ಫ್ರಾನ್ಸ್‌ನಲ್ಲಿ ಪೋಲಿಸ್ ಹಿಂಸಾಚಾರ ವಿರೋಧಿಸಿ ವ್ಯಾಪಕ ದಂಗೆ

ವಸಂತರಾಜ ಎನ್.ಕೆ

ಪೊಲೀಸ್ ಅಧಿಕಾರಿಯಿಂದ ಹತ್ಯೆಗೀಡಾದ ಫ್ರೆಂಚ್-ಅಲ್ಜೀರಿಯನ್ ಹದಿಹರೆಯದ ನಹೆಲ್‌ ಗೆ ನ್ಯಾಯಕ್ಕಾಗಿ ಫ್ರಾನ್ಸ್‌ನಾದ್ಯಂತ 4 ದಿನಗಳಿಂದ ಸತತವಾಗಿ ಹಗಲು-ರಾತ್ರಿ ಪ್ರತಿಭಟನೆಗಳು ಮುಂದುವರೆದಿವೆ. ಈ ಪ್ರತಿಭಟನೆಗಳನ್ನು ತಡೆಯಲು ಫ್ರಾನ್ಸ್‌ನ ಪ್ರಮುಖ ನಗರಗಳಲ್ಲಿ 40,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಷ್ಟು ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಯುರೋ ಕೂಟದ ಶೃಂಗಸಭೆಯಿಂದ ಬೇಗನೆ ಫ್ರಾನ್ಸ್‌ಗೆ ಹಿಂತಿರುಗಬೇಕಾದಷ್ಟು ಪರಿಸ್ಥಿತಿ ಗಂಭೀರವಾಗಿದೆ. ಭಾರೀ ಪ್ರತಿಭಟನೆಗಳ ನಂತರ ನಹೆಲ್‌ ಗೆ ಗುಂಡು ಹಾರಿಸಿದ ಅಧಿಕಾರಿಯನ್ನು ಅಧಿಕಾರದಲ್ಲಿರುವ ವ್ಯಕ್ತಿಯಿಂದ ಸ್ವಯಂಪ್ರೇರಿತ ನರಹತ್ಯೆ ಆರೋಪಕ್ಕಾಗಿ ಬಂಧಿಸಲಾಗಿದೆ. ಜೂನ್ 27 ರ ಮಂಗಳವಾರ ಬೆಳಿಗ್ಗೆ ಪ್ಯಾರಿಸ್ ಉಪನಗರವಾದ ನಾಂಟೆರ್ರೆಯಲ್ಲಿ ಪೋಲೀಸರ ಗುಂಡಿಗೆ ಬಲಿಯಾದ 17 ವರ್ಷದ ಫ್ರೆಂಚ್ ಅಲ್ಜೀರಿಯನ್ ನಹೆಲ್ ಎಂ ಹತ್ಯೆಯನ್ನು ಖಂಡಿಸಿ ಫ್ರಾನ್ಸ್‌ನಲ್ಲಿ ಬೃಹತ್ ಪ್ರತಿಭಟನೆಗಳು ಮುಂದುವರೆದಿವೆ. ಜೂನ್ 29 ರಂದು ನಹೆಲ್‌ ಅವರ ನೆನಪಿಗಾಗಿ ಭಾರೀ ಮೆರವಣಿಗೆ ತೆಗೆಯಲಾಯಿತು. ಅವರ ತಾಯಿ ಸಹ ಅದರಲ್ಲಿ ಭಾಗವಹಿಸಿದ್ದರು.

ಪ್ಯಾರಿಸ್, ಮಾರ್ಸೆಲೆ, ಲಿಯಾನ್ ಮತ್ತು ಲಿಲ್ಲೆ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾದವು. ವರದಿಗಳ ಪ್ರಕಾರ, ಪ್ರತಿಭಟನೆಗಳನ್ನು ನಿಗ್ರಹಿಸಲು ಫ್ರಾನ್ಸ್‌ನ ವಿವಿಧ ನಗರಗಳಲ್ಲಿ 40,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶನಿವಾರ (ಜುಲೈ 1) ನಹೆಲ್‌ ಶವಸಂಸ್ಕಾರ ನಡೆಯಲಿದ್ದು ಇನ್ನಷ್ಟು ಹೆಚ್ಚಿನ ಹಿಂಸಾಚಾರ ನಡೆಯಬಹುದು ಎಂದು ಭಾವಿಸಿ, ಶುಕ್ರವಾರ (ಜೂನ್ 30) ರಾತ್ರಿ ವೇಳೆಗೆ ಸುಮಾರು 1100ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಎಂದು ಆಂತರಿಕ ಸಚಿವ ಗೆರಾಲ್ಡ್ ಡಾರ್ಮಾನಿನ್ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಹೇರುವುದೂ ಅಗತ್ಯವಾಗಬಹುದೆಂದೂ ಹೇಳಲಾಗಿದೆ. ಮಂಗಳವಾರ (ಜೂನ್ 27) ಬೆಳಗ್ಗೆ, ಡೆಲಿವರಿ ಚಾಲಕ ನಹೆಲ್‌ ಎಂ, ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಸ್ಟಾಪ್‌ನಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದರು. ಪೋಲಿಸ್ ಅಧಿಕಾರಿಗಳು ಕಾರು ನಿಲ್ಲಿಸಲು ಹೇಳಿದಾಗ ಕಾರು ನಿಲ್ಲಿಸದೆ, ನಹೆಲ್‌ ಅವರ ಮೇಲೆ ಕಾರು ಹತ್ತಿಸುವ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಆರಂಭದಲ್ಲಿ ವರದಿ ಮಾಡಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊವು ಈ ಹೇಳಿಕೆಗೆ ವಿರುದ್ಧವಾಗಿದೆ, ಅವರ ಕಾರನ್ನು ನಿಲ್ಲಿಸಿದ ಇಬ್ಬರು ಅಧಿಕಾರಿಗಳಲ್ಲಿ ಒಬ್ಬರು ನಹೆಲ್‌ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾರೆ ಎಂದು ತೋರಿಸುತ್ತದೆ.

ಇದನ್ನೂ ಓದಿ:ಮಾನವ ಕುಲವನ್ನು ಶೋಷಣೆಯಿಂದ ಮುಕ್ತಿಗೊಳಿಸುವುದು ಕಾರ್ಮಿಕ ವರ್ಗದ ಜವಾಬ್ದಾರಿ – ಮೀನಾಕ್ಷಿ ಸುಂದರಂ

ಇದೊಂದು ಕಾನೂನುಬಾಹಿರ ವರ್ಣದ್ವೇಷದ ಹತ್ಯೆ ಎಂದು ಖಂಡಿಸಿ ಫ್ರಾನ್ಸ್‌ನಾದ್ಯಂತ ಸ್ವಯಂಪ್ರೇರಿತ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನೆಗಳ ತೀವ್ರತೆಯಿಂದಾಗಿ ಶುಕ್ರವಾರ (ಜೂನ್ 29) ಬ್ರಸೆಲ್ಸ್‌ನಲ್ಲಿ ನಡೆದ ಯುರೋ ಕೂಟ ಶೃಂಗಸಭೆಯಲ್ಲಿದ್ದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಫ್ರಾನ್ಸ್‌ಗೆ ಹಿಂತಿರುಗಬೇಕಾಯಿತು. ನಹೆಲ್‌ ಗೆ ಗುಂಡು ಹಾರಿಸಿದ ಅಧಿಕಾರಿಯನ್ನು ಅಧಿಕಾರದಲ್ಲಿರುವ ವ್ಯಕ್ತಿಯಿಂದ ಸ್ವಯಂಪ್ರೇರಿತ ನರಹತ್ಯೆ ಆರೋಪಕ್ಕಾಗಿ ಬಂಧಿಸಲಾಗಿದೆ. ಎಡಪಂಥೀಯ ಗುಂಪುಗಳು ನಹೆಲ್‌ ಗೆ ನ್ಯಾಯವನ್ನು ಒತ್ತಾಯಿಸುವ ಪ್ರತಿಭಟನೆಯಲ್ಲಿ ಭಾಗವಹಿಸಿದವು. ಆದರೆ ಪ್ರತಿಭಟನೆಯ ದಮನವನ್ನು ಸಮರ್ಥಿಸಿಕೊಳ್ಳಲು ಪ್ರಭುತ್ವ ಅಪಪ್ರಚಾರ ಮಾಡಿ ಗಮನ ಬೇರೆಡೆ ತಿರುಗಿಸಲು ಆಸ್ಪದ ಕೊಡದಂತೆ ಹಿಂಸಾಚಾರದಿಂದ ದೂರವಿರಲು ಪ್ರತಿಭಟನಾಕಾರರಿಗೆ ಅವು ಮನವಿ ಮಾಡಿವೆ.“ವಾಹನ ನಿಲ್ಲಿಸಲು ಕೊಟ್ಟ ಆದೇಶವನ್ನು ಪಾಲಿಸದ ಚಾಲಕರನ್ನು ನಿಶ್ಚಲಗೊಳಿಸಲು ಸಾಧ್ಯವಾಗದಿದ್ದಾಗ ಮತ್ತು ಅವರ ಓಟದಿಂದಾಗಿ ವಾಹನದ ಪ್ರಯಾಣಿಕರ ಅಥವಾ ಇತರರ ಜೀವಕ್ಕೆ ಅಪಾಯವಿರುವಾಗ” ಪೊಲೀಸರಿಗೆ ಗುಂಡು ಹಾರಿಸಲು ಅಧಿಕಾರ ಕೊಡುವ 2017ರ ಕಾನೂನನ್ನು ರದ್ದುಗೊಳಿಸುವಂತೆ ವಿವಿಧ ಗುಂಪುಗಳು ಒತ್ತಾಯಿಸಿವೆ ಎಂದು ಫ್ರಾನ್ಸಿನ ಪ್ರಸಿದ್ಧ ಪತ್ರಿಕೆ ‘ಲಾ ಹ್ಯುಮಾನಿಟೆ’ ವರದಿ ಮಾಡಿದೆ. “ಪೊಲೀಸ್ ಒಬ್ಬರು 17 ವರ್ಷದ ಹುಡುಗನನ್ನು ಸೂಕ್ತ ಕಾರಣವಿಲ್ಲದೆ ಕೊಂದರು. ದೃಶ್ಯದ ವಿಡಿಯೋ ಇಂತಹ ಕಾರ್ಯಾಚರಣೆ ಅಗತ್ಯವಾಗಿರಲಿಲ್ಲವೆಂದು ಸ್ಪಷ್ಟವಾಗಿ ತೋರಿಸುತ್ತದೆ. ಪೊಲೀಸರಿಗೆ ಯಾರ ಜೀವನ್ಮರಣದ ಮೇಲೂ ಅಧಿಕಾರವಿಲ್ಲ. ಈ ಪೋಲೀಸರ ವಿರುದ್ಧ ನ್ಯಾಯಾಂಗವು ನ್ಯಾಯಯುತವಾದ ಶಿಕ್ಷೆಯನ್ನು ಪ್ರಕಟಿಸಬೇಕು, ಎಂದು ಫ್ರಾನ್ಸಿನ ಯುವ ಕಮ್ಯುನಿಸ್ಟ್ ಚಳುವಳಿ (MJCF) ನ ಪ್ರಧಾನ ಕಾರ್ಯದರ್ಶಿ ಅಸ್ಸಾನ್ ಲೇಕ್‌ಹೌಲ್, ಜೂನ್ 30 ರಂದು ಹೇಳಿಕೆ ನೀಡಿದ್ದಾರೆ.

ಇದೊಂದು ಅಪರೂಪದ ಘಟನೆಯಲ್ಲ. ವರ್ಣದ್ವೇಷದ ಧೋರಣೆ ಫ್ರಾನ್ಸಿನ ಪೋಲೀಸರಲ್ಲಿ ವ್ಯಾಪಕವಾಗಿದೆ. ಹಾಗಾಗಿ ಅಲ್ಜೀರಿಯಾ ಮುಂತಾದ ಆಫ್ರಿಕಾದ ಮಾಜಿ ಫ್ರೆಂಚ್ ವಸಾಹತುಗಳಿಂದ ಬಂದ ವಲಸೆಗಾರರ 2-3 ನೆಯ ಪೀಳಿಗೆಯ ಜನ ಸಹ ನಿತ್ಯ ಈ ವರ್ಣದ್ವೇವನ್ನು ಎದುರಿಸುತ್ತಿದ್ದಾರೆ. ಬರಿಯ ವರ್ಣದ್ವೇಷದ ಧೋರಣೆ ಮಾತ್ರ ಈ ದಂಗೆಗಳಿಗೆ ಕಾರಣವೂ ಅಲ್ಲ. ಅವರು ಸಮಾಜದಲ್ಲಿ ಕೆಳವರ್ಗಗಳಿಗೆ ಸೇರಿದ್ದು ಅವರ ಜೀವನ ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ದುರ್ಭರವಾಗಿದೆ. ಅದರ ವಿರುದ್ಧ ಅವರ ಹೋರಾಟಗಳನ್ನು ಫ್ರೆಂಚ್ ಪ್ರಭುತ್ವ ಭಾರೀ ಹಿಂಸಾಚಾರ ಬಳಸಿ ದಮನ ಮಾಡುತ್ತಿದೆ. ಭಯೋತ್ಪಾದನೆ, ಇಸ್ಲಾಮ್-ಭೀತಿ ಗಳ ಭೂತ ತೋರಿಸಿ ಪೋಲಿಸರಿಗೆ ವಿಪರೀತ ದಮನದ ಅಧಿಕಾರಗಳನ್ನು ಕೊಡಲಾಗಿದೆ. ಇದರ ವಿರುದ್ಧವೂ ಜನಕ್ಕೆ ಆಕ್ರೋಶವಿದೆ. ವರ್ಣದ್ವೇಷದ ಕಾನೂನುಬಾಹಿರ ಹತ್ಯೆಯ ಈ ಘಟನೆಯಿಂದಾಗಿ ಈ ಎಲ್ಲ ಆಕ್ರೋಶಗಳು ಒಟ್ಟಿಗೆ ಸ್ಫೋಟಿಸಿವೆ, ಅಷ್ಟೇ. ಜೂನ್ 30 ರಂದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ವಕ್ತಾರರಾದ ರವೀನಾ ಶಮ್ದಾಸನಿ ಅವರು ಫ್ರೆಂಚ್ ಸರ್ಕಾರವನ್ನು  ಕಾನೂನು ಜಾರಿಯಲ್ಲಿನ ವರ್ಣಭೇದ ನೀತಿ ಮತ್ತು ತಾರತಮ್ಯದ ಆಳವಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ.

ಫ್ರೆಂಚ್ ಪೋಲೀಸರು ಇದೇ ರೀತಿಯ ಕಾನೂನುಬಾಹಿರ ಹತ್ಯೆಗಳಿಗೆ ಈ ಹಿಂದೆಯೂ ಟೀಕೆಗಳನ್ನು ಎದುರಿಸಿದ್ದಾರೆ. ಜುಲೈ 19, 2016 ರಂದು, ಮಾಲಿಯನ್ ಫ್ರೆಂಚ್ ವ್ಯಕ್ತಿ, ಆಡಮಾ ಟ್ರೊರೆ ಅವರನ್ನು ಅವರ 24 ನೇ ಹುಟ್ಟುಹಬ್ಬದಂದು ಫ್ರೆಂಚ್ ನ್ಯಾಷನಲ್ ಜೆಂಡಾರ್ಮಿಯ ಮೂವರು ಪೋಲೀಸ್ ಅಧಿಕಾರಿಗಳು ಬ್ಯೂಮಾಂಟ್-ಸುರ್-ಒಯಿಸ್‌ನಲ್ಲಿ ಬಂಧಿಸುವಾಗ ಅತಿಯಾದ ಬಲವನ್ನು ಬಳಸಿದ್ದರಿಂದ ಕೊಲೆಯಾಗಿದ್ದರು. ಈ ಘಟನೆ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. 2019 ರಲ್ಲಿ, ಪ್ಯಾರಿಸ್‌ನಲ್ಲಿ ದಾಖಲೆರಹಿತ ವಲಸೆ ಕಾರ್ಮಿಕರು ಆಯೋಜಿಸಿದ್ದ ಬ್ಲಾಕ್ ವೆಸ್ಟ್ ಪ್ರತಿಭಟನೆಗಳ ವಿರುದ್ಧ ಪೊಲೀಸ್ ಹಿಂಸಾಚಾರವನ್ನು ವ್ಯಾಪಕವಾಗಿ ಖಂಡಿಸಲಾಯಿತು.

Donate Janashakthi Media

Leave a Reply

Your email address will not be published. Required fields are marked *