ತಮಿಳುನಾಡು ಇಂಡಿಯಾ ಕೂಟದ ದಕ್ಷಿಣದ ಭದ್ರಕೋಟೆಯಾಗಿ ಉಳಿಯುವುದೆ?

ವಸಂತರಾಜ ಎನ್.ಕೆ

ಇಂಡಿಯಾ ಕೂಟವು ತನ್ನ ಒಗ್ಗಟ್ಟು, 2019 ಚುನಾವಣೆಗಳಲ್ಲಿ ಸಾಬೀತಾಗಿರುವ ಸಂಖ್ಯಾಶಕ್ತಿ ಮತ್ತು ಮೂರು ವರ್ಷದ ಡಿಎಂಕೆ ಸರಕಾರದ ಕಲ್ಯಾಣ ಯೋಜನೆಗಳಂತಹ ಹಲವಾರು ಅಂಶಗಳಿಂದಾಗಿ  ಮೊದಲ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಸಂಶಯವಿಲ್ಲ. ಇಂಡಿಯಾ ಕೂಟದ ವಿರುದ್ಧ ಮತಗಳು -ಎ.ಐ.ಎ.ಡಿ.ಎಂ.ಕೆ, ಬಿಜೆಪಿ ರಂಗಗಳಲ್ಲದೆ ಎನ್.ಟಿ.ಕೆ – ಹೀಗೆ ಮೂರಾಬಟ್ಟೆಯಾಗಿ ವಿಭಜಿತವಾಗುತ್ತವೆ. ಎಐಎಡಿಎಂಕೆ ಸಾಮಾನ್ಯವಾಗಿ ಅಲ್ಪಸಂಖ್ಯಾತರ ನಡುವೆ ಉತ್ತಮ ಬೆಂಬಲ ಹೊಂದಿದ್ದರೂ, ಈ ಬಾರಿಯ ಪರಿಸ್ಥಿತಿಯಿಂದಾಗಿ ಅಲ್ಪಸಂಖ್ಯಾತರ ಮತಗಳು ಇಂಡಿಯಾ ಕೂಟದ ಪರವಾಗಿ ಕ್ರೋಢೀಕೃತವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಇಂಡಿಯಾ ಕೂಟ ಬಹುಪಾಲು ಸೀಟುಗಳನ್ನು ಗೆಲ್ಲುವುದು ಖಚಿತ. 2019ರ ಸಾಧನೆ ರಿಪೀಟ್ ಆದರೂ, ಅಥವಾ ಸೆಂಟ್ ಪರ್ಸೆಂಟ್ ಹೊಡೆದರೂ ಆಶ್ಚರ್ಯ ಪಡಬೇಕಾಗಿಲ್ಲ. ತಮಿಳುನಾಡು

ತಮಿಳುನಾಡು ಏ.19 ಅಂದರೆ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಚುನಾವಣೆಹೆ ಹೋಗಲಿದೆ.  ಮೊದಲ ಹಂತದಲ್ಲಿ 102 ಸೀಟುಗಳಿಗೆ ಚುನಾವಣೆ ನಡೆಯಲಿದ್ದರೂ, ಇಡೀ ರಾಜ್ಯ ಚುನಾವಣೆಗೆ ಹೋಗುತ್ತಿರುವ ಏಕಮಾತ್ರ ರಾಜ್ಯವಿದು. ಎಂದಿನಂತೆ ಈ ರಾಜ್ಯದಲ್ಲಿ ಎರಡು ದ್ರಾವಿಡ ಪಕ್ಷಗಳಾದ ಡಿ.ಎಂ.ಕೆ ಮತ್ತು ಎಐಎಡಿಎಂಕೆ ನಾಯಕತ್ವದ ಕೂಟಗಳ ನಡುವೆ ಹೆಚ್ಚು ಕಡಿಮೆ ನೇರ ಸ್ಪರ್ಧೆಯಿದೆ. ಆದರೆ ಬಿಜೆಪಿ ನಾಯಕತ್ವದ ಮೂರನೇ ಕೂಟ ಈ ಬಾರಿ ಹೆಚ್ಚಿನ (ಕನಿಷ್ಟ ಅಥವಾ ಬಹುಶಃ ಬರಿಯ ಮಾಧ್ಯಮಗಳಲ್ಲಿ) ಸದ್ದು ಮಾಡುತ್ತಿದ್ದು ರಾಜ್ಯದಲ್ಲಿ ತ್ರಿಕೊಣ ಸ್ಪರ್ಧೇಯಿದೆ ಎಂದು ನಂಬಿಸಲು ಪ್ರಯತ್ನಿಸುತ್ತಿದೆ. ತಮಿಳುನಾಡು

ಸ್ಪರ್ಧೇ ದ್ವಿ-ಧ್ರುವೀಯವೇ, ಬಹು-ಧ್ರುವೀಯವೇ?

 

ತಮಿಳುನಾಡು ಈ ಚುನಾವಣೆಯ ಹೊತ್ತಿಗೆ ರೂಪುಗೊಂಡ ಇಂಡಿಯಾ ಕೂಟದ ಮೂಲಮಾದರಿಯನ್ನು 2019ರ ಲೋಕಸಭಾ ಚುನಾವಣೆಯಲ್ಲಿಯೇ ಸಫಲವಾಗಿ ರೂಪಿಸಿತ್ತು. ರಾಜ್ಯದಲ್ಲಿ 2014ರಲ್ಲಿ ರಚಿಸಲಾದ ಜಾತ್ಯತೀತ ಪ್ರಗತಿಪರ ಕೂಟ (ಎಸ್.ಪಿ.ಎ) ಎಂದು ಹೆಸರಿದ್ದ ಈ ಕೂಟ 2019ರ ಲೋಕಸಭಾ ಚುನಾವಣೆಯಲ್ಲಿ 39 ಸೀಟುಗಳಲ್ಲಿ 38 ಸೀಟುಗಳನ್ನು ಪಡೆಯುವುದರೊಂದಿಗೆ  ಇಂದಿನ ಇಂಡಿಯಾ ಕೂಟಕ್ಕೆ ಮುನ್ನುಡಿ ಬರೆದಿತ್ತು. ಆ ನಂತರ ನಡೆದ 2021ರ ವಿಧಾನಸಭೆ ಚುನಾವಣೆಗಳಲ್ಲಿ ಈ ಕೂಟ ಮುಂದುವರೆದಿದ್ದು ಅದು 234ರಲ್ಲಿ 157 ಸೀಟು ಗೆದ್ದು ಭಾರಿ ಬಹುಮತ ಪಡೆಯುವ ಮೂಲಕ ಪ್ರಮುಖ ವಿರೋಧ ಪಕ್ಷ ಎ.ಐ.ಡಿ.ಎಂ.ಕೆ ನಾಯಕತ್ವದ ರಂಗವನ್ನು ಗುಡಿಸಿ ಹಾಕಿತ್ತು. ಅದೇ ಕೂಟ 2024ರ ಲೋಕಸಭಾ ಚುನಾವಣೆಯಲ್ಲೂ ಮುಂದುವರೆದಿದೆ. ಈ ಕೂಟದಲ್ಲಿ ಡಿ.ಎಂ.ಕೆ ಅಲ್ಲದೆ ಕಾಂಗ್ರೆಸ್, ಎಡ ಪಕ್ಷಗಳಾದ ಸಿ.ಪಿ.ಐ, ಸಿಪಿಐ(ಎಂ), ಮುಸ್ಲಿಂ ಲೀಗ್ ಮತ್ತು ವಿ.ಸಿ.ಕೆ, ಎಂ.ಡಿ.ಎಂ.ಕೆ ಮತ್ತಿತರ ಸಣ್ಣ ಪಕ್ಷಗಳನ್ನು ಒಳಗೊಂಡಿದೆ. ಈ ಕೂಟ 2024ರ ಲೋಕಸಭಾ ಚುನಾವಣೆಯಲ್ಲೂ ಸೀಟು ಹೊಂದಾಣಿಕೆಯನ್ನು ಸಾಕಷ್ಟು ಸುಗಮವಾಗಿಯೇ ಮಾಡಿ 2019ರ ಫಲಿತಾಂಶವನ್ನು ರಿಪೀಟ್ ಮಾಡುವ ಹುಮ್ಮಸ್ಸಿನಲ್ಲಿದೆ.

ತಮಿಳುನಾಡು

ಇಂಡಿಯಾ ಕೂಟದ ವಿರುದ್ಧ ಎಐಎಡಿಎಂಕೆ ನಾಯತಕತ್ವದ ಕೂಟ ಮುಖ್ಯ ಪ್ರತಿಸ್ಪರ್ಧಿ. ಹಲವು ಸಣ್ಣ ಪಕ್ಷಗಳು ಡಿ.ಎಂ.ಕೆ ಮತ್ತು ಎಐಎಡಿಎಂಕೆ ನಾಯಕತ್ವದ ಕೂಟಗಳ ನಡುವೆ ಓಡಾಡಿದ್ದು ಇದೆ. ಡಿ.ಎಂ.ಕೆ ಮತ್ತು ಎಐಎಡಿಎಂಕೆ ಗಳೇ ಸ್ವತಃ ತಮ್ಮ ಕೂಟಗಳೊಂದಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಜನತಾ ಮತ್ತು ಬಿಜೆಪಿ ಗಳ ಕೂಟಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಭಾಗಿಯಾಗಿವೆ.  ಎಐಎಡಿಎಂಕೆ ಬಿಜೆಪಿ ಜತೆ ಹಿಂದಿನಿಂದಲೂ ಪ್ರೇಮ-ಕಲಹ ಗಳ ಮಧ್ಯೆ ಓಲಾಡುತ್ತಿದ್ದ ಪಕ್ಷ. ಎಐಎಡಿಎಂಕೆ 1998ರಲ್ಲಿ ಬಿಜೆಪಿ ಜತೆ ಕೈಜೋಡಿಸಿ, 1999ರಲ್ಲೇ ಕೈಕೊಟ್ಟಿತ್ತು. 2004ರಲ್ಲಿ ಮತ್ತೆ ಕೈಜೋಡಿಸಿ, 2009ರಲ್ಲಿ ಮತ್ತೆ ಕೈಕೊಟ್ಟಿತ್ತು. 2014ರಲ್ಲಿ ಎನ್.ಡಿ.ಎ ಸೇರದೆ ಸ್ವತಂತ್ರವಾಗಿ ಸ್ಪರ್ಧಿಸಿ 39ರಲ್ಲಿ 37 ಸೀಟುಗಳ ಭಾರೀ ಜಯ ಗಳಿಸಿತ್ತು. 2019ರಲ್ಲಿ ಮತ್ತೆ ಎನ್.ಡಿ.ಎ ಸೇರಿ, ಭಾರೀ ಪರಾಭವ ಕಂಡಿತ್ತು. ಈ ಚುನಾವಣೆಯಲ್ಲಿ ಎನ್.ಡಿ.ಎ ಯಲ್ಲಿ ಅದು ಮುಂದುವರೆಯಬೇಕೆಂದು ಬಿಜೆಪಿ ಬಯಸಿತ್ತು. ಜಯಲಲಿತ ನಿಧನದ ನಂತರ ಪಕ್ಷದಲ್ಲಿ 2-3 ಬಣಗಳ ಹೋರಾಟದಲ್ಲಿ ದುರ್ಬಲವಾಗಿತ್ತು. ಮುಖ್ಯ ಬಣ ಎನ್.ಡಿ.ಎ ಯಲ್ಲಿ ಅದು ಮುಂದುವರೆಯುವುದನ್ನು ವಿರೋಧಿಸಿತ್ತು. ಬಿಜೆಪಿ ಸಹ ಎನ್.ಡಿ.ಎ ದುರ್ಬಲವಾಗಿರುವ ಈ ಸಂದರ್ಭ ಬಳಸಿ ಬೆಳೆಯಬೇಕೆಂದು ಬಯಸಿ ಪ್ರತ್ಯೇಕ ಕೂಟ ರಚಿಸಿತು. ಈಗ ಎಐಎಡಿಎಂಕೆ ಕೂಟದಲ್ಲಿ ಡಿ.ಎಂ.ಡಿ.ಕೆ ,ಎಸ್.ಡಿ.ಪಿ.ಐ ಮತ್ತು ಎ.ಐ.ಎಂ.ಐ.ಎಂ ಮಾತ್ರ ಇವೆ.

ಬಿಜೆಪಿ ಮೂರನೇ ದ್ರಾವಿಡ-ವಿರೋಧಿ ರಂಗ ಕಟ್ಟಿದ್ದು ರಾಮದಾಸ್ ಅವರ ಪಿ.ಎಂ.ಕೆ, ತಮಿಳು ಮನಿಲಾ ಕಾಂಗ್ರೆಸ್, ಮಾಜಿ ಎಐಎಡಿಎಂಕೆ ನಾಯಕರಾದ ಟಿ.ಟಿ.ವಿ,ದಿನಕರನ್ ಅವರ ಎ.ಎಂ.ಎಂ.ಕೆ, ಒ.ಪನ್ನೀರಸೆಲ್ವಂ ಮತ್ತು ಇತರ 4 ಸಣ್ಣ ಪಕ್ಷಗಳು ಅದರಲ್ಲಿ ಸೇರಿವೆ. ತಮಿಳುನಾಡು

# ಕೂಟದ ಅಂಗಪಕ್ಷಗಳು ಪ್ರತಿ ಬಾರಿ ಬೇರೆಯಾಗಿದ್ದವು

* 2019, 2021ರಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಎನ್.ಡಿ.ಎ ಕೂಟದಲ್ಲಿದ್ದವು

ಇದನ್ನು ಓದಿ : ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಮತ್ತೆ ಮರು ಜೀವ?!

ಇಂಡಿಯಾ ಕೂಟ ಮುಂದಿದೆ

ಇಂಡಿಯಾ ಕೂಟವು ತನ್ನ ಒಗ್ಗಟ್ಟು, 2019 ಚುನಾವಣೆಗಳಲ್ಲಿ ಸಾಬೀತಾಗಿರುವ ಸಂಖ್ಯಾಶಕ್ತಿ ಮತ್ತು ಮೂರು ವರ್ಷದ ಡಿಎಂಕೆ ಸರಕಾರದ  ಕಲ್ಯಾಣ ಯೋಜನೆಗಳಂತಹ ಹಲವಾರು ಅಂಶಗಳಿಂದಾಗಿ  ಮೊದಲ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಸಂಶಯವಿಲ್ಲ. ಮೊದ ಮೊದಲು ರಾಜ್ಯದಲ್ಲಿ ಎರಡು ದ್ರಾವಿಡ ಪಕ್ಷಗಳ ಕೂಟದ ನಡುವೆ ದ್ವಿ-ಧ್ರುವೀಯ ಸ್ಪರ್ಧೆ , ಬಿಜೆಪಿ ಸ್ಪರ್ಧೇಯಲ್ಲೇ ಇಲ್ಲ ಎಂದು ಬಿಂಬಿಸಲು ಯತ್ನಿಸಿದ ಡಿ.ಎಂ.ಕೆ ಬೇಗನೇ ತಂತ್ರ ಬದಲಿಸಿತು. ಇದು ರಾಷ್ಟ್ರೀಯ ಚುನಾವಣೆ, ಮೋದಿ 7 ಬಾರಿ ರಾಜ್ಯಕ್ಕೆ ಭೇಟಿ ನೀಡಿ ಡಿ.ಎಂ.ಕೆ ಯ ದುರಾಡಳಿತ ಮತ್ತು ಕರುಣಾನಿಧಿ ‘ಪರಿವಾರವಾದ’ ದ ಮೇಲೆ ಭಾರೀ ದಾಳಿ ನಡೆಸಿದಾಗ, ಮೋದಿ ಮತ್ತು ಅವರ ಬಿಜೆಪಿ ಸರಕಾರದ ವಿರುದ್ಧ ತೀವ್ರ ದಾಳಿಯನ್ನು ಆರಂಭಿಸಿತು. ಆ ಮೂಲಕ ಕೆಲವು ಪ್ರದೇಶಗಳಲ್ಲಿ ಮತ್ತು ಜನವಿಭಾಗಗಳಲ್ಲಿ ಮೂರು ವರ್ಷದ ಆಡಳಿತದ ನ್ಯೂನತೆಗಳ ವಿಷಯವನ್ನು ಮರೆಗೆ ಸರಿಸುವುದೂ ಸುಲಭವೆಂಬುದನ್ನೂ ಮನಗಂಡಿತು.

ಗವರ್ನರುಗಳ ದುರುಪಯೋಗ, ರಾಜ್ಯ ವಿಧಾನಸಭೆ ಮಂಜೂರು ಮಾಡಿದ ಕಾನೂನುಗಳನ್ನು ತಡೆ ಹಿಡಿಯುವುದು, ಒಕ್ಕೂಟವಾದದ ಮೇಲೆ ದಾಳಿ, ರಾಜ್ಯಗಳಿಗೆ ಸಮಾನ ಹಣಕಾಸಿನ ಹಕ್ಕುಗಳ ನಿರಾಕರಣೆ, ನೆರೆ ಪರಿಹಾರ ಅನುದಾನ ನಿರಾಕರಣೆ, ಹಲವು ಸರಳ ವಿಷಯಗಳ ಕುರಿತು ಸುಪ್ರೀಂ ಕೋರ್ಟಿಗೆ ಹೋಗಬೇಕಾಗಿರುವ ಪರಿಸ್ಥಿತಿ, ಕಡ್ಡಾಯ ನೀಟ್ ಪರೀಕ್ಷೆ ರಿಯಾಯಿತಿಗೆ ನಿರಾಕರಣೆ, ಹಿಂದಿ ಹೇರಿಕೆ, ಮನುವಾದ, ಚುನಾವಣಾ ಬಾಂಡುಗಳ ಬ್ರಹ್ಮಾಂಡ ಭ್ರಷ್ಟಾಚಾರ, 10 ವರ್ಷಗಳ ಕೇಂದ್ರದ ದುರಾಡಳಿತ – ಹೀಗೆ ಮೋದಿ ಮತ್ತು ಬಿಜೆಪಿ ಕೇಂದ್ರ ಸರಕಾರದ ಮೇಲೆ ಬ್ರಹ್ಮಾಸ್ತ್ರಗಳ ಸುರಿಮಳೆ ಸುರಿಸಿದರು.

ದಿನಕ್ಕೆ ಸರಾಸರಿ ಎರಡು ಸಾರ್ವಜನಿಕ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸ್ಟಾಲಿನ್,  ಮೋದಿಯನ್ನು ‘ತಮಿಳುನಾಡು-ವಿರೋಧಿ’, ತಮಿಳು-ವಿರೋಧಿ, ‘ದ್ರಾವಿಡ-ವಿರೋಧಿ’, ‘ಮನುವಾದಿ’, ಚುನಾವಣಾ ಸೀಸನ್ ನಲ್ಲಿ ಬರುವ  “ವಲಸೆ ಹಕ್ಕಿ”, ಭ್ರಷ್ಟಾಚಾರದ ವಿವಿಯ ಕುಲಪತಿ,   ಬಾಂಡುಗಳ “ವಸೂಲಿ ರಾಜ”ಎಂದೆಲ್ಲಾ ಮೂದಲಿಸಿದರು. ಅಲ್ಲದೆ, ಎಐಎಡಿಎಂಕೆ ತನ್ನ ಮಾಜಿ ಮಿತ್ರ ಬಿಜೆಪಿಯೊಂದಿಗೆ “ರಹಸ್ಯ ಸಂಬಂಧ”ದಲ್ಲಿದೆ ಎಂದೂ ದೂಷಿಸಿದರು.

ತಮಿಳುನಾಡುಮಿಳುನಾಡು

ಇಂಡಿಯಾ ಕೂಟ ಸಾಮಾಜಿಕ ಮಾಧ್ಯಮಗಳಲ್ಲೂ ಪರಿಣಾಮಕಾರಿ ಪ್ರಚಾರ ನಡೆಸಿದೆ. ಕ್ಯೂಆರ್ ಕೋಡ್ ನೊಂದಿಗೆ  ಜಿ (ಮೋದಿ) ಪೇ ಪೋಸ್ಟರ್ ಗಳನ್ನು ರಾಜ್ಯದಾದ್ಯಂತ ಅಂಟಿಸಲಾಯಿತು. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮೋದಿ ಸರಕಾರದ ಭ್ರಷ್ಟಾಚಾರ ಬಯಲಿಗೆಳೆಯುವ, ವಿಡಿಯೊಗಳತ್ತ ಒಯ್ಯುತ್ತಿತ್ತು. ‘ಮೋದಿ’ ಗ್ಯಾರಂಟಿ’ಗಳನ್ನು  ಲೇವಡಿ ಮಾಡುವ ವಿಡಿಯೊ, ರೀಲ್ಸ್  ಗಳನ್ನು ವೈರಲ್ ಮಾಡಲಾಗಿದೆ. ಬಿಜೆಪಿ ಸರ್ಕಾರವು ಎಐಐಎಂಎಸ್ ನಿರ್ಮಾಣ ಮಾಡದಿರುವ ವೀಡಿಯೊ ಜಾಹೀರಾತು 2021 ರಲ್ಲಿಯೇ ವೈರಲ್ ಆಗಿತ್ತು.  ಕಾಡುಗಳ್ಳ ವೀರಪ್ಪನ್  ಮಗಳು ಬಿಜೆಪಿ ಗೆ ಸೇರಿದಾಗ ‘ಮೋದಿಯಲ್ಲಿ ನನ್ನ ತಂದೆ ವೀರಪ್ಪನ್ ಅವರನ್ನು ಕಾಣುತ್ತೇನೆ’ ಎಂದು ಹೇಳಿದ್ದು ವೈರಲ್ ಆಗಿತ್ತು

2019ನ್ನು ರಿಪೀಟ್ ಮಾಡಲು ಅಥವಾ ಪಾಂಡಿಚೇರಿ ಸೇರಿ, 40ರಲ್ಲಿ 40 ಸೀಟು ಗೆಲ್ಲಲು ಇಂಡಿಯಾ ಕೂಟ ಬಿರುಸಿನ ಪ್ರಚಾರ ನಡೆಸಿದೆ. ಇಂಡಿಯಾ ಕೂಟಕ್ಕೆ ಅದರ ಅಂಗ ಪಕ್ಷಗಳ ನೆಲೆಯ ವೈವಿಧ್ಯತೆಯಿಂದಾಗಿ ಹಲವು ಪ್ರಭಾವಿ ಸಮುದಾಯಗಳಲ್ಲದೆ, ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ನಡುವೆ ಅಪಾರ ಬೆಂಬಲ, ನೆಲೆಯಿದೆ.

ವಿರೋಧ ಪಕ್ಷಗಳು ಮೂರಾಬಟ್ಟೆ

ಇದಕ್ಕೆ ವಿರುದ್ಧವಾಗಿ ಎಐಎಡಿಎಂಕೆ ‘ಡಿ.ಎಂ.ಕೆ ಯ ದುರಾಡಳಿತದ’ ಪ್ರಚಾರ ನಡೆಸಿತು. ಮೋದಿ ಮತ್ತು ಬಿಜೆಪಿಯ ವಿರುದ್ಧ ಮೊದ ಮೊದಲು ಟೀಕಿಸದೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳೆಲ್ಲ ಡಿ.ಎಂ.ಕೆ ಸರಕಾರದ ವೈಫಲ್ಯವೆಂದು ಬಿಂಬಿಸಲು ಪ್ರಯತ್ನಿಸಿ, ಕೊನೆಯ ಸುತ್ತಿನಲ್ಲಿ ಬಿಜೆಪಿ/ಮೋದಿಯನ್ನು ಟೀಕಿಸಿತು. ಎಐಎಡಿಎಂಕೆ ಜಯಲಲಿತ ನಿಧನದ ನಂತರ ಬಣಗಳ ಜಗಳದಲ್ಲಿ ನಂತರದ ಒಡಕು, ಉಚ್ಚಾಟನೆಗಳಿಂದ ದುರ್ಬಲವಾಗಿದೆ. ಆದರೂ ಅದಕ್ಕೆ ಸಾಕಷ್ಟು ದೊಡ್ಡದೇ ಜನಬೆಂಬಲದ ನೆಲೆಯಿದೆ. ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಹೆಚ್ಚಿನ ನೆಲೆ ಹೊಂದಿದ್ದು ಅದನ್ನು ಉಳಿಸಿಕೊಳ್ಳಲು, 2026ರ ವಿಧಾನ ಸಭೆಯಲ್ಲಿ ಪ್ರಧಾನ ಸ್ಪರ್ಧಿಯೆಂದು ತೋರಿಸಲು ಹೆಣಗುತ್ತಿದೆ. ತಮಿಳುನಾಡು

ಕರುಣಾನಿಧಿ ಮತ್ತು ಜಯಲಲಿತ ನಿಧನದ ನಂತರ ಪ್ರಭಾವಿ ನಾಯಕರ ಅಭಾವದಿಂದಾಗಿ ಮತ್ತು ದೀರ್ಘ ಕಾಲದ ವೈಫಲ್ಯಗಳಿಂದ ದ್ರಾವಿಡ ರಾಜಕಾರಣದ ಅಂತ್ಯದ ಆರಂಭವಾಗಿದೆ. ಇದು ಬಿಜೆಪಿ ಸ್ವತಂತ್ರ ಅಸ್ತಿತ್ವ ಹೊಂದಲು ಸರಿಯಾದ ಸಮಯವೆಂದು ಭಾವಿಸಿ ಮೂರನೇ ರಂಗ ಕಟ್ಟಲು ಮುಂದಾಗಿದೆ. ಮೋದಿ ಹೆಸರಿನಲ್ಲಿ, ಹಿಂದೂ ಧರ್ಮ ರಾಮನ ಹೆಸರಲ್ಲಿ ಮತ್ತು ಮೋದಿ ಸಾಧನೆಗಳ ಗ್ಯಾರಂಟಿಗಳ ಆಧಾರಿತವಾಗಿ, ದ್ರಾವಿಡ ರಾಜಕಾರಣದ ಪರಿವಾರವಾದ, ಭ್ರಷ್ಟಾಚಾರಗಳ ವಿರುದ್ಧ ಮತ್ತು ಇವಕ್ಕೆಲ್ಲ ಬಿಜೆಪಿಯೇ ಬದಲಿಯೆಂದು ಪ್ರಚಾರ ಮಾಡುತ್ತಿದೆ. ಇದಕ್ಕಾಗಿ ವನ್ನಿಯಾರ್, ದಿನಕರನ್-ಒ,ಪಿ.ಎಸ್ ಅವರ ಸಮುದಾಯಗಳು ಮತ್ತು ಇತರ ಹಲವು ಸಣ್ಣ ದಲಿತ ಜಾತಿಗಳ ನಡುವೆ ಸೋಶಿಯಲ್ ಇಂಜಿನೀಯರಿಂಗ್ ನಡೆಸಿದ್ದಾರೆ.

ಕನಿಷ್ಠ 3-4  ಸೀಟುಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿಯೂ ಮತ್ತು ಅವರ ಬೆಂಬಲಿಗ ಮಾಧ್ಯಮಗಳೂ ಹೇಳುತ್ತಿವೆ. ಆದರೆ  2021 ರ ಅಸೆಂಬ್ಲಿ ಚುನಾವಣೆಯಲ್ಲಿ ಸುಮಾರು 7 ಪ್ರತಿಶತದಷ್ಟು ಮತ ಗಳಿಸಿದ್ದು, 10ಕ್ಕೂ ಹೆಚ್ಚು  ಪ್ರತಿಶತ ಮತಗಳಿಕೆ ಮತ್ತು 10 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವುದನ್ನು ಬಿಜೆಪಿ ಕೂಟ ನಿಜವಾಗಿಯೂ ಗುರಿಯಿಟ್ಟುಕೊಂಡಿದೆ. ತಮಿಳುನಾಡು

ಹೊಸ ಪಕ್ಷವಾದ ಎನ್,ಟಿ.ಕೆ ಮುಖ್ಯಸ್ಥ ಎಸ್ ಸೀಮನ್ ಅವರು ತಮಿಳು ರಾಷ್ಟ್ರೀಯತೆಯ ಬಗ್ಗೆ ತಮ್ಮ ಜ್ವಲಂತ ಭಾಷಣಗಳೊಂದಿಗೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಯುವಜನರನ್ನು (ವಿಶೇಷವಾಗಿ ದಕ್ಷಿಣ ಭಾಗಗಳಲ್ಲಿ) ಸೆಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಎನ್,ಟಿ.ಕೆ ಮತ್ತು ಬಿ.ಎಸ್.ಪಿ ಸಹ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿವೆ.

ಇಂಡಿಯಾ ಕೂಟದ ವಿರುದ್ಧ ಮತಗಳು ಹೀಗೆ ಮೂರಾಬಟ್ಟೆಯಾಗಿ ವಿಭಜಿತವಾಗುತ್ತವೆ. ಎಐಎಡಿಎಂಕೆ ಸಾಮಾನ್ಯವಾಗಿ ಅಲ್ಪಸಂಖ್ಯಾತರ ನಡುವೆ ಬೆಂಬಲ ಹೊಂದಿದ್ದರೂ, ಈ ಬಾರಿಯ ಪರಿಸ್ಥಿತಿಯಿಂದಾಗಿ ಅಲ್ಪಸಂಖ್ಯಾತರ ಮತಗಳು ಇಂಡಿಯಾ ಕೂಟದ ಪರವಾಗಿ ಕ್ರೋಢೀಕೃತವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಇಂಡಿಯಾ ಕೂಟ ಬಹುಪಾಲು ಸೀಟುಗಳನ್ನು ಗೆಲ್ಲುವುದು ಖಚಿತ. 2019ರ ಸಾಧನೆ ರಿಪೀಟ್ ಆದರೂ, ಅಥವಾ ಸೆಂಟ್ ಪರ್ಸೆಂಟ್ ಹೊಡೆದರೂ ಆಶ್ಚರ್ಯ ಪಡಬೇಕಾಗಿಲ್ಲ. ತಮಿಳುನಾಡು

ಇದನ್ನು ನೋಡಿ : ದಕ್ಷಿಣ ಭಾರತದಲ್ಲಿ ಬಿಜೆಪಿ ಯಾಕೆ ಗೆಲ್ಲುವುದಿಲ್ಲ ಗೊತ್ತೆ ಮೋದೀಜಿ? Janashakthi Media

Donate Janashakthi Media

Leave a Reply

Your email address will not be published. Required fields are marked *