ಹೊಸದಿಲ್ಲಿ: ಪ್ರತಿಪಕ್ಷಗಳ ಪ್ರತಿಭಟನೆಯೊಂದಿಗೆ ಆರಂಭವಾದ ಸಂಸತ್‌ನ ಚಳಿಗಾಲದ ಅಧಿವೇಶನವು ನಿಗದಿಗಿಂತ ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗಿದೆ. ಸರಿಯಾದ ಚರ್ಚೆ ನಡೆಸದೆ, ಮಸೂದೇ ಅಂಗೀಕಾರ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕೇಂದ್ರ ಸರಕಾರ ಅವಮಾನ ಮಾಡಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ಪ್ರತಿಪಕ್ಷಗಳ 12 ಸದಸ್ಯರನ್ನು ಚಳಿಗಾಲದ ಅಧಿವೇಶನದುದ್ದಕ್ಕೂ ಅಮಾನತುಗೊಳಿಸುವ ತೀರ್ಮಾನವನ್ನು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮೊದಲ ದಿನವೇ ಪ್ರಕಟಿಸಿದರು. ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿದಿನವೂ ಪ್ರತಿಭಟನೆ ನಡೆಸಿದರೆ, ಅಮಾನತುಗೊಂಡ ಸಂಸದರು ನಿತ್ಯವೂ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ”ತಮ್ಮ ತಪ್ಪಿಗೆ ಕ್ಷಮೆ ಕೋರಿದರೆ ಅಮಾನತು ನಿರ್ಧಾರ ಹಿಂಪಡೆಯಲು ಸಿದ್ಧ,” ಎಂದು ಸರಕಾರ ಪಟ್ಟು ಹಿಡಿದರೆ, ಕ್ಷಮೆ ಕೋರಲು ನಾವು ತಪ್ಪು ಮಾಡಿಲ್ಲ, ಸರಿಯಾದ ಚರ್ಚೆ ನಡೆಸದೆ ನಮ್ಮನ್ನು ಪ್ರಚೋದಿಸಿದ್ದು ನೀವೆ. ಮಸೂದೆಗಳ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ನಮ್ಮನ್ನು ಅಮಾನತ್ತು ಮಾಡಿದ್ದೀರಿ, ನಿಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಿ ಎಂದು ಅಮಾನತ್ತುಗೊಂಡ ಸಂಸದರು ಆರೋಪಿಸಿದ್ದರು.
“ಪ್ರತಿಪಕ್ಷಗಳ ಜತೆಗೂಡಿ ಸುಗಮವಾಗಿ ಕಲಾಪ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಪ್ರತಿಪಕ್ಷಗಳು ಬರೀ ಗಲಾಟೆಯಲ್ಲಿಯೇ ಕಾಲಕಳೆದವು. ಅಧಿವೇಶನ ಯಶಸ್ವಿಯಾಗಿದ್ದು, ಕೇಂದ್ರ ಸರಕಾರವು ಉದ್ದೇಶಿಸಿದ್ದ ಮಸೂದೆಗಳನ್ನು ಮಂಡಿಸಿದೆ. ಸಂಸತ್‌ಗೆ ನೀಡಬೇಕಿದ್ದ ಮಾಹಿತಿಗಳನ್ನು ನೀಡಿಯಾಗಿದೆ. ಹೀಗಾಗಿ ಒಂದು ದಿನ ಮೊದಲೇ ಅಧಿವೇಶನ ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ತರಾತುರಿಯಲ್ಲಿ ಮಸೂದೆಗಳಿಗೆ ಅನುಮೋದನೆ ಪಡೆಯಲು ಉದ್ದೇಶ ಪೂರ್ವಕವಾಗಿಯೇ ವಿರೋಧ ಪಕ್ಷಗಳ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಉದ್ದೇಶ ಪೂರ್ವಕವಾಗಿ ವಿರೋಧ ಪಕ್ಷಗಳ 12 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಲಾಗಿದೆ. ಅವರನ್ನು ಹೊರಗಿಟ್ಟು ತಮಗೆ ಇಷ್ಟವಾಗುವ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಸುಗಮ ಕಲಾಪಕ್ಕೆ ಅನುವಾಗುವ ರೀತಿಯಲ್ಲಿಸಹಕರಿಸಿ ಎಂದು ನಾವು ಸರಕಾರವನ್ನು ಹಲವು ಬಾರಿ ಕೇಳಿಕೊಂಡೆವು. ಆದರೆ, ಅದರ ಹಿಡನ್ ಅಜೆಂಡಾ ಬೇರೆ ಇದ್ದರಿಂದ ಸದಸ್ಯರ ಅಮಾನತು ನಿರ್ಧಾರವನ್ನು ಕೈಬಿಡದೇ ತನ್ನ ಹಠ ಸಾಧನೆ ಮಾಡಿತು,” ಎಂದು ಖರ್ಗೆ ಆರೋಪಿಸಿದರು.
ಸಂಸತ್ ಚಳಿಗಾಲದ ಅಧಿವೇಶನದ ಪ್ರಮುಖಾಂಶಗಳು :
24 ದಿನಗಳ ಕಾಲ ಅಧಿವೇಶನ ನಡೆದಿದೆ
ಒಟ್ಟು 18 ಕಲಾಪಗಳು ನಡೆದಿವೆ
ಒಟ್ಟು 12 ವಿಧೇಯಕಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ
1 ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ
11 ವಿಧೇಯಕಗಳಿಗೆ ಸಂಸಸ್ ಅಂಗೀಕಾರ
ಸಂಸತ್ ಅಂಗೀಕಾರ ಪಡೆದ ವಿಧೇಯಕಗಳು
1. ಚುನಾವಣೆ ಕಾನೂನುಗಳ (ತಿದ್ದುಪಡಿ) ವಿಧೇಯಕ
2. ನಾರ್ಕೊಟಿಕ್ಸ್ ಡ್ರಗ್ಸ್ ಆ್ಯಂಡ್ ಸೈಕೋಟ್ರಾಪಿಕ್ ಸಬ್‌ಸ್ಟನ್ಸಸ್ ತಿದ್ದುಪಡಿ ವಿಧೇಯಕ
3. ಕೇಂದ್ರ ಜಾಗೃತ ಆಯೋಗದ ತಿದ್ದುಪಡಿ ವಿಧೇಯಕ
4. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ಸಂಬಳ ಮತ್ತು ಸೇವಾ ಷರತ್ತು) ವಿಧೇಯಕ
5. ಕೃಷಿ ಕಾಯಿದೆಗಳ ರದ್ದತಿ ವಿಧೇಯಕ
6. ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ತಿದ್ದುಪಡಿ ವಿಧೇಯಕ
7. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ನಿಯಂತ್ರಣ ವಿಧೇಯಕ
8. ಬಾಡಿಗೆ ತಾಯ್ತನ ನಿಯಂತ್ರಣ ವಿಧೇಯಕ
9. ಅಣೆಕಟ್ಟು ಸುರಕ್ಷತಾ ಬಿಲ್
10. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸೂಟಿಕಲ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ (ತಿದ್ದುಪಡಿ) ವಿಧೇಯ
11. ವರ್ಷದ ಅನುದಾನಕ್ಕಾಗಿ ಪೂರಕ ಬೇಡಿಕೆಗಳಿಗೆ ಸಂಬಂಧಿಸಿದ ವಿನಿಯೋಗ ಬಿಲ್
ಜಂಟಿ ಸಮಿತಿಗೆ ನೀಡಿದ ವಿಧೇಯಕ
ಜೈವಿಕ ವೈವಿಧ್ಯತೆ (ತಿದ್ದುಪಡಿ) ವಿಧೇಯಕ
ಸ್ಥಾಯಿ ಸಮಿತಿಗೆ ಒಪ್ಪಿಸಿದ ವಿಧೇಯಕಗಳು
1. ರಾಷ್ಟ್ರೀಯ ಡೋಪಿಂಗ್ ನಿಗ್ರಹ ಬಿಲ್
2. ವನ್ಯಜೀವಿ ರಕ್ಷಣಾ ತಿದ್ದುಪಡಿ ವಿಧೇಯಕ
3. ಚಾರ್ಟರ್ಡ್ ಅಕೌಂಟಂಟ್ಸ್, ಕಾಸ್ಟ್ ಆ್ಯಂಡ್ ವರ್ಕ್ಸ್ ಅಕೌಂಟಂಟ್ಸ್ ಆ್ಯಂಡ್ ಕಂಪನಿ ಸೆಕ್ರೆಟರೀಸ್ ತಿದ್ದುಪಡಿ ವಿಧೇಯಕ
4. ಬಾಲ್ಯ ವಿವಾಹ ನಿಯಂತ್ರಣ ತಿದ್ದುಪಡಿ ವಿಧೇಯಕ
5. ಮಧ್ಯಸ್ಥಿಕೆ ವಿಧೇಯಕ