ಗಿಡ್ಡಜ್ಜನೆಂಬ ಗಿಡಗಳು ಹೇಳಿದ ಕಪ್ಪತ ಗುಡ್ಡದ ಗಾಳಿ ಮಾತುಗಳು..!

-ಶಿವಾನಂದ ಕಳವೆ

ಕಪ್ಪತ ಗುಡ್ಡದ ಗಾಳಿ ಗುಂಡಿ ಬಸವೇಶ್ವರ ದೇಗುಲದ ಗುಡ್ಡದಲ್ಲಿ ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ. ಇಲ್ಲಿನ ಯಾವುದೇ ಬೆಟ್ಟ ಏರಿ ನಿಂತರೂ 50-70 ಕಿಲೋ ಮೀಟರ್ ವೇಗದ ಗಾಳಿ ಇದ್ದೇ ಇದೆ. ವಿದ್ಯುತ್ ಉತ್ಪಾದನೆಗೆ ಊರಿದ ಫ್ಯಾನ್ ನಿಲ್ಲಿಸಲು ಆಳದ ಗುಂಡಿ ತೆಗೆದು ಟನ್ ಗಟ್ಟಲೇ ಸಿಮೆಂಟ್, ಕಬ್ಬಿಣ ಸುರಿದು ನಿಲ್ಲಿಸಿದ ಕಂಬಗಳು ಈ ಲೋಕದ ಸಾಧನೆ ಇದ್ದೀತು. ಈ ಸೀಮೆಯಲ್ಲಿ ಎಲ್ಲೆಂದರಲ್ಲಿ ಕಾಣುವ ಗಾಳಿ ಯಂತ್ರ ಮರೆತು ನಾನು ಬೇರೊಂದು ಕಾರಣಕ್ಕೆ ಬೆಟ್ಟದ ತುದಿಯ ಮರ ಗಿಡಗಳನ್ನು ನೋಡುತ್ತಿದ್ದೆ, ಆದರೆ ಅವು ವಯಸ್ಸಿನ ಲೆಕ್ಕದಲ್ಲಿ ಗಿಡಗಳಲ್ಲ! ಕಪ್ಪತ ಗುಡ್ಡ

ಇದನ್ನೂ ಓದಿ:ಮಕ್ಕಳ ಶಿಕ್ಷಣಕ್ಕಾಗಿ ಪ್ರತಿದಿನ 130 ಕಿ.ಮೀ. ಪ್ರಯಾಣ ಮಾಡುವ ಶಿಕ್ಷಕ ಮಂಜುನಾಥ್

ಬೆಟ್ಟದ ಎತ್ತರದಲ್ಲಿ ಹತ್ತಡಿ ಎತ್ತರದ ಮರ ಬೆಳೆಯುವುದು ಕಷ್ಟ. ಬೇರು ಸಹಿತ ಕಿತ್ತು ಎಸೆಯುವ ಪ್ರಕರ ಗಾಳಿ ತಡೆದುಕೊಂಡು ಅವು ಬೆಳೆಯಬೇಕು. ಗಾಳಿಯಿಂದ ಬಹುಬೇಗ ಆರಿ ಹೋಗುವ ತೇವ, ಬಿಸಿಲು, ಬರ, ಬೆಂಕಿ ಸಹಿಸಿ ಇಲ್ಲಿ ಗಿಡಗಳು ಬೆಳೆಯುವುದು ವಿಸ್ಮಯ.ಕಪ್ಪತ ಗುಡ್ಡ

ಸಾಮಾನ್ಯವಾಗಿ ಇಂಥ ಗುಡ್ಡಗಳಲ್ಲಿ ಗಿಡಗಳು ಮೊದಲು ಆಳಕ್ಕೆ ಬೇರು ಇಳಿಸುತ್ತವೆ. ನಂತರ ಕಾಂಡದ ಎತ್ತರ, ಗಾತ್ರ ಬೆಳೆಯುವ ಕ್ರಿಯೆ ನಡೆಯುತ್ತದೆ. ಗಾಳಿ ಪ್ರಹಾರಕ್ಕೆ ಗಿಡದ ಎಲೆಗಳು ಒರಟಾಗಿರುತ್ತವೆ. ನಾಲ್ಕಾರು ಅಡಿ ಎತ್ತರದ ಗಿಡಗಳು ನಿರಂತರ ತಲೆ ಬಾಗಿಸಿಕೊಂಡು ಶಿಕ್ಷೆ ಅನುಭವಿಸುತ್ತಾ ಗಟ್ಟಿಯಾಗುತ್ತವೆ. ನೋಡಲು ಚಿಕ್ಕ ಗಿಡಗಳಾದರೂ ಇವು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ನಮ್ಮ ಕೈಯಿಂದ ಗಿಡ ಬಗ್ಗಿಸಲು ಹೋದರೆ ಈ ಅನುಭವ ದೊರೆಯುತ್ತದೆ. ಪ್ರತೀ ಗಿಡಗಳು ಅತ್ಯಧಿಕ ಬೀಜ ಉತ್ಪಾದಿಸಿ ಒಂದಾದರೂ ಸಸಿ ಬೆಳೆಯುವ ಕನಸು ಕಾಣುತ್ತವೆ. ಕಪ್ಪತ ಗುಡ್ಡ

ಕರಿ ಮತ್ತಿ, ಕಾರೆ, ಬಿಕ್ಕೆ, ಆರಿ ಮುಂತಾದ ಒಂದೊಂದೇ ಗಿಡ ನೋಡುತ್ತಾ ಹೋದಂತೆ ಸಸ್ಯ ಲೋಕದ ಸವಾಲು, ಸಂಕಟ ಅರ್ಥವಾಗುತ್ತದೆ. ನೋಡಲು ಚಿಕ್ಕದಾಗಿ ಕಾಣುವ ಇವುಗಳ ವಯಸ್ಸು ಲೆಕ್ಕ ಹಾಕಿದರೆ ಕೆಲವು 150-200 ವರ್ಷದವು ಇರಬಹುದು. ಈ ಮರಗಳ ಬದುಕಿನ ಅಧ್ಯಯನ ಗಾಳಿ ಗುಡ್ಡದ ಗಿಡಗಳ ಮಹಾ ಕಥನವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬರಗಾಲ, ಮಳೆ, ವಾತಾವರಣ ಬದಲಾವಣೆಯ ಶತಮಾನಗಳ ಸಂಗತಿಗಳು ಗಿಡಗಳಂತಿರುವ ಪುಟ್ಟಜ್ಜರ ತಿರುಳಿನಲ್ಲಿದೆ.

ಇದನ್ನೂ ಓದಿ:ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು

ಸೀಬೆ (ಪೇರಲೆ) ಹಣ್ಣು ತಂದು ಗಾಳಿ ಗುಂಡಿ ಬಸವಣ್ಣ ದೇವರ ಮೈಗೆ ಉಜ್ಜುವ ಸೇವೆ, ಆರಿ ಗಿಡಕ್ಕೆ ಬಟ್ಟೆಯ ತೊಟ್ಟಿಲು ಕಟ್ಟಿ ಸಂತಾನ ಭಾಗ್ಯ ಬಯಸುವ ಭಕ್ತರು, ಕಲ್ಲಿನ ಮೇಲೆ ಕಲ್ಲು ಇಟ್ಟು ಮನೆ ಕಟ್ಟುವ ಕನಸು ಸಾಕಾರದ ಹರಕೆಗಳು ಸೇರಿದಂತೆ ಬೆಟ್ಟದ ಕಣಿವೆ ಮೂಲೆ ಮೂಲೆಗಳಲ್ಲಿ ಜಾನಪದ ನಂಬಿಕೆಗಳ ಲೋಕವೇ ಇದೆ. ದ್ರೋಣ ಗಿರಿಯ ಸಸ್ಯ ಸಂಜೀವಿನಿ, ಆಂಜನೇಯ ಸಂಜೀವಿನಿ ಬೆಟ್ಟ ಹೊತ್ತು ಸಾಗುವಾಗ ಈ ಲೋಕಕ್ಕೆ ಸಿಕ್ಕ ಅಮೂಲ್ಯ ಮೂಲಿಕಾ ನಿಧಿಯೆಂಬ ನಂಬಿಕೆ ವಿಶೇಷ.ಕಪ್ಪತ ಮಲ್ಲಯ್ಯ ಬ್ರಮರಾಂಬ ದೇವಿಯ ಜೊತೆ ನೆಲೆಸಿದ ನೆಲೆಯಲ್ಲಿ ಪವಿತ್ರ ತೀರ್ಥವಿದೆ. ಕಪಿಲ ಮುನಿಗಳ ತಪಸ್ಸಿನ ತಾಣ ನೂರಾರು ಸಾಧುಸಂತರ ಧ್ಯಾನ ನೆಲೆ . ಬೆಟ್ಟ ಏರಿದ ಎಲ್ಲರಿಗೂ ತಗ್ಗಿನ ಭೂಮಿ ನೋಡುವಾಗ ಕೃಷಿ ಜನಜೀವನದ ಬದುಕೆಲ್ಲ ಬೆಟ್ಟದ ಕೃಪೆ ಎಂಬುದು ಅರ್ಥವಾಗಲೇ ಬೇಕು.ಕಪ್ಪತ ಗುಡ್ಡ

ತುಂಗಭದ್ರೆಯ ಹರಿವು ನೋಡುತ್ತಾ ಫಲವತ್ತಾದ ಮಣ್ಣು ಗಮನಿಸುತ್ತಾ ನಿಲ್ಲಬೇಕು.ಸಮುದ್ರ ಮಟ್ಟದಿಂದ 750ಮೀಟರ್ ಎತ್ತರ ಏರಿ 33, 000ಹೆಕ್ಟೇರ್ ವಿಸ್ತೀರ್ಣದ ಈ ಮಹಾ ಬೆಟ್ಟ ನೋಡುತ್ತಾ ಓದುತ್ತಾ ಹೋದರೆ ನಮ್ಮ ಬಯಲು ಸೀಮೆಯ ಭಾಗ್ಯ ಇದೆಂದು ಗೊತ್ತಾಗುತ್ತದೆ. ಅರಣ್ಯ ಅತಿಕ್ರಮಣ, ಗಣಿಗಾರಿಕೆ, ಗಾಳಿ ಯಂತ್ರ ಸ್ಥಾಪನೆಯ ಪ್ರಹಾರಗಳ ನಡುವೆಯೂ ವನ್ಯ ಜೀವಿಗಳ ಧಾಮವಾಗಿ ಉಳಿದಿದೆ. ಇಂಥ ಅಮೂಲ್ಯ ಪರಿಸರ ಉಳಿಯಬೇಕು. ಸುತ್ತಲಿನ ಹಳ್ಳಿಗರು ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆಯ ಜೊತೆಯಾಗಿ ನಿಲ್ಲಬೇಕು. ಎಳೆ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತಿರುವುದು, ಈಗ ರಸ್ತೆಗೆ ಗೇಟ್ ಅಳವಡಿಸಿ ರಕ್ಷಣೆಯ ಹೆಜ್ಜೆ ಇಟ್ಟಿದ್ದು ಖುಷಿಯ ಸಂಗತಿ. ಕಪ್ಪತ ಗುಡ್ಡ

ವಿಡಿಯೋ ನೋಡಿ:ಮಾವು ಬೆಳೆಗಾರರ ನೋವು ಕೇಳದ ಸರ್ಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *