ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ?

ರಾಷ್ಟ್ರ ರಾಜಧಾನಿ ಮಾತ್ರವಲ್ಲದೆ ಬಿಜೆಪಿಯ ಭವಿಷ್ಯದ ಮೇಲೂ ತೀವ್ರ ಪ್ರಭಾವ ಬೀರುವ ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಫೆಬ್ರವರಿ 5 ರಂದು ನಡೆಯುವ ಚುನಾವಣೆ ಮತ್ತು 8 ರ ಫಲಿತಾಂಶವನ್ನು ಇಡೀ ದೇಶವು ಕುತೂಹಲದಿಂದ ಎದುರು ನೋಡುತ್ತಿದೆ. ಒಂದು ಹಂತದಲ್ಲಿ ರಾಷ್ಟ್ರೀಯ ಪರ್ಯಾಯ ಎಂಬಂತೆ ಪ್ರಚಾರವಾಗಿ, ಅಲ್ಪಾವಧಿಯಲ್ಲಿಯೇ ಆಡಳಿತ ಪಕ್ಷವಾಗಿ ಪಂಜಾಬ್‌ ಗೆ ವಿಸ್ತರಿಸಿದ ಮೊದಲ ಪ್ರಾದೇಶಿಕ ಪಕ್ಷ ಎಎಪಿ, ಈಗ ದಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೋ ಅಥವಾ ಪಂಜಾಬ್ ಗೆ ಸೀಮಿತಗೊಳ್ಳುತ್ತದೆಯೋ? ‘ಬಿಜೆಪಿ ಹಠಾವೋ, ದೆಹಲಿ ಬಚಾವೋ’ ಎಂಬ ವಿರೋಧ ಪಕ್ಷಗಳ ಘೋಷಣೆ ಹಿನ್ನೆಲೆಯಲ್ಲಿ ತೀರ್ಪು ಏನಾಗುತ್ತದೆ ಎಂಬ ಕುತೂಹಲ ಉಂಟಾಗಿದೆ.

-ಸಿ.ಸಿದ್ದಯ್ಯ

ದೆಹಲಿಯು ರಾಜಧಾನಿಯಷ್ಟೇ ಅಲ್ಲದೆ, ವಿವಿಧ ರಾಜಕೀಯ ಶಕ್ತಿಗಳ ನಡುವಿನ ಹೋರಾಟದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ದೀರ್ಘಕಾಲದವರೆಗೆ ಬಿಜೆಪಿಯ ನಿಯಂತ್ರಣದಲ್ಲಿದ್ದು, ನಂತರ ಕಾಂಗ್ರೆಸ್‌ನಿಂದ ಹ್ಯಾಟ್ರಿಕ್ ಸಾಧಿಸಿ, ಆ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಭದ್ರಕೋಟೆಯಾಗಿ ಕಾಣಿಸಿಕೊಂಡ ದೆಹಲಿಯ ವಿಧಾನಸಭೆಯ ಪಯಣ ಈಗ ಹೇಗಿದೆ? ಸಿಬಿಐ, ಇಡಿ ಪ್ರಕರಣಗಳಲ್ಲಿ ಸತತ ಸವಾಲುಗಳನ್ನು ಎದುರಿಸಿ, ತಮ್ಮ ಹುದ್ದೆಗೂ ರಾಜೀನಾಮೆ ನೀಡಿದ ಅರವಿಂದ್ ಕೇಜ್ರಿವಾಲ್ ಮತ್ತು ಇತರ ನಾಯಕರ ಪ್ರಭಾವ ಈಗ ಹೇಗಿದೆ?

ಒಂದು ಹಂತದಲ್ಲಿ ರಾಷ್ಟ್ರೀಯ ಪರ್ಯಾಯ ಎಂಬಂತೆ ಪ್ರಚಾರವಾಗಿ, ಸ್ಥಳೀಯವಾಗಿ ಮಾತ್ರವಲ್ಲದೆ ದೇಶದ ರಾಜಕೀಯದಲ್ಲಿ ಹೊಸ ತಿರುವು ಪಡೆದು, ಅಲ್ಪಾವಧಿಯಲ್ಲಿಯೇ ಆಡಳಿತ ಪಕ್ಷವಾಗಿ ಪಂಜಾಬ್‌ ಗೆ ವಿಸ್ತರಿಸಿದ ಮೊದಲ ಪ್ರಾದೇಶಿಕ ಪಕ್ಷ ಎಎಪಿ, ಈಗ ದೆಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೋ ಅಥವಾ ಪಂಜಾಬ್ ಗೆ ಸೀಮಿತಗೊಳ್ಳುತ್ತದೆಯೋ? ಕೇಂದ್ರಾಡಳಿತ ಪ್ರದೇಶವಾಗಿ ಉಳಿದುಕೊಂಡೇ ರಾಜ್ಯದ ಸ್ಥಾನಮಾನದ ವಿಶೇಷ ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಮೋದಿ ಸರ್ಕಾರದ ದಾಳಿಗಳಿಗೆ ಗುರಿಯಾಗುವ NCRD (ರಾಷ್ಟ್ರೀಯ ರಾಜಧಾನಿ ಪ್ರದೇಶ-ದೆಹಲಿ) ಖ್ಯಾತಿ ಉಳಿಯುತ್ತದೆಯೇ?

ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರ ಸಾಗರ ಭೇಟಿ-ಕಪ್ಪು ಬಾವುಟ ಪ್ರದರ್ಶಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ

ಮುನಿಸಿಪಲ್ ಕಾರ್ಪೊರೇಷನ್ ನಿಂದ ವಿಧಾನಸಭೆಯವರೆಗೆ ದೆಹಲಿ

1952 ರಲ್ಲಿ ರಚನೆಯಾದ ದೆಹಲಿ ವಿಧಾನಸಭೆಯು ಹಲವು ತಿರುವುಗಳನ್ನು ಕಂಡಿದೆ. 1956 ರಲ್ಲಿ ಇದನ್ನು ಕೇಂದ್ರಾಡಳಿತ ಪ್ರದೇಶವಾಗಿ ನೇರವಾಗಿ ರಾಷ್ಟ್ರಪತಿಗಳ ಆಳ್ವಿಕೆಯ ಅಡಿಯಲ್ಲಿ ಪರಿವರ್ತಿಸಲಾಯಿತು. ಸಚಿವ ಸಂಪುಟ ಮತ್ತು ಶಾಸಕಾಂಗವನ್ನು ರದ್ದುಪಡಿಸಿ ಅದನ್ನು ಮುನಿಸಿಪಲ್ ಕಾರ್ಪೊರೇಷನ್ ಆಗಿ ಮಾಡಲಾಯಿತು. ಹತ್ತು ವರ್ಷಗಳ ನಂತರ 1966 ರಲ್ಲಿ, ದೆಹಲಿಯನ್ನು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲದ ಮೆಟ್ರೋ ಪಾಲಿಟನ್ ಕೌನ್ಸಿಲ್ ಆಗಿ ಪರಿವರ್ತಿಸಲಾಯಿತು. ಆ ಕೌನ್ಸಿಲ್  ಇರುವಷ್ಟು ಕಾಲವೂ ಆಗಿನ ಜನಸಂಘ, ಬಿಜೆಪಿ/ಆರ್‌ಎಸ್‌ಎಸ್ ಪ್ರಾಬಲ್ಯವೇ ನಡೆಯುತ್ತಿತ್ತು.

ವಾಜಪೇಯಿ, ರಾಜೇಶ್ ಖನ್ನಾ ಮತ್ತು ಸಿ.ಎಂ. ಸ್ಟೀಫನ್‌ ರಂತಹ ಮಹಾಮಹಿಮರು ಸ್ಪರ್ಧಿಸುತ್ತಿದ್ದರು.  1991 ರಲ್ಲಿ 69 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ  ಮತ್ತೆ ವಿಧಾನಸಭೆಯನ್ನು ತರಲಾಯಿತು ಮಾತ್ರವಲ್ಲದೆ, ಅದನ್ನು NCRD ಎಂದು ಘೋಷಿಸಲಾಯಿತು. 1993 ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಮದನ್ ಲಾಲ್ ಖುರಾನಾ, ನಂತರ ಸಾಹೇಬ್ ಸಿಂಗ್ ವರ್ಮಾ ಬಿಜೆಪಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದರು. ಖುರಾನಾ ಭ್ರಷ್ಟಾಚಾರ ಆರೋಪಗಳಲ್ಲಿ ಸಿಲುಕಿದ ನಂತರ ಬಂದ ವರ್ಮಾ ಅವರ ಮೇಲೂ ಟೀಕೆಗಳು ಬಂದಿದ್ದರಿಂದ, ಕೊನೆಯ ಉಪಾಯವಾಗಿ ಸುಷ್ಮಾ ಸ್ವರಾಜ್ ಅವರನ್ನು ಕೆಲವು ವಾರಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ ಕಾಂಗ್ರೆಸ್ ವರಿಷ್ಠೆ ಶೀಲಾ ದೀಕ್ಷಿತ್ ಅವರ ಎದುರು ಸ್ವರಾಜ್ ಅವರು ನಿಲ್ಲಲು ಸಾಧ್ಯವಾಗಲಿಲ್ಲ. ಶೀಲಾ ದೀಕ್ಷಿತ್ 1998 ರಿಂದ 2013 ರವರೆಗೆ ಆಡಳಿತ ನಡೆಸಿದರು.

ಎಎಪಿಯ ಮೊದಲ ಹೆಜ್ಜೆಗಳು

ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರವು ಸರಣಿ ಹಗರಣ ಪ್ರಕರಣಗಳಲ್ಲಿ ಸಿಲುಕಿಕೊಂಡಾಗ ಎಲ್ಲವೂ ತಲೆಕೆಳಗಾಯಿತು. ಆ ಸಮಯದಲ್ಲಿ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ಕೆಲಸ ಮಾಡಿದ ಅರವಿಂದ್ ಕೇಜ್ರಿವಾಲ್, ಇತರ ಕೆಲವು ಉನ್ನತ ಶಿಕ್ಷಣ ಪಡೆದ ನಾಯಕರು ಮತ್ತು ಮಾಜಿ ಅಧಿಕಾರಿಗಳೊಂದಿಗೆ ಎಎಪಿಯನ್ನು ಸ್ಥಾಪಿಸಿದರು. ಜನರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಭರವಸೆಗಳೊಂದಿಗೆ ಜನರ ಗಮನ ಸೆಳೆದರು.

2013 ರಲ್ಲಿ 28 ಸ್ಥಾನಗಳನ್ನು ಪಡೆಯುವ ಮೂಲಕ ಎಎಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 13 ಸ್ಥಾನಗಳಲ್ಲಿ ಗೆದ್ದಿತು. ಕಾಂಗ್ರೆಸ್ ತಡವಾಗಿ ಎಎಪಿಗೆ ಬೆಂಬಲ ಘೋಷಿಸಿದರೂ ಕೇಜ್ರಿವಾಲ್ 49 ದಿನಗಳಲ್ಲಿಯೇ ರಾಜೀನಾಮೆ ನೀಡಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದರೂ, 2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು. ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನ ಬರದಿದ್ದರೂ ಬಿಜೆಪಿ ಮೂರು ಸ್ಥಾನಗಳಿಗೆ ಸೀಮಿತವಾಯಿತು.

ಎಎಪಿ ಆಡಳಿತದಲ್ಲಿ ಕೆಲವು ನ್ಯೂನತೆಗಳು, ಅಸ್ಪಷ್ಟತೆಗಳಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ಗೆ ಪರ್ಯಾಯವಾಗಿ ಜನರ ಬೆಂಬಲದೊಂದಿಗೆ 2020 ರಲ್ಲಿ ಮತ್ತೆ ಗೆಲ್ಲಲು ಸಾಧ್ಯವಾಯಿತು. ಎಎಪಿ 62 ಸ್ಥಾನಗಳಿಗೆ ಸೀಮಿತವಾಗಿವಾಗಿ ಬಿಜೆಪಿ ತನ್ನ ಬಲವನ್ನು 3 ರಿಂದ  8 ಸ್ಥಾನಗಳಿಗೆ ಹೆಚ್ಚಿಸಿಕೊಂಡಿತು. ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಜನರ ಬೆಂಬಲ ಗಳಿಸಲು ಸಾಧ್ಯವಾಗಲಿಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ, ಅದಕ್ಕಿಂತ ಮುಖ್ಯವಾಗಿ ದೆಹಲಿಯನ್ನು ವಶಪಡಿಸಿಕೊಳ್ಳಲು ಪ್ರಧಾನಿ ಮೋದಿ ತಮ್ಮ ಬಳಿ ಇದ್ದ ಎಲ್ಲಾ ಅಸ್ತ್ರಗಳನ್ನು ಬಳಸಿದರು. ಇದಲ್ಲದೆ, 2022 ರಲ್ಲಿ ಪಂಜಾಬ್‌ ನಲ್ಲಿ ಎಎಪಿ ಅಧಿಕಾರಕ್ಕೆ ಬಂದಿರುವುದು ಬಿಜೆಪಿಯನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.

ಸಂವಿಧಾನಾತ್ಮಕ ಪ್ರಾತಿನಿಧ್ಯಕ್ಕೆ ಹಾನಿ

ಸಂವಿಧಾನದಡಿಯಲ್ಲಿ ದೆಹಲಿಯ ವಿಶೇಷ ಸ್ಥಾನಮಾನದ ಲಾಭವನ್ನು ಪಡೆದುಕೊಂಡು, ಬಿಜೆಪಿ ಆಡಳಿತದ ಒಕ್ಕೂಟ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಅವರ ಮೂಲಕ ಪ್ರತಿ ಹೆಜ್ಜೆಗೂ ಕಿರುಕುಳ ನೀಡುತ್ತಾ, ದೆಹಲಿಯ ಎಎಪಿ ಆಡಳಿತಕ್ಕೆ ಅಡ್ಡಿಪಡಿಸುತ್ತಾ ಬಂದಿದೆ. ಪೋಲೀಸ್ ಗಸ್ತುಗಳಿಂದ ಹಿಡಿದು ದಾಳಿಗಳವರೆಗೆ, ಹಣಕಾಸಿನಿಂದ ಹಿಡಿದು ಪ್ರಮುಖ ನೇಮಕಾತಿಗಳವರೆಗೆ ಎಲ್ಲವನ್ನೂ ಲೆಫ್ಟಿನೆಂಟ್ ಗವರ್ನರ್ ಮಾಡುತ್ತಿದ್ದರೆ, ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಸಹಾಯಕ ಸ್ಥಿತಿಯಲ್ಲಿ ಇರುವಂತೆ ಮಾಡಿದ್ದಾರೆ.

ಕೇಂದ್ರದ ಇಂತಹ ಧೋರಣೆಯ ವಿರುದ್ಧ ಎಎಪಿ ಸರ್ಕಾರ ಮೊಕದ್ದಮೆ ಹೂಡಿದಾಗ, ಸುಪ್ರೀಂ ಕೋರ್ಟ್ ಕೂಡಾ ಸಂವಿಧಾನದ ಪ್ರಕಾರ ಭದ್ರತೆ ಮತ್ತು ಪರಿಸರ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ ದೆಹಲಿ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದೆ ಎಂದು ತೀರ್ಪು ನೀಡಿತು. ಹಾಗಾಗಿ, ಕೇಂದ್ರ ಸರ್ಕಾರವು ‘ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಕಾಯ್ದೆ, 2023’ ರ ಮೂಲಕ ರಾಜಧಾನಿ ನಗರದ ಚುನಾಯಿತ ಸರ್ಕಾರದ ಮೇಲೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ ಗೆ ಅಧಿಕಾರವನ್ನು ನೀಡಲಾಯಿತು.

ಇದನ್ನೂ ಓದಿ: ವಿಟ್ಲ| ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತನಿಂದಲೇ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದು, ಕೇಜ್ರಿವಾಲ್ ಸೇರಿದಂತೆ ಹಲವರನ್ನು ಬಂಧಿಸಿತು. ದೇಶದ ಸಂಕೇತವಾಗಿ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಪ್ರಜೆಗಳಿಂದ ಕೂಡಿದ ದೆಹಲಿಯನ್ನು ತಮ್ಮ ಇಚ್ಛೆಯಂತೆ ಮತ್ತು ತಮ್ಮ ರಾಜಕೀಯ ಅಗತ್ಯಗಳಿಗೆ ಅನುಗುಣವಾಗಿ ಆಳಬೇಕು ಎಂದುಕೊಂಡಿರುವುದು ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಒಂದು ನಿದರ್ಶನವಾಗಿದೆ. ಮದ್ಯದ ಹಗರಣದ ಆಧಾರದ ಮೇಲೆ ಎಎಪಿ ನಾಯಕತ್ವ ಕೂಡ ಒಂದು ಹಂತದಲ್ಲಿ ಮೋದಿಯ ಬಗ್ಗೆ ಮೃದುವಾಗಿತ್ತು.

ಕಾಶ್ಮೀರದ 370 ನೇ ವಿಧಿ ರದ್ದುಪಡಿಸುವುದನ್ನು ಬೆಂಬಲಿಸುವಂತಹ ಕೆಲಸಗಳನ್ನು ಎಎಪಿ ಮಾಡಿದೆ. ‘ಇಂಡಿಯಾ’ ವೇದಿಕೆಯಲ್ಲಿ ಎಎಪಿ ಪಾಲುದಾರರಾಗಿದ್ದರೂ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಯಾವುದೇ ಇತರ ಪಾಲುದಾರರ ನಡುವೆ ಯಾವುದೇ ತಿಳುವಳಿಕೆ ಅಥವಾ ಹೊಂದಾಣಿಕೆ ನಡೆಯಲಿಲ್ಲ. ಈ ಸಮಯದಲ್ಲಿ, ಬಿಜೆಪಿಯನ್ನು ಸೋಲಿಸುವುದು ಮತ್ತು ದೆಹಲಿಯ ಸಾಂವಿಧಾನಿಕ ಸ್ಥಾನಮಾನದ ರಕ್ಷಣೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು, ಅದಕ್ಕೆ ಕಾರಣವಾದ ಬಿಜೆಪಿಯನ್ನು ಸೋಲಿಸುವುದು ನಿರ್ಣಾಯಕವಾಗಿದೆ. ಚುನಾವಣಾ ಪ್ರಚಾರವೂ ಅದಕ್ಕೆ ತಕ್ಕಂತೆ ನಡೆಯಬೇಕಿದೆ.

ಇಬ್ಬರ ನಡುವೆ ಮಾತ್ರ ಸ್ಪರ್ಧೆ ಇದೆಯೇ?

ಮೂರು ಪಕ್ಷಗಳ ನಡುವಿನ ಸ್ಪರ್ಧೆ ಎಂದು ಹೇಳಲಾಗುತ್ತಿದ್ದರೂ, ವಾಸ್ತವದಲ್ಲಿ ಪ್ರಮುಖ ಹೋರಾಟ ಬಿಜೆಪಿ ಮತ್ತು ಎಎಪಿ ನಡುವೆ ನಡೆಯುತ್ತದೆ ಎಂದು ರಾಜಕೀಯ ವೀಕ್ಷಕರು ಭಾವಿಸುತ್ತಿದ್ದಾರೆ. 2020 ರ ಚುನಾವಣೆಯಲ್ಲಿ, ಎಎಪಿ ಗೆ ಶೇಕಡಾ 53.57 ರಷ್ಟು, ಬಿಜೆಪಿ ಗೆ ಶೇಕಡಾ 38.5 ರಷ್ಟು ಮತಗಳು ಬಂದರೆ, ಕಾಂಗ್ರೆಸ್ ಗೆ ಕೇವಲ ಶೇಕಡಾ 4.26 ರಷ್ಟು ಮತಗಳು ಮಾತ್ರ ಬಂದವು.  ಬಿಜೆಪಿ ಎಲ್ಲಾ ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರೂ, ವಿಧಾನಸಭೆಯಲ್ಲಿ ಅದು ಗೆಲ್ಲುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಇಂಡಿಯಾ ವೇದಿಕೆಯಲ್ಲಿನ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಬಿಜೆಪಿಯ ಏಕಪಕ್ಷೀಯ ದಾಳಿಯಿಂದ ದೆಹಲಿಯ ಸಾಂವಿಧಾನಿಕ ಸ್ಥಾನವನ್ನು ರಕ್ಷಿಸಬೇಕು ಎಂಬದರ ಮೇಲೆ ಏಕಾಭಿಪ್ರಾಯವಿದೆ.

ಎಎಪಿ, ಕಾಂಗ್ರೆಸ್ ಪ್ರತ್ಯೇಕ ಸ್ಪರ್ಧೆ

ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಕನಿಷ್ಠ ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಿರಾಕರಿಸಿತು. ನಂತರ, ಮಹಾರಾಷ್ಟ್ರದಲ್ಲೂ ಇದೇ ರಿತಿ ನಡೆದುಕೊಂಡಿತು. ತಾನು ಬಲವಾಗಿರುವ ರಾಜ್ಯಗಳಲ್ಲಿ ಇತರ ಪಕ್ಷಗಳೊಂದಿಗೆ ಸ್ಥಾನಗಳನ್ನು ಹೊಂದಾಣಿಕೆ ಮಾಡಿಕೊಳ್ಳದೆ, ತಾನು ಬಲವಾಗಿಲ್ಲದ ರಾಜ್ಯಗಳಲ್ಲಿ ಮಾತ್ರ ಇತರರು ಬೆಂಬಲ ನೀಡಬೇಕೆಂದು ಬಯಸುವುದನ್ನು ಇಂಡಿಯಾ ಕೂಟದಲ್ಲಿ ಇರುವ ಇತರೆ ಪಕ್ಷಗಳು ಒಪ್ಪಿಕೊಳ್ಳುವುದಿಲ್ಲ. ದೆಹಲಿಯಲ್ಲಿ ಎಎಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದವು. ಎಎಪಿ ಕೂಡ ಅದನ್ನೇ ಬಯಸುತ್ತಿರುವಂತೆ ತೋರುತ್ತದೆ.

 

ಏಕೆಂದರೆ ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ಹತ್ಯಾಕಾಂಡವು ಬಿಜೆಪಿಯ ಬತ್ತಳಿಕೆಯಲ್ಲಿ ನಿರಂತರ ಅಸ್ತ್ರವಾಗಿದೆ. ಈಗಲೂ ಸಹ, ಆ ಪಕ್ಷದ ನಾಯಕರು ಕಾಂಗ್ರೆಸ್ ಮೇಲಿನ ಟೀಕೆಗಳೊಂದಿಗೆ ಚರ್ಚೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಬಿಜೆಪಿ ಮಾಜಿ ಸಂಸದ ರಮೇಶ್ ಬಿಧುರಿ ದೆಹಲಿ ರಸ್ತೆ ದುರಸ್ತಿ ನೆಪದಲ್ಲಿ ಪ್ರಿಯಾಂಕಾ ವಿರುದ್ಧ ಮಾಡಿದ ಆಕ್ಷೇಪಾರ್ಹ ಹೇಳಿಕೆಗಳು ಮತ್ತು ಹಾಲಿ ಮುಖ್ಯಮಂತ್ರಿ ಅತಿಶಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳು ಇದರ ಭಾಗವಾಗಿವೆ. ಅತಿಶಿ ಅವರ ಅಧಿಕೃತ ನಿವಾಸ ಶೇಷ್ ಮಹಲ್‌ ಒಳಗೆ ಪ್ರವೇಶಿಸದಂತೆ ತಡೆದ ಬಿಜೆಪಿ ನಾಯಕರು ಈ ವಿಷಯದ  ಮೇಲೆಯೇ ದೊಡ್ಡ ಚುನಾವಣಾ ಚರ್ಚೆಯನ್ನು ಹುಟ್ಟುಹಾಕಿ ದಾರಿ ತಪ್ಪಿಸಬೇಕೆಂದು ದಾಳಗಳನ್ನು ಉರುಳಿಸುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ, ಆದರೆ ಎಎಪಿ ಮಾತ್ರ ಕೇಜ್ರಿವಾಲ್ ಅವರನ್ನು ಮರಳಿ ಕರೆತರುವುದಾಗಿ ಘೋಷಿಸಿಕೊಂಡಿದೆ. ಇದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಮಾನ್ ಸೇರಿದಂತೆ 70 ಎಎಪಿ ಶಾಸಕರು ದೆಹಲಿಗೆ ಬಂದು ಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯ ಸ್ಟಾರ್ಟ್‌ಅಪ್‌ನಂತೆ ಎಎಪಿ ಹತ್ತು ವರ್ಷಗಳ ನಂತರ ಹೇಗೆ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುತ್ತದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. 2027 ರಲ್ಲಿ ಪಂಜಾಬ್ ಚುನಾವಣೆ ನಡೆಯುವುದರಿಂದ, ದೆಹಲಿಯನ್ನು ಕಳೆದುಕೊಳ್ಳುವುದು ಅಲ್ಲಿಯೂ ನಷ್ಟವಾಗುತ್ತದೆ ಎಂಬ ಅಂದಾಜಿನಲ್ಲಿ ಎಎಪಿ ಇದೆ. ಸರಣಿ ಆರೋಪಗಳ ನಂತರ ಆ ಪಕ್ಷವು ಕೂಡಾ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುತ್ತದೆಯೇ ಇಲ್ಲವೋ ಎಂಬುದು ಮುಖ್ಯವಾದ ವಿಷಯ. ಆಂದೋಲನಗಳು, ಅಸ್ಪಷ್ಟತೆಗಳು, ಆತುರದ ಘೋಷಣೆಗಳು ಒಳಿತನ್ನು ಮಾಡುವುದಿಲ್ಲ ಎಂದು ಸಹ ಈ ಅವಧಿಯಲ್ಲಿ ತಿಳಿದುಹೋಗಿದೆ.

ಎಡ ಪಕ್ಷಗಳು 6ರಲ್ಲಿ ಸ್ಪರ್ಧೆ

ಬಿಜೆಪಿಯ ಏಕಪಕ್ಷೀಯ ದಾಳಿಯಿಂದ ದೆಹಲಿಯ ಸಾಂವಿಧಾನಿಕ ಸ್ಥಾನವನ್ನು ರಕ್ಷಿಸಬೇಕೆಂಬ ದೃಡವಾದ ನಿಲುವನ್ನು ಹೊಂದಿರುವ ಎಡ ಪಕ್ಷಗಳು, ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಘೋಷಿಸಿವೆ. ಸಿಪಿಐ(ಎಂ), ಸಿಪಿಐ ಮತ್ತು ಸಿಪಿಐ(ಎಂಎಲ್) ಪಕ್ಷಗಳು ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಮತ್ತು ಉಳಿದ ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸುವವರಿಗೆ ಬೆಂಬಲಿಸುವುದಾಗಿ ಘೋಷಿಸಿವೆ. ಸಮಾಜವಾದಿ ಪಕ್ಷ ಮತ್ತು ಟಿಎಂಸಿ ಎಎಪಿಯನ್ನು ಬೆಂಬಲಿಸುತ್ತಿವೆ.

ಯೋಜನೆಗಳು ಮತ್ತು ಹೊಸ ಭರವಸೆಗಳು

ಕೇಂದ್ರದ ನಿರಂಕುಶ ದೋರಣೆ, ಅಕ್ರಮ ಪ್ರಕರಣಗಳ ಮೂಲಕ ಅದರ ನಾಯಕರಿಗೆ ಕಿರುಕುಳ ಮತ್ತು ತನ್ನ ಕಲ್ಯಾಣ ಯೋಜನೆಗಳನ್ನು ಪ್ರಚಾರ ನಡೆಸುವುದರ ಜೊತೆಗೆ, ಎಎಪಿ ಹೊಸ ಯೋಜನೆಗಳನ್ನು ಸಹ ಘೋಷಿಸುತ್ತಿದೆ. ಉಚಿತ ವಿದ್ಯುತ್, ನೀರು ಸರಬರಾಜು, ಆರೋಗ್ಯ, ಶಿಕ್ಷಣ, ಮಹಿಳೆಯರ ಬಸ್ ಪ್ರಯಾಣ ಉಚಿತ ಎಂಬುದು ಅವರ ಭರವಸೆಯಾಗಿದೆ.

ಇದರ ಜೊತೆಗೆ, ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ಮಹಿಳೆಯರಿಗೆ 2100 ರೂ.ಗಳ ಸಹಾಯಧನ ನೀಡಲಾಗುವುದು ಎಂದು ಹೇಳಿದೆ. ಬಿಜೆಪಿ ಕೂಡ ಉಚಿತ ವಿದ್ಯುತ್‌ ನಂತಹ ಭರವಸೆಗಳನ್ನು ನೀಡುವ ಮೂಲಕ ತಾವು ಅಧಿಕಾರಕ್ಕೆ ಬಂದರೆ ಈಗಿರುವ ಯೋಜನೆಗಳನ್ನು ರದ್ದುಗೊಳಿಸುತ್ತಾರೆ ಎಂಬ ಎಎಪಿಯ ಹೇಳಿಕೆ ಕೇವಲ ಪ್ರಚಾರ ಎಂದು ನಿರಾಕರಿಸುತ್ತಿದೆ. ದೆಹಲಿ ಪ್ರಚಾರದ ಹೊರೆಯನ್ನು ಹೆಗಲಿಗೆ ಹಾಕಿಕೊಂಡಿರುವ ಪ್ರಧಾನಿ ಮೋದಿ ‘ಎಲ್ಲವೂ ಮುಂದುವರಿಯುತ್ತದೆ’ ಎಂಬ ಭರವಸೆಯೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ‘ಪ್ಯಾರಿ ದೀದಿ ಯೋಜನೆ’ ಹೆಸರಿನಲ್ಲಿ ಮಹಿಳೆಯರಿಗೆ 2500 ರೂ.ಗಳನ್ನು ನೀಡುತ್ತೇವೆ, ‘ಜೀವನ ರಕ್ಷಾ ಯೋಜನೆ’ಯಡಿಯಲ್ಲಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ಆರೋಗ್ಯ ವಿಮಾ ರಕ್ಷಣೆ ಒದಗಿಸುತ್ತೇವೆ ಎಂದು ಭರವಸೆ ನೀಡಿದೆ. ಈ ರೀತಿಯ ಭರವಸೆಗಳ, ಯೋಜನೆಗಳ ಪೈಪೋಟಿಯಿಂದ ಚುನಾವಣೆ ನಡೆಯುತ್ತಿದೆ. ಬಿಜೆಪಿ ಇವುಗಳೊಂದಿಗೆ, ಬಾಂಗ್ಲಾದೇಶಿ ನಿರಾಶ್ರಿತರು, ರೋಹಿಂಗ್ಯಾಗಳ ಆಗಮನದಂತಹ ವಿಷಯಗಳನ್ನು ಪ್ರಧಾನ ಸಮಸ್ಯೆ ಎಂಬಂತೆ ಧಾರ್ಮಿಕ ಅಂಶಗಳನ್ನು ಮುಂದಕ್ಕೆ ತರುತ್ತಿದೆ. ಬೆಲೆ ಏರಿಕೆ, ನಿರುದ್ಯೋಗದಂತಹ ವಿಷಯಗಳ ಬಗ್ಗೆ, ಹಾಗೆಯೇ ದೇಶದ ರಾಜಧಾನಿಯ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ, ದೆಹಲಿಯಲ್ಲಿನ ತೀವ್ರ ಮಾಲಿನ್ಯದ ಬಗ್ಗೆ ಕಡಿಮೆ ಚರ್ಚೆ ನಡೆಯುತ್ತಿರುವುದು ಒಂದು ವಿಚಿತ್ರವಾಗಿದೆ.

ಪ್ರತಿಭಟನೆ ನಡೆಸುವ ಹಕ್ಕನ್ನು ರಕ್ಷಿಸಲು

ಈ ನಡುವೆ ರೈತರ ಹೋರಾಟಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಿದ್ದೇವೆ. ದೆಹಲಿ ರಾಜಧಾನಿಯಾಗಿರುವುದರಿಂದ ಅಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ರಕ್ಷಿಸಲು ಕೂಡ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಸ್ವತಃ ಮೋದಿ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಜೊತೆಗೆ, ಎಂಟು ತಿಂಗಳಿನಿಂದ ದೆಹಲಿ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. “ಎಎಪಿಯನ್ನು ಇನ್ನು ಸಹಿಸುವುದಿಲ್ಲ, ಬದಲಾವಣೆ ತರುತ್ತೇವೆ” ಎಂಬ ಚುನಾವಣಾ ಘೋಷಣೆಯನ್ನು ಅವರು ಎತ್ತಿಕೊಂಡಿದ್ದಾರೆ. ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಲಾಗಿದೆ ಎಂಬ ಆರೋಪಗಳಿವೆ. ಅದಕ್ಕಾಗಿಯೇ ಚುನಾವಣಾ ಆಯೋಗವು ಅಂತಹ ಆರೋಪಗಳನ್ನು ತಿರಸ್ಕರಿಸಲು ತುಂಬಾ ಹೆಣಗಾಡಿತು. ಇದೆಲ್ಲದರ ನಡುವೆ ದೆಹಲಿ ಮತದಾರರ ತೀರ್ಪು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ನೋಡಿ: ಬಳ್ಳಾರಿ ವಿಶ್ವವಿದ್ಯಾಲಯ : ಕಿರುಕುಳಕ್ಕೆ ಹಂಗಾಮಿ ನೌಕರ ಆತ್ಮಹತ್ಯೆ – ಎಸ್ಎಫ್ಐ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *