ರಾಷ್ಟ್ರೀಯ ಮಹಿಳಾ ಆಯೋಗವು ಇತ್ತೀಚೆಗೆ ಮುಸ್ಲಿಂ ವೈಯಕ್ತಿಕ ಕಾನೂನುಗಳ ಪರಿಶೀಲನೆಗೆ ಮಾತ್ರ ಸಮಾಲೋಚನೆ ನಡೆಸಿರುವುದು ಕಳವಳ ಉಂಟು ಮಾಡುವ ಸಂಗತಿ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ಆಯೋಗದ ಅಧ್ಯಕ್ಷೆ ರೇಖಾ ಶರ್ಮರಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.
ಸಮಾಲೋಚನೆಯ ಸಂಪೂರ್ಣ ಒತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಮಾತ್ರ ಆಗಿರುವುದರಿಂದ, ಇತರ ವೈಯಕ್ತಿಕ ಕಾನೂನುಗಳಲ್ಲಿರುವ ಅಸಮತ್ವಗಳನ್ನು ಎತ್ತಿ ತೋರಿಸಲಾಗಿಲ್ಲ. ಇದು ಕೇವಲ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸುಧಾರಣೆಯ ಅಗತ್ಯವಿದೆ ಎಂಬ ಮೋದಿ ಸರ್ಕಾರದ ಪ್ರಚಾರದ ಕೋಮುವಾದೀ ನಿಲುವನ್ನು ಎತ್ತಿ ಹಿಡಿದಿದೆ. ಏಕರೂಪ ನಾಗರಿಕ ಸಂಹಿತೆಯ ಕರೆಯೊಂದಿಗೆ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಗುರಿಯಾಗಿಸಿಕೊಂಡಿರುವುದು, ಸರ್ಕಾರವು ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಲಿಕ್ಕಾಗಿಯೇ ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ.
ಇತ್ತೀಚೆಗೆ, ಕೇಂದ್ರ ಗೃಹ ಸಚಿವರು ಸರ್ಕಾರವು ಕ್ರಿಶ್ಚಿಯನ್ನರು ಮತ್ತು ಕೆಲವು ಬುಡಕಟ್ಟು ಪ್ರದೇಶಗಳನ್ನು ಏಕರೂಪ ನಾಗರಿಕ ಸಂಹಿತೆಯ ವ್ಯಾಪ್ತಿಯಿಂದ ವಿನಾಯಿತಿಯನ್ನು ಪರಿಗಣಿಸುತ್ತದೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿ ನೇತೃತ್ವದ ನಾಗಾಲ್ಯಾಂಡ್‌ನ 12 ಸದಸ್ಯರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಈ ಅಭಿಪ್ರಾಯವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.
ರಾಷ್ಟ್ರೀಯ ಮಹಿಳಾ ಆಯೋಗವು ಪ್ರಸ್ತುತ ಸರ್ಕಾರದ ನೀತಿಯನ್ನು ಮಾತ್ರ ಮುಂದುವರಿಸುವ ಮತ್ತು ದೇಶಾದ್ಯಂತ ಮಹಿಳೆಯರು ಎದುರಿಸುತ್ತಿರುವ ಇತರ ಸಮಸ್ಯೆಗಳ ನಡುವೆ ಹಿಂಸಾಚಾರದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳದ ಸಂಸ್ಥೆಯಾಗಿ ತೋರುತ್ತಿದೆ ಎಂದು ಪದೇ ಪದೇ ಎಐಡಿಡಬ್ಲ್ಯುಎ ಗಮನಸೆಳೆದಿದೆ. ಉದಾಹರಣೆಗೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸಿದ ಹೋರಾಟ ಮತ್ತು ಅಭಿಯಾನದ ಉದ್ದಕ್ಕೂ, ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗವು ಮೂಕ ಪ್ರೇಕ್ಷಕವಾಗಿತ್ತು.
‘ಏಕರೂಪ ನಾಗರಿಕ ಸಂಹಿತೆಯೊಂದು ಇಲ್ಲದಿರುವುದು ನಮ್ಮ ವೈವಿಧ್ಯಮಯ ರಾಷ್ಟ್ರದಲ್ಲಿ ಅಸಮಾನತೆಗಳು ಮತ್ತು ಅಸಂಗತತೆಗಳನ್ನು ಶಾಶ್ವತಗೊಳಿಸಿದೆ, ಸಾಮಾಜಿಕ ಸಾಮರಸ್ಯ, ಆರ್ಥಿಕ ಬೆಳವಣಿಗೆ ಮತ್ತು ಲಿಂಗ ನ್ಯಾಯದ ಕಡೆಗೆ ಪ್ರಗತಿಗೆ ಅಡ್ಡಿಯಾಗಿದೆ’ ಎಂದು ರಾಷ್ಟ್ರೀಯ ಆಯೋಗವು ತಪ್ಪಾದ ಹೇಳಿಕೆಯನ್ನು ನೀಡಿದೆ. ಸಾಮರಸ್ಯ ಮತ್ತು ಆರ್ಥಿಕ ಬೆಳವಣಿಗೆ ಅಥವಾ ಸಮುದಾಯಗಳಾದ್ಯಂತ ಕಾನೂನುಗಳ ಲಿಂಗ ನ್ಯಾಯಕ್ಕೆ ವೈವಿಧ್ಯತೆಗಳು ಹೇಗೆ ಅಡ್ಡಿಯಾಗಲು ಸಾಧ್ಯ? ಕೇವಲ ಏಕರೂಪತೆಯಿಂದ ಲಿಂಗ ನ್ಯಾಯಕ್ಕೆ ಪ್ರೋತ್ಸಾಹ ಸಿಗುವುದಿಲ್ಲ. ಎಐಡಿಡಬ್ಲ್ಯುಎ ಏಕರೂಪದ ನಾಗರಿಕ ಸಂಹಿತೆಯ ಪರವಾಗಿಲ್ಲ ಮತ್ತು ಏಕರೂಪತೆಯ ಕಾನೂನುಗಳು ತಾವಾಗಿಯೇ ಸಮಾನತೆಯ ಕಾನೂನುಗಳಾಗುವುದು ಸಾಧ್ಯವಿಲ್ಲ ಆದ್ದರಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿವಿಧ ಸಮುದಾಯಗಳ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಬೇಕು. ಏಕರೂಪತೆಯ ಹೆಸರಿನಲ್ಲಿ, ಬಹುಸಂಖ್ಯಾತ ಸಮುದಾಯದ ಕಾನೂನುಗಳೇ ಏಕರೂಪ ನಾಗರಿಕ ಸಂಹಿತೆಯೆಂಬುದಕ್ಕೆ ಆಧರವಾಗಿ ಬಿಡಬಹುದು ಎಂಬ ಭೀತಿ ಎಐಡಿಡಬ್ಲ್ಯುಎಗಿದೆ ಎಂದು ಈಪತ್ರ ಹೇಳಿದೆ.
ಇದನ್ನೂ ಓದಿ:ಉತ್ತರಾಧಿಕಾರ- ತೆರಿಗೆ ಕಾನೂನು- ಏಕರೂಪ ನಾಗರಿಕ ಸಂಹಿತೆ
21 ನೇ ಕಾನೂನು ಆಯೋಗ ಕೂಡ ಸಾಕ್ಷ್ಯಾಧಾರಗಳನ್ನು ವ್ಯಾಪಕವಾಗಿ ಪರಿಶೀಲಿಸಿದ ನಂತರ, ಭಾರತದಲ್ಲಿ ಇಂದು ಏಕರೂಪ ನಾಗರಿಕ ಸಂಹಿತೆಯನ್ನು ಹೊಂದುವುದು ಅಗತ್ಯವಿಲ್ಲ ಅಥವಾ ಅಪೇಕ್ಷಣೀಯೂ ಅಲ್ಲ ಎಂಬ ತೀರ್ಮಾನಕ್ಕೆ ಬಂದಿತು. ವಾಸ್ತವವಾಗಿ, ವೈಯಕ್ತಿಕ ಕಾನೂನಿನ ವಿವಿಧ ಅಂಶಗಳು ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೊಂದಿವೆ ಮತ್ತು ಈ ತಾರತಮ್ಯವೇ ಅಸಮಾನತೆಯ ಮೂಲದಲ್ಲಿದೆ ಎಂಬುದನ್ನೂ ಅದು ಗುರುತಿಸಿದೆತ್ತು. ‘ಭೀನ್ನತೆಯಿದೆ ಎಂಬುದು ಮಾತ್ರವೇ ತಾರತಮ್ಯವಿದೆ ಎಂಬುದನ್ನು ಸೂಚಿಸುವುದಿಲ್ಲ, ಬದಲಿಗೆ ಅದು ಒಂದು ಗಟ್ಟೊಯಾದ ಪ್ರಜಾಪ್ರಭುತ್ವದ ಸೂಚಕ’ ಎಂದೂ ಕಾನೂನು ಆಯೋಗ ಹೇಳಿತ್ತು ಎಂಬುದನ್ನು ನೆನಪಿಸಿರುವ ಎಐಡಿಡಬ್ಲ್ಯುಎ ಪತ್ರ, ಹೀಗಿದ್ದರೂ ಈಗಿನ ಸರಕಾರ 21ನೇ ಕಾನೂನು ಆಯೋಗ ಸೂಚಿಸಿರುವ ಸುಧಾರಣೆಗಳನ್ನು ಜಾರಿಗೊಳೀಸದೆಯೇ, ಏಕರೂಪ ನಾಗರಿಕ ಸಂಹಿತೆಗೇ ಒತ್ತು ಕೊಟ್ಟಿರುವುದೇಕೆ? ಅಲ್ಲದೆ ಈ ಕುರಿತು ಒಂದು ನೀಲನಕ್ಷೆಯನ್ನೂ ಕೊಡದೆ ಮುಸ್ಲಿಂ ವೈಯಕ್ತಿಕ ಕಾನೂನುಗಳ ಬಗ್ಗೆಯಷ್ಟೇ ಕೂಡಲೇ ಚರ್ಚೆಗಿಳಿದು ಈ ಪ್ರಶ್ನೆಯನ್ನು ಕೋಮುವಾದೀಕರಿಸಲು ಪ್ರಯತ್ನಿಸುತ್ತಿದೆ.
ಸರ್ಕಾರಕ್ಕೆ ನಿಜವಾಗಿಯೂ ಸುಧಾರಣೆಗಳಲ್ಲಿ ಆಸಕ್ತಿ ಇದ್ದರೆ, ವಿವಿಧ ಸಮುದಾಯಗಳೊಂದಿಗೆ, ವಿಶೇಷವಾಗಿ ಆಯಾಯ ಸಮುದಾಯದ ಮಹಿಳೆಯರೊಂದಿಗೆ ಸರಿಯಾದ ಸಮಾಲೋಚನೆಗಳ ನಂತರ ವಿಭಿನ್ನ ವೈಯಕ್ತಿಕ ಕಾನೂನುಗಳಲ್ಲಿ ಸಮಾನತೆಯನ್ನು ತರಬಹುದಿತ್ತು. ಎಲ್ಲರಿಗೂ ಅನ್ವಯಿಸುವ ವಿಷಯಗಳಲ್ಲಿ ಈಗಾಗಲೇ ವರದಕ್ಷಿಣೆ ನಿಷೇಧ ಕಾಯಿದೆ, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮತ್ತು ಮನೆಯೊಳಗಿನ ಹಿಂಸಾಚಾರದಿಂದ ಮಹಿಳೆಯರಿಗೆ ರಕ್ಷಣೆಯಂತಹ ಹಲವಾರು ಸಾಮಾನ್ಯ ಕಾನೂನುಗಳನ್ನು ತರಲಾಗಿದೆ. ಇದಲ್ಲದೆ, ಕ್ರಿಶ್ಚಿಯನ್ನರಿಗೆ ಅನ್ವಯವಾಗುವ 1869 ರ ಭಾರತೀಯ ವಿಚ್ಛೇದನ ಕಾಯಿದೆ ಮತ್ತು 1956 ರ ಹಿಂದೂ ಉತ್ತರಾಧಿಕಾರ ಕಾಯಿದೆಯಂತಹ ವಿವಿಧ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಯ ಇತಿಹಾಸವನ್ನು ಭಾರತ ಹೊಂದಿದೆ.
ನಿಜ ಹೇಳಬೇಕೆಂದರೆ, ಮಹಿಳೆಯರಿಗೆ ಸಂಬಂಧಪಟ್ಟಂತೆ ಕಾನೂನುಗಳಲ್ಲಿ ಸುದಾರಣೆಯ ವಿಷಯದಲ್ಲಿ ಪ್ರಸ್ತುತ ಸರ್ಕಾರದ ದಾಖಲೆಯು ಕೆಟ್ಟದಾಗಿದೆ. ಉದಾಹರಣೆಗೆ, ಮಹಿಳಾ ಸಂಘಟನೆಗಳು ಗೌರವದ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧಗಳು ಮತ್ತು ಹತ್ಯೆಗಳ ಮೇಲೆ ಸಮಗ್ರ ಕಾನೂನನ್ನು ಸೂಚಿಸಿವೆ, ಆದರೆ ಇದನ್ನು ಮಾಡಲಾಗಿಲ್ಲ. ಕೆಲವು ಸಮಯದಿಂದ, ಮಹಿಳಾ ಸಂಘಟನೆಗಳು ಕೃಷಿ ಆಸ್ತಿಗಳಲ್ಲಿ ಸಮಾನ ಹಕ್ಕುಗಳಿಗಾಗಿ ಪ್ರಚಾರ ಮಾಡುತ್ತಿವೆ, ಆದರೆ ಉತ್ತರಾಖಂಡದಂತಹ ರಾಜ್ಯಗಳು ವಿವಾಹಿತ ಮಹಿಳೆಯನ್ನು ಕೃಷಿ ಭೂಮಿ/ಆಸ್ತಿಯನ್ನು ಆನುವಂಶಿಕವಾಗಿ ಪಡೆಯದಂತೆ ತಡೆಯುವ ಕಾನೂನನ್ನು ಉಳಿಸಿಕೊಂಡಿವೆ. ಮಹಿಳೆಯ ಸ್ವಯಂ-ಗಳಿಕೆಯ ಆಸ್ತಿಯ ಉತ್ತರಾಧಿಕಾರಕ್ಕಾಗಿ ಹೆಚ್ಚು ಸಮಾನ ಕಾನೂನುಗಳನ್ನು ಮಾಡಲು ಹಿಂದೂ ಉತ್ತರಾಧಿಕಾರ ಕಾಯಿದೆಗೆ ತಿದ್ದುಪಡಿ ಮಾಡಬೇಕಾಗಿದೆ, ಆದರೆ ಇದನ್ನು ಮಾಡಲಾಗಿಲ್ಲ.. ಮತ್ತೊಂದೆಡೆ, ವಿವಿಧ ರಾಜ್ಯಗಳು ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಗಳೆಂಬ ವೇಷದಲ್ಲಿ ಅಂತರ್ಧರ್ಮೀಯ ವಿವಾಹ ಮತ್ತು ಮತಾಂತರಗಳನ್ನು ಗುರಿಯಾಗಿಸುವ ಕಠಿಣ ಕಾನೂನುಗಳನ್ನು ತಂದಿವೆ.
ಆದ್ದರಿಂದ ರಾಷ್ಟ್ರೀಯ ಮಹಿಳಾ ಆಯೋಗವು ನಡೆಸಿದ ಸಮಾಲೋಚನೆಯು ಕೇವಲ ಮುಸ್ಲಿಂ ವೈಯಕ್ತಿಕ ಕಾನೂನನ್ನು ಗುರಿಯಾಗಿಸಿಕೊಂಡಿದೆಯೇ ಹೊರತು ಇತರ ಅಸಮಾನತೆಯ ವೈಯಕ್ತಿಕ ಕಾನೂನುಗಳ ಕಡೆಗೆ ಅಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದಿರುವ ಎಐಡಿಡಬ್ಲ್ಯುಎ, ರಾಷ್ಟ್ರೀಯ ಮಹಿಳಾ ಆಯೋಗವು 21 ನೇ ಕಾನೂನು ಆಯೋಗವು ಸೂಚಿಸಿದ ರೀತಿಯಲ್ಲಿ ಕೆಲಸ ಮಾಡಬೇಕು ಮತ್ತು ವಿವಿಧ ಸಮುದಾಯಗಳು ಮತ್ತು ಮಹಿಳಾ ಸಂಘಟನೆಗಳು ಮತ್ತು ಗುಂಪುಗಳೊಂದಿಗೆ ಸಮಾಲೋಚಿಸಿ ವಿವಿಧ ವೈಯಕ್ತಿಕ ಕಾನೂನುಗಳಲ್ಲಿ ಸಮಾನತೆಯನ್ನು ತರಬೇಕೆಂದು ಸರ್ಕಾರವನ್ನು ಕೇಳಬೇಕು ಎಂದು ಆಗ್ರಹಿಸಿದೆ. ವೈವಾಹಿಕ ಆಸ್ತಿ, ಮರ್ಯಾದಾ ಹತ್ಯೆಗಳು ಮತ್ತು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಗುರುತಿಸಲು ಪ್ರತ್ಯೇಕ ಕಾನೂನುಗಳನ್ನು ತರಬೇಕೆಂದು ಸರ್ಕಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ ವಿನಂತಿಸಬೇಕು ಎಂದೂ ಎಐಡಿಡಬ್ಲ್ಯುಎ ಈ ಪತ್ರದಲ್ಲಿ ರೇಖಾ ಶರ್ಮರವರನ್ನು ಆಗ್ರಹಿಸಿದೆ.