ನವದೆಹಲಿ: ದೇಶದ್ರೋಹ ಕಾಯ್ದೆಯಡಿ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದು ಬ್ರಿಟಿಷರ ಕಾಲದ ಕಾನೂನಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಬಳಿಕವೂ ದೇಶದ್ರೋಹ ಕಾಯ್ದೆಯ ಅಗತ್ಯವಿದೆಯಾ? ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ದೇಶದ್ರೋಹದ ಕಾಯ್ದೆ ದುರ್ಬಳಕೆಯಾಗುತ್ತಿದೆ. ಇದೊಂದು ಬ್ರಿಟಿಷ್ ಕಾಲದ ಕಾನೂನು. ರಾಷ್ಟ್ರದ್ರೋಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ದೇಶದ್ರೋಹ ಕಾಯ್ದೆ ರದ್ದುಪಡಿಸಲು ಕೋರಿ ಕರ್ನಾಟಕದ ಎಸ್.ಜಿ. ಒಂಭತ್ತಕೆರೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ವಿಚಾರಣೆಯನ್ನು ನಡೆಸಿತು.
ಇದನ್ನು ಓದಿ: ಐಪಿಸಿಯಿಂದ ರಾಷ್ಟ್ರದ್ರೋಹದ ಸೆಕ್ಷನ್ 124ಎ ವಜಾ ಅರ್ಜಿ : ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಐಪಿಸಿ ಸೆಕ್ಷನ್ 124ಎ ಅಡಿಯಲ್ಲಿ ಬರುವ ದೇಶದ್ರೋಹ ಕಾಯ್ದೆಯು ಭಾರತೀಯ ಪ್ರಜೆಗಳ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಬ್ರಿಟಿಷರ ಕಾಲದಲ್ಲಿ ಜಾರಿಗೆ ಬಂದ ದೇಶದ್ರೋಹ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ನ್ಯಾಯಪೀಠದ ಮುಂದೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ʻನಮ್ಮ ಆತಂಕವಿರುವುದು ಕಾನೂನಿನ ದುರ್ಬಳಕೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ಇಲ್ಲದೆ ಇರುವುದು. ನೀವು ಇತಿಹಾಸವನ್ನು ಗಮನಿಸಿದರೆ ಈ ಪ್ರಕರಣದ ಹೇರಿಕೆಯಲ್ಲಿ ಅತ್ಯಲ್ಪ ಸಂಖ್ಯೆಯ ಶಿಕ್ಷೆಗಳಾಗಿವೆ ಮತ್ತು ಶಿಕ್ಷೆಯ ಪ್ರಮಾಣ ಕಡಿಮೆ ಇದೆ’ ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ‘ನಾವು ಯಾವುದೇ ಸರಕಾರವನ್ನು ದೂಷಣೆ ಮಾಡುತ್ತಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ರದ್ದುಪಡಿಸಿದರೂ ಸಹ ಅದೇ ಕಾಯ್ದೆಯಡಿ ಜನರನ್ನು ಬಂಧಿಸಲಾಗುತ್ತಿದೆ. ಎಷ್ಟೋ ಮಂದಿ ದುರದೃಷ್ಟವಂತ ಜನರು ಸಂಕಷ್ಟ ಅನುಭವಿಸಿದ್ದಾರೆ. ಕಾನೂನು ದುರುಪಯೋಗ ನಡೆದರೂ ಇದಕ್ಕೆ ಯಾವ ಹೊಣೆಗಾರಿಕೆಯೂ ಇಲ್ಲʼ ಎಂದು ತಿಳಿಸಿದರು.
ಇದನ್ನು ಓದಿ: ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್: ನ್ಯಾ. ನಾಗಮೋಹನ್ ದಾಸ್
ವಸಾಹತುಶಾಹಿ ಕಾಲದ ದೇಶದ್ರೋಹ ಕಾಯ್ದೆಯನ್ನು ಬಳಸಿಕೊಂಡು ಬ್ರಿಟಿಷರು ಮಹಾತ್ಮ ಗಾಂಧೀಜಿಯವರ ಬಾಯಿ ಮುಚ್ಚಿಸಲು ಬಳಸಿದ್ದರು. ನಮ್ಮ ಆತಂಕವೆಂದರೆ ಈ ಕಾನೂನಿನ ದುರ್ಬಳಕೆ ಮತ್ತು ಸರಕಾರದ ಹೊಣೆಗಾರಿಕೆ ಇಲ್ಲದೆ ಇರುವುದು. ದೇಶದ್ರೋಹ ಕಾನೂನನ್ನು ಅನೇಕ ಅರ್ಜಿಗಳ ಮೂಲಕ ಪ್ರಶ್ನಿಸಲಾಗಿದೆ. ಇವುಗಳನ್ನೆಲ್ಲ ಒಟ್ಟಿಗೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಸಿತು.
ಬ್ರಿಟಿಷರು ತಮ್ಮ ವಿರುದ್ಧ ಪ್ರತಿಭಟನೆ, ಹೋರಾಟಗಳನ್ನು ನಡೆಸುವ ಭಾರತೀಯರನ್ನು ಹತ್ತಿಕ್ಕಲು 1870ರಲ್ಲಿ ದೇಶದ್ರೋಹ ಕಾನೂನು ಜಾರಿಗೆ ತಂದಿದ್ದರು. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸರಕಾರವು ಅನೇಕ ಕಾನೂನುಗಳನ್ನು ರದ್ದುಗೊಳಿಸುತ್ತಿದೆ. ಆದರೆ ಇದರ ಬಗ್ಗೆ ಏಕೆ ಅವರು ಗಮನ ಹರಿಸುತ್ತಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ.