ತತ್ವಪದಗಳು ಮತ್ತು ಸೂಫಿ ಸಾಹಿತ್ಯ ಅಭಿವೃದ್ಧಿ ಪ್ರಾಧಿಕಾರ ಯಾಕೆ ಬೇಕು?

ಮಲ್ಲಿಕಾರ್ಜುನ ಕಡಕೋಳ

ಬೆಂಗಳೂರಿನ ವಸಂತ ನಗರದ ದೇವರಾಜ ಅರಸು ಭವನದಲ್ಲಿ ಮೊನ್ನೆ ಜುಲೈ ಎಂಟರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಆಯ್ದ ಸಾಹಿತಿ ಕಲಾವಿದರು ಮತ್ತು ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೂ ಆಹ್ವಾನವಿತ್ತು. ಬೆಳಗಿನ ವಿಚಾರ ಸಂಕಿರಣ ಕಳೆದು ಮಧ್ಯಾಹ್ನ ಮುಖ್ಯಮಂತ್ರಿ ಜತೆ ಜನಮನ ಸಂವಾದ ಗೋಷ್ಠಿಗೆ ನಿರೀಕ್ಷೆಯಂತೆ ಸಭಾಂಗಣ ತುಂಬಿ ತುಳುಕಿತ್ತು. ಮುಖ್ಯಮಂತ್ರಿ ಅವರಿಗೆ ಇನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದ ಪ್ರಶ್ನೆಗಳು.

ಅವುಗಳಲ್ಲಿ ಸಂಘಟಕರೇ ಆಯ್ದ ಇಪ್ಪತ್ತೈದು ಪ್ರಶ್ನೆಗಳಿಗೆ ಮಾತ್ರ ಮುಖ್ಯಮಂತ್ರಿಗಳಿಂದ ನೇರ ಉತ್ತರ. ಸಂಘಟಕರ ಆಯ್ಕೆಯ ಮಾನದಂಡ ಏನಾಗಿತ್ತೆಂದು ನನಗಂತೂ ಗೊತ್ತಿಲ್ಲ. ಅದೇಕೋ ನನ್ನ ಎರಡು ಪ್ರಶ್ನೆಗಳು ಆಯ್ಕೆ ಆಗಿರಲಿಲ್ಲ. ಅಷ್ಟಕ್ಕೂ ಮುಖ್ಯಮಂತ್ರಿಗೆ ನಾನು ಕೇಳಿದ ಮುಖ್ಯಪ್ರಶ್ನೆ ಹೀಗಿತ್ತು. ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚುಮಂದಿ ತತ್ವಪದಕಾರರು ಬಾಳಿ ಬದುಕಿದ್ದಾರೆ. ಅವರು ರಚಿಸಿದ ತತ್ವಪದಗಳು ವರ್ತಮಾನದ ಸಮಷ್ಟಿ ಬದುಕಿಗೆ ಅತ್ಯಗತ್ಯವಾಗಿವೆ. ಅಂತಹ ತತ್ವಪದಗಳು ಮತ್ತು ಸೂಫಿ ಸಾಹಿತ್ಯ ಕುರಿತು ಪ್ರಾಧಿಕಾರ ರಚನೆಯಾಗಬೇಕಿದೆ. ಪ್ರಾಧಿಕಾರ ರಚನೆ ಕುರಿತು ನೂತನ ಸರಕಾರದ ನಿಲುವು ಏನು.? ಸಂಘಟಕರು ನನ್ನ ಈ ಪ್ರಶ್ನೆ ಮುಖ್ಯಮಂತ್ರಿಗಳ ಗಮನಕ್ಕೆ ತಾರದ ಪ್ರಯುಕ್ತ ಉತ್ತರ ದೊರಕಲಿಲ್ಲ.

ಹಾಗೆ ನೋಡಿದರೆ “ತತ್ವಪದಗಳ ಅಧ್ಯಯನ ಮತ್ತು ಸಂಶೋಧನಾ ಪ್ರಾಧಿಕಾರ ರಚನೆ” ಬೇಡಿಕೆ ಹೊಸದೇನಲ್ಲ. ಇದು ಹತ್ತಾರು ವರ್ಷಗಳಷ್ಟು ಹಳತಾದುದು. ವಚನ ಚಳವಳಿ ಹಾಗೂ ಹರಿದಾಸ ಚಳವಳಿಗಳ ನಂತರ ಕರ್ನಾಟಕದಲ್ಲಿ ಮೊಳಗಿದ್ದು ತತ್ವಪದಗಳ ಮಹತ್ವದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿ. ವೈರುಧ್ಯದ ಸಂಗತಿಯೆಂದರೆ ಸಾಹಿತ್ಯ ಚರಿತ್ರೆಕಾರರು ತತ್ವಪದಗಳ ಅಸ್ಮಿತೆ, ಕಾಲಮಾನವನ್ನು ಗುರುತಿಸದೇ ಹೋದರು. ತತ್ವಪದಗಳನ್ನು ಕಾವ್ಯ ಪ್ರಕಾರದ ಗುಂಪಿಗೆ ಸೇರಿಸಲು ಅವರು ಹಿಂದೇಟು ಹಾಕಿದಂತಿದೆ. ನಿಸ್ಸಂದೇಹವಾಗಿ ಅದು ಸಾಂಸ್ಕೃತಿಕ ರಾಜಕಾರಣವೇ ಆಗಿತ್ತು. ಏಕೆಂದರೆ ಕನ್ನಡ ಸಾಹಿತ್ಯದ ಕತ್ತಲೆಯುಗ ಎಂದು ಕರೆದ ಕಾಲಘಟ್ಟವೇ ತತ್ವಪದಗಳ ಪ್ರಖರ ಅನುಭಾವ ಚಳವಳಿಯ ಯುಗಮಾನವಾಗಿತ್ತು.

ಗಮನಾರ್ಹ ಸಂಗತಿ ಎಂದರೆ ವಚನ ವಾಙ್ಮಯಕ್ಕೆ ದೊರಕಿದ ಚಾರಿತ್ರಿಕ ಬೆಂಬಲ ತತ್ವಪದಗಳಿಗೆ ಮತ್ತು ಸೂಫಿ ಸಾಹಿತ್ಯಕ್ಕೆ ದಕ್ಕಲಿಲ್ಲ. ಮಠಗಳು ವಚನಗಳಿಗೆ ತೋರಿದ ಅದಮ್ಯ ಪ್ರೀತಿಯನ್ನು ತತ್ವಪದಳಿಗೆ ತೋರಿಸಲಿಲ್ಲ. ಮಠ – ಪೀಠಗಳು ತತ್ವಪದಗಳನ್ನು ಎದೆಗೆ ಹಾಕಿಕೊಳ್ಳದಿದ್ದರೂ ಪರವಾ ಇಲ್ಲ, ಕೊನೆಯಪಕ್ಷ ಅವುಗಳನ್ನು ತಮ್ಮ ಜೋಳಿಗೆಗೂ ಹಾಕಿಕೊಳ್ಳಲಿಲ್ಲ. ಅಪರೂಪಕ್ಕೆ ಕೆಲವು ಮಠಗಳು ಮಾತ್ರ ತತ್ವಪದಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದೆ ಬಂದವು. ಅದರಲ್ಲೂ ಕೆಲವು ಪ್ರಗತಿಪರ ಹೆಸರಿನ ಮಠಗಳು ಲಿಂಗಾಯತ – ವೀರಶೈವ ಪುಣ್ಯಪುರುಷರ ಮೇಲಿನ ಪ್ರೀತಿಗೆ ಜೋತು ಬಿದ್ದವು.

ಕಡೆಯಪಕ್ಷ ಅದೇ ಸಮುದಾಯದ ಮಹಿಳೆಯರ ತತ್ವಪದಗಳು, ತತ್ವಪದಕಾರ್ತಿಯರತ್ತ ಅವು ಕಣ್ಣು ಹಾಯಿಸಲಿಲ್ಲ. ಪ್ರಾಯಶಃ ಅವುಗಳ ದೃಷ್ಟಿಯಲ್ಲಿ ಮಹಿಳೆಯರು ಪುಣ್ಯಜೀವಿಗಳಾಗದೇ ಪಾಪಿಗಳಾಗಿ ಕಂಡಿರಬಹುದು.? ಒಂದುರೀತಿಯಲ್ಲಿ ಎಡಗಣ್ಣು – ಕಡೆಗಣ್ಣು ನೋಟಗಳೇ ಈ ತತ್ವಪದಗಳಿಗೆ ಗತಿಯಾದವು. ಅಷ್ಟಕ್ಕೂ ಇದುವರೆಗೆ ಖಾಸಗಿ ವಿದ್ವಾಂಸರು ಸೇರಿದಂತೆ ಸರ್ಕಾರ ಮತ್ತು ಕನ್ನಡ – ಸಂಸ್ಕೃತಿ ಇಲಾಖೆಯಿಂದ ನಡೆದಿರುವ‌ ಮಹಾ ಘನಂಧಾರಿ ಕೆಲಸಗಳು ಏನೆಂದರೆ : ತತ್ವಪದಗಳನ್ನು ಹೆಚ್ಚು ಪ್ರಮಾಣದಲ್ಲಿ ಸಂಗ್ರಹಿಸುವ ಮಹಾಕಾರ್ಯ ಮಾಡಿವೆ.

ಮೆಚ್ಚುಗೆಯ ಮತ್ತೊಂದು ವಿಷಯ ಎಂದರೆ ತತ್ವಪದಗಳ ಕೆಲವು ಪ್ರಕಟಿತ ಪುಸ್ತಕಗಳಿಗೆ ಸುದೀರ್ಘ ಪ್ರಸ್ತಾವನೆಗಳು. ಹೌದು ಇದು ಆಗಬೇಕಾದ ಮಹತ್ವದ ಕೆಲಸವೇ ಅಂದುಕೊಳ್ಳೋಣ. ಇದರ ಜತೆಯಲ್ಲಿ ತತ್ವಪದಕಾರರ ಕುರಿತು ಅಲ್ಲಲ್ಲಿ ಸಣ್ಣಪುಟ್ಟ ಪರಿಚಯಾತ್ಮಕ ಪುಸ್ತಕ ಪ್ರಕಟಣೆ ಕೆಲಸಗಳು ಜರುಗಿವೆ. ಆದರೆ ಆಗಲೇಬೇಕಾದ ತತ್ವಪದಗಳ ಮತ್ತು ಪದಕಾರರ ಕುರಿತು ಗಹನ ಅಧ್ಯಯನ, ವ್ಯಾಖ್ಯಾನ, ಅವುಗಳ ಋಜುತ್ವದ ಬೇರುಗಳ ಸಂಶೋಧನೆ ಮತ್ತು ಬಹುಬಗೆಯ ಜ್ಞಾನಶಿಸ್ತುಗಳ ಮೂಲಕ ಕಾಣುವ ವೈಜ್ಞಾನಿಕ ನೆಲೆಯ ಕೆಲಸಗಳು ಆಗೇ ಇಲ್ಲ. ಇದಕ್ಕಾಗಿಯೇ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯ ಅತ್ಯಗತ್ಯವಿದೆ.

ಇತ್ತೀಚಿನವರೆಗೂ ತತ್ವಪದ ಸಾಹಿತ್ಯವನ್ನು ಅಸ್ಪೃಶ್ಯ ಭಾವಗಳಿಂದಲೇ ಕಾಣಲಾಯಿತು. ಸೂತಕ ಪ್ರತೀಕದ ಸಂದರ್ಭಗಳಲ್ಲಿ ಅವುಗಳನ್ನು ತಳಕು ಹಾಕಿ ಬಳಕೆ ಮಾಡಿಕೊಳ್ಳಲಾಯಿತು. ಊರಾಚೆಯ ಗುಡಿ – ಗುಂಡಾರ, ಗುಂಪಾ – ಕೊಂಪೆಗಳಲ್ಲಿ ಅಮಾವಾಸ್ಯೆಯ ಕತ್ತಲು, ಸತ್ತವರ ಮನೆಯ ಸಾವಿನ ಸಾನಿಧ್ಯದ ಎದುರು, ಹೆಣದ ಮುಂದೆ ಹಾಡುವ ರಾತ್ರಿ ಸಮಯ ಪಾರುಮಾಡುವ ಪದಗಳಾಗಿ ತತ್ವಪದಗಳು ರೂಢಿಗೆ ಬಂದವು. ತತ್ವಪದಗಳು ಮತ್ತು ತತ್ವಪದಕಾರರನ್ನು ಪ್ರಧಾನ ಸಂಸ್ಕೃತಿ ಧಾರೆಯ ‘ಜ್ಞಾತಿ’ ನೆಲೆಯಲ್ಲಿ ಸಾಹಿತ್ಯ ಚರಿತ್ರೆಕಾರರು ಗುರುತಿಸಲಿಲ್ಲ. ಹೆಚ್ಚೆಂದರೆ ಅಧೀನ ಸಂಸ್ಕೃತಿಯ ನೆಲೆಯಲ್ಲಿ ನೋಡಲೂ ಹಿಂಜರಿಕೆ

ತೋರಿದರು.
ಅಷ್ಟೇಯಾಕೆ ತತ್ವಪದಗಳನ್ನು ಕಾಲಾಂತರದಲ್ಲಿ ಕೇವಲ ಭಜನೆಪದಗಳಾಗಿಯೇ ನಿರ್ಲಕ್ಷ್ಯಕ್ಕೆ ನಿಗದಿಗೊಳಿಸುವಂತಾಯಿತು. ಬಹುತೇಕ ಜನಸಾಮಾನ್ಯ ಅನಕ್ಷರಸ್ಥರು ಏಕತಾರಿ, ತಾಳ, ದಮಡಿ ಬಳಸಿ ಹಾಡುವ ಜನಪದ ಪ್ರಕಾರಗಳಾಗಿ ಪದಗಳು ಉಳಿದವು. ಆದರೆ ಅವು ಅನುಭಾವ ಜ್ಞಾನಸಂಸ್ಕೃತಿ ಪದಗಳೆಂದು ಪರಿಗಣಿಸಲಿಲ್ಲ. ಹೆಚ್ಚೆಂದರೆ ವಿಶ್ವವಿದ್ಯಾಲಯಗಳ ಕೆಲವು ಅಧ್ಯಾಪಕರ ಪಿಎಚ್.ಡಿ. ಮಹಾಪ್ರಬಂಧಗಳಿಗೆ ನೇರ್ಪುಗೊಳಿಸಿದಂತಾಯಿತು. ಹಾಗೆ ಅನೇಕರ ಸಂಶೋಧನಾ ಪ್ರಬಂಧಗಳಾಗಿ ಪ್ರಕಟಗೊಂಡ ತತ್ವಪದಗಳು ಅವರಿಗೆ ಹೆಸರು, ಹಣ, ಕೀರ್ತಿ, ಪದವಿಗಳನ್ನು ತಂದುಕೊಟ್ಟಿವೆ. ತತ್ಪರಿಣಾಮವಾಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ, ಪ್ರಾಧ್ಯಾಪಕರ ಆಸ್ಥೆ ಮತ್ತು ಆಸಕ್ತಿಯಿಂದಾಗಿ ತತ್ವಪದಗಳು ಹಾಗೂ ಸೂಫಿ ಸಾಹಿತ್ಯ ಇತ್ತೀಚಿಗೆ ಹೆಚ್ಚು ಹೆಚ್ಚಾಗಿ ಮುನ್ನೆಲೆಗೆ ಬರತೊಡಗಿದೆ. ಪ್ರಾಚೀನ ಕಾಲದ ಆಜೀವಕ, ಶ್ರಮಣ, ಅಚಲ ಪರಂಪರೆಗಳೊಂದಿಗೆ ತತ್ವಪದಗಳನು ಅನುಸಂಧಾನಿಸುವ ಜಿಜ್ಞಾಸೆಗಳು. ಇದು ಚಿಂತನಶೀಲ ಬೆಳವಣಿಗೆಯೇ ಹೌದು.

ಕೆಲವು ಆಧುನಿಕರಿಗೆ ಏಕತಾರಿ ಹಿಡಿದು ಏಕಾಂಗಿಯಾಗಿ ಧ್ಯಾನಾಸಕ್ತರಂತೆ ತತ್ವಪದಗಳನ್ನು ಹಾಡುವುದು ಪ್ಯಾಷನ್ ಆಗತೊಡಗಿದೆ. ಮತ್ತೆ ಕೆಲವರಿಗೆ ಕಿರುತೆರೆಗಳಲ್ಲಿ ಹಾಡುವುದು, ವಿವಿಧ ಸಂಗೀತ ಪ್ರಕಾರಗಳ ಮೂಲಕ ಆಧುನೀಕರಿಸಿ ಹಾಡುವುದು ಫ್ಯೂಜನ್ ಕಲ್ಚರ್ ತರಹದ ಬೆಳವಣಿಗೆ. ಹೀಗೆ ವೈವಿಧ್ಯಮಯದ ಡಿಜಿಟಲ್ ಅವಕಾಶಗಳನ್ನು ಬಳಸಿಕೊಂಡು ಹಾಡಿ ವಿದೇಶಗಳಲ್ಲಿ ಸಹಿತ ಸೈ ಅನಿಸಿಕೊಂಡವರು ”ಹೈ ಫೈ” ಕೀರ್ತಿ ಸಂಪತ್ತುಗಳನ್ನು ಗಳಿಸಿದ್ದಾರೆ. ತತ್ವಪದಗಳ ಹೆಸರಲ್ಲಿ ಇವರಿಗೆ ಬಂದಿರುವ ಹಣ, ಹೆಸರುಗಳ ಬಗ್ಗೆ ಯಾರಿಗೂ ಖಂಡಿತಾ ಅಸಹನೆ ಇಲ್ಲ. ಆದರೆ ತತ್ವಪದಗಳು ಮತ್ತು ಪದಕಾರರು ಮಾತ್ರ ತಲುಪಬೇಕಾದ ರೀತಿಯಲ್ಲಿ ಆಧುನಿಕ ಲೋಕಕ್ಕೆ ತಲುಪುತ್ತಿಲ್ಲ ಎಂಬುದು ಖರೇವಂದ್ರ ಖೇದದ ಸಂಗತಿ.

ಅಧ್ಯಾತ್ಮ ಎಂದರೆ ಪಂಡಿತೋತ್ತಮರಿಗೆ ಮೀಸಲಾದ ‘ಫಿಲಾಸಫಿ’ ಎನ್ನುವುದನ್ನು ಅಲ್ಲಗಳೆದವರು ತತ್ವಪದಕಾರರು. ಜನಗನ್ನಡದ ತತ್ವಪದಗಳ ಮೂಲಕ ಸಾಮಾನ್ಯ ಜನರಿಗೆ ಅಧ್ಯಾತ್ಮದ ಸರಳ ತಿರುಳನ್ನು ತಿಳಿಸಿಕೊಟ್ಟವರು. ಹೀಗೆ ತತ್ವಪದಕಾರರೆಂಬ ಜನಸಂಸ್ಕೃತಿಯ ಹರಿಕಾರರು ಸಣ್ಣ ಪುಟ್ಟ ಸ್ಮಾರಕಗಳಂತೆ ತಾವು ಹುಟ್ಟಿ ಬಾಳಿದ ನೆಲದಲ್ಲೇ ಅಜ್ಞಾತಕ್ಕೆ ಸೇರುವಂತಾಗಿದೆ. ಕೆಲವು ಪ್ರಗತಿಪರರು ಆನುಭಾವಿಕ ಸಾಹಿತ್ಯದ ಬಗ್ಗೆ ತಾತ್ವಿಕವಾಗಿ ಮಾತಾಡುವುದು ವಿಶೇಷ ಮತ್ತು ಹೆಮ್ಮೆಯ ವಿಷಯ. ಆ ಮೂಲಕ ಸಾಮಾಜಿಕವಾಗಿ ಮನ್ನಣೆಗೆ ಅವಕಾಶ ದೊರಕಬಲ್ಲದು.

ಬಾಹ್ಯಾಡಂಬರದ ಆಕರ್ಷಣೆಗಳೇನೇ ಇರಲಿ, ತತ್ವಪದಗಳು ಮತ್ತು ಸೂಫಿ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆಗಳು ವಿದ್ವತ್ ವಲಯದಲ್ಲಿ ಜರುಗುತ್ತಿರುವುದು ಮಾತ್ರ ಸಮಾಧಾನ. ಇದು ನಿತಾಂತ ಪ್ರೀತಿ, ಶಿಸ್ತುಬದ್ಧ ಸಂವೇದನೆಗಳೊಂದಿಗೆ ಜರುಗುವ ಕ್ರಿಯೆಯಾಗಬೇಕಿದೆ. ಹಾಗೆಯೇ ಸಮಗ್ರ ತತ್ವಪದಗಳು ಮತ್ತು ಸೂಫಿ ಸಾಹಿತ್ಯದ ಕುರಿತು ಗಂಭೀರ ಸ್ವರೂಪದ ಅಧ್ಯಯನ, ಸಂಶೋಧನೆಗಳ ಕಾರ್ಯ ಜರುಗಬೇಕಿದೆ. ತನ್ಮೂಲಕ ಸೌಹಾರ್ದಭರಿತ ಸ್ವಾಸ್ಥ್ಯಸಮಾಜ ನಿರ್ಮಾಣಕ್ಕೆ ಆನುಷಂಗಿಕ ಫಲ ದೊರಕಲಿದೆ. ಅದಕ್ಕಾಗಿಯೇ ಪ್ರಾಧಿಕಾರ ರಚನೆ ಆಗಬೇಕಾಗಿದೆ.

ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿ ಅಜಮಾಸು ಐದುನೂರಕ್ಕು ಹೆಚ್ಚುಮಂದಿ ತತ್ವಪದಕಾರರು ಬಾಳಿ ಬದುಕಿದ ಚಾರಿತ್ರಿಕ ದಾಖಲೆಗಳಿವೆ. ಇವರೆಲ್ಲರೂ ದಲಿತರಾದಿಯಾಗಿ ಎಲ್ಲ ಕುಲಜಾತಿ, ಧರ್ಮಕ್ಕೆ ಸೇರಿದವರಾಗಿದ್ದಾರೆ. ಇವರಲ್ಲಿ ಮಹಿಳೆಯರು ಸೇರಿದ್ದಾರೆ. ಹೀಗೆ ತತ್ವಪದ ಚಳವಳಿ ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯ ಮೀರಿದ ಬಹುತ್ವ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯೇ ಆಗಿದೆ. ಈ ಎಲ್ಲ ತತ್ವಪದಕಾರರಲ್ಲಿ ಕಡಕೋಳ ಮಡಿವಾಳಪ್ಪನವರಿಗೆ ಅಗ್ರಮಾನ್ಯ ಸ್ಥಾನಮಾನ‌. ಕಡಕೋಳ ಮಡಿವಾಳಪ್ಪನನ್ನು ‘ತತ್ವಪದಗಳ ಅಲ್ಲಮನೆಂದೇ’ ಗುರುತಿಸಲಾಗಿದೆ. ಅದಕ್ಕೆಂದೇ ಕಡಕೋಳ ಮಡಿವಾಳಪ್ಪನ ಹೆಸರಲ್ಲಿ ಸರ್ಕಾರ ತತ್ವಪದಗಳು ಮತ್ತು ಸೂಫಿ ಸಾಹಿತ್ಯದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಿ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಇತ್ತ ಗಮನ ಹರಿಸಲಿ.

Donate Janashakthi Media

Leave a Reply

Your email address will not be published. Required fields are marked *