ಮಹಾರಾಷ್ಟ್ರ : ಬಿಜೆಪಿಯ ತಂತ್ರ ಬ್ಯೂಮರಾಂಗ್ ಆಗುತ್ತಾ?

– ವಸಂತರಾಜ ಎನ್.ಕೆ

ವಿರೋಧ ಪಕ್ಷಗಳನ್ನು ಅದರಲ್ಲೂ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಬಿಜೆಪಿಯ ಕೀಳು ಮಟ್ಟದ ಕೃತ್ಯಗಳು ಈ ಲೋಕಸಭಾ ಚುನಾವಣೆಯಲ್ಲಿ ಬ್ಯೂಮರಾಂಗ್ ಆಗುವ ಲಕ್ಷಣಗಳು ಕಾಣುತ್ತಿವೆ. ಶಿವಸೇನಾ ಮತ್ತು ಎನ್.ಸಿ.ಪಿ ಯನ್ನು ಒಡೆಯಲಾಗಿದ್ದರೂ ಅವು ಕಾಂಗ್ರೆಸ್ ಜತೆ ಕಟ್ಟಿಕೊಂಡ ಮಹಾರಾಷ್ಟ್ರ ವಿಕಾಸ ಅಘಾಡಿ  ಯ  ಜಂಟಿ ಚುನಾವಣಾ ಸಭೆಗಳಿಗೆ ಭಾರೀ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಶಿವಸೇನಾ ನಾಯಕ ಉದ್ಭವ ಠಾಕ್ರೆ ಮತ್ತು ಎನ್.ಸಿ.ಪಿ ಯ ನಾಯಕ ಶರದ್ ಪವಾರ್ ಗೆ ಭಾರೀ  ಅನುಕಂಪದ ಅಲೆ ಎದ್ದಿದೆ.  ದೇಶದ ಇತರ ಭಾಗಗಳಂತೆ ಮಹಾರಾಷ್ಟ್ರದಲ್ಲಿ ಸಹ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ, ರೇಶನ್ ಇತ್ಯಾದಿ ಜನರ ನಿಜವಾದ ಸಮಸ್ಯೆಗಳು ಈ ಚುನಾವಣೆಗಳಲ್ಲಿ ಮುನ್ನೆಲೆಗೆ ಬಂದಿವೆ.  ಇವೆಲ್ಲ ಸೇರಿ ಬಿಜೆಪಿ ಹಿಂದಿನ ಬಾರಿಗಿಂತ ಹಲವು ಸೀಟುಗಳನ್ನು ಕಳೆದುಕೊಳ್ಳುವುದು ಖಚಿತ. ಎನ್.ಡಿ.ಎ 41ರಿಂದ 24 ಸೀಟುಗಳಿಗೆ ಕುಸಿದರೂ ಆಶ್ವರ್ಯ ಪಡಬೇಕಾಗಿಲ್ಲವೆಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಮಹಾರಾಷ್ಟ್ರ ಬಹುಶಃ ಬಿಜೆಪಿಯ ಅಧಿಕಾರ ದಾಹದ ಮತ್ತು ಪ್ರಜಾಪ್ರಭುತ್ವ ಬುಡಮೇಲು ಮಾಡುವ ರಾಜಕೀಯ ತಂತ್ರಗಾರಿಕೆ ಅತ್ಯಂತ ಕೀಳು ಮಟ್ಟಕ್ಕೆ ಹೋದ ರಾಜ್ಯ. ಇದು ಬಹುಶಃ ಯಾರೂ ಊಹಿಸಲಾರದ ಅತ್ಯಂತ ಕೀಳುಮಟ್ಟಕ್ಕೆ ಹೋಗಿದ್ದನ್ನು ಮಹಾರಾಷ್ಟ್ರ ಕಂಡಿತು. ಮಾತ್ರವಲ್ಲ, ಇದು ಮಹಾರಾಷ್ಟ್ರದ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಒಂದು ಎಂಬುದಕ್ಕೆ ಸಂಶಯವಿಲ್ಲ. ಅಕ್ಟೋಬರ್ 2019ರಲ್ಲಿ ನಡೆದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ನಂತರ ಅಲ್ಲಿನ ರಾಜಕೀಯ ಸನ್ನಿವೇಶದಲ್ಲಿ ಹಿಂದೆ ಯಾರೂ ಊಹಿಸಲಾರದ ಭಾರಿ ಬದಲಾವಣೆಗಳು ಸಹ ಕಂಡವು.

Boomerang

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಎನ್.ಡಿ.ಎ ಕೂಟದ ಭಾಗವಾಗಿ ಮತ್ತು ಎನ್.ಸಿ.ಪಿ ಮತ್ತು ಕಾಂಗ್ರೆಸ್ ಯು.ಪಿ.ಎ ಕೂಟದ ಭಾಗವಾಗಿ ಸ್ಪರ್ಧಿಸಿದ್ದವು. ಬಿಜೆಪಿ 105 ಮತ್ತು ಶಿವಸೇನಾ 56 ಸೀಟು ಗಳಿಸಿ ಎನ್.ಡಿ.ಎ ಕೂಟಕ್ಕೆ ಒಟ್ಟು 288 ಸೀಟುಗಳ ಸದನದಲ್ಲಿ ನಿಚ್ಚಳ ಬಹುಮತ ಬಂದಿತ್ತು.  ಎನ್.ಸಿ.ಪಿ 54 ಮತ್ತು ಕಾಂಗ್ರೆಸ್ 44 ಸೀಟುಗಳಿಗೆ ತೃಪ್ತಿಪಡಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ತೀವ್ರ ವಿವಾದಯೆದ್ದು ಬಿಜೆಪಿ-ಶಿವಸೇನಾ ಸಂಬಂಧ ಕಡಿದು ಬಿತ್ತು. ಇದರ ಲಾಭ ಪಡೆದ ಶಿವಸೇನಾವನ್ನು ಮುಖ್ಯಮಂತ್ರಿ ಪದವಿಯನ್ನು ಕೊಟ್ಟು ಎನ್.ಸಿ.ಪಿ- ಕಾಂಗ್ರೆಸ್ ಸಹ ಇರುವ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂ.ವಿ.ಎ) ಎಂಬ ಹೊಸ ರಂಗಕ್ಕೆ ಎನ್.ಸಿ.ಪಿ ನಾಯಕ ಶರದ್ ಪವಾರ್ ಆಹ್ವಾನಿಸಿದರು. ಈ ಸರಕಾರ ರಚನೆಯಾಗಿ ಜೂನ್ 2022 ವರೆಗೆ ಸುಮಾರು ಎರಡುವರೆ ವರ್ಷ ಕಾಲ ಸಾಕಷ್ಟು ಉತ್ತಮವಾಗಿಯೇ ಕೆಲಸ ಮಾಡಿತು. ವಿಶೇಷವಾಗಿ ಕೊರೊನಾ ಅವಧಿಯಲ್ಲಿ ಜನನಿಬಿಡ ಮುಂಬಯಿ ಮತ್ತಿತರ ಕಡೆ ಗಂಭೀರ ಸವಾಲುಗಳನ್ನು ನಿರ್ವಹಿಸಿತು,

ಬಿಜೆಪಿಯ ಡಬಲ್ ಆಪರೇಶನ್

ಒಂದು ರಾಜ್ಯ ಹೀಗೆ ಶಾಶ್ವತವಾಗಿ ತಮ್ಮ ಕೈ ಬಿಟ್ಟು ಹೋಗುವುದನ್ನು ಸಹಿಸಲಾಗದ ಬಿಜೆಪಿ ಸೇಡಿನ ಕ್ರಮ ಕೈಗೊಂಡಿತು. ಶಿವಸೇನಾ ಪಕ್ಷದ ಮೇಲೆ ‘ಆಪರೇಶನ್ ಕಮಲ’ ನಡೆಸಿತು. ಶಿವಸೇನಾದ ನಾಯಕ ಏಕನಾಥ್ ಶಿಂಧೆ ಯನ್ನು ಬುಟ್ಟಿಗೆ ಹಾಕಿಕೊಂಡು 56 ಶಾಸಕರಲ್ಲಿ 44 ಶಾಸಕರ ಮೇಲೆ ‘ಆಪರೇಶನ್’ ನಡೆಸಿತು. ಅವರನ್ನು ಬಿಜೆಪಿ ಆಡಳಿತದ ರಾಜ್ಯಗಳಾದ ಗುಜರಾತ್, ಆಸ್ಶಾಂ, ಗೋವಾಗಳಲ್ಲಿ ರೆಸಾರ್ಟು 7-ಸ್ಟಾರ್ ಹೊಟೆಲುಗಳಲ್ಲಿ ಕೂಡಿಟ್ಟು ವಿಧಾನಸಭೆಯಲ್ಲಿ ವಿಶ್ವಾಸ ಮತದ ದಿನವೇ ಮುಂಬಯಿಗೆ ಕರೆ ತರಲಾಯಿತು. ಈ ಸನ್ನಿವೇಶದಲ್ಲಿ ಎಂ.ವಿ.ಎ ಸರಕಾರ ಬಹುಮತ ಕಳೆದುಕೊಂಡು ಮುಖ್ಯಮಂತ್ರಿಯಾಗಿ ಉದ್ಭವ ಠಾಕ್ರೆ ರಾಜೀನಾಮೆ ಕೊಡಬೇಕಾಯಿತು. ಇದು ಮಹಾರಾಷ್ಟ್ರದ ಜನತೆಗೆ ಶಾಕ್ ನೀಡಿತು. ಜನತೆಯ ಆಕ್ರೋಶ ಮತ್ತು ಮುಂದಿನ ಚುನಾವಣೆಗೆ ಹೆದರಿ  ಕೆಲವರು ವಾಪಸು ಹೋಗಬಹುದು ಎಂಬ ಬೀತಿ ಬಿಜೆಪಿಯನ್ನು ಸದಾ ಕಾಡುತ್ತಿತ್ತು. ಮುಂದಿನ ಚುನಾವಣೆಯ ವರೆಗೆ ಅಧಿಕಾರದಲ್ಲಿರಬೇಕಾದರೆ ಇನ್ನಷ್ಟು ಸಂಖ್ಯೆ ಹೆಚ್ಚಿಸಿಕೊಳ್ಳಬೇಕೆಂದು ಎನ್.ಸಿ.ಪಿ ಯ ಮೇಲೆ ಎರಡನೆಯ ‘ಆಪರೇಶನ್’ ಮಾಡಿತು. ಅಜೀತ್ ಪವಾರ್ ಅವರನ್ನು ಬುಟ್ಟಿಗೆ ಹಾಕಿಕೊಂಡು ಅವರ ಬೆಂಬಲದಿಂದ 40 ಎನ್.ಸಿ.ಪಿ ಶಾಸಕರನ್ನು ಬಳಸಿ ಎನ್.ಸಿ.ಪಿ ಯನ್ನು ಒಡೆದರು. ಅಜೀತ್ ಪವಾರ್ ಅವರನ್ನು ಉಪಮುಖ್ಯಮಂತ್ರಿ ಮತ್ತು ಇತರ ಹಲವು ಶಾಸಕರನ್ನು ಮಂತ್ರಿ ಮಾಡಲಾಯಿತು. ಚುನಾವಣಾ ಕಮಿಶನ್ ಮೇಲಿನ ಪ್ರಭಾವ ಬಳಸಿ ಒಡೆದು ಹೋದ ಶಿವಸೇನಾ ಮತ್ತು ಎನ್.ಸಿ.ಪಿ ಬಣಗಳೇ ಮೂಲ ಪಕ್ಷವೆಂದು ಘೋಷಿಸಿ ಮೂಲ ಚುನಾವಣಾ ಚಿಹ್ನೆ ಅವರಿಗೆ ಲಭಿಸುವಂತೆ ಮೋದಿ-ಶಾ ನೋಡಿಕೊಂಡರು.

ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿವಸೇನಾ ಮತ್ತು ಎನ್.ಸಿ.ಪಿ ಶಾಸಕರನ್ನು ಪಕ್ಷ ಒಡೆಯುವಂತೆ ಮಾಡುವುದು ಹೇಗೆ ಸಾಧ್ಯವಾಯಿತು? ಬಿಜೆಪಿ ಮಾಮೂಲಿ ತಂತ್ರ ಬಳಸಿ ಅಂದರೆ ಕೋಟ್ಯಂತರ ರೂಪಾಯಿಗಳ ಹಣದಾಸೆ ಮತ್ತು/ಅಥವಾ ಸಿಬಿಐ-ಇಡಿ-ಐಟಿ ಯಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸಿ ಜೈಲಿಗೆ ಕಳಿಸುವ ಬೆದರಿಕೆಯಿಂದ ‘ಆಪರೇಶನ್’ ಮಾಡಿದ್ದು. 2014ರಿಂದ 25 ಇತರ ಪಕ್ಷಗಳ ಪ್ರಮುಖರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಅವರಲ್ಲಿ 12 ಅಂದರೆ ಸುಮಾರು ಅರ್ಧದಷ್ಟು ಮಹಾರಾಷ್ಟ್ರದವರು. ಇದರಿಂದಲೇ ಮಹಾರಾಷ್ಟ್ರದಲ್ಲಿ ಯಾವ ಪ್ರಮಾಣದ ‘ಆಪರೇಶನ್’ ನಡೆಯಿತು ಎಂದು ತಿಳಿಯುತ್ತದೆ.  ಇವರಲ್ಲಿ ಮಹಾರಾಷ್ಟ್ರದ ತಲಾ 4 ಶಿವಸೇನಾ, ಎನ್.ಸಿ.ಪಿ, ಕಾಂಗ್ರೆಸ್ ನ ನಾಯಕರು ಇದ್ದರು. ಈ ನಾಯಕರ ವಿರುದ್ಧ ಗುರುತರ ಭ್ರಷ್ಟಾಚಾರದ ಆಪಾದನೆಗಳಿದ್ದು ಅದನ್ನು ಬಳಸಿ ಅವರು ಜೈಲಿಗೆ ಹೋಗದಿರಬೇಕಾದರೆ ಇಷ್ಟು ಶಾಸಕರನ್ನು ತರಬೇಕೆಂದು ವಿಧಿಸಲಾಯಿತು. ಇವರಲ್ಲಿ ಪ್ರಮುಖರು, ಅಜೀತ್ ಪವಾರ್, ಪ್ರಫುಲ್ಲ ಪಟೇಲ್, ಛಗನ್ ಭುಜಬಲ್, ಅಶೋಕ ಚೌಹಾನ್. ಉದಾಹರಣೆಗೆ ಅಜೀತ್ ಪವಾರ್ ಅವರ ವಿರುದ್ಧ 70 ಸಾವಿರ ಕೋಟಿ ನೀರಾವರಿ ಹಗರಣ ಮತ್ತು 25,000 ಕೋಟಿ ರೂ ನ ಕೋಆಪರೇಟಿವ್ ಬ್ಯಾಂಕ್ ಹಗರಣದ ಆಪಾದನೆಗಳಿದ್ದವು. ಅದುವರೆಗೆ ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಪರಿವಾರವಾದದ ಪ್ರತೀಕವೆಂದೇ ಬಿಜೆಪಿ ಅಜೀತ್ ಪವಾರ್ ಅವರನ್ನು ತೀಕ್ಷ್ಣ ಟೀಕೆಗೆ ಗುರಿ ಮಾಡಿತ್ತು. ಆದರೆ ಬಿಜೆಪಿ ಜತೆ ಕೈಜೋಡಿಸಿದ ಕೂಡಲೇ ಈ ಹಗರಣದ ಕಲೆಗಳು ‘ಮೋದಿ-ಶಾ ವಾಶಿಂಗ್ ಪೌಡರ್’ ಹಾಕಿದ ಕೂಡಲೇ ಮಾಯವಾದವು. ಅದೇ ರೀತಿ ರಾಜಾ ಠಾಕ್ರೆ (ಎಂ.ಎನ್.ಎಸ್) ಅವರನ್ನು ಇಡಿ-ಸಿಬಿಐ ಬೆದರಿಕೆ ಬಳಸಿ ಲೋಕಸಬಾ ಚುನಾವಣೆಯಲ್ಲಿ ಯಾವುದೇ ಸೀಟು ಕೊಡದೆ ಸಹ ಎನ್.ಡಿ.ಎ ಗೆ ಬೇಷರತ್ ಬೆಂಬಲ ಕೊಡುವಂತೆ ಮಾಡಲಾಯಿತು.

ವಿರೋಧ ಪಕ್ಷಗಳನ್ನು ಅದರಲ್ಲೂ ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಬಿಜೆಪಿಯ ಕೀಳು ಮಟ್ಟದ ಕೃತ್ಯಗಳು ಈ ಲೋಕಸಭಾ ಚುನಾವಣೆಯಲ್ಲಿ ಬ್ಯೂಮರಾಂಗ್ ಆಗುವ ಲಕ್ಷಣಗಳು ಕಾಣುತ್ತಿವೆ. ಶಿವಸೇನಾ ಮತ್ತು ಎನ್.ಸಿ.ಪಿ ಯನ್ನು ಒಡೆಯಲಾಗಿದ್ದರೂ ಅವು ಕಾಂಗ್ರೆಸ್ ಜತೆ ಕಟ್ಟಿಕೊಂಡ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂ.ವಿ.ಎ)ಯ ಭಾಗವಾಗಿ ಚುನಾವಣೆಗಳನ್ನು ಎದುರಿಸುತ್ತಿವೆ. ಎಂ.ವಿ.ಎ ಜಂಟಿ ಚುನಾವಣಾ ಸಭೆಗಳಿಗೆ ಭಾರೀ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಭೀಕರ ಅನೈತಿಕ ಕ್ರಮಗಳಿಂದ  ಒಡೆಯಲಾದ ಶಿವಸೇನಾ ನಾಯಕ ಉದ್ಭವ ಠಾಕ್ರೆ ಮತ್ತು ಎನ್.ಸಿ.ಪಿ ಯ ಶರದ್ ಪವಾರ್ ಗೆ ಭಾರೀ  ಅನುಕಂಪದ ಅಲೆ ಇದಕ್ಕೆ ಒಂದು ಕಾರಣವೆಂದು ಹೇಳಲಾಗಿದೆ.

ಈರುಳ್ಳಿ, ಕಬ್ಬು ಮತ್ತಿತರ ರೈತರ ಆಕ್ರೋಶ

ಉದ್ಭವ ಠಾಕ್ರೆ ಮತ್ತು ಶರದ್ ಪವಾರ್ ಗೆ ಅನುಕಂಪದ ಅಲೆ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿಗೆ ಬಿಜೆಪಿ ಡಬ್ಬಲ್ ಇಂಜಿನ್ ಸರಕಾರದ ವಿರುದ್ಧ ತೀವ್ರ ಅತೃಪ್ತಿಯ ಅಲೆಯಿದೆ. ದೇಶದ ಇತರ ಭಾಗಗಳಂತೆ ಮಹಾರಾಷ್ಟ್ರದಲ್ಲಿ ಸಹ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆಏರಿಕೆ, ರೇಶನ್ ಇತ್ಯಾದಿ ಜನರ ನಿಜವಾದ ಸಮಸ್ಯೆಗಳು ಈ ಚುನಾವಣೆಗಳಲ್ಲಿ ಮುನ್ನೆಲೆಗೆ ಬಂದಿವೆ.

ಹಲವು ಹಣದ ಬೆಳೆಗಳ ತವರಾದ ಮಹಾರಾಷ್ಟ್ರದಲ್ಲಿ ಕೃಷಿ ಲಾಗುವಾಡುಗಳ ಬೆಲೆ ಏರಿಕೆ, ಸಾಲಬಾಧೆ, ಉತ್ಪಾದನಾ ವೆಚ್ಚ ತೂಗಿಸುವ ಕನಿಷ್ಠ ಬೆಂಬಲ ಬೆಲೆಯ ಅಲಭ್ಯತೆಯಿಂದ ಈ ರಾಜ್ಯ ರೈತರ ಆತ್ಮಹತ್ಯೆಯಲ್ಲಿ ಹಲವು ವರ್ಷಗಳಿಂದ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರೈತರ ಆತ್ಮಹತ್ಯೆಗಳ ಸಂಖ್ಯೆ 2023ರಲ್ಲಿ ಹಿಂದಿನ ವರ್ಷಕ್ಕಿಂತ ಏರಿಕೆ ಕಂಡಿದ್ದು 2527ಕ್ಕೆ (ಎನ್.ಸಿ.ಆರ್.ಬಿ ಅಂಕಿ-ಅಂಶ) ಏರಿದೆ. ಕಳೆದ ಕೆಲವು ವರ್ಷಗಳ ನೆರೆ, ಬರ ಪರಿಸ್ಥಿತಿಯನ್ನು ಇನ್ನಷ್ಟು ದುರ್ಭರಗೊಳಿಸಿದೆ.

ಈರುಳ್ಳಿ  ರಫ್ತಿನ ಮೇಲೆ ಡಿಸೆಂಬರ್ 2023ರಲ್ಲಿ ನಿಷೇಧ ಹೇರಿದ ಬಿಜೆಪಿ ಕೇಂದ್ರ ಸರಕಾರದ ಕ್ರಮದಿಂದಾಗಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್ ಗೆ 1200-1500ಕ್ಕೆ ಕುಸಿಯಿತು. ಇದು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆಯಿದ್ದು ರೈತರ ತೀವ್ರ ಆಕ್ರೋಶ, ಪ್ರತಿಭಟನೆ ಗಳಿಗೆ ಕಾರಣವಾಯಿತು. ಚುನಾವಣೆಯ ಮೇಲೆ ಇದರ ಪರಿಣಾಮದಿಂದ ಆತಂಕಿತರಾಗಿ ಮೇ ಮೊದಲ ವಾರದಲ್ಲಿ ರಫ್ತು ನಿಷೇಧ ತೆಗೆಯಲಾಯಿತು. ಇದರ ಪರಿಣಾಮವಾಗಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್ ಗೆ 2200-2500ಕ್ಕೆ ಏರಿತು. ಆದರೆ ನಿಷೇಧ ತೆಗೆಯುವ ಭಾಗವಾಗಿ ರಫ್ತಿಗೆ ವಿಧಿಸಿದ ಪ್ರತಿಟನ್ ಗೆ 550 ಡಾಲರಿನ ಕನಿಷ್ಠ ರಫ್ತು ಬೆಲೆ ಮತ್ತು ಶೇ.40 ರಫ್ತು ಸುಂಕದ ಷರತ್ತುಗಳ ಪರಿಣಾಮ ಅರ್ಥವಾಗುತ್ತಿದ್ದಂತೆ ಮತ್ತೆ 1200-1500ಕ್ಕೆ ಕುಸಿಯಿತು. ಈ ರೈತ-ವಿರೋಧಿ ಕ್ರಮಗಳಿಂದ ರೈತರು ಎಷ್ಟು ಆಕ್ರೋಶಿತರಾಗಿದ್ದರೆಂದರೆ ಮೇ 15ರಂದು ನಾಸಿಕ್ ಜಿಲ್ಲೆಯ ಡಿಂಡೋರಿ ಕ್ಷೇತ್ರದಲ್ಲಿ ಮೋದಿ ಅವರ ಬಹಿರಂಗ ಸಭೆಯಲ್ಲೇ ತೀವ್ರ ಪ್ರತಿಭಟನೆ ನಡೆಸಿದರು.

ಇದೇ ರೀತಿ ವಿದರ್ಭ, ಮರಾಠವಾಡಾದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಸೋಯಾ ಬೀನ್ ಗಳನ್ನು ಬೆಳೆಯುವ ರೈತರು ಸಹ ಅಷ್ಟೆನೂ ಲಾಭದಾಯಕವಲ್ಲದ ಕನಿಷ್ಠ ಬೆಂಬಲ ಬೆಲೆ ಸಿಗದೆ ಆಕ್ರೋಶಿತರಾಗಿದ್ದಾರೆ. ರಾಜ್ಯದ ಪಶ್ಚಿಮ ಭಾಗದ ಕಬ್ಬು ಮತ್ತು ಡೈರಿ ರೈತರು ಸಹ ಗಂಭಿರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲಾಭದಾಯಕವಲ್ಲದ ಕನಿಷ್ಠ ಬೆಂಬಲ ಬೆಲೆ ಸಿಗದಿರುವುದು ಮಾತ್ರವಲ್ಲ, ಸಕ್ಕರೆ ರಫ್ತು ಮತ್ತು ಇಥನೋಲ್ ಉತ್ಪಾದನೆಯಲ್ಲಿ (ಸಕ್ಕರೆ ಕಾರ್ಖಾನೆಗಳ ಉಪ-ಉತ್ಪನ್ನವಾದ)  ಕಾಕಂಬಿಯ ಬಳಕೆಯ ನಿಷೇಧ ಕಬ್ಬು ರೈತರನ್ನು ಇನ್ನಷ್ಟು ಕಂಗೆಡಿಸಿದೆ.

ಇದನ್ನು ಓದಿ : ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ನಿರುದ್ಯೋಗ ಮತ್ತು ಮೀಸಲಾತಿ

ಇತ್ತೀಚಿನ ಎರಡು ಸರಕಾರಿ ನೇಮಕಾತಿಗೆ ಬಂದ ಅರ್ಜಿಗಳ ಸಂಖ್ಯೆ ರಾಜ್ಯದಲ್ಲಿ ನಿರುದ್ಯೋಗದ ಭೀಕರ ಚಿತ್ರಣವನ್ನು ಕೊಡುತ್ತದೆ. ಮಾರ್ಚ್-ಎಪ್ರಿಲ್ ನಲ್ಲಿ ಪೋಲಿಸ್ ಪಡೆಯಲ್ಲಿ 17,471 ಹುದ್ದೆಗಳ ಭರ್ತಿಗೆ ಅರ್ಜಿ ಕರೆದಾಗ, 17.76 ಲಕ್ಷ ಅರ್ಜಿಗಳು ಬಂದವು. ಅವುಗಳಲ್ಲಿ ಶೇ.41 ಪದವೀಧರ, ಡಬ್ಬಲ್ ಪದವೀಧರರು ಇದ್ದರು.  ಅದೇ ರೀತಿ 1800 ಜೈಲು ಗಾರ್ಡಿನ ಹುದ್ದೆಗಳಿಗೆ 3.72 ಲಕ್ಷ ಅರ್ಜಿಗಳು ಬಂದವು. ರೇಗಾ ರಾಜ್ಯದಲ್ಲಿ ಎಂದೂ ಸರಿಯಾಗಿ ಜಾರಿಯಾಗದೆ ಗ್ರಾಮೀಣ ನಿರುದ್ಯೋಗದ ಅಲ್ಪ ಪರಿಹಾರಕ್ಕೂ ಸಹಾಯಕವಾಗಿಲ್ಲ.

ಇನ್ನೊಂದು ಬಿಜೆಪಿಯ ವಿರುದ್ಧ ಆಕ್ರೋಶಕ್ಕೆ ಕಾರಣವಾದ ವಿಷಯವೆಂದರೆ, ಮಹಾರಾಷ್ಟ್ರದಲ್ಲಿ ಸ್ಥಾಪಿತವಾಗಲು ಉದ್ದೇಶಿಸಿದ್ದ ಹಲವು ಸಾರ್ವಜನಿಕ-ಖಾಸಗಿ ಕೈಗಾರಿಕೆಗಳು, ಪ್ರಾಜೆಕ್ಟುಗಳನ್ನು ಮೋದಿ-ಶಾ ಪ್ರಭಾವದಿಂದ ಗುಜರಾತಿಗೆ ವರ್ಗಾಯಿಸಲಾಯಿತು.

ಕೃಷಿ ಬಿಕ್ಕಟ್ಟು ಮತ್ತು ಭೀಕರ ನಿರುದ್ಯೋಗದ ಈ ಪರಿಸ್ಥಿತಿಯಿಂದಾಗಿ ತೀವ್ರ ಸಾಮಾಜಿಕ ಅಶಾಂತಿ ಉಂಟಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಹಕ್ಕೊತ್ತಾಯದ ರೂಪ ಪಡೆದಿದೆ. ಕೃಷಿ ಬಿಕ್ಕಟ್ಟು ಮತ್ತು ಭೀಕರ ನಿರುದ್ಯೋಗ ರಾಜ್ಯದ ಎಲ್ಲ ಸಮುದಾಯಗಳನ್ನು ಗಾಢವಾಗಿ ತಟ್ಟಿದ್ದು, ರಾಜ್ಯದಲ್ಲಿ ಪ್ರಬಲವೂ ಗಮನಾರ್ಹ (ಶೇ.28ರಷ್ಟು)  ಪ್ರಮಾಣದಲ್ಲಿರುವ ಮರಾಠಾ ಸಮುದಾಯವನ್ನೂ ಇದು ಬಿಟ್ಟಿಲ್ಲ. ಈ ಸಮುದಾಯದ ಮೇಲ್ಪದರ ಸಾಮಾಜಿಕ ಆರ್ಥಿಕ ರಾಜಕೀಯವಾಗಿ ಪ್ರಬಲವಾಗಿದ್ದರೂ, ಕೆಳಪದರಗಳ ಪರಿಸ್ಥಿತಿ ಸಾಕಷ್ಟು ಕೆಟ್ಟದಿದೆ.  ಮರಾಠಾ ಸಮುದಾಯದ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಕುರಿತು ನ್ಯಾಯಮೂರ್ತಿ ಸುಶೀಲ್ ಶುಕ್ರೆ ಕಮಿಶನ್ 2024ರಲ್ಲಿ ವರದಿ ಸಲ್ಲಿಸಿದೆ. ಹಿಂದೆ ನ್ಯಾಯಮೂರ್ತಿ ಗಾಯಕವಾಡ್ ಕಮಿಶನ್ 2018ರಲ್ಲಿ ಸಲ್ಲಿಸಿದ ವರದಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ.

ಇದರ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶೇ.28ರಷ್ಟಿರುವ ಮರಾಠಾ ಸಮುದಾಯದ ಸುಮಾರು ಶೇ.45 ಜನ ಕೂಲಿ ಮಾಡಿ ಬದುಕುತ್ತಿದ್ದಾರೆ. ಬಾಲ್ಯವಿವಾಹ ಶೇ.0.32 ನಿಂದ ಶೇ. 13.7 ಕ್ಕೇರಿದೆ. ಸರಕಾರಿ ಉದ್ಯೋಗಗಳಲ್ಲಿ ಪ್ರಮಾಣ ಶೇ. 14.6ರಿಂದ ಶೇ.9 ಕ್ಕೆ ಇಳಿದಿದೆ. ಭೂಹೀನರ ಪ್ರಮಾಣ ಶೇ.8ರಿಂದ ಶೇ.31.2 ಕ್ಕೇರಿದೆ. ಆತ್ಮಹತ್ಯೆಗಳಲ್ಲಿ ಪ್ರಮಾಣ ಶೇ.80.3 ರಿಂದ ಶೇ.94.1 ಕ್ಕೇರಿದೆ. ಇತ್ತೀಚಿನ ಅವಧಿಯಲ್ಲಿ ಮನೋಜ್-ಜಾರಂಗೆ ಪಾಟೀಲ್ ನೇತೃತ್ವದಲ್ಲಿ ಒಬಿಸಿ ಕೋಟಾದಿಂದ ಮರಾಠಾ ಸಮುದಾಯಕ್ಕೆ ಶೇ. 10 ಮೀಸಲಾತಿ ಕೊಡುವಂತೆ ದೀರ್ಘ ಪಾದಯಾತ್ರೆ, ಶಾಸಕರ ಭವನಕ್ಕೆ ಲಗ್ಗೆ  ಇತ್ಯಾದಿ ಭಾರೀ ಚಳುವಳಿ ಹೂಡಿತು.

ಇದಕ್ಕೆ ಮಣಿದು ಬಿಜೆಪಿ ಸರಕಾರ ಮರಾಠಾ ಸಮುದಾಯಕ್ಕೆ ಶೇ.10 ಪ್ರತ್ಯೇಕ ಮೀಸಲಾತಿಗೆ ನಿರ್ಧರಿಸಿತು. ಇದು ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10 ಸೇರಿದಂತೆ ಶೇ. 62 ಇರುವ ಒಟ್ಟು ಶೇ. 62 ಮೀಸಲಾತಿಗೆ ಹೆಚ್ಚುವರಿಯಾಗಿರುವಂಥದ್ದು. ಇದನ್ನು ಸುಪ್ರೀಂ ಕೋರ್ಟು ವಜಾ ಮಾಢುವ ಸಾಧ್ಯತೆ ಹೆಚ್ಚಾಗಿರುವುದರಿಂದ ಒಬಿಸಿ ಮೀಸಲಾತಿಯ ಪಾಲನ್ನು ಕೊಡಬೇಕೆಂದು ಮನೋಜ್-ಜಾರಂಗೆ ಪಾಟೀಲ್ ಒತ್ತಾಯಿಸುತ್ತಿದ್ದಾರೆ.  ಇದನ್ನು ಇತರ ಒಬಿಸಿ ಸಮುದಾಯಗಳು ಬಲವಾಗಿ ವಿರೋಧಿಸುತ್ತಿವೆ. ಇದು ಸಾಮಾಜಿಕ ವಿಭಜನೆಗೆ ಕಾರಣವಾಗಿದ್ದು ಇದರ ರಾಜಕೀಯ ಪರಿಣಾಮವೂ ಖಂಡಿತ ಲೋಕಸಭಾ ಚುನಾವಣೆಗಳ ಮೇಲೆ ಆಗುತ್ತದೆ.

ಶಿಕ್ಷಣ, ಆರೋಗ್ಯ, ರೇಶನ್

ಶಿಕ್ಷಣ ಕ್ಷೇತ್ರದಲ್ಲೂ ಬಿಜೆಪಿ ಹಲವು ಜನ-ವಿರೋಧಿ ಕ್ರಮಗಳನ್ನು ಕೈಗೊಂಡಿದೆ. ಸರಕಾರಿ ಶಾಲೆಯ ಒಂದು ಕಿಮಿ ಒಳಗೆ ಶಾಲೆಯಿದ್ದರೆ, ಖಾಸಗಿ ಶಾಲೆಗಳು ಆರ್.ಟಿ.ಇ ಕಾನೂನು ಪ್ರಕಾರ ಕೊಡಬೇಕಾದ ಶೇ. 25 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೀಟುಗಳನ್ನು ಕೊಡಬೇಕಾಗಿಲ್ಲವೆಂಬ ತಿದ್ದುಪಡಿ ಇವುಗಳಲ್ಲಿ ಒಂದು. ಇದನ್ನು ಹೈ ಕೋರ್ಟು ರದ್ದು ಮಾಡಿದರೂ ಈ ಕ್ರಮದ ವಿರುದ್ಧ ಆಕ್ರೋಶ ಮುಂದುವರೆದಿದೆ. ಇದಲ್ಲದೆ ನೂರಾರು ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ.

ರಾಜ್ಯದ ಅಪೌಷ್ಟಿಕತೆ, ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಲು ನಿರಾಕರಿಸಿ ಅವರ ಚಳುವಳಿಯನ್ನು ದಮನ ಮಾಡಿದ್ದರ ವಿರುದ್ಧ ಸರಕಾರದ ಕ್ರಮಗಳ ವಿರುದ್ಧವೂ ತೀವ್ರ ಆಕ್ರೋಶವಿದೆ. ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಉತ್ತಮ ಪಡಿಸುವಲ್ಲಿ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಐದು ಕೆಜಿ ಉಚಿತ ರೇಶನ್ ಕುರಿತು ಕೊಚ್ಚಿಕೊಳ್ಳುವ ಬಿಜೆಪಿ ಸರಕಾರ ಈ ವ್ಯವಸ್ಥೆಯನ್ನು ಸಹ ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಅಗ್ಗದ ಬೆಲೆಯ ರೇಶನ್ ಕಡಿತ ಮಾಡಿದೆ. ಹೊಸ ರೇಶನ್ ಕಾರ್ಡುಗಳನ್ನು ಕೊಡುತ್ತಿಲ್ಲ. ಸಾವಿರಾರು ಇರುವ ರೇಶನ್ ಕಾರ್ಡು್ಗಳನ್ನು ಬೋಗಸ್ ಎನ್ನುವ ನೆಪದಲ್ಲಿ ರದ್ದು ಮಾಡುತ್ತಿದೆ.

ಹೀಗೆ ಹಲವು ರಂಗಗಳಲ್ಲಿ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕ್ರಮಗಳು, ಅಕ್ರಮಗಳ ವಿರುದ್ಧ ಜನತೆಗೆ ತೀವ್ರ ಆಕ್ರೋಶವುಂಟಾಗಿದೆ. ಇದರ ರಾಜಕೀಯ ಪರಿಣಾಮ ಈ ಚುನಾವಣೆಯ ಫಲಿತಾಂಶಗಳಲ್ಲಿ ಖಂಡಿತ ಕಾಣಲಿದೆ.

2019ರ ಫಲಿತಾಂಶ ಮತ್ತು 2024ರ ಟ್ರೆಂಡ್

ಕಳೆದ 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಶಿವಸೇನಾದ ಎನ್.ಡಿ.ಎ ಕೂಟ 48 ಸೀಟುಗಳಲ್ಲಿ 41 ಸೀಟು ಹಾಗೂ 51.4% ಮತ ಪಡೆಯುವ ಮೂಲಕ ತನ್ನ ಪ್ರಾಬಲ್ಯ ಮೆರೆದಿತ್ತು. ಆಗ ದೇಶದ ಇತರ ರಾಜ್ಯಗಳಲ್ಲಿದ್ದಂತೆ ಮಹಾರಾಷ್ಟ್ರದಲ್ಲೂ ಪುಲ್ವಾಮಾ ಭಯೋತ್ಪಾದಕ ಕೃತ್ಯ ಮತ್ತು ಬಾಲಕೋಟ್ ಪ್ರತಿದಾಳಿಯ “ಉಗ್ರ ರಾಷ್ಟ್ರೀಯವಾದಿ’ ಅಲೆ ತೀವ್ರ ಪರಿಣಾಮ ಬೀರಿತ್ತು. ಮಹಾರಾಷ್ಟ್ರದಲ್ಲಿ ಇನ್ನೊಂದು ಅಂಶ ಎನ್.ಡಿ.ಎ ಕೂಟದ ಭಾರೀ ಗೆಲುವಿಗೆ ಕಾರಣವಾಗಿತ್ತು. ಆ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ನಾಯಕತ್ವದ ‘ವಂಚಿತ ಬಹುಜನ ಅಘಾಢಿ’ (ವಿ.ಬಿ.ಎ)  ಮತ್ತು ಒವೈಸಿ ಅವರ ಎ.ಐ.ಎಂ.ಐ.ಎಂ ಪಕ್ಷಗಳ ಕೂಟ ಎಲ್ಲ 48 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಎ.ಐ.ಎಂ.ಐ.ಎಂ ನ 1 ಸೀಟು ಬಿಟ್ಟರೆ ಯಾವ ಸೀಟು ಗಳಿಸದಿದ್ದರೂ 7.7% ಮತ ಗಳಿಸಿತ್ತು. ವಿ.ಬಿ.ಎ+ಎಐಎಂ.ಐ.ಎಂ ಕೂಟದ ಸ್ಪರ್ಧೆ ಕನಿಷ್ಟ 10 ಸೀಟುಗಳಲ್ಲಿ ಎನ್.ಡಿ.ಎ ಗೆಲುವಿಗೆ ಕಾರಣವಾಗಿತ್ತು. 2019 ಮತ್ತು ಹಿಂದಿನ  ಪಕ್ಷವಾರು ಸೀಟು ಮತ್ತು ಮತಪ್ರಮಾಣದ ವಿವರಗಳಿಗೆ ಕೋಷ್ಟಕ 1 ನೋಡಿ.

 

2024ರ ಸ್ಪರ್ಧೆ ಮತ್ತು ಟ್ರೆಂಡ್

ಈ ಬಾರಿ ಎರಡೂ ಕೂಟಗಳು ಎಲ್ಲ ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ. ಎಂ.ವಿ.ಎ ಕೂಟ ಎಪ್ರಿಲ್ 9 ರಂದೇ ತನ್ನ ಪತ್ರಿಕಾ ಗೋಷ್ಠಿಯಲ್ಲಿ ಸೀಟು ಹಂಚಿಕೆ ಘೋಷಿಸಿತು. ಶಿವಸೇನಾ (ಉದ್ಭವ ಠಾಕ್ರೆ ಬಣ) 21, ಕಾಂಗ್ರೆಸ್ 17 ಮತ್ತು ಎನ್.ಸಿ.ಪಿ (ಶರದ್ ಪವಾರ್ ಬಣ) 10 ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ. ಎನ್.ಡಿ.ಎ ಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟಾಗಿತ್ತು. ಮೂರು ವಾರಗಳ ನಂತರ ಅದೂ ಬರಿಯ ಪತ್ರಿಕಾ ಹೇಳಿಕೆಯ ಮೂಲಕ ಸೀಟು ಹಂಚಿಕೆ ಘೋಷಿಸಲಾಯಿತು. ಬಿಜೆಪಿ 28, ಶಿವಸೇನಾ (ಶಿಂದೆ) 15, ಮತ್ತು ಎನ್.ಸಿ.ಪಿ (ಅಜಿತ್ ಪವಾರ್ ಬಣ) 10 ಸೀಟುಗಳ್ಲಲಿ ಸ್ಪರ್ಧೆ ಘೋಷಿಸಲಾಯಿತು. ವಿ.ಬಿ.ಎ 38 ಸೀಟುಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.

ಬಿಜೆಪಿ ತನ್ನ ವಿವಿಧ ಸ್ಕೀಮುಗಳ ಲಾಭಾರ್ಥಿಗಳನ್ನು ಸಂಪರ್ಕಿಸಿ ವ್ಯವಸ್ಥಿತವಾಗಿ ಪ್ರಚಾರ ಮಾಡಿತ್ತು. ಇದಲ್ಲದೆ ರಾಮಮಂದಿರ, ಸಿಎಎ, ಏಕರೂಪ ನಾಗರಿಕ ಸಂಹಿತೆ, ಕಲಮು 370 ಮುಂತಾದ ಅದರ ಹಿಂದುತ್ವ ವಿಷಯಗಳ ಪ್ರಚಾರ ನಡೆಸಿತ್ತು. ರಾಜ್ಯ ಸರಕಾರ ಅದರ ಕೈಯಲ್ಲಿ ಇದ್ದಿದ್ದು ಇವಕ್ಕೆಲ್ಲ ಸಹಾಯಕವಾಯಿತು. ಶಿವಸೇನಾ (ಶಿಂದೆ) 15, ಮತ್ತು ಎನ್.ಸಿ.ಪಿ (ಅಜಿತ್ ಪವಾರ್ ಬಣ) ಗಳಿಗೆ ಮೂಲ ಪಕ್ಷದ ಚಿಹ್ನೆ ದೊರಕಿದ್ದು ಎನ್.ಡಿ.ಎ ಗೆ ಸಹಾಯಕವಾಗಿಯೇ ಇತ್ತು. ಬಿಜೆಪಿ ಸ್ಟಾರ್ ಪ್ರಚಾರಕರ ಸಭೆಗಳು, ರೋಡ್ ಶೋ ಗಳು, ಕಾರ್ಪೊರೆಟ್ ಮಾಧ್ಯಮದ ಪ್ರಚಾರವೆಲ್ಲ ಎನ್.ಡಿ.ಎ ಪರವಾಗಿಯೇಯಿತ್ತು.

ಎನ್,ಡಿ.ಎ ಗೆ ಗಮನಾರ್ಹ ನಷ್ಟ ಖಚಿತ

ಈಗಾಗಲೇ ಹೇಳಿದ ಹಾಗೆ ಬಿಜೆಪಿ-ಎನ್.ಡಿ.ಎ ವಿರುದ್ಧ ಆಡಳಿತ-ವಿರೋಧಿ ಅತೃಪ್ತಿ ಆಕ್ರೋಶ ಅಲ್ಲದೆ, ಉದ್ಭವ ಠಾಕ್ರೆ, ಸರದ್ ಪವಾರ್ ಅವರಿಗೆ ಅನುಕಂಪದ ಅಲೆಯಂತೂ ಎಂ.ವಿ.ಎ ಪರವಾಗಿದೆ. ಇದು ಮೂಲ ಚಿಹ್ನೆ ಅವರಿಗೆ ದೊರೆಯದೇ ಇರುವುದನ್ನೂ ಮೀರಿ ಮುಖ್ಯ ಅಂಶವಾಗಬಹುದು.  ಅಲ್ಲದೆ ಜಾತಿ ಸಮೀಕರಣಗಳೂ ಅದಕ್ಕೆ ವಿರುದ್ಧಾಗಿರುವ ಲಕ್ಷಣಗಳಿವೆ. ಸಾಮಾನ್ಯವಾಗಿ ಬಿಜೆಪಿ-ಎನ್.ಡಿ.ಎ ಪರವಾಗಿರುವ ಮರಾಠಾ ಸಮುದಾಯದ ದೊಡ್ಡ ವಿಭಾಗ ಅದರ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ಕಳೆದ ಬಾರಿ ವಿ.ಬಿ.ಎ ಕೂಟದ ಪ್ರತಿಕೂಲ ಪರಿಣಾಮ ಈ ಬಾರಿ ಇರಲಿಕ್ಕಿಲ್ಲ. ವಿಬಿಎ ಮತ್ತು ಎ.ಐ.ಎಂ.ಐ.ಎಂ ಸೀಟು ಹೊಂದಾಣಿಕೆ ಈ ಬಾರಿ ಇಲ್ಲ. ಕಳೆದ ಬಾರಿ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಂ ಮತ್ತು ನವಬೌದ್ಧ ದಲಿತರ ಮತಗಳನ್ನು ಒಡೆದದ್ದು ಈ ಬಾರಿ ಪುನರಾವರ್ತನೆಯಾಗುವ ಸಾಧ್ಯತೆ ಕಡಿಮೆ. ವಿಬಿಎ ಯ ಅವಕಾಶವಾದಿ ರಾಜಕಾರಣವನ್ನು ದಲಿತ ಗುಂಪುಗಳೇ ಪ್ರಶ್ನಿಸಿವೆ. 36 ದಲಿತ ಗುಂಪುಗಳು, ದಲಿತ ಪ್ಯಾಂಥರ್ ಗುಂಪುಗಳು, ರಿಪಬ್ಲಿಕನ್ ಪಕ್ಷಗಳು ಒಟ್ಟಾಗಿ ವಿಬಿಎ ರಾಜಕಾರಣವನ್ನು ಟೀಕಿಸಿವೆ. ಈ ಎಲ್ಲಾ ಗುಂಫುಗಳು ಸೇರಿ ಪ್ರಗತಿಪರ ರಿಪಬ್ಲಿಕನ್ ಪಕ್ಷ ರಚಿಸಿ ಈ ಬಾರಿ ಎಂ.ವಿ.ಎ ಕೂಟವನ್ನು ಎಲ್ಲ ಸೀಟುಗಳಲ್ಲಿ ಬೆಂಬಲಿಸಲು ನಿರ್ಧರಿಸಿವೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಉಳಿಸಿಕೊಳ್ಳುವುದು ಮನುವಾದಿಗಳನ್ನು ಸೋಲಿಸುವುದು ಆದ್ಯತೆಯೆಂದು ದಲಿತ ಶೋಷಿತ ಸಮುದಾಯಗಳಿಗೆ ಮನವಿ ಮಾಡಿವೆ. ವಿ,ಬಿ.ಎ ಗೆ ಮತ  ಬಿಜೆಪಿ ಗೆ ಅನುಕೂಲಕರವಾಗುತ್ತದೆಯೆಂದು ವಿ,ಬಿ.ಎ ಬೆಂಬಲಿಗರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಹೀಗಾಗಿ ವಿ.ಬಿ.ಎ ಸ್ಪರ್ಧೆ ಕಳೆದ ಬಾರಿಯಷ್ಟು ಪ್ರತಿಕೂಲವಾಲಿಕ್ಕಿಲ್ಲ.

ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಕೂಟದ ರಚನೆ ಮತ್ತು ರಾಷ್ಟ್ರ ಮಟ್ಟದಲ್ಲೂ ತೀವ್ರ ಬದಲಾವಣೆಯ ಸಾಧ್ಯತೆ ಹೊಸ ಉತ್ಸಾಹ ತಂದಿದೆ. ಕಾರ್ಪೊರೆಟ್ ‘ಗೋದಿ ಮೀಡಿಯಾ’ಗಳನ್ನು ಬಯಲು ಮಾಡುವ, ನಿಜ ಪರಿಸ್ಥಿತಿಯ ಕುರಿತು ಮಾಹಿತಿ ನೀಡುವ, ಬಿಜೆಪಿ ಆಡಳಿತದ ಕಟು ಟೀಕೆ ಮತ್ತು ನೈಜ ವಿಷಯಗಳ ವಿಶ್ಲೇಷಣೆ ಮಾಡುವ ಹೊಸ ಮರಾಠಿ ಸಾಮಾಜಿಕ ಮಾಧ್ಯಮಗಳ ಉದಯ ಹಾಗೂ ಬೆಳವಣಿಗೆ ಇಂಡಿಯಾ ಕೂಟಕ್ಕೆ ಅನುಕೂಲಕರವಾಗಿದೆ. ‘ನಿರ್ಭಯ ಬನೋ ಆಂದೋಲನ’, ‘ನಿರ್ಧಾರ್ ಮಹಾರಾಷ್ಟ್ರಾಚಾ’ ಮುಂತಾದ ಹಲವು ನಾಗರಿಕ ಸಮಾಜದ ಗುಂಪುಗಳೂ ಬಿಜೆಪಿ-ಎನ್.ಡಿ.ಎ ವಿರುದ್ಧ ಸ್ವತಂತ್ರವಾದ ಬಿರುಸಿನ ಪ್ರಚಾರ ಕೈಗೊಂಡಿದ್ದು ಇದೂ ಎಂವಿ.ಎ ಕೂಟಕ್ಕೆ ಅನುಕೂಲಕರವಾಗಿದೆ. ದೇಶದ ಇತರ ಭಾಗಗಳಂತೆ  ಮಹಾರಾಷ್ಟ್ರದಲ್ಲೂ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು “ಆಮದಾದ ಭ್ರಷ್ಟ ಸ್ಪರ್ಧಿ”ಗಳು ಮತ್ತು “ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರ ನಿರ್ಲಕ್ಷ” ದಿಂದ ಬೇಸತ್ತು ಎಂದಿನ ಬಿರುಸಿನ ಕೆಲಸ ಮಾಡಿಲ್ಲ. ಹಾಗಾಗಿ ಬಿಜೆಪಿ ಪ್ರಬಲವಾದ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗಿದೆಯೆಂಬ ವರದಿಗಳಿವೆ.

ಇವೆಲ್ಲ ಸೇರಿ ಬಿಜೆಪಿ ಹಿಂದಿನ ಬಾರಿಗಿಂತ ಹಲವು ಸೀಟುಗಳನ್ನು ಕಳೆದುಕೊಳ್ಳುವುದು ಖಚಿತ. ಎನ್.ಡಿ.ಎ 24 ಸೀಟುಗಳಿಗೆ ಕುಸಿದರೂ ಆಶ್ವರ್ಯ ಪಡಬೇಕಾಗಿಲ್ಲವೆಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನು ನೋಡಿ : ದೇವೇಗೌಡ್ರೆ ಜನ ನಿಮಗೆ ಅಧಿಕಾರ ಕೊಟ್ರು – ನೀವು ವಿಕೃತಿ ಕಾಮಿಯನ್ನು ಕೊಟ್ರಿ. ನಿಮಗೆ ನಾವು ತಕ್ಕ ಪಾಠ ಕಲಿಸುತ್ತೇವೆ.

 

Donate Janashakthi Media

Leave a Reply

Your email address will not be published. Required fields are marked *