಆಳ್ವಿಕೆ ಕೊನೆಯಾಗಬೇಕು ಮತ್ತು ಚೈನಾವು ಸೋವಿಯತ್ ಯೂನಿಯನ್ನಿನಂತೆ ವಿಘಟಿತವಾಗಬೇಕು ಎಂದು ಪಾಶ್ಚಾತ್ಯರು ಮಾಡಬಹುದಾದುದನ್ನೆಲ್ಲಾ ಮಾಡುತ್ತಿದ್ದಾರೆ.
ಚೈನಾವು ವಿಘಟಿತವಾಗುವುದಿಲ್ಲ. ನಿಜವಾಗಿಯೂ ಅದಕ್ಕೆ ವಿರುದ್ಧವಾದುದು ಆಗುತ್ತದೆ ಎಂದು ಷಿ ಅವರು ತಮ್ಮ ಭಾಷಣದಲ್ಲಿ ಬಲವಾಗಿ ಒತ್ತಿ ಹೇಳಿದರು. “ಶಾಂತಿಯುತ (ತೈವಾನಿನೊಂದಿಗೆ) ಪುನರ್-ಏಕೀಕರಣಕ್ಕಾಗಿ ಅತ್ಯಂತ ಪ್ರಾಮಾಣಿಕವಾದ ಹಾಗೂ ಕಟ್ಟಕಡೆಯ ಪ್ರಯತ್ನದೊಂದಿಗೆ ಶ್ರಮಿಸುವುದನ್ನು ನಾವು ಮುಂದುವರಿಸುತ್ತೇವೆ, ಆದರೆ ಸೇನೆಯ ಬಳಕೆಯನ್ನು ತೊರೆಯುತ್ತೇವೆಂದು ಎಂದಿಗೂ ನಾವು ಭರವಸೆ ನೀಡುವುದಿಲ್ಲ. ಚೈನಾದ ಪುನರ್-ಏಕೀಕರಣದತ್ತ ಮತ್ತು ಚೈನಾ ದೇಶದ ಹೊಸ ಚೈತನ್ಯದತ್ತ ಇತಿಹಾಸ ಚಕ್ರಗಳು ಉರುಳುತ್ತಿವೆ. ನಮ್ಮ ದೇಶದ ಸಂಪೂರ್ಣ ಪುನರ್-ಏಕೀಕರಣ ಆಗಲೇಬೇಕು ಮತ್ತು ನಿಸ್ಸಂದೇಹವಾಗಿ ಅದು ಆಗಿಯೇ ತೀರುತ್ತದೆ.” ಎಂದು ಸ್ಪಷ್ಟಪಡಿಸಿದರು. ಇದು ಅಲ್ಲಿ ಬೀಜಿಂಗಿನ ‘ಗ್ರೇಟ್ ಹಾಲ್ ಆಫ್ ಪೀಪಲ್’ ಸಭಾಂಗಣದಲ್ಲಿ ಸೇರಿದ್ದ ಸರಿಸುಮಾರು 3,000 ಪ್ರತಿನಿಧಿಗಳ ಹರ್ಷೋದ್ಗಾರಕ್ಕೆ ಕಾರಣವಾಯಿತು.
ಒಂದು ವರ್ಷದ ಹಿಂದೆ ಸಿಪಿಸಿಯ ಶತಮಾನೋತ್ಸವ ಆಚರಿಸುವಾಗ ತೈವಾನ್ ಕುರಿತು ಜಗತ್ತು ಕೇಳಿಸಿಕೊಂಡಿದ್ದಕ್ಕಿಂತ ಮೃದುವಾಗಿ ಅವರ ಈ ಬಾರಿಯ ಮಾತು ಇತ್ತು. ಸಂದೇಹಕ್ಕೆ ಆಸ್ಪದವಿಲ್ಲದಂತೆ ಅಮೆರಿಕಾವನ್ನು ಗುರಿಯಾಗಿಸಿ ಅವರು ಆಗ ಒಂದು ಸಂದೇಶದಲ್ಲಿ “ವಿದೇಶಿ ಶಕ್ತಿಗಳು ನಮ್ಮನ್ನು ಬೆದರಿಸಲು, ಬಲಾತ್ಕರಿಸಲು ಮತ್ತು ಗುಲಾಮರನ್ನಾಗಿಸಲು ಚೈನಾದ ಜನರು ಎಂದಿಗೂ ಅವಕಾಶ ನೀಡುವುದಿಲ್ಲ. ಯಾರಾದರೂ ಹಾಗೆ ಮಾಡಲು ಯತ್ನಿಸಿದರೆ, 140 ಕೋಟಿ ಚೈನಾದ ಜನರು ತಮ್ಮ ರಕ್ತ ಮಾಂಸಗಳಿಂದ ನಿರ್ಮಿಸಿದ ಚೈನಾದ ಗೋಡೆಗೆ ಅವರ ತಲೆಯನ್ನು ಚಚ್ಚಿ ಒಡೆದುಹಾಕುತ್ತೇವೆ.” ಎಂದಿದ್ದರು.
ಚೈನಾದ “ರಾಷ್ಟ್ರೀಯ ನವಚೈತನ್ಯ” ಎಂಬ ಪದವು ಅವರ ಭಾಷಣದಲ್ಲಿ ಎಂಟು ಬಾರಿ ಕಾಣಿಸಿಕೊಂಡಿದೆ. ಆ ವಿಶ್ವಾಸಪೂರ್ಣ ಸಂದೇಶವು ಹೀಗಿದೆ: ಚೈನಾ ಎದ್ದು ನಿಂತಿದೆ, ಮತ್ತು ಪಾಶ್ಚಾತ್ಯರು ಅದರೊಂದಿಗೆ ರಾಜಿಮಾಡಿಕೊಳ್ಳಬೇಕು. “ಜಗತ್ತನ್ನು ನಿರ್ದೇಶಿಸುವ ಅಥವಾ ರೂಪಿಸುವ ಚೈನಾದ ಅಂತರಾಷ್ಟ್ರೀಯ ಪ್ರಭಾವ, ಆಕರ್ಷಣೆ ಮತ್ತು ಶಕ್ತಿ ಗಣನೀಯವಾಗಿ ಹೆಚ್ಚಾಗಿದೆ.” ಎಂದು ಹೇಳಿದರು. ಪಾಶ್ಚಾತ್ಯವಲ್ಲದ ಆಧುನಿಕತೆಯ ಮಾದರಿಗಳಿಗಾಗಿ ಹುಡುಕಾಡುತ್ತಿರುವ ಜಗತ್ತಿನಲ್ಲಿ, “ಮಾನವ ಕೋಟಿಗೆ ಆಧುನಿಕತೆಯನ್ನು ಸಾಧಿಸಲು ಒಂದು ಹೊಸ ಆಯ್ಕೆಯನ್ನು ಚೈನಾದ ಆಧುನಿಕತೆಯು ನೀಡುತ್ತಿದೆ.” ಎಂದು ಅವರು ವಿಶದಪಡಿಸಿದರು. ಸಂಪತ್ತಿನ ಅಸಮಾನತೆಯು ವ್ಯಾಪಕವಾಗುತ್ತಿರುವ ಭಾರತದಂತಹ ಸಮಾಜಕ್ಕೆ (ಆರ್.ಎಸ್.ಎಸ್ ಕೂಡ ಈ ಸಮಸ್ಯೆಯ ಬಗ್ಗೆ ಆತಂಕಪಡುತ್ತಿರುವಾಗ) ಚೈನಾ ಸಂದೇಶ ನೀಡುತ್ತಿದೆ. “ಎಲ್ಲಾ ಜನರಿಗೂ ಸಮಾನ ಏಳಿಗೆಯನ್ನು ನಾವು ದೃಢವಾಗಿ ಶ್ರಮವಹಿಸುತ್ತೇವೆ. ಆದಾಯ ವಿತರಣಾ ವ್ಯವಸ್ಥೆಯನ್ನು ನಾವು ಉತ್ತಮಗೊಳಿಸುತ್ತೇವೆ. ಸಂಪತ್ತಿನ ಕ್ರೋಢೀಕರಣವನ್ನು ನಾವು ಸರಿಯಾಗಿ ನಿಯಂತ್ರಿಸುತ್ತೇವೆ.” ಚೈನಾದ “ಹಸಿರು ಅಭಿವೃದ್ಧಿ”ಯ ಕುರಿತು ಷಿ ಅವರ ಭಾಷಣದಲ್ಲಿ ಮತ್ತೆ ಮತ್ತೆ ಆಶ್ವಾಸನೆ ಇತ್ತು.
ಅಂತಿಮವಾಗಿ, ಚೈನಾದ ಎದ್ದುಬರುತ್ತಿರುವ ಶಕ್ತಿಯ ಬಗ್ಗೆ ಕಾಳಜಿ ಅಥವಾ ಆತಂಕ ಇರುವವರಿಗೆ ಅಲ್ಲಿ ಸ್ಪಷ್ಟವಾದ ಖಚಿತವಾದ ಭರವಸೆ ಇತ್ತು. “ಯಾವುದೇ ರೀತಿಯ ಅಧಿಪತ್ಯ ಮತ್ತು ವಿಸ್ತರಣಾವಾದದಲ್ಲಿ ಚೈನಾವು ತೊಡಗುವುದಿಲ್ಲ.” ಈ ವಿಚಾರದಲ್ಲಿ ಚೈನಾವು ನುಡಿದಂತೆ ನಡೆಯುತ್ತದೆ ಎಂಬುದನ್ನು ಭಾರತೀಯರು ನಂಬುವಂತೆ, ಷಿ ಜಿನ್‌ಪಿಂಗ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ಆದಷ್ಟು ಬೇಗ ಮಾತುಕತೆ ಪ್ರಾರಂಭಿಸುತ್ತಾರೆ ಮತ್ತು ಭಾರತ-ಚೈನಾ ಸಂಬಂಧಗಳು ಪೂರ್ಣ ಯಥಾಸ್ಥಿತಿಗೆ ಬರುವಲ್ಲಿನ ಎಲ್ಲಾ ಅಡಚಣೆಗಳನ್ನು ತೆಗೆದುಹಾಕುತ್ತಾರೆ ಎಂದು ಆಶಿಸಬೇಕಾಗಿದೆ.
(ಲೇಖಕ ಸುಧೀಂದ್ರ ಕುಲಕರ್ಣಿ ಅವರು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಹಾಯಕರಾಗಿದ್ದರು)
ಅನುವಾದ : ಟಿ.ಸುರೇಂದ್ರ ರಾವ್