ಪ್ರೊ. ಪ್ರಭಾತ್ ಪಟ್ನಾಯಕ್
ಉತ್ಪಾದನೆಯಲ್ಲಿ ಸೃಷ್ಟಿಯಾಗುವ ಹೆಚ್ಚುವರಿ ಮೌಲ್ಯದ ಹೊರತಾಗಿಯೂ, ಶ್ರೀಮಂತ ಕುಳಗಳಿಗೆ ಅಧಿಕವಾಗಿ ಬರುವ ಆದಾಯದ ಮೂಲವೆಂದರೆ, ಬಂಡವಾಳದ ಆದಿಮ ಸಂಗ್ರಹಣೆಯೇ. ಆದ್ದರಿಂದ, ಈ ಶ್ರೀಮಂತ ಕುಳಗಳ ದೃಷ್ಟಿಯಲ್ಲಿ ಹಣದುಬ್ಬರಕ್ಕಿಂತಲೂ ನಿರುದ್ಯೋಗವೇ ಕಡಿಮೆ ಮಹತ್ವ ಪಡೆದಿದೆ. ಸರ್ಕಾರವೂ ಅದನ್ನೇ ಅನುಮೋದಿಸುತ್ತದೆ. ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ನಿರುದ್ಯೋಗವನ್ನು ಹೆಚ್ಚಿಸುವ ನೀತಿಯು, ಅಧಿನಾಯಕ ವರ್ಗದ ಹಿತಾಸಕ್ತಿಗಳಿಗೆ ಬಂಡವಾಳಶಾಹಿ ಸರ್ಕಾರಗಳ ಲಜ್ಜೆಗೆಟ್ಟ ಅಧೀನತೆಯನ್ನು ಸ್ಪಷ್ಡವಾಗಿ ತೋರಿಸುತ್ತದೆ. ಹಾಗಾಗಿ, ಅವಕ್ಕೆ ನಿರುದ್ಯೋಗ ಸಮಸ್ಯೆಗಿಂತಲೂ ಹಣದುಬ್ಬರವೇ ಹೆಚ್ಚಿನ ಆದ್ಯತೆಯ ವಿಷಯ.
ನಿರುದ್ಯೋಗ ಹೆಚ್ಚಿದರೂ ಅಡ್ಡಿಯಿಲ್ಲ, ಹಣದುಬ್ಬರ ಮಾತ್ರ ನಿಯಂತ್ರಣದಲ್ಲಿರಲೇಬೇಕು ಎಂಬ ನಿಲುವನ್ನು ಎಲ್ಲ ಬಂಡವಾಳಶಾಹಿ ಸರ್ಕಾರಗಳೂ ತಳೆಯುತ್ತವೆ. ಸರ್ಕಾರಗಳ ಈ ನಿಲುವಿಗೂ ಮತ್ತು ನಿರುದ್ಯೋಗ – ಹಣದುಬ್ಬರ ಇವುಗಳ ನಡುವೆ ಒಂದು ಸಮತೋಲನವಿರಬೇಕು ಎಂಬ ತಿಳುವಳಿಕೆಗೂ ಸಂಬಂಧವೇ ಇಲ್ಲ. ಹಣದ ಅತಿಯಾದ ಪೂರೈಕೆಯಿಂದಾಗಿ (“ಅತಿ ಹೆಚ್ಚು ಹಣವು ಅತಿ ಕಡಿಮೆ ಸರಕುಗಳ ಹಿಂದೆ ಬೀಳುವ ಪರಿಸ್ಥಿತಿ”) ಹಣದುಬ್ಬರ ಉಂಟಾಗುತ್ತದೆ ಎಂದು ಭಾವಿಸುವವರು, ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಬಹುದು ಎಂದು ಭಾವಿಸುತ್ತಾರೆ. ಒಟ್ಟಾರೆ ಖರ್ಚುಗಳನ್ನು ಕಡಿತಗೊಳಿಸಿದಾಗ ನಿರುದ್ಯೋಗ ಹೆಚ್ಚುತ್ತದೆ ಎಂಬುದು ಗೊತ್ತಿದ್ದರೂ ಸಹ, ಈ ಎಲ್ಲರೂ, ನಿರುದ್ಯೋಗ ಹೆಚ್ಚಿದರೂ ಸರಿಯೇ, ಹಣದುಬ್ಬರವನ್ನು ಮಾತ್ರ ಅಂಕೆಯಲ್ಲಿಡುವ ನಿಲುವನ್ನೇ ತಳೆಯುತ್ತಾರೆ.
ಈ ನಿಲುವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇವರೆಲ್ಲರೂ ಈ ನಿಲುವನ್ನೇ ಏಕೆ ತಳೆಯುತ್ತಾರೆ ಎಂಬುದು ಮೊದಲನೆಯ ಪ್ರಶ್ನೆ. ಹಣದುಬ್ಬರವನ್ನು ಅಂಕೆಯಲ್ಲಿಡಲು ಸರ್ಕಾರಗಳು ಬೆಲೆನಿಯಂತ್ರಣ ಮತ್ತು ಅದರ ಜೊತೆಯಲ್ಲಿ ಪಡಿತರದಂತಹ ನೇರ ಕ್ರಮಗಳನ್ನು ಕೈಗೊಳ್ಳುವ ಮೂಲಕ ಉದ್ಯೋಗಗಳು ಉನ್ನತ ಮಟ್ಟದಲ್ಲೇ ಉಳಿಯುವಂತೆ ಏಕೆ ನೋಡಿಕೊಳ್ಳುವುದಿಲ್ಲ? ಉತ್ತರ ಬಹಳ ಸ್ಪಷ್ಟವಿದೆ: ಅರ್ಥವ್ಯವಸ್ಥೆಯಲ್ಲಿ ಸರ್ಕಾರವು ನೇರ ಹಸ್ತಕ್ಷೇಪ ಮಾಡುವುದನ್ನು ಬಂಡವಾಳಗಾರರು ಇಳ್ಟಪಡುವುದಿಲ್ಲ. ಏಕೆಂದರೆ, ಈ ಹಸ್ತಕ್ಷೇಪವು ಜನರ ಮನಸ್ಸಿನಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಸಾಮಾಜಿಕ ಔಚಿತ್ಯದ ಮೂಲಭೂತ ಪ್ರಶ್ನೆಯನ್ನೇ ಎತ್ತುತ್ತದೆ: ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅದರ ಹುಳುಕುಗಳನ್ನು ಮುಚ್ಚಲು ಸರ್ಕಾರದ ನೇರ ಹಸ್ತಕ್ಷೇಪ ಅನಿವಾರ್ಯ ಎಂದಾದರೆ, ಅಂತಹ ಒಂದು ವ್ಯವಸ್ಥೆಯಿಂದ ಆಗುವ ಪ್ರಯೋಜನವಾದರೂ ಏನು?
ಎರಡನೆಯ ಪ್ರಶ್ನೆ ಎಂದರೆ, ಕಾರ್ಮಿಕರು ಕಡಿಮೆ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾಗ, ಸೃಷ್ಟಿಯಾಗುವ ಹೆಚ್ಚುವರಿ ಮೌಲ್ಯದ ಪ್ರಮಾಣವೂ ಸಣ್ಣದೇ ಇದ್ದರೂ ಸಹ, ಹಣದುಬ್ಬರವನ್ನು ಅಂಕೆಯಲ್ಲಿಡುವ ಸಲುವಾಗಿ ಕೈಗೊಳ್ಳುವ ಕ್ರಮಗಳಿಂದಾಗಿ ನಿರುದ್ಯೋಗ ಹೆಚ್ಚುವ ಒಂದು ವ್ಯತಿರಿಕ್ತ ಪರಿಸ್ಥಿತಿ ಬಂಡವಾಳಗಾರರಿಗೆ ಎದುರಾಗುತ್ತದೆಯಾದರೂ, ಬಂಡವಾಳಶಾಹಿ ಸರ್ಕಾರಗಳು ಹಣದುಬ್ಬರದ ಬಗ್ಗೆಯೇ ಹೆಚ್ಚಿನ ಕಾಳಜಿಯನ್ನು ಏಕೆ ತೋರಿಸುತ್ತವೆ? ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಳಸುವ ನಿರುದ್ಯೋಗದ ಆಯುಧವನ್ನು ಹಣದುಬ್ಬರವು ಅತಿ ಹೆಚ್ಚಿನ ಮಟ್ಟದಲ್ಲಿದ್ದಾಗ ಮಾತ್ರ ಬಳಸಲಾಗುತ್ತದೆ ಎಂದೇನೂ ಅಲ್ಲ. ಕೆಳ ಅಥವಾ ಮಧ್ಯಮ ಮಟ್ಟದ ಹಣದುಬ್ಬರವಿದ್ದಾಗಲೂ ನಿರುದ್ಯೋಗದ ಆಯುಧವನ್ನೇ ಬಳಸಲಾಗುತ್ತದೆ. ಒಂದು ಉದಾಹರಣೆಯಾಗಿ ಹೇಳುವುದಾದರೆ, ಕೊರೊನಾ ಅಪ್ಪಳಿಸುವ ಮೊದಲಿನ ಪರಿಸ್ಥಿತಿಗೆ ಹೋಲಿಸಿದರೆ, ಅಮೆರಿಕಾದಲ್ಲಿ ಲಕ್ಷಾಂತರ ಜನರು ಇನ್ನೂ ನಿರುದ್ಯೋಗಿಗಳಾಗಿ ಉಳಿದಿದ್ದರೂ ಸಹ, ಹಣದುಬ್ಬರ ದರವು 2021ರ ಡಿಸೆಂಬರ್‌ನಲ್ಲಿ ಶೇಕಡಾ 7ರ ಮಟ್ಟ ತಲುಪಿತು ಎಂಬ ಒಂದೇ ಒಂದು ಕಾರಣದ ಮೇಲೆ ಬಡ್ಡಿ ದರಗಳನ್ನು ಏರಿಸಲಾಗುತ್ತಿದೆ. ಇದು 1982ರ ನಂತರದ ಅವಧಿಯಲ್ಲಿ ಕಂಡ ಅತಿ ಹೆಚ್ಚಿನದು ಎಂಬ ಅಂಶವು, ಕಳೆದ 40 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ಅಮೆರಿಕಾದ ಎಲ್ಲ ಸರ್ಕಾರಗಳ ಆದ್ಯತೆಯೂ ಹಣದುಬ್ಬರವನ್ನು ನಿಯಂತ್ರಿಸುವುದೇ ಆಗಿತ್ತು ಎಂಬುದನ್ನು ತಿಳಿಸುತ್ತದೆ.
ಹಣದುಬ್ಬರದ ಸಂದರ್ಭದಲ್ಲಿ, ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ ಲೇಬರ್ ಪಕ್ಷದ ಟೋನಿ ಬ್ಲೇರ್ ಅವರು ಒಮ್ಮೆ ಹೀಗೆ ಹೇಳಿದ್ದರು: ಹಣದುಬ್ಬರವನ್ನು “ಶೇ.2.5ಕ್ಕಿಂತ ಕಡಿಮೆ” ಮಟ್ಟದಲ್ಲಿರುವಂತೆ ನೋಡಿಕೊಳ್ಳುವ ಟೋರಿಗಳ (ಅಂದರೆ, ಕನ್ಸರ್‌ವೇಟಿವ್ ಪಕ್ಷದ) ಗುರಿಯು ಅಸಮರ್ಪಕವಾಗಿತ್ತು. ಟೋನಿ ಬ್ಲೇರ್ ಅವರ ಈ ಮಾತುಗಳಲ್ಲಿದ್ದ ಸೂಚ್ಯಾರ್ಥವೇನೆಂದರೆ, ನಿರುದ್ಯೋಗವು ಎಳ್ಟೇ ಹೆಚ್ಚಿನ ಮಟ್ಟದಲ್ಲಿದ್ದರೂ ಸರಿಯೇ, ಯಾವ ಬೆಲೆಯನ್ನು ತೆತ್ತಾದರೂ ಸರಿಯೇ, ದೇಶವು ಶೂನ್ಯ ಹಣದುಬ್ಬರ ಮಟ್ಟವನ್ನು ಸಾಧಿಸಲೇಬೇಕು ಎಂಬುದು. ಬ್ಲೇರ್ ಅವರ ಈ ನಿಲುವು, ಲೇಬರ್ ಪಕ್ಷವು ಹಿಂದೆ ಹೊಂದಿದ್ದ ಪೂರ್ಣ ಉದ್ಯೋಗ ಸಾಧಿಸುವ ಗುರಿಗೆ ತದ್ವಿರುದ್ಧವಾಗಿತ್ತು.
ಹಣದುಬ್ಬರವು ಎಷ್ಟೇ ಕೆಳ ಮಟ್ಟದಲ್ಲಿರಲಿ, ಅದರಲ್ಲಿ ಕೊಂಚ ಏರಿಕೆಯಾದರೂ ಸರ್ಕಾರಗಳು ಥರಗುಟ್ಟುತ್ತವೆ ಮತ್ತು ಅದನ್ನು ತಗ್ಗಿಸಲು ನಿರುದ್ಯೋಗ ಹೆಚ್ಚುವಂತಹ ಕ್ರಮಗಳನ್ನು ಕೈಗೊಳ್ಳುತ್ತವೆ. ಅಂದರೆ, ಅವರು ನಿರುದ್ಯೋಗಕ್ಕಿಂತಲೂ ಹೆಚ್ಚಾಗಿ ಹಣದುಬ್ಬರದ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗೇಕೆ?
ಈ ಬಗ್ಗೆ, ಟೋನಿ ಬ್ಲೇರ್ ಮತ್ತು ಬಲಪಂಥೀಯ ಅರ್ಥಶಾಸ್ತ್ರಜ್ಞರು ಹೇಳುವುದೇನೆಂದರೆ, ಹಣದುಬ್ಬರವು ಕೆಳ ಮಟ್ಟದಲ್ಲಿದ್ದಾಗ, ಆರ್ಥಿಕ ಬೆಳವಣಿಗೆಯು ವೇಗ ಪಡೆಯುತ್ತದೆ ಮತ್ತು ಅದರಿಂದಾಗಿ ದೀರ್ಘಾವಧಿಯಲ್ಲಿ ಸ್ಥಿರ ಉದ್ಯೋಗಗಳು ಲಭಿಸುತ್ತವೆ ಎಂಬುದು. ಆದರೆ, ಇದು ಕೇಳಲಿಕ್ಕೆ ಹಿತವಷ್ಟೇ. ವಾಸ್ತವವಾಗಿ ಆಗುವುದೇ ಬೇರೆ. ಹಣಕಾಸು ನೀತಿ ಮತ್ತು ವಿತ್ತ ನೀತಿಗಳನ್ನು ಬಿಗಿ ಕಟ್ಟುಪಾಡುಗಳೊಂದಿಗೆ ಬಳಸಿದಾಗ ನಿರುದ್ಯೋಗ ಹೆಚ್ಚುತ್ತದೆ. ಇದು ಸ್ಥಾಪಿತ ಸಾಮರ್ಥ್ಯವು ಪೂರ್ಣವಾಗಿ ಬಳಕೆಯಾಗದೆ ಉಳಿಯಲು ಕಾರಣವಾಗುತ್ತದೆ. ಈ ಪರಿಸ್ಥಿತಿಯು, ಖಾಸಗಿ ಹೂಡಿಕೆಯನ್ನು ನಿರುತ್ಸಾಹಗೊಳಿಸುತ್ತದೆ. ಪರಿಣಾಮವಾಗಿ ಉದ್ಯೋಗಾವಕಾಶಗಳು ಕುಗ್ಗುತ್ತವೆ. ಹಾಗೆ ನೋಡಿದರೆ, ಬ್ಲೇರ್ ಅವರ ಈ ಹೇಳಿಕೆಗೂ ಮತ್ತು ಬಂಡವಾಳಶಾಹಿಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡುವ ಮೂಲಕ ದೀರ್ಘಾವಧಿಯಲ್ಲಿ ಉದ್ಯೋಗಗಳು ಹೆಚ್ಚುತ್ತವೆ ಎಂಬ ವಾದಕ್ಕೂ ವ್ಯತ್ಯಾಸವೇನಿಲ್ಲ. ಬಂಡವಾಳಶಾಹಿಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡಿದಾಗ ಉಂಟಾಗುವ ವಿತ್ತೀಯ ಕೊರತೆಯನ್ನು ನೀಗಿಕೊಳ್ಳಲು ಕಾರ್ಮಿಕರ ಮೇಲೆ ತೆರಿಗೆ ವಿಧಿಸಲಾಗುತ್ತದೆ ಮತ್ತು ಈ ಕ್ರಮದ ಒಟ್ಟು ಪರಿಣಾಮವೆಂದರೆ, ಬಂಡವಾಳಗಾರರು ಹೆಚ್ಚು ಹೆಚ್ಚು ಲಾಭವನ್ನು ಜೇಬಿಗಿಳಿಸಿಕೊಳ್ಳುತ್ತಾರೆ. ಹಾಗಾಗಿ, ಈ ಸಿದ್ಧಾಂತದ ವಿಚಾರಶೂನ್ಯವಾಗಿದೆಯಷ್ಟೇ ಅಲ್ಲ, ಈ ಎರಡೂ ಪ್ರತಿಪಾದನೆಗಳನ್ನು ಬೆಂಬಲಿಸುವ ಪುರಾವೆಗಳೇ ಇಲ್ಲ.
ದುಡಿಮೆಗಾರರು ನಿರುದ್ಯೋಗದ ಪರಿಸ್ಥಿತಿಯಲ್ಲೇ ಹೆಚ್ಚು ನೆಮ್ಮದಿಯಲ್ಲಿರುತ್ತಾರೆ ಎಂಬ ಅವರ ಇನ್ನೊಂದು ಹೇಳಿಕೆಯು ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಸಂಬಂಧಿಸುತ್ತದೆ. ವಿಷಯವೆಂದರೆ, ಬಂಡವಾಳಶಾಹಿ ಸರ್ಕಾರಗಳು ಕಾರ್ಮಿಕರ ಕಲ್ಯಾಣದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದೂ ಅಲ್ಲದೆ, ದುಡಿಮೆಗಾರರು ನಿರುದ್ಯೋಗಕ್ಕಿಂತಲೂ ಹೆಚ್ಚು ಕಾಳಜಿಯನ್ನು ಹಣದುಬ್ಬರದ ಬಗ್ಗೆ ವಹಿಸುತ್ತಾರೆ ಎಂಬುದು ನಂಬಲರ್ಹವಲ್ಲ. ಏಕೆಂದರೆ, ನಿರುದ್ಯೋಗದ ಬಗ್ಗೆ ಅವರು ಹೊಂದಿರುವ ಭಯ-ಭೀತಿಗಳು ಅವರ ತಲೆಯ ಮೇಲೆ ನೇತಾಡುವ ಕತ್ತಿಯಂತೆ ಅವರನ್ನು ಸದಾ ಕಾಡುತ್ತವೆ. ಹಾಗಾಗಿ, ದುಡಿಮೆಗಾರರನ್ನು ಕಾಡುವ ಅಪಾರ ಅಭದ್ರತೆಯನ್ನು ಕೀಳಂದಾಜು ಮಾಡಲಾಗದು.
ಆದಾಗ್ಯೂ, ಈ ವಾದವನ್ನು ಕೆಲವು ಉದಾರವಾದಿ ಅರ್ಥಶಾಸ್ತ್ರಜ್ಞರು ಮಂಡಿಸಿದ್ದಾರೆ. ಬಂಡವಾಳಶಾಹಿ ಸರ್ಕಾರಗಳು ನಿರುದ್ಯೋಗದ ಇಳಿಕೆಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹಣದುಬ್ಬರವನ್ನು ನಿಯಂತ್ರಿಸಲು ಕೊಡುತ್ತವೆ ಮತ್ತು ಜನ ಸಾಮಾನ್ಯರ ಆದ್ಯತೆಯೂ ಅದೇ ಆಗಿರುತ್ತದೆ ಎಂಬುದನ್ನು ಬ್ರಿಟನ್ನಿನ ಮಾರ್ಗರೆಟ್ ಥ್ಯಾಚರ್ ಅವರ ಸರ್ಕಾರದ ಉದಾಹರಣೆಯ ಮೂಲಕ ವಿವರಿಸಲು ಜಾನ್ ಹಿಕ್ಸ್ ಎಂಬ ಒಬ್ಬ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ. ಆದರೆ, ಅವರ ವಿವರಣೆಗಳು ಮತ್ತು ಸೈದ್ಧಾಂತಿಕ ಪರಿಕಲ್ಪನೆಗಳೂ ಸಹ, ಮನಗಾಣಿಸುವಂತಿಲ್ಲ.
ಬಂಡವಾಳಶಾಹಿ ಸರ್ಕಾರಗಳು ನಿರುದ್ಯೋಗಕ್ಕಿಂತಲೂ ಹೆಚ್ಚಾಗಿ ಹಣದುಬ್ಬರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದು, ವಾಸ್ತವವಾಗಿ, ಸಮಕಾಲೀನ ಬಂಡವಾಳಶಾಹಿಯ ಮೇಲೆ ಹಣಕಾಸು ಬಂಡವಾಳವು ಹೊಂದಿರುವ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಪತ್ತನ್ನು ಅಗಾಧ ಪ್ರಮಾಣದಲ್ಲಿ ಆರ್ಥಿಕ ಸ್ವತ್ತುಗಳ ರೂಪದಲ್ಲಿ ಇಟ್ಟುಕೊಳ್ಳಲಾಗುತ್ತಿದೆ. ಈ ಆರ್ಥಿಕ ಸ್ವತ್ತುಗಳು ಭೌತಿಕ ಸ್ವತ್ತುಗಳ ಮೇಲಿನ ಹಕ್ಕುಗಳ ಪ್ರತೀಕವಾಗಿದ್ದರೂ ಸಹ, ಆರ್ಥಿಕ ಸ್ವತ್ತುಗಳ ಬೆಲೆಗಳ ಏರಿಳಿತಗಳಿಗೂ ಮತ್ತು ಹಣದುಬ್ಬರ ಕಾರಣದಿಂದ ಏರಿಕೆಯಾಗುವ ಸರಕು-ಸೇವೆಗಳ ಬೆಲೆಗಳಿಗೂ ಸಂಬಂಧವಿಲ್ಲ ಮತ್ತು ಅವುಗಳ ನಡುವೆ ತಾಳ-ಮೇಳವೂ ಇಲ್ಲ. ಹಾಗಾಗಿ, ಸರಕುಗಳ ಬೆಲೆ ಏರಿಕೆಯು (ಹಣದುಬ್ಬರವು) ತಕ್ಷಣವೇ, ಆರ್ಥಿಕ ಸ್ವತ್ತುಗಳ ನಿಜ ಮೌಲ್ಯವನ್ನು ತಗ್ಗಿಸುತ್ತದೆ. ಆರ್ಥಿಕ ಸ್ವತ್ತುಗಳ ಬೆಲೆ ಹೆಚ್ಚಳದ ದರವು ಕಾಲಾನಂತರದಲ್ಲಿ ಸರಕು-ಸೇವೆಗಳ ಬೆಲೆ ಏರಿಕೆಯ ದರವನ್ನು ಮೀರಿದಾಗಲೂ ಆರ್ಥಿಕ ಸ್ವತ್ತುಗಳ ನಿಜ ಮೌಲ್ಯ ತಗ್ಗುತ್ತದೆ. ಹಾಗಾಗಿ, ಹಣಕಾಸು ಬಂಡವಾಳವು ಸರಕು-ಸೇವೆಗಳ ಹಣದುಬ್ಬರವನ್ನು(ಬೆಲೆ ಏರಿಕೆಯನ್ನು) ವಿರೋಧಿಸುತ್ತದೆ ಮತ್ತು ಅಂತಹ ಹಣದುಬ್ಬರವನ್ನು ಕಟ್ಟುನಿಟ್ಟಾದ ಕ್ರಮಗಳ ಮೂಲಕ ಅಂಕೆಯಲ್ಲಿಡಬಯಸುತ್ತದೆ. ಬಂಡವಾಳಶಾಹಿ ಸರ್ಕಾರಗಳು ಸಾಧಿಸಲು ಬಯಸುವುದು ಇದನ್ನೇ.
ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ನಿರುದ್ಯೋಗವನ್ನು ಹೆಚ್ಚಿಸುವ ನೀತಿಯು, ಅಧಿನಾಯಕ ವರ್ಗದ ಹಿತಾಸಕ್ತಿಗಳಿಗೆ ಬಂಡವಾಳಶಾಹಿ ಸರ್ಕಾರಗಳ ಲಜ್ಜೆಗೆಟ್ಟ ಅಧೀನತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮತ್ತು, ಮಾರ್ಗರೆಟ್ ಥ್ಯಾಚರ್ ಅವರಿಂದ ಹಿಡಿದು ಟೋನಿ ಬ್ಲೇರ್ ಅವರ ವರೆಗೆ ಅಧಿಕಾರಕ್ಕೆ ಬಂದ ಎಲ್ಲ ಬ್ರಿಟೀಷ್ ಸರ್ಕಾರಗಳೂ ಲಂಡನ್ ನಗರವನ್ನು ಯುರೋಪಿನ ಹಣಕಾಸು ರಾಜಧಾನಿಯಾಗಿ ಉಳಿಸಿಕೊಳ್ಳುವ ಬ್ರಿಟನ್ನಿನ ಮಹತ್ವಾಕಾಂಕ್ಷೆಯಿಂದಾಗಿ, ಹಣದುಬ್ಬರವನ್ನು ಎಷ್ಟುಸಾಧ್ಯವೋ ಅಷ್ಟು ಕೆಳ ಮಟ್ಟದಲ್ಲಿಡುವ ಬಗ್ಗೆ ಮುಚ್ಚುಮರೆ ಇಲ್ಲದೆ ಮಾತನಾಡುತ್ತಿದ್ದುದು ಆಶ್ಚರ್ಯಕರವಲ್ಲ.
ನಿರುದ್ಯೋಗವನ್ನು ಹೆಚ್ಚಿಸುವ ಹಣಕಾಸು ಬಂಡವಾಳದ ಈ ನೀತಿಯ ಬಗ್ಗೆ ಹೀಗೊಂದು ಪ್ರಶ್ನೆಯನ್ನು ಕೇಳಬಹುದು: ಹೆಚ್ಚಿನ ಮಟ್ಟದ ನಿರುದ್ಯೋಗದಿಂದಾಗಿ ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಯಾಗುವ ಹೆಚ್ಚುವರಿ ಮೌಲ್ಯದ ಪ್ರಮಾಣವೂ ಸಣ್ಣದೇ ಇರುವಾಗ, ಅರ್ಥವ್ಯವಸ್ಥೆಯಲ್ಲಿ ಬಂಡವಾಳದ ಎಲ್ಲಾ ವಿಭಾಗಗಳಿಂದ ಸೃಷ್ಟಿಯಾದ ಹೆಚ್ಚುವರಿ ಮೌಲ್ಯದ ಮೊತ್ತದ ಇಳಿಕೆಯು ಹಣಕಾಸು ಬಂಡವಾಳದ ಆದಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಹಣಕಾಸು ಬಂಡವಾಳವು, ಹಣದುಬ್ಬರದ ಬಗ್ಗೆ ತೋರುವಷ್ಟೇ ಕಾಳಜಿಯನ್ನು ನಿರುದ್ಯೋಗದ ಬಗ್ಗೆಯೂ ಏಕೆ ತೋರಬಾರದು?
ಹಣಕಾಸು ಬಂಡವಾಳವು ಪ್ರಾಬಲ್ಯ ಹೊಂದಿರುವ ಇಂದಿನ ಯುಗದಲ್ಲಿ, ಬಂಡವಾಳಶಾಹಿ ಅರ್ಥವ್ಯವಸ್ಥೆಗಳಲ್ಲಿ, ಸರಕು-ಸೇವಾ ವಲಯಗಳ ಮತ್ತು ಹಣಕಾಸು ವಲಯಗಳ ನಡುವಿನ ಬೇರ್ಪಡಿಕೆಯನ್ನು ಒಂದು ಅಭೂತಪೂರ್ವ ಮಟ್ಟಕ್ಕೆ ಕೊಂಡೊಯ್ಯಲಾಗಿದೆ ಎಂಬ ಅಂಶದಲ್ಲಿ, ನಿರುದ್ಯೋಗದ ಬಗ್ಗೆ ಏಕೆ ಕಾಳಜಿ ತೋರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಿದೆ. ಅಮೆರಿಕಾದಲ್ಲಿ ವಸತಿ ಗುಳ್ಳೆಯ ಕುಸಿತದ ನಂತರ, ಎಲ್ಲೆಡೆ ತಯಾರಿಕಾ-ಉತ್ಪಾದನಾ ವಲಯಗಳು ಸ್ಥಗಿತತೆಗೆ ಒಳಗಾಗಿರುವಾಗ ಮತ್ತು ಎಲ್ಲೆಡೆ ಸಾಮೂಹಿಕ ನಿರುದ್ಯೋಗವಿರುವಾಗ, ವಿಶ್ವಾದ್ಯಂತ ಶೇರು ಮಾರುಕಟ್ಟೆಗಳು ನಾಗಾಲೋಟದಲ್ಲಿ ಸಾಗುತ್ತಿರುವ ವಿದ್ಯಮಾನವು ಈ ಬೇರ್ಪಡಿಕೆಯನ್ನು ಪ್ರತಿಬಿಂಬಿಸುತ್ತದೆ. ಮತ್ತು, ಹಣಕಾಸು ಬಂಡವಾಳವು ಹೆಚ್ಚುವರಿ ಮೌಲ್ಯಕ್ಕೆ ಮಾತ್ರ ಸೀಮಿತಗೊಂಡಿಲ್ಲ ಎಂಬುದೂ ಸಹ ಸ್ಪಷ್ಟವಾಗುತ್ತದೆ.
ಶೇರು ಮಾರುಕಟ್ಟೆಯು ಉದ್ಯಮಗಳ ತಾಣವಲ್ಲ. ಜೂಜುಕೋರತನವು ಹುಲುಸಾಗಿ ಬೆಳೆಯುವ ಒಂದು ತಾಣ. ಈ ತಾಣದ ಉದ್ದೇಶವು ಉದ್ಯಮಗಳು ಸೃಷ್ಟಿಸುವ ಹೆಚ್ಚುವರಿ ಮೌಲ್ಯದ ಆದಾಯವಲ್ಲ. ಆದರೆ, ಇಂದು ಕೊಂಡ ಒಂದು ಆರ್ಥಿಕ ಆಸ್ತಿಯನ್ನು ನಾಳೆ ಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡಿ ಲಾಭಗಳಿಸುವ (capital gains) ಒಂದು ತಾಣ. ಇಲ್ಲೊಂದು ಪ್ರಶ್ನೆ ಉದ್ಭವವಾಗುತ್ತದೆ: ಆರ್ಥಿಕ ಆಸ್ತಿಯನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದಾಗ ದೊರಕುವ ಲಾಭವು ಎಲ್ಲಿಂದ ಬರುತ್ತದೆ? ಆ ಲಾಭವು ಉತ್ಪಾದನೆಯ ಮೂಲಕ ಸೃಷ್ಟಿಯಾದ ಹೆಚ್ಚುವರಿ ಮೌಲ್ಯವಲ್ಲದಿದ್ದರೆ, ಅದು ಒಂದು ಕಲ್ಪನೆಯ ವ್ಯವಹಾರವಾಗುತ್ತದೆ. ಅಂತಹ ಸಂದರ್ಭದಲ್ಲಿ, ಒಬ್ಬ ಪಡೆದ ಲಾಭವು ಮತ್ತೊಬ್ಬನ ನಷ್ಟವೇ ಆಗಿರುತ್ತದೆ. ಹಾಗಾಗಿ, ಈ ಜೂಜುಕೋರ ಮಾರಾಟಗಳ ಉದ್ದನೆಯ ಸಾಲಿನಲ್ಲಿ ಅನೇಕರು ಪಡೆದ ಲಾಭದ ಅಪಾರ ಮೊತ್ತವನ್ನು, ಅಂತಿಮವಾಗಿ, ಕೆಲವರು ಕಳೆದುಕೊಂಡಿರುತ್ತಾರೆ.
ಶೇರು ಮಾರುಕಟ್ಟೆ ಕುಸಿದಾಗ ಸಿಕ್ಕಿಹಾಕಿಕೊಳ್ಳುವವರ ನಷ್ಟಗಳನ್ನು ಶೇರು ಮಾರುಕಟ್ಟೆಯಲ್ಲಿ ಭಾಗವಹಿಸುವವರು ಮಾತ್ರ ಹೊರುವುದಿಲ್ಲ. ಈ ನಷ್ಟವನ್ನು ಕನಿಷ್ಟ ಮೂರು ಮಾರ್ಗದಲ್ಲಿ ಸಮಾಜದ ಮೇಲೆ ಹೊರಿಸಲಾಗುತ್ತದೆ. ಮತ್ತು, ಅಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಭಾಗವಹಿಸುವ ಎಲ್ಲರೂ ಅದರ ಸಂಪೂರ್ಣ ಲಾಭಪಡೆಯುತ್ತಾರೆ. ಮೊದಲನೆಯದು, ಆರ್ಥಿಕ ಆಸ್ತಿಯ ಖರೀದಿಗಾಗಿ ಖರೀದಿದಾರನು ತನ್ನ ಜೇಬಿನಿಂದಲೇ ಹಣ ಹೊಂದಿಸಿಕೊಳ್ಳಬೇಕಾಗಿಲ್ಲ. ಹಣವನ್ನು ಸಾಲದ ಮೂಲಕ ಹೊಂದಿಸಿಕೊಳ್ಳಬಹುದು. ಆದರೆ, ಮಾರುಕಟ್ಟೆಯು ಕುಸಿದಾಗ, ಶೇರು ಖರೀದಿಗೆ ಹಣ ಒದಗಿಸಿದ ಸಾಲದಾತರು ಮೋಸಕ್ಕೊಳಗಾಗುತ್ತಾರೆ. ಎರಡನೆಯದು, ಅಂತಹ ಸಾಲಗಳನ್ನು ಒದಗಿಸಿದ ಹಣಕಾಸು ಸಂಸ್ಥೆಗಳ ರಕ್ಷಣೆಗಾಗಿ ತೆರಿಗೆದಾರರ ಹಣದ ಬಳಕೆಯಾಗುತ್ತದೆ. ಅಂದರೆ, ಈ ಪರಿಸ್ಥಿತಿಯಲ್ಲಿ ಮಾರುಕಟ್ಟೆಯು ಕುಸಿದಾಗ ಆರ್ಥಿಕ ಸ್ವತ್ತುಗಳನ್ನು ಹೊಂದಿರುವವರ ನಷ್ಟವನ್ನು ಸಾಮಾನ್ಯ ತೆರಿಗೆ ಪಾವತಿದಾರರೇ ಭರಿಸುತ್ತಾರೆ. ಮೂರನೆಯದು, ಸರ್ಕಾರದ ಇಂತಹ ಬೆಂಬಲವು ತೆರಿಗೆ ಆದಾಯದಿಂದಲ್ಲ, ಸರ್ಕಾರಿ ಸ್ವತ್ತುಗಳ ಮಾರಾಟದಿಂದ ಬರುತ್ತದೆ ಎಂಬುದು. ಅಂದರೆ, ಹೊಸ ಸ್ವತ್ತುಗಳ ಸೇರ್ಪಡೆಯ ಮೂಲಕ ಮಾರುಕಟ್ಟೆಯನ್ನು ಉಳಿಸಿಕೊಳ್ಳಲಾಗುತ್ತದೆ.
ಈ ಎಲ್ಲ ವಿದ್ಯಮಾನಗಳೂ ಮಾರ್ಕ್ಸ್ ಅವರು ಹೇಳಿದ್ದ ಬಂಡವಾಳದ ಆದಿಮ ಸಂಚಯದ ಉದಾಹರಣೆಗಳೇ. ಮೊದಲ ಎರಡು ಉದಾಹರಣಾ ಪ್ರಸಂಗಗಳಲ್ಲಿ ಪ್ರಯೋಜನ ದೊರಕಿಸುವ ಮೂಲವೆಂದರೆ, ಆಳುವ ವರ್ಗವನ್ನು ಶ್ರೀಮಂತಗೊಳಿಸುವ ಆದಿಮ ಸಂಗ್ರಹಣೆಗಾಗಿ ಜನರ ಹಿಂಡುವಿಕೆಯೇ ಮತ್ತು ಮೂರನೆಯ ಪ್ರಸಂಗದಲ್ಲಿ ಸಂಪತ್ತನ್ನು ಖಾಸಗಿಯವರ ಕೈಯಲ್ಲಿಡುವ ಇಡುವ ಹೊಸ ಸ್ವತ್ತುಗಳ ಉದಯವೇ.
ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸೃಷ್ಟಿಯಾಗುವ ಹೆಚ್ಚುವರಿ ಮೌಲ್ಯದ ಹೊರತಾಗಿಯೂ, ಶ್ರೀಮಂತ ಕುಳಗಳಿಗೆ ಅಧಿಕವಾಗಿ ಬರುವ ಆದಾಯದ ಮೂಲವೆಂದರೆ, ಬಂಡವಾಳದ ಆದಿಮ ಸಂಗ್ರಹಣೆಯೇ. ಆದ್ದರಿಂದ, ಈ ಶ್ರೀಮಂತ ಕುಳಗಳ ದೃಷ್ಟಿಯಲ್ಲಿ ಹಣದುಬ್ಬರಕ್ಕಿಂತಲೂ ನಿರುದ್ಯೋಗವೇ ಕಡಿಮೆ ಮಹತ್ವ ಪಡೆದಿದೆ. ಸರ್ಕಾರವೂ ಅದನ್ನೇ ಅನುಮೋದಿಸುತ್ತದೆ. ಹಾಗಾಗಿ, ನಿರುದ್ಯೋಗ ಸಮಸ್ಯೆಗಿಂತಲೂ ಹೆಚ್ಚಿನ ಆದ್ಯತೆಯನ್ನು ಹಣದುಬ್ಬರ ಪಡೆಯುತ್ತದೆ.
ಶೇರು ಮಾರುಕಟ್ಟೆಯು ಉದ್ಯಮಗಳ ತಾಣವಲ್ಲ. ಜೂಜುಕೋರತನವು ಹುಲುಸಾಗಿ ಬೆಳೆಯುವ ಒಂದು ತಾಣ. ಈ ತಾಣದ ಉದ್ದೇಶವು ಉದ್ಯಮಗಳು ಸೃಷ್ಟಿಸುವ ಹೆಚ್ಚುವರಿ ಮೌಲ್ಯದ ಆದಾಯವಲ್ಲ. ಇಂದು ಕೊಂಡ ಒಂದು ಆರ್ಥಿಕ ಆಸ್ತಿಯನ್ನು ನಾಳೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿ ಲಾಭಗಳಿಸುವ ಒಂದು ತಾಣ. ಈ ಜೂಜುಕೋರ ಮಾರಾಟಗಳ ಉದ್ದನೆಯ ಸಾಲಿನಲ್ಲಿ ಅನೇಕರು ಪಡೆದ ಲಾಭದ ಅಪಾರ ಮೊತ್ತವನ್ನು, ಅಂತಿಮವಾಗಿ, ಕೆಲವರು ಕಳೆದುಕೊಂಡಿರುತ್ತಾರೆ. ಶೇರು ಮಾರುಕಟ್ಟೆ ಕುಸಿದಾಗ ಸಿಕ್ಕಿಹಾಕಿಕೊಳ್ಳುವವರ ನಷ್ಟಗಳನ್ನು ಶೇರು ಮಾರುಕಟ್ಟೆಯಲ್ಲಿ ಭಾಗವಹಿಸುವವರು ಮಾತ್ರ ಹೊರುವುದಿಲ್ಲ. ಈ ನಷ್ಟವನ್ನು ಕನಿಷ್ಟ ಮೂರು ಮಾರ್ಗದಲ್ಲಿ ಸಮಾಜದ ಮೇಲೆ ಹೊರಿಸಲಾಗುತ್ತದೆ.
ಅನು: ಕೆ.ಎಂ. ನಾಗರಾಜ್