ಬೆಳಗಾವಿ : ಇತ್ತೀಚೆಗೆ ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟ್‍ಮೆಂಟಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ಪ್ರಕರಣ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಅಗತ್ಯ ಮೂಲಸೌಲಭ್ಯ ಒದಗಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು. ಕ್ರಮ
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು, ಪ್ರಶ್ನೆ ಕೇಳಿ ನವೆಂಬರ್ 1 ರಂದು ಚಿರತೆ ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಗೆ ಬಂದಿದ್ದು, ಅಪಾರ್ಟ್‍ಮೆಂಟಿನಲ್ಲಿ ಕಾಣಿಸಿಕೊಂಡಿತ್ತು. ಇಲ್ಲಿಂದ ಬನ್ನೇರುಘಟ್ಟ 20 ಕಿ.ಮೀ. ಅಂತರದಲ್ಲಿದ್ದರೂ ಅಲ್ಲಿಂದ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಬರುತ್ತಿವೆ. ಈ ಮೊದಲೂ ಕೂಡ ಹುಲಿ, ಆನೆ, ಚಿರತೆ ಹಾವಳಿಯನ್ನು ಜನ ಅನುಭವಿಸಿದ್ದಾರೆ.ವನ್ಯಜೀವಿ ಸಂಘರ್ಷದ ವೇಳೆ ಅವುಗಳನ್ನು ಸುರಕ್ಷಿತವಾಗಿ ಹಿಡಿಯಲು ಅಥವಾ ಹಿಮ್ಮೆಟ್ಟಿಸಲು ಅಗತ್ಯ ಸೌಲಭ್ಯಗಳ ಕೊರತೆಯಿದೆ.
ಇದನ್ನೂ ಓದಿ:Leopard Attack | ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ಚಿರತೆ ಬಂದಾಗ 200 ಕಿ.ಮೀ. ಪ್ರದೇಶವನ್ನು ಸುತ್ತುವರೆಯಲಾಗಿದ್ದು, ಅಲ್ಲಿ ಸುರಕ್ಷಾ ತಂತಿಬೇಲಿ ಅಳವಡಿಸಲು ಹಾಗೂ ಥರ್ಮಲ್ ಡ್ರೋನ್ ಕ್ಯಾಮರಾ ವ್ಯವಸ್ಥೆ ಇರಲಿಲ್ಲ. ಈ ಎರಡನ್ನೂ ಖಾಸಗಿಯವರಿಂದ ಪಡೆಯಬೇಕಾಗಿತ್ತು. ಚಿರತೆಗೆ ನೀಡಿದ ಅರವಳಿಕೆಯ ಮದ್ದು ಕೆಲಸ ಮಾಡಲಿಲ್ಲ. ಬಹುಷಃ ಅದರ ಅವ ಮುಗಿದಿರಬಹುದು. ಮೂರು ಜನ ಅರಣ್ಯ ಸಿಬ್ಬಂದಿಗಳಿಗೆ ಚಿರತೆ ಕಚ್ಚಿ ಹಲ್ಲೆ ಮಾಡಿತ್ತು. ಕೊನೆಗೆ ಅದನ್ನು ಎನ್‍ಕೌಂಟರ್ ಮಾಡಿ ಕೊಲ್ಲಬೇಕಾಯಿತು. ಹೀಗಾಗಿ ಅರಣ್ಯ ಇಲಾಖೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಅರಗ ಜ್ಞಾನೇಂದ್ರ ಮಲೆನಾಡು ಭಾಗದಲ್ಲಿ ಮಂಗ, ಕಾಡುಕೋಣ, ಹಂದಿಯ ಹಾವಳಿ ತೀವ್ರಗೊಂಡಿದೆ. ಇತ್ತೀಚೆಗೆ ಹಂದಿ ಹಾವಳಿಯನ್ನು ತಡೆಯಲು ಪ್ರಾಣಭಯದಿಂದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ್ದಾರೆ. ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಕಾಡುಕೋಣವೊಂದು ವ್ಯಕ್ತಿಯೊಬ್ಬರ ಕೈ ಮುರಿದಿದೆ. ಹಂದಿ ಹೊಡೆಯಲು ಅವಕಾಶವಿದೆ. ಆದರೆ ತಿಂದರೆ ಅಪರಾಧ ಎಂದು ಪ್ರಕರಣ ದಾಖಲಿಸುತ್ತಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಂದರ್ಭದಲ್ಲಿ ಕಾನೂನಿನ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿಯ ಸುನಿಲ್‍ಕುಮಾರ್, ಸಿಮೆಂಟ್ ಮಂಜು, ಸುರೇಶ್‍ಗೌಡ, ಎಂ.ಕೃಷ್ಣಪ್ಪ ಸೇರಿದಂತೆ ಹಲವಾರು ಮಂದಿ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಅರಣ್ಯ ಪ್ರದೇಶದಲ್ಲಿನ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಬೆಂಗಳೂರು ಸುತ್ತಮುತ್ತ ಮಾಂಸದಂಗಡಿಗಳ ತ್ಯಾಜ್ಯ ವಿಸರ್ಜನೆಯನ್ನು ವೈಜ್ಞಾನಿಕವಾಗಿ ಮಾಡಬೇಕೆಂದು ಆಗ್ರಹಿಸಿದರು. ಉತ್ತರ ನೀಡಿದ ಸಚಿವ ಈಶ್ವರ್ ಖಂಡ್ರೆ, ಆನೆ, ಚಿರತೆ ಹಾವಳಿಯನ್ನು ತಡೆಯಲು ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದೆ. 59 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕ್ರಮ
ಇದನ್ನೂ ಓದಿ:ಆನೆ-ಮಾನವ ಸಂಘರ್ಷ ತಡೆಗೆ ಸರ್ಕಾರ ಕ್ರಮ : ಸಚಿವ ಈಶ್ವರ್ ಖಂಡ್ರೆ
ಒತ್ತುವರಿಯಿಂದಾಗಿ ಅರಣ್ಯ ಪ್ರದೇಶ ಕಿರಿದಾಗುತ್ತಿದೆ. ಬೆಂಗಳೂರಿನಲ್ಲಿ 500 ಹೆಕ್ಟೇರ್ ಅರಣ್ಯ ಹಸಿರು ಪ್ರದೇಶ ಕಡಿಮೆಯಾಗಿದೆ. 1051 ಪ್ರಕರಣಗಳಲ್ಲಿ 2570 ಎಕರೆ ಪ್ರದೇಶ ಒತ್ತುವರಿಯಾಗಿದೆ. ಅದರಲ್ಲಿ 403 ಪ್ರದೇಶವನ್ನು ತೆರವುಗೊಳಿಸಲಾಗಿದೆ. ಈಗ ಭೂಮಿಯ ಉಳಿದ ಒತ್ತುವರಿ ತೆರವಿಗೆ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವನ್ಯಜೀವಿ ಸಂರಕ್ಷಣೆ ಸಮಯದಲ್ಲಿ ಅಗತ್ಯವಾಗಿರುವ ಬೋನುಗಳು, ಬಲೆಗಳು, ಸುರಕ್ಷತಾ ಸಲಕರಣೆಗಳು, ಅಗತ್ಯ ತರಬೇತಿ ನೀಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಬೊಮ್ಮನಹಳ್ಳಿಯ ಚಿರತೆ ಕಾರ್ಯಾಚರಣೆಯ ವೇಳೆ ಶಾಸಕರು ಸಂಪೂರ್ಣ ಸಹಕಾರ ನೀಡಿದ್ದರು. ಗಾಯಗೊಂಡ ಸಿಬ್ಬಂದಿಗಳಿಗೆ ಶಾಸಕರು ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ನೀಡುವುದನ್ನು ಸ್ವಾಗತಿಸಲಾಗುವುದು.
ಇಲಾಖೆಯಿಂದಲೂ ಸಿಬ್ಬಂದಿಗಳಿಗೆ ಪರಿಹಾರ ನೀಡಲಾಗುತ್ತದೆ. ಅಂದು ಚಿರತೆ ಮೂರು ಜನರ ಮೇಲೆ ದಾಳಿ ಮಾಡಿ 4ನೆಯವರ ಮೇಲೆ ಎರಗಿದಾಗ ಗುಂಡು ಹಾರಿಸಬೇಕಾಯಿತು. ಅರವಳಿಕೆಯ ಮದ್ದಿನ ಸಿರಿಂಜ್ ಚಿರತೆಗೆ ಚುಚ್ಚಿಕೊಂಡಿತ್ತು. ಆದರೆ ಔಷದಿ ಚಿರತೆಯ ದೇಹಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ಅದು ಪ್ರಜ್ಞೆ ತಪ್ಪಲಿಲ್ಲ ಎಂದು ಹೇಳಿದರು.
ಅಂದು ಚಿರತೆಯನ್ನು ಕೊಲ್ಲದೆ ಇದ್ದರೆ ಹೊರಗಡೆ ಸುಮಾರು ಒಂದೂವರೆ ಸಾವಿರ ಜನ ಇದ್ದರು. ಹೆಚ್ಚಿನ ಅನಾಹುತ ಆಗುತ್ತಿತ್ತು. ಸಚಿವರು ಸಕಾಲಿಕ ಆದೇಶ ನೀಡಿ ಅನಾಹುತ ತಪ್ಪಿಸಿದ್ದಾರೆ ಎಂದು ಶಾಸಕರು ಸಚಿವರನ್ನು ಅಭಿನಂದಿಸಿದರು.
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 07 | ಭಾಗ 01 Live #wintersession2023